ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೂರ್ತಿ ಮುರುಘಾ ಶರಣರ ಸಂದರ್ಶನ: ಅದ್ದೂರಿಯಿಂದ ಆದರ್ಶದೆಡೆಗೆ ಪಯಣ

Last Updated 13 ಅಕ್ಟೋಬರ್ 2021, 6:27 IST
ಅಕ್ಷರ ಗಾತ್ರ

ಮಧ್ಯ ಕರ್ನಾಟಕದ ಪ್ರತಿಷ್ಠಿತ ಮುರುಘಾ ಮಠಕ್ಕೆ ಶಿವಮೂರ್ತಿ ಮುರುಘಾ ಶರಣರು ಪೀಠಾಧ್ಯಕ್ಷರಾಗಿ ಮೂರು ದಶಕ ಸಂದಿದೆ. ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗಿದ್ದ ಮಠವನ್ನು ಸಾಮಾಜಮುಖಿಯಾಗಿ ರೂಪಿಸಿದ ಹೆಗ್ಗಳಿಕೆ ಶರಣರಿಗೆ ಸಲ್ಲುತ್ತದೆ.

ಪಾಳೆಗಾರರ ಆಶ್ರಯದಲ್ಲಿ ಬೆಳೆದ ಮಠ, ಸಾಮಾಜಿಕ ಸಂಸ್ಥೆಯಾಗಿ ಪರಿವರ್ತನೆ ಹೊಂದಿದೆ. ಅಧ್ಯಾತ್ಮ, ಅನ್ನ ಹಾಗೂ ಅಕ್ಷರದ ತ್ರಿವಿಧ ದಾಸೋಹದ ಮೂಲಕ ರಾಜ್ಯದೆಲ್ಲೆಡೆ ದೊಡ್ಡ ಭಕ್ತ ಸಮೂಹವನ್ನು ಹೊಂದಿದೆ. ‘ಮುರುಘಿ ಪರಂಪರೆ’ಯಲ್ಲಿ ಶರಣರು 20ನೇಯವರು.

ಶಿವಮೂರ್ತಿ ಮುರುಘಾ ಶರಣರು ಮಲ್ಲಿಕಾರ್ಜುನ ಸ್ವಾಮೀಜಿ ಅವರ ಉತ್ತರಾಧಿಕಾರಿಯಾಗಿ 1991ರ ಜನವರಿಯಲ್ಲಿ ನೇಮಕವಾದರು. ಶಿರಸಿಯ ರುದ್ರದೇವರ ಮಠ, ಹಾವೇರಿಯ ಹೊಸಮಠದಲ್ಲಿ ಚರಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ. 1994ರಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿ ಲಿಂಗೈಕ್ಯರಾದ ಬಳಿಕ ಮಠದ ಪೂರ್ಣ ಜವಾಬ್ದಾರಿ ಸ್ವೀಕರಿಸಿದರು. ಶ್ರೀಮಠದ ಪರಂಪರೆಗೆ ಹೊಸ ಸ್ಪರ್ಶ ನೀಡಿದ ಶರಣರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ ಇಲ್ಲಿದೆ.

ಮಠದ ಪೀಠಾಧ್ಯಕ್ಷರಾಗಿ 30 ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ಮಠವನ್ನು ನಿಮ್ಮ ಕನಸಿನಂತೆ ರೂಪಿಸಲು ಸಾಧ್ಯವಾಗಿದೆಯೇ?

ವ್ಯಕ್ತಿಗತ ಮಿತಿಯೊಳಗೆ, ಸ್ವಾತಂತ್ರ್ಯದ ಚೌಕಟ್ಟಿನಲ್ಲಿ ಕನಸು ಬಹುತೇಕ ಸಾಕಾರಗೊಂಡಿದೆ. ಬಸವಾದಿ ಶರಣರು ಹಾಗೂ ಜಯದೇವ ಸ್ವಾಮೀಜಿ ಅವರ ಕನಸು, ಉದ್ದೇಶ ಈಡೇರಿಸುವ ಪ್ರಯತ್ನ ಪ್ರಾಮಾಣಿಕವಾಗಿ ನಡೆಯುತ್ತಿದೆ. ಒಳಿತು ಮಾಡುವ ದಿಸೆಯಲ್ಲಿ ಪಯಣ ಸಾಗುತ್ತಿದೆ. ಆಪ್ತಮಯ ಹಾಗೂ ಆದರ್ಶಯುಕ್ತ ಹೆಜ್ಜೆಗಳನ್ನು ಇಡುತ್ತಿರುವುದರಿಂದ ಇನ್ನಿಲ್ಲದ ಸಂತಸವಾಗುತ್ತಿದೆ.

ಸಾಮಾನ್ಯ ಪೀಠಾಧ್ಯಕ್ಷರಾಗಿ ಸಂಪ್ರದಾಯಕ್ಕೆ ಜೋತುಬಿದ್ದಿದ್ದರೆ ಯಾವುದೇ ಸಮಸ್ಯೆಗಳು ಎದುರಾಗುತ್ತಿರಲಿಲ್ಲ. ವೈಚಾರಿಕ ತುಡಿತದಿಂದ ಸಂಪ್ರದಾಯಬದ್ಧ ವ್ಯವಸ್ಥೆಗೆ ವಿದಾಯದ ಸ್ಪರ್ಶ ನೀಡುವ ಸವಾಲು ನಮ್ಮ ಮುಂದಿದೆ. ಇಂತಹ ಆದರ್ಶದ ಹೆಜ್ಜೆ ಇಡುವಾಗ ಒಡಕಿನ ಧ್ವನಿ ಕೇಳುವುದು ಸಹಜ. ಪ್ರತಿರೋಧ ಕೂಡ ಆದರ್ಶಕ್ಕೆ ಸಲ್ಲುವ ಗೌರವ ಎಂದೇ ಭಾವಿಸಿದ್ದೇವೆ.

ಪೀಠಾಧ್ಯಕ್ಷರಾದ ಬಳಿಕ ಮೌಢ್ಯದ ವಿರುದ್ಧ ಧ್ವನಿ ಎತ್ತಿದಿರಿ. ಸಂಪ್ರದಾಯಸ್ಥರಿಂದ ಇದಕ್ಕೆ ವಿರೋಧವೂ ವ್ಯಕ್ತವಾಯಿತು. ಮಠಾಧೀಶರಾಗಿ ನೀವು ಎದುರಿಸಿದ ಸಮಸ್ಯೆಗಳು ಏನು?

ಜಯದೇವ ಸ್ವಾಮೀಜಿ ಅವರು ಬಸವತತ್ವ ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಸಂಪ್ರದಾಯಸ್ಥರಿಂದ ವಿರೋಧ ಎದುರಿಸಿದರು. ನಮಗೆ ಇಂತಹ ಹಲವು ಸವಾಲುಗಳು ಎದುರಾದವು. ಹರಿಜನ ಕೇರಿಯ ಸಹಪಂಕ್ತಿ ಭೋಜನ, ಗಿರಿಜನ ಹಾಡಿ ವಾಸ್ತವ್ಯ ಮಾಡಿ ಮೇಲ್ಪಂಕ್ತಿ ಹಾಕಿದೆವು. ರಾಹುಕಾಲ, ಅಮಾವಾಸ್ಯೆ ದಿನ ಮದುವೆ ಮಾಡಿಸಿದೆವು. ಅಂತರ್ಜಾತಿ, ಅಂತರ ಧರ್ಮೀಯ ಹಾಗೂ ವಿಧವಾ ವಿವಾಹ ಪ್ರೋತ್ಸಾಹಿಸಿದಾಗ ವಿರೋಧ ವ್ಯಕ್ತವಾಯಿತು. ಅಜ್ಞಾನಿಗಳ, ಅಮಾಯಕರ ತಪ್ಪುಗಳು ಕ್ಷಮಾರ್ಹ.

‘ದಸರಾ ಮಹೋತ್ಸವ’ ‘ಶರಣ ಸಂಸ್ಕೃತಿ ಉತ್ಸವ’ವಾಗಿ ಬದಲಾಗಿದ್ದು ಏಕೆ?

ರಾಜಾಡಳಿತದ ಕಾಲದಲ್ಲಿ ವಿಜಯದ ಸಂಕೇತವಾಗಿ ದಸರಾ ಮಹೋತ್ಸವ ಮುನ್ನೆಲೆಗೆ ಬಂದಿತು. ರಾಜರ ಆಳ್ವಿಕೆ ತೆರೆಮರೆಗೆ ಸರಿದಾಗ ಮಠ–ಪೀಠಗಳು ಈ ಸಂಪ್ರದಾಯ ಮುಂದುವರಿಸಿದವು. ದಸರಾ ಮಹೋತ್ಸವವನ್ನು ಮಠಗಳು ನಡೆಸುತ್ತಿದ್ದವು. ರಾಜಸತ್ತೆಯ ಸಂಕೇತವಾಗಿದ್ದ ಈ ಉತ್ಸವಕ್ಕೆ ಶರಣ ಸಂಸ್ಕೃತಿಯ ಸ್ಪರ್ಶ ನೀಡಿದೆವು. ಸೈದ್ಧಾಂತಿಕ ಚೌಕಟ್ಟು ಹಾಗೂ ಪೀಠಾಧಿಪತಿಗಳ ಸ್ವಾತಂತ್ರ್ಯದ ಮಿತಿಯೊಳಗೆ ಸರಳೀಕೃತ ರೂಪಕ್ಕೆ ತಂದೆವು. ಸಂಪ್ರದಾಯಸ್ಥ ಮನಸ್ಥಿತಿ ವಿಜೃಂಭಣೆ, ಅದ್ದೂರಿತನ ಬಯಸುತ್ತದೆ. ಆದರ್ಶ ಎಂದಿಗೂ ಸರಳತೆಗೆ ಒಗ್ಗಿಕೊಳ್ಳುತ್ತದೆ.

ಪೀಠಾರೋಹಣದ ಪರಂಪರೆಯಲ್ಲಿ ಬದಲಾವಣೆ ತಂದಿದ್ದರ ಔಚಿತ್ಯವೇನು?

ಮಠದ ಪೀಠಾಧ್ಯಕ್ಷರು ಚಿನ್ನದ ಕಿರೀಟ, ಚಿನ್ನದ ಉಂಗುರ, ಬಂಗಾರದ ಪಾದುಕೆ ಧರಿಸಿ ರತ್ನಖಚಿತ ಸಿಂಹಾಸನ ಏರುವುದು ವಾಡಿಕೆ. ಅದ್ದೂರಿ ಆಚರಣೆಗಳಿಂದ ಆದರ್ಶದ ಕಡೆಗೆ ಸಾಗುತ್ತಿರುವ ನಾವು ಇದನ್ನು ಪ್ರಜ್ಞಾಪೂರ್ವಕವಾಗಿ ತಿಸ್ಕರಿಸಿದೆವು. ಬೆಳ್ಳಿಯ ಪಲ್ಲಕ್ಕಿಯಲ್ಲಿ ವಚನಗಳ ಹಸ್ತಪ್ರತಿ, ಅಲ್ಲಮಪ್ರಭು, ಬಸವಣ್ಣನವರ ಭಾವಚಿತ್ರ ಇಟ್ಟು ಮೆರವಣಿಗೆ ಮಾಡುವ ಪರಂಪರೆ ಹುಟ್ಟುಹಾಕಿದೆವು. ಚಿನ್ನದ ಕಿರೀಟದ ಬದಲು ರುದ್ರಾಕ್ಷಿ ಕಿರೀಟ ಧರಿಸಿ ಮರದ ಪೀಠದ ಮೇಲೆ ಕುಳಿತು ಸರಳವಾಗಿ ಪೀಠಾರೋಹಣ ಆಚರಿಸಲಾಗುತ್ತಿದೆ.

ಅತಿ ಎತ್ತರದ ಬಸವ ಪ್ರತಿಮೆಯ ನಿರ್ಮಾಣ ಶರಣರ ಬಹುದಿನಗಳ ಕನಸು. ಈ ಕಾರ್ಯ ಎಲ್ಲಿಯವರೆಗೆ ಬಂದಿದೆ?

325 ಅಡಿ ಎತ್ತರದ ಬಸವ ಪ್ರತಿಮೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಎಂಟು ಅಂತಸ್ತಿನ ಕಟ್ಟಡದ ನಿರ್ಮಾಣಕ್ಕೆ ಚಾಲನೆ ಸಿಕ್ಕಿದೆ. ಇದನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಲಾಗಿದೆ. ಕಟ್ಟಡದ ಮೇಲೆ 170 ಅಡಿ ಎತ್ತರದ ಪ್ರತಿಮೆ ನಿರ್ಮಾಣವಾಗಬೇಕಿದೆ. ಸರ್ಕಾರದ ಸಹಕಾರ ಪೂರ್ಣಪ್ರಮಾಣದಲ್ಲಿ ಸಿಕ್ಕರೆ ಆದಷ್ಟು ಬೇಗ ಸಾಕಾರಗೊಳ್ಳಲಿದೆ. ಸಮಯ ಸಿಕ್ಕಾಗಲೆಲ್ಲ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಯುತ್ತಿದೆ.

ಸಮಾಜದ ಬೆಳವಣಿಗೆಯಲ್ಲಿ ಮಠ–ಪೀಠಗಳ ಪಾತ್ರವೇನು? ಭಕ್ತರು ಮಠಗಳಿಂದ ಏನನ್ನು ನಿರೀಕ್ಷೆ ಮಾಡಬಹುದು?

ಅಲಕ್ಷಿತ ಸಮುದಾಯದ ಏಳಿಗೆಗೆ ಮಠ–ಪೀಠಗಳು ಶ್ರಮಿಸುತ್ತಿವೆ. ಸಾಮಾಜಿಕ ಜಾಗೃತಿ ಹಾಗೂ ಸಂಘಟನೆಯನ್ನು ಜನರು ನಿರೀಕ್ಷೆ ಮಾಡುತ್ತಿದ್ದಾರೆ. ಸಾಕ್ಷರತಾ ಹಾಗೂ ಸಮಸಮಾಜ ನಿರ್ಮಾಣ ಆಗಬೇಕಿದೆ. ಇದಕ್ಕೆ ಮಠಾಧೀಶರೂ ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು. ಸಮಾಜದ ನಿರೀಕ್ಷೆಯನ್ನು ತಲುಪುವ ಪ್ರಯತ್ನ ಮಠಾಧೀಶರಿಂದ ಆಗಬೇಕಿದೆ.

ಮಠಾಧೀಶರು ರಾಜಕಾರಣ ನಿಯಂತ್ರಿಸುವುದು ಎಷ್ಟು ಸಮಂಜಸ?

ಮಠಾಧೀಶರ ಮೇಲೆ ಒತ್ತಡ ಬರುತ್ತದೆ, ಸಂದಿಗ್ಧ ಸ್ಥಿತಿ ನಿರ್ಮಾಣವಾಗುತ್ತದೆ. ಅದನ್ನು ಜಾಣ್ಮೆಯಿಂದ ನಿರ್ವಹಿಸುವ ಹೊಣೆಗಾರಿಕೆ ಮಠಾಧೀಶರ ಮೇಲಿದೆ. ರಾಜಕಾರಣಿಗಳಿಗೆ ಮಾಠಧೀಶರು ಮಾರ್ಗದರ್ಶನ ಮಾಡಬಹುದೇ ಹೊರತು ನಿರ್ದೇಶನ ನೀಡುವ ಅಧಿಕಾರವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT