ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಯಕ್ಕೆ ಅನ್ವರ್ಥ ‘ವಿವೇಕ’ ಪಂಥ

Last Updated 11 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ವಿನಯಕ್ಕೆ ಅನ್ವರ್ಥದಂತಿರುವ ಪ್ರೊ. ಬಿ.ಎ. ವಿವೇಕ ರೈ ಅವರಿಗೆ ಈಗ 75ರ ಸಂಭ್ರಮ. ಪಂಪನ ಕಾವ್ಯಗಳ ವಿಶ್ಲೇಷಣಾತ್ಮಕ ಗ್ರಂಥ ರಚನೆಗೆ ಈ ಅಮೃತ ಸಂವತ್ಸರವನ್ನು ಸಾಕ್ಷೀಕರಿಸುವುದು ಅವರ ಕನಸು. ಪ್ರಾಚೀನ ಕಾವ್ಯ, ಅನುವಾದ, ಜಾನಪದ, ವಿಮರ್ಶೆ ಹೀಗೆ ಸಾಹಿತ್ಯದ ಮಜಲುಗಳಲ್ಲಿ ಮಾಗಿದ ವಿವೇಕ ರೈ, ಈವರೆಗೆ ಒಟ್ಟು 51 ಕೃತಿಗಳನ್ನು ರಚಿಸಿದ್ದಾರೆ. ಕತ್ರಿನ್ ಬಿಂದರ್ ಜತೆ ಸೇರಿ ತೇಜಸ್ವಿಯವರ ‘ಕರ್ವಾಲೋ’ ಕಾದಂಬರಿಯನ್ನು ಜರ್ಮನ್ ಭಾಷೆಗೆ ಅನುವಾದಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರನ್ನು ‘ಹರಸಿ’ ಬಂದಿವೆ. ವೃತ್ತಿ ಮತ್ತು ಪ್ರವೃತ್ತಿ ಯಾನದ ಝಲಕ್‌ ಅನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ.

75ರ ವಸಂತದಲ್ಲಿ ಹಿಂದೊಮ್ಮೆ ಹೊರಳಿದರೆ ನಿಮ್ಮನ್ನು ನೇವರಿಸುವ ನೆನಪುಗಳು...

75 ವರ್ಷಗಳಾಗಿವೆ ಎನ್ನುವುದು ಬೆರಗೇನು ಅಲ್ಲ. ಆರೋಗ್ಯವಂತ ಮನುಷ್ಯನ ಬದುಕಿನಲ್ಲಿ ಆಗುವ ಸಹಜ ಪ್ರಕ್ರಿಯೆ. ವಯಸ್ಸಿನಲ್ಲಿ ಹಿರಿಯನಾಗಿದ್ದೇ ಸಾಧನೆಯೂ ಅಲ್ಲ. ಬಾಲ್ಯ ಮತ್ತು ಇಳಿಸಂಜೆಯ ನಡುವೆ ಅನಾಯಾಸವಾಗಿ ಸಿಕ್ಕ ಅವಕಾಶಗಳು, ಸವಾಲುಗಳು ಇಲ್ಲಿಯವರೆಗೆ ಕೈಹಿಡಿದು ನಡೆಸಿವೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕಿನ ಪುಣಚ ಗ್ರಾಮದ ಸಣ್ಣ ಕೃಷಿಕ ಕುಟುಂಬದ ನಾನು ಹೈಸ್ಕೂಲ್ ಶಿಕ್ಷಣ ಪಡೆದೆ ಎಂಬುದೇ ಅಚ್ಚರಿ. ಆರ್ಥಿಕ ಬಲ ಇಲ್ಲದ ಕುಟುಂಬ, ಶಿಕ್ಷಣ ಮೊಟಕುಗೊಳ್ಳಬೇಕಿತ್ತು. ತಂದೆ ಪುರಂದರ ರೈ ಅವರ ಕಾಳಜಿಯಿಂದ ಕಾಲೇಜು ಶಿಕ್ಷಣದ ಕನಸು ಗರಿಬಿಚ್ಚಿತು. ಭೌತ ವಿಜ್ಞಾನದಲ್ಲಿ ಎಂ.ಎಸ್ಸಿ ಮಾಡುವ ಹಂಬಲ, ಅದೇ ವೇಳೆಗೆ 1968ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಸ್ನಾತಕೋತ್ತರ ವಿಭಾಗ ಮಂಗಳೂರಿನಲ್ಲಿ ಪ್ರಾರಂಭ, ವಿಜ್ಞಾನದೆಡೆಗಿನ ಆಸಕ್ತಿ ಕನ್ನಡದೆಡೆಗೆ ಹೊರಳಿ, ಕನ್ನಡ ಎಂ.ಎ.ಗೆ ಪ್ರವೇಶ ಪಡೆದಿದ್ದೇ ನನ್ನ ಬದುಕಿನ ದೊಡ್ಡ ತಿರುವು. ಬದುಕಿನುದ್ದಕ್ಕೂ ಆಕಸ್ಮಿಕಗಳೇ ಅದೃಷ್ಟವಾಗಿ ಬಂದಿದ್ದು ನನ್ನ ಭಾಗ್ಯ.

ವಿಶ್ವವಿದ್ಯಾಲಯದ ಅಧ್ಯಾಪಕನಾಗುವುದು ನಿಮ್ಮ ಕನಸಾಗಿತ್ತಾ ?

ನಾನು ಕನ್ನಡ ಎಂ.ಎ. ಆಯ್ದುಕೊಂಡಿದ್ದು ಇಂದಿಗೂ ವಿಸ್ಮಯವೇ. ಮೊದಲ ರ್‍ಯಾಂಕ್ ಪಡೆದ ನನಗೆ ದೇ. ಜವರೇಗೌಡರು ಮತ್ತು ಹಾ.ಮಾ. ನಾಯಕರು ಕರೆದು ಉದ್ಯೋಗ ಕೊಟ್ಟರು. ಹಾ.ಮಾ.ನಾಯಕರು ಬಿಳಿಹಾಳೆ ನೀಡಿ, ಅರ್ಜಿ ಬರೆಯಲು ಹೇಳಿಕೊಟ್ಟರು. ಅನಿರೀಕ್ಷಿತವೆಂಬಂತೆ, ವಿಶ್ವವಿದ್ಯಾಲಯದ ಅಧ್ಯಾಪಕನಾಗಿ ವೃತ್ತಿ ಜೀವನ ಆರಂಭಿಸಿದಾಗ ಸಾಹಿತ್ಯದ ಜ್ಞಾನ ಇರಲಿಲ್ಲ. ವಿದ್ಯಾರ್ಥಿಗಳಿಗೆ ಪಾಠ ಮಾಡುವ ಕಾರಣಕ್ಕೆ ಪ್ರಾಚೀನ ಕಾವ್ಯ, ಛಂದಸ್ಸು, ವ್ಯಾಕರಣ, ಜಾನಪದ ಎಲ್ಲವನ್ನೂ ನನ್ನೊಳಗೆ ಇಳಿಸಿಕೊಂಡೆ. ನಂತರ ಪ್ರೊಫೆಸರ್, ರೀಡರ್ ಆಗಿದ್ದು ನನಗೆ ಮುಖ್ಯವೇ ಅಲ್ಲ, ನಾನೊಬ್ಬ ಅಧ್ಯಾಪಕನಾದೆ ಅನ್ನುವುದೇ ಈಗಲೂ ಕೌತುಕ. ಸಾಂಸ್ಕೃತಿಕ ಮಾನವವಿಜ್ಞಾನವು ನನ್ನ ಪಾಲಿಗೆ ಓದು ಅಧ್ಯಯನದ ಶಿಸ್ತು, ದೇವರು, ಧರ್ಮ, ಸಾಮಾಜಿಕ ಸ್ವರೂಪವನ್ನು ತಿಳಿಸಿದ ಗುರು.

ಜನಪದ ನಿಮ್ಮ ಮೇಲೆ ಪ್ರಭಾವ ಬೀರಿದ್ದು ಹೇಗೆ ?

ಬದುಕಿನ ಸೂಕ್ಷ್ಮಗಳನ್ನು ನನ್ನ ಒಳಗಣ್ಣಿನಲ್ಲಿ ದಾಖಲಿಸಿದವರು ಜನಪದರು. ವಿದ್ವತ್ತಿಗಿಂತ ಹೆಚ್ಚಾಗಿ ಬದುಕಿನ ಒಳನೋಟ ತೆರೆದಿಟ್ಟಿದ್ದು ಜನಪದ ಕಾರ್ಯದ ಅಧ್ಯಯನ. ‘ತುಳು ಜನಪದ ಸಾಹಿತ್ಯ’ಕ್ಕೆ ಡಾಕ್ಟರೇಟ್ ಪಡೆದಿದ್ದು, ಜನಪದರೊಂದಿಗಿನ ಒಡನಾಟ ಹೆಚ್ಚಿದ್ದು, ಮುಂದೆ ಗ್ರಂಥಗಳ ಅಧ್ಯಯನಕ್ಕೆ ನೆಲೆಗಟ್ಟು ಕಟ್ಟಿಕೊಟ್ಟಿತು.

ಶಿಕ್ಷಣ ಸಂಸ್ಥೆಗಳು, ಅಧ್ಯಯನ ಪೀಠ, ಅಕಾಡೆಮಿಗಳನ್ನು ನೀವು ಕಟ್ಟಿ ಬೆಳೆಸಿದ್ದು ಈಗಲೂ ಜನರ ಮನದಲ್ಲಿ ಅಚ್ಚೊತ್ತಿದೆ. ಇದು ಸಾಧ್ಯವಾಗಿದ್ದು ಹೇಗೆ ?

ಮೊದಲೇ ಹೇಳಿದೆನಲ್ಲ ಹಾಗೆ, ಅವಕಾಶಗಳು ಆಕಸ್ಮಿಕವಾಗಿ ಬಂದವು. 1985ರಲ್ಲಿ ಪ್ರೊಫೆಸರ್ ಆದೆ. ಹೊಸದಾಗಿ ಬಂದ ಕುಲಪತಿಯವರು, ಹೊಸಬರಿಗೆ ಉತ್ಸಾಹ ತುಂಬುತ್ತಿದ್ದರು. ಒಂದಿನಿತು ಹೆಚ್ಚು ಭಾರ ನನ್ನ ಮೇಲೆ ತೂಗಿ, ಕೆಲಸಕ್ಕೆ ಹಚ್ಚುತ್ತಿದ್ದರು. ತುಳು ಪೀಠ ಕಟ್ಟುವಾಗ ಶೂನ್ಯದಿಂದ ಕೆಲಸ ಪ್ರಾರಂಭಿಸಿದೆ. ‘ಇಲ್ಲ’ಗಳ ಕೊರಗು ನನ್ನನ್ನು ಕಾಡಲಿಲ್ಲ. ‘ಎಲ್ಲ’ವನ್ನೂ ನಾನೇ ಆಗಿ ನಿಭಾಯಿಸಿದೆ. ವೀರಪ್ಪ ಮೊಯಿಲಿ ಮುಖ್ಯಮಂತ್ರಿ ಆಗಿದ್ದಾಗ ಡಾ. ಶಿವರಾಮ ಕಾರಂತ ಪೀಠ ಅಸ್ತಿತ್ವಕ್ಕೆ ಬಂತು. ಅದನ್ನು ಮುನ್ನಡೆಸುವ ಹೊಣೆಯೂ ಹೆಗಲಿಗೇರಿತು. ಕಾರಂತರು ಬದುಕಿರುವ ತನಕ ಅವರೇ ಈ ಪೀಠಕ್ಕೆ ಶಕ್ತಿಯಾಗಿದ್ದರು. ಪ್ರಸಾರಾಂಗ ಕಟ್ಟುವಾಗಲೂ ಇದೇ ಅನುಭವ. ಈ ಕಟ್ಟುವಿಕೆಯ ಪ್ರಕ್ರಿಯೆಗೆ ನನಗೆ ಬೆಂಬಲವಾದದ್ದು ಮಂಗಳೂರು ವಿಶ್ವವಿದ್ಯಾಲಯ.

1994ರಲ್ಲಿ ತುಳು ಅಕಾಡೆಮಿ ಅಧ್ಯಕ್ಷನಾದಾಗ ನನ್ನ ಬಳಿ ಇದ್ದಿದ್ದು ಆದೇಶದ ಪ್ರತಿ ಮಾತ್ರ. ಐದಾರು ತಿಂಗಳು ಅಧ್ಯಕ್ಷನಿಂದ ಜವಾನನವರೆಗೆ ಎಲ್ಲವೂ ನಾನೇ. ಈಗ ತುಳು ಅಕಾಡೆಮಿಗೆ 25ರ ಹರೆಯ. ಹಣ ಇಲ್ಲದೆ ಸಂಸ್ಥೆ ಕಟ್ಟಿದರೆ ಮುಂದೆ ಅವು ಬೆಳೆಯುತ್ತವೆ. ರಿಸ್ಕ್ ತೆಗೆದುಕೊಳ್ಳದಿದ್ದರೆ ಸಂಸ್ಥೆ ಕಟ್ಟಲು ಸಾಧ್ಯವಿಲ್ಲ. ಹಣ ನಮ್ಮ ಆದ್ಯತೆ ಆಗಲೇ ಬಾರದು, ಹಣಕ್ಕಾಗಿ ಸಂಸ್ಥೆ ಕಟ್ಟಲೂಬಾರದು. ದುಡ್ಡು ಇದ್ದಾಕ್ಷಣ ಹೆಚ್ಚು ಕೆಲಸ ಆಗುತ್ತದೆ ಎನ್ನಲೂ ಆಗದು. ಗಾಂಧಿವಾದಿಯಾಗಿದ್ದ ನನ್ನ ತಂದೆಯ ಮಾತು ‘ಹಣ ಪಡೆದರೆ ಗುಲಾಮಿ ಮನಃಸ್ಥಿತಿ ಬರುತ್ತದೆ.’ ಇದು ನನ್ನ ಆದರ್ಶ.

ಕುಲಪತಿ ಹುದ್ದೆಯಲ್ಲಿದ್ದಾಗ ವೃತ್ತಿ ಮತ್ತು ಆಸಕ್ತಿ ನಡುವೆ ತಾಕಲಾಟಗಳು ಎದುರಾದವೇ? ನಿವೃತ್ತಿ ನಂತರವೇ ಹೆಚ್ಚು ಕೃತಿಗಳು ಪ್ರಕಟಗೊಂಡವಲ್ಲ...

ಕುಲಪತಿ ಹುದ್ದೆ ಹೂವಿನ ಹಾಸಿಗೆಯಲ್ಲ. ಸಮಸ್ಯೆಗಳನ್ನು ಮೀರಿ, ಎಲ್ಲರನ್ನೂ ಅರ್ಥೈಸಿಕೊಳ್ಳುವ ಆಡಳಿತದ ಗುಣ, ಜಾತಿ, ಧರ್ಮ, ಪಂಥ ಎಲ್ಲದರಲ್ಲೂ ‘ನಮ್ಮದು’ ಎನ್ನುವ ಭಾವ ಮೀರಿ, ವಿಶ್ವಮಾನವ ತತ್ವವನ್ನು ದೈನಂದಿನ ಜೀವನದಲ್ಲಿ ಪ್ರಕಟಿಸಬೇಕು. ಸಾಹಿತ್ಯ ರಚನೆಯಷ್ಟೇ ಬದುಕಿನ ವಿನ್ಯಾಸಗಳೂ ಮುಖ್ಯ.

ಎರಡು ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆ ಕೂಡ ನನಗೆ ಆಕಸ್ಮಿಕವೇ. ಅದು ನನ್ನ ಆಯ್ಕೆ ಆಗಿರಲಿಲ್ಲ. ಈ ಹುದ್ದೆ ನಿಭಾಯಿಸಿದ ಕಾರಣಕ್ಕೆ ಬರವಣಿಗೆಗೆ ಹಿನ್ನಡೆ ಆಯಿತೆಂಬ ಭಾವ ಕಿಂಚಿತ್ತೂ ಇಲ್ಲ.‘ಕೆಲಸದಲ್ಲಿ ಶ್ರದ್ಧೆ ಇರಲಿ’ ಎಂಬ ನನ್ನ ಗುರು ಪ್ರೊ.ಪರಮೇಶ್ವರ ಭಟ್ಟರ ಮಾತು ತನ್ಮಯತೆಯನ್ನು ಜಾಗೃತಗೊಳಿಸುವ ಶಕ್ತಿ ಇದ್ದಂತೆ. ನನಗೆ ಬದುಕಿನಲ್ಲಿ ಎಲ್ಲೂ ವಿಷಾದ ಇಲ್ಲ, ಅದ್ಭುತ ಮಾಡಿದ್ದೇನೆ ಎನ್ನುವ ಭ್ರಮೆಯೂ ಇಲ್ಲ. ಭ್ರಮೆ ಇಲ್ಲದಾಗ ನಿರಾಶೆಯಾಗುವುದೂ ಇಲ್ಲ. ನಿವೃತ್ತಿ ನಂತರ ಬರವಣಿಗೆ, ಅನುವಾದ ಕಾರ್ಯ ವೇಗದ ನಡಿಗೆಯಲ್ಲಿ ಸಾಗುತ್ತಿರುವುದು ನಿಜ.

ಜಾನಪದ ಅಧ್ಯಯನಕ್ಕೆ ವಿದೇಶಿ ವಿದ್ವಾಂಸರನ್ನು ಸೆಳೆದು, ಅದಕ್ಕೊಂದು ಜಾಗತಿಕ ಆಯಾಮ ದೊರಕಿಸಿಕೊಡಲು ಸಾಧ್ಯವಾದದ್ದು ಹೇಗೆ ?

ಉಡುಪಿಯಲ್ಲಿ ಹರಿದಾಸ ಭಟ್ಟರು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಫಿನ್‌ಲ್ಯಾಂಡ್‌ನ ಜಾನಪದ ವಿದ್ವಾಂಸ ಡಾ.ಲೌರಿ ಹಾಂಕೊ ಭಾಗವಹಿಸಿದ್ದರು. ನಾನು ತುಳು ಪಾಡ್ದನಗಳ ಮೇಲೆ ಅಲ್ಲಿ ಇಂಗ್ಲಿಷ್‌ ಪ್ರಬಂಧ ಮಂಡಿಸಿದ್ದೆ. ಇಲ್ಲಿಂದ ನಮ್ಮ ಜಂಟಿ ಅಧ್ಯಯನ ಪಯಣ ಆರಂಭ. ಹಾಂಕೊ ನೇತೃತ್ವದಲ್ಲಿ ನಾನು, ಡಾ.ಚಿನ್ನಪ್ಪ ಗೌಡ ಹಾಗೂಗಾಯಕ ಗೋಪಾಲ ನಾಯ್ಕಅವರನ್ನೊಳಗೊಂಡು ‘ಸಿರಿ ಮಹಾಕಾವ್ಯ’ ಸಂಗ್ರಹ ಮಾಡಿ, 16 ಸಾವಿರ ಸಾಲುಗಳನ್ನು ಇಂಗ್ಲಿಷ್‌ಗೆ ಅನುವಾದಿಸಿ, ಎರಡು ಸಂಪುಟಗಳಲ್ಲಿ ಪ್ರಕಟಿಸಿದೆವು. ತುಳು ಸಿರಿ ಕಾವ್ಯದಿಂದಾಗಿ ಜಾಗತಿಕ ಮಹಾಕಾವ್ಯಗಳಲ್ಲಿ ಭಾರತದ ಮಹಾಕಾವ್ಯಕ್ಕೆ ಸ್ಥಾನ ದೊರೆತಿದ್ದು ಹೆಮ್ಮೆಯ ಸಂಗತಿ. ಜನಪದ ಕಾವ್ಯ ಕಟ್ಟುವ ಕ್ರಮ ಯುರೋಪಿಗಿಂತ ಭಿನ್ನ ಎನ್ನುವ ಮನ್ನಣೆಯೂ ಪ್ರಾಪ್ತವಾಯಿತು. ಮೌಖಿಕ ಸಿದ್ಧಾಂತದ ನೋಟವನ್ನೇ ಬದಲಾಯಿಸಿದ ಜಾಗತಿಕ ವಿದ್ಯಮಾನ ಇದು. ಕಲಾವಿದ ಕೇಂದ್ರಿತ, ಗಾಯಕ ಕೇಂದ್ರಿತವಾಗಿ ಕಾವ್ಯಗಳೆಡೆಗೆ ಸಾಹಿತಿಗಳ ದೃಷ್ಟಿ ನೆಟ್ಟಿದ್ದು ಇಲ್ಲಿಂದಲೇ.

ಬದುಕಿನಲ್ಲಿ ಖುಷಿ ಕೊಡುವ ಸಣ್ಣ ಸಣ್ಣ ತೊರೆಗಳು...

ನನ್ನ ಹಳ್ಳಿ ಪುಣಚ ಈಗಲೂ ಸ್ಫೂರ್ತಿಯ ಸೆಲೆ. ಮನೆಯೆದುರಿನ ತೋಡಿನಲ್ಲಿ ಮೀನಿಗೆ ಗಾಳ ಹಾಕಿದ್ದು, ಕೆರೆಯಲ್ಲಿ ಬಾಳೆದಿಂಡು ಹಾಕಿ ಈಜಿದ್ದು, ಹಳ್ಳಿಯ ಊಟ ಇವೆಲ್ಲ ಹಸಿಮಣ್ಣಿನ ವಾಸನೆಯಂತೆ, ಸದಾ ಸುಖ ಕೊಡುತ್ತವೆ. ಭತ್ತದ ಗದ್ದೆಯ ಗಂಧಶಾಲಿ ಸುಗಂಧದ ಕಂಪು, ಮಕ್ಕಳ ಸೃಜನಶೀಲತೆ, ಅಜ್ಜಿಯರ ಕತೆಗಳು ಪುಳಕ ಮೂಡಿಸುತ್ತವೆ. ಜನಪದ ಕ್ಷೇತ್ರ ಕಾರ್ಯದಲ್ಲಿ ಭೇಟಿಯಾಗಿದ್ದ ಕ್ಷೌರಿಕ ಮಹಿಳೆ ಮುಂಡ್ಯಪ್ಪು ಮತ್ತು ಬುಡಕಟ್ಟು ಮಹಿಳೆ ಕಪ್ಪೆ ಭೌತಿಕವಾಗಿ ಇಲ್ಲ, ನನ್ನೊಳಗೆ ಇವರಿಬ್ಬರೂ ಚಿರಂಜೀವಿಗಳು.

75ರ ನಂತರದ ನವ ಕನಸುಗಳು...

ಪಂಪನ ಕಾವ್ಯಗಳ ಬಗ್ಗೆ ವಿಶ್ಲೇಷಣಾತ್ಮಕ ಗ್ರಂಥ ರಚನೆ, ಪ್ರಾಚೀನ ಕಾವ್ಯಗಳಲ್ಲಿ ಈವರೆಗೆ ಅನುವಾದ ಆಗದಿರುವ ಕಾವ್ಯಗಳ ಇಂಗ್ಲಿಷ್‌ ಅನುವಾದ ಸದ್ಯಕ್ಕೆ ನನ್ನೆದುರು ಇರುವ ಯೋಜನೆ. ಸವಾಲಿನ ಒತ್ತಡಗಳಿಲ್ಲದ ನಿವೃತ್ತಿ ಜೀವನ ಒಂಥರಾ ಡಲ್. ಕೊರೊನಾ ಲಾಕ್‌ಡೌನ್‌ನಿಂದ ಆಗುತ್ತಿರುವ ಬೌದ್ಧಿಕ ಕುಂಠಿತ ಮೀರದಿದ್ದರೆ, ಕನ್ನಡದ ಸಂದರ್ಭದಲ್ಲಿ ಮುಂದೆ ಅಪಾಯವಿದೆ. ಏಕಮುಖ ಮಾತಿನ ಆನ್‌ಲೈನ್‌ ವೇದಿಕೆ, ಸಮಾಲೋಚನೆ, ಸಂವಾದವನ್ನು ಕಸಿದಿದೆ. ಸಂವಾದಗಳು ಪ್ರಜಾಪ್ರಭುತ್ವದ ಲಕ್ಷಣ. ಹಿಂದೆ ಸಾಹಿತ್ಯ ಸಂವಾದಗಳಲ್ಲಿ ವೈಚಾರಿಕ ಭಿನ್ನತೆ ಇದ್ದರೂ, ಕೊಠಡಿಯಾಚೆಗಿನ ಸ್ನೇಹದ ಬಂಧ ಎಲ್ಲರನ್ನೂ ಬೆಸೆಯುತ್ತಿತ್ತು. ಕರ್ನಾಟಕದಲ್ಲಿ ಇಂದು ಈ ವಾತಾವರಣ ಹೊರಟುಹೋಗಿದೆ. ಇದರಿಂದ ಕನ್ನಡಕ್ಕೆ ದೊಡ್ಡ ಊನ ಬಂದಿದೆ. ಈ ಬಗೆಯ ಕೊರತೆ – ಗುಲಾಮಿತನದಿಂದ ಹೊರ ಬರಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT