ಬುಧವಾರ, ಮಾರ್ಚ್ 29, 2023
25 °C

ಕೆ.ಪಿ.ಅಶ್ವಿನಿ ಸಂದರ್ಶನ | 'ಲಿಂಗ ತಾರತಮ್ಯ ವಿರುದ್ಧ ದನಿಯಾಗುವ ಒಲವು'

ಅಭಿಲಾಷ ಬಿ.ಸಿ. Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಗೆ ಸ್ವತಂತ್ರ ತಜ್ಞೆಯಾಗಿ (Special rapporteur )ಕೋಲಾರ ಜಿಲ್ಲೆಯ ಕಸಬಾ ಕುರುಬರಹಳ್ಳಿ ಗ್ರಾಮದ ಕೆ.ಪಿ.ಅಶ್ವಿನಿ ನೇಮಕವಾಗಿದ್ದು, ಈ ಹುದ್ದೆಗೆ ನೇಮಕವಾದ ಭಾರತ ಮತ್ತು ಏಷ್ಯಾದ ಮೊದಲ ವ್ಯಕ್ತಿ ಅವರು. ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ...

***

ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಗೆ ಸ್ವತಂತ್ರ ತಜ್ಞೆಯಾಗಿ (Special rapporteur) ಕೋಲಾರ ಜಿಲ್ಲೆಯ ಕಸಬಾ ಕುರುಬರಹಳ್ಳಿ ಗ್ರಾಮದ ಡಾ.ಕೆ.ಪಿ.ಅಶ್ವಿನಿ ನೇಮಕವಾಗಿದ್ದಾರೆ.

ಜಿನೆವಾದಲ್ಲಿ ನವೆಂಬರ್ 1ರಂದು ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಈ ಹುದ್ದೆಗೆ ನೇಮಕವಾದ ಭಾರತ ಮತ್ತು ಏಷ್ಯಾದ ಮೊದಲ ವ್ಯಕ್ತಿಯಾಗಿದ್ದಾರೆ.

ಜಾಗತಿಕ ಮಟ್ಟದಲ್ಲಿ ವರ್ಣಭೇದ ನೀತಿ, ಜನಾಂಗೀಯ ತಾರತಮ್ಯ, ಅಸಹಿಷ್ಣುತೆಗೆ ಸಂಬಂಧಿಸಿದ ವಿಷಯಗಳನ್ನು ಇವರು ಸ್ವತಂತ್ರವಾಗಿ ನಿರ್ವಹಿಸಲಿದ್ದಾರೆ. ಮಂಡಳಿಗೆ ಕಾಲಕಾಲಕ್ಕೆ ವರದಿ, ಸಲಹೆ ನೀಡಲಿದ್ದಾರೆ. 

* ನೇಮಕ ಸಾಧ್ಯವಾಗಿದ್ದು ಹೇಗೆ? ಕಾರ್ಯ ವ್ಯಾಪ್ತಿ, ಕೆಲಸದ ವಿಧಾನಗಳೇನು?
ನನ್ನ ಸಂಶೋಧನೆ, ಅಧ್ಯಯನ ಕೂಡ ಜಾತಿ, ವರ್ಣ, ಜನಾಂಗೀಯ ತಾರತಮ್ಯಗಳ ಕುರಿತೇ ಇತ್ತು. ಈ ಹುದ್ದೆಗಾಗಿ ಅರ್ಜಿ ಸಲ್ಲಿಸಿದ್ದೆ. ಅದರಲ್ಲಿ 12 ಜನರಿಗೆ ಸಂದರ್ಶನ ನಡೆಯಿತು. ಅನುಭವ, ಅಧ್ಯಯನ, ಲಿಂಗ, ಪ್ರಾತಿನಿಧ್ಯವನ್ನು ಗಮನದಲ್ಲಿಟ್ಟುಕೊಂಡು ಮೂವರನ್ನು ಆಯ್ಕೆ ಮಾಡಿದ್ದರು. ನಂತರ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ನನ್ನ ಆಯ್ಕೆಯನ್ನು ಘೋಷಿಸಿದರು.

ವರ್ಣಭೇದ, ಜನಾಂಗೀಯ ಭೇದಕ್ಕೆ ಸಂಬಂಧಿತ ವಿಷಯಗಳಿಗೆ ಆದ್ಯತೆ ನೀಡಬೇಕಾಗುತ್ತದೆ. ಈ ಬಗ್ಗೆ ವಿಶ್ವದಲ್ಲಿ ಯಾವುದೇ ರೀತಿಯ ಘಟನೆ ನಡೆದರೆ ವರದಿ ನೀಡಬಹುದು. ಅಂಥ ರಾಷ್ಟ್ರಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ವಿಶ್ಲೇಷಿಸುವ ಅವಕಾಶಗಳಿವೆ.

* ಇದಕ್ಕೆ ಸ್ಫೂರ್ತಿ ಏನು?
ನಾನು ದಲಿತ ಸಮುದಾಯದಿಂದ ಬಂದಿದ್ದರಿಂದ ಮನೆಯಲ್ಲಿ ಈ ಬಗ್ಗೆ ಶೈಕ್ಷಣಿಕ ಚರ್ಚೆ ನಡೆಯುತಿತ್ತು. ಚಿಕ್ಕಂದಿನಿಂದಲೇ ಜಾತಿ ವಿರೋಧಿ ಹಾಗೂ ಮಹಿಳಾಪರ ಚಳವಳಿಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರಿಂದ ಈ ಬಗ್ಗೆ ಆಸಕ್ತಿ ಮೂಡಲು ಕಾರಣವಾಯಿತು. ಎಸ್ಸೆಸ್ಸೆಲ್ಸಿ ನಂತರ ಕಲಾ ವಿಭಾಗ ಆಯ್ಕೆ ಮಾಡಿಕೊಂಡೆ. ಸಾಮಾಜಿಕ ಹಾಗೂ ರಾಜಕೀಯ ವಿಷಯಗಳಲ್ಲಿ ಹೆಚ್ಚು ಒಲವಿತ್ತು. ಪಿಎಚ್‌.ಡಿಯಲ್ಲಿಯೂ ಭಾರತ ಹಾಗೂ ನೇಪಾಳದ ಜಾತಿ ಕುರಿತೇ ಅಧ್ಯಯನ ಮಾಡಿದ್ದೆ. ಆಗಲೇ ವಿಶ್ವಸಂಸ್ಥೆ ಜಾತಿ ಮತ್ತು ವರ್ಣವನ್ನು ಹೇಗೆ ಗುರುತಿಸಿದೆ ಎಂಬುದನ್ನು ಅಭ್ಯಸಿಸಿದ್ದೆ. ಇದು ಈ ಬಗೆಯ ಆಸಕ್ತಿಗೆ ಹಾಗೂ ಈ ಹುದ್ದೆಗೇರಲು ನೆರವಾಯಿತು.

* ಬಾಲ್ಯ, ಓದು ಹೇಗಿತ್ತು...
ನನ್ನ ತಂದೆ ಸರ್ಕಾರಿ ಉದ್ಯೋಗಿಯಾಗಿದ್ದರಿಂದ ಶಾಲಾ ಶಿಕ್ಷಣ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಗಿದೆ. ಹಾಸನ, ಮೈಸೂರು, ಮಂಗಳೂರು, ಕಲಬುರಗಿ ಹೀಗೆ ಹಲವೆಡೆ ಅಧ್ಯಯನ ಮಾಡಿದ್ದೇನೆ. ಪದವಿಯನ್ನು ಬೆಂಗಳೂರಿನ ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ, ಸ್ನಾತಕೋತ್ತರ ಪದವಿಯನ್ನು ರಾಜ್ಯಶಾಸ್ತ್ರ ವಿಷಯದಲ್ಲಿ ಸೇಂಟ್‌ ಜೋಸೆಫ್ಸ್ ಕಾಲೇಜಿನಲ್ಲಿ ಮಾಡಿದ್ದೇನೆ. ನವದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಿಂದ ಎಂ.ಫಿಲ್., ಪಿಎಚ್.ಡಿ ಪದವಿ ಪಡೆದಿದ್ದೇನೆ. ಬೇರೆ ಬೇರೆ ಕಡೆ ಓದಿರುವುದರಿಂದ ವಿವಿಧ ಸಂಸ್ಕೃತಿ, ಭಾಷೆಗಳಿಗೆ ತೆರೆದುಕೊಳ್ಳಲು ಸಾಧ್ಯವಾಯಿತು. ಅದು ವೃತ್ತಿ ಜೀವನಕ್ಕೂ ನೆರವಾಗಿದೆ.

* ಆರು ವರ್ಷದ ಅಧಿಕಾರ ಅವಧಿಯಲ್ಲಿ ನಿಮ್ಮ ಆದ್ಯತೆ ಏನು?
ಜಾತಿ, ವರ್ಣ ವ್ಯವಸ್ಥೆಯೊಳಗಿನ ಲಿಂಗ ತಾರತಮ್ಯದ ವಿರುದ್ಧ ಗಟ್ಟಿ ಧ್ವನಿ ಎತ್ತುವ ಬಯಕೆ ಇದೆ. ಸಾಮಾಜಿಕ ಮಾಧ್ಯಮಗಳಲ್ಲಿ ವರ್ಣಭೇದ ನೀತಿಯನ್ನು ನಿರಂತರವಾಗಿ ಪ್ರತಿಪಾದಿಸುವ ಒಂದು ಸಮೂಹವೇ ಇದೆ. ಇದು ಈ ತಾರತಮ್ಯವನ್ನು ಮತ್ತಷ್ಟು ಬಲಗೊಳಿಸುತ್ತದೆ. ದ್ವೇಷ ಭಾಷಣಕ್ಕೂ ದಾರಿಯಾಗಬಲ್ಲದು. ಇದರ ಚರ್ಚೆ ಈ ಕಾಲದ ತುರ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು