ಭಾನುವಾರ, ಸೆಪ್ಟೆಂಬರ್ 20, 2020
23 °C

ಕ್ರೀಡಾಪಟುಗಳಿಗೆ ಸೌಕರ್ಯ ಕಲ್ಪಿಸಲು ಆದ್ಯತೆ

ನಾಗೇಶ್‌ ಶೆಣೈ ಪಿ . Updated:

ಅಕ್ಷರ ಗಾತ್ರ : | |

Prajavani

ಕ್ರೀಡಾಪಟುಗಳಿಗೆ ಸೌಕರ್ಯಗಳನ್ನು ಕಲ್ಪಿಸಿದರಷ್ಟೇ ಅವರು ಆಯಾ ಕ್ಷೇತ್ರದಲ್ಲಿ ಬೆಳೆಯುತ್ತಾರೆ. ಅವರಿಂದ ಉತ್ತಮ ಸಾಧನೆ ನಿರೀಕ್ಷಿಸಬಹುದು. ಕ್ರೀಡಾ ಸಂಸ್ಥೆಗಳಿಗೂ ಉತ್ತೇಜನ ನೀಡಬೇಕು ಎಂಬುದು ಕರ್ನಾಟಕ ಕ್ರೀಡಾ ಪ್ರಾಧಿಕಾರದ ನೂತನ ಉಪಾಧ್ಯಕ್ಷ ಕೆ.ಪಿ ಪುರುಷೋತ್ತಮ್ ಅಭಿಮತ

                                                    **

* ನಿಮ್ಮ ಆದ್ಯತೆಯೇನು?

ನಾನು ಕೊಕ್ಕೊ ಆಟಗಾರ. 1978ರಲ್ಲಿ ಮೈಸೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿ
ಸಿದ್ದೆ. ಈಗ ಕರ್ನಾಟಕ ರಾಜ್ಯ ಕೊಕ್ಕೊ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಆಗಿದ್ದೇನೆ. ಜಿಲ್ಲೆಗಳಲ್ಲಿ ಕ್ರೀಡಾ ಸೌಕರ್ಯಗಳ ಅಭಿವೃದ್ಧಿಗೆ ನನ್ನ ಮೊದಲ ಆದ್ಯತೆ. ಕ್ರೀಡಾಪಟುಗಳಿಗೆ ಸೌಕರ್ಯಗಳನ್ನು ಕಲ್ಪಿಸಿದ
ರಷ್ಟೇ ಅವರು ಆಯಾ ಕ್ಷೇತ್ರದಲ್ಲಿ ಬೆಳೆಯುತ್ತಾರೆ. ಅವರಿಂದ ಉತ್ತಮ ಸಾಧನೆ ನಿರೀಕ್ಷಿಸಬಹುದು. ಕ್ರೀಡಾ ಸಂಸ್ಥೆಗಳಿಗೂ ಉತ್ತೇಜನ ನೀಡಬೇಕು.

* ಜಿಲ್ಲೆಗಳಲ್ಲಿ ಕ್ರೀಡಾಪಟುಗಳಿಗೆ ಸೌಕರ್ಯಗಳ ಕೊರತೆಯಿದೆ. ಅದನ್ನು ನೀಗಲು ಏನು ಮಾಡುವಿರಿ?

ಬೆಂಗಳೂರು ನಗರ ಸೇರಿದಂತೆ ಕೆಲವು ಕಡೆ ಸೌಕರ್ಯಗಳ ಕೊರತೆಯಿದೆ. ಇನ್ನು ಕೆಲವು ಜಿಲ್ಲೆಗಳಲ್ಲಿ ಸೌಕರ್ಯಗಳಿದ್ದರೂ ಅವುಗಳ ಸಮರ್ಪಕ ನಿರ್ವಹಣೆಯಾಗುತ್ತಿಲ್ಲ. ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಮೊದಲು ತಿಳಿದುಕೊಳ್ಳುತ್ತೇನೆ. ದಸರಾ ಕ್ರೀಡಾಕೂಟದ ನಂತರ ವಿವಿಧ ಕ್ರೀಡಾ ಸಂಸ್ಥೆಗಳ ಅಧ್ಯಕ್ಷರು, ತರಬೇತುದಾರರ ಸಭೆ ಕರೆದು ಚರ್ಚಿಸುತ್ತೇನೆ.

* ತರಬೇತುದಾರರ ಕೊರತೆಯ ಬಗ್ಗೆ ಏನು ಹೇಳುವಿರಿ?

ಕ್ರೀಡಾ ಪ್ರಾಧಿಕಾರ ತರಬೇತುದಾರರ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಆದರೆ ಈ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ, ನೇಮಕದ ವೇಳೆ ಕೆಲವು ಹಿತಾಸಕ್ತಿಗಳು ಕೆಲಸ ಮಾಡಿವೆ ಎಂಬ ದೂರುಗಳು ಕೇಳಿಬಂದಿವೆ. ಈ ವಿಷಯವನ್ನು ಕ್ರೀಡಾ ಇಲಾಖೆ ಆಯುಕ್ತರ ಗಮನಕ್ಕೂ ತಂದಿದ್ದೇನೆ. ಅರ್ಹರಿಗೆ ಅನ್ಯಾಯವಾಗಬಾರದು. ಗಮನಕ್ಕೆ ತರದೆ ಯಾವುದನ್ನೂ ಅಂತಿಮಗೊಳಿಸಬಾರದು ಎಂದು ಅವರಿಗೆ ತಿಳಿಸಿದ್ದೇನೆ.

* ಕಂಠೀರವ ಕ್ರೀಡಾಂಗಣದಲ್ಲೇ ಸಮಸ್ಯೆಗಳಿವೆ ಎಂಬ ದೂರುಗಳಿವೆಯಲ್ಲ?

ಈ ಬಗ್ಗೆ ವರದಿಗಳನ್ನು ಗಮನಿಸಿದ್ದೇನೆ. ಆದರೆ ನಾನು ಪರಿಶೀಲಿಸಲು ಆಗಿಲ್ಲ. ರಾಜ್ಯ ಮಟ್ಟದ ದಸರಾ ಕ್ರೀಡೆಗಳ ನಂತರ ಅಲ್ಲಿಗೆ ಭೇಟಿ ನೀಡಿ ವಿವರ ಪಡೆದುಕೊಳ್ಳುತ್ತೇನೆ. ಈ ವೇಳೆ ಕ್ರೀಡಾಪಟುಗಳು, ತರಬೇತುದಾರರನ್ನು ಭೇಟಿ ಮಾಡುತ್ತೇನೆ. ಅವರ ಅಭಿಪ್ರಾಯಗಳನ್ನೂ ಗಮನದಲ್ಲಿ ಇಟ್ಟುಕೊಳ್ಳುತ್ತೇನೆ.

* ಕ್ರೀಡಾಪಟುಗಳಿಗೆ ಪ್ರೋತ್ಸಾಹ ಸಿಗುತ್ತಿಲ್ಲವೆಂಬ ಮಾತಿದೆ?

ಕ್ರೀಡಾಪಟುಗಳು ಸಾಧನೆ ಮಾಡಿದಾಗ ಅವರನ್ನು ಪ್ರೋತ್ಸಾಹಿಸಬೇಕು. ಒಂದು ವೇಳೆ, ಸರ್ಕಾರ ನೀಡಿದ ಭರವಸೆಯೇನಾದರೂ ಈಡೇರಿರದಿದ್ದರೆ, ಅದನ್ನು ನನ್ನ ಗಮನಕ್ಕೆ ತಂದರೆ, ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು