ಬುಧವಾರ, ಆಗಸ್ಟ್ 21, 2019
22 °C
ಬ್ರಿಟನ್ ನೂತನ ಪ್ರಧಾನಿ ಬೋರಿಸ್‌ ಜಾನ್ಸನ್‌ ಹಾದಿ

ಪತ್ರಕರ್ತನಿಂದ ಪ್ರಧಾನಿ ಹುದ್ದೆಗೇರಿದ ಬೋರಿಸ್‌ ಜಾನ್ಸನ್‌

Published:
Updated:
Prajavani

ಇಡೀ ಜಗತ್ತಿಗೆ ರಾಜನಾಗಬೇಕೆಂದು ಎಳವೆಯಲ್ಲಿ ಕನಸು ಕಂಡಿದ್ದ ಇವರು ಇದೀಗ ಬ್ರಿಟನ್‌ನ ಪ್ರಧಾನಿ ಪಟ್ಟ ಅಲಂಕರಿಸಿದ್ದಾರೆ. ‘ಮದ್ಯ, ಬೇಟೆ, ಸೈಕ್ಲಿಂಗ್, ಬೈಕ್‌ ರೈಡಿಂಗ್ ಎಂದರೆ ನನಗಿಷ್ಟ’ ಎಂದು ಹಿಂದೊಮ್ಮೆ ಬೋರಿಸ್‌ ಜಾನ್ಸನ್‌ ಸಂದರ್ಶನವೊಂದರಲ್ಲಿ ಹೇಳಿ
ದ್ದರು. ಅವರ ಜೀವನೋತ್ಸಾಹ ಅರ್ಥ ಮಾಡಿಕೊಳ್ಳಲು ಈ ಹೇಳಿಕೆ ಸಾಕು.

ಬ್ರಿಟನ್ನಿನ ನೂತನ ಪ್ರಧಾನಿಯಾಗಿ ಕನ್ಸವೇರ್ಟಿವ್ ಪಕ್ಷದ ಬೋರಿಸ್‌ ಜಾನ್ಸನ್‌ ಆಯ್ಕೆಯಾಗಿದ್ದಾರೆ. ಬಹುಮುಖ ವ್ಯಕ್ತಿತ್ವದ ಅವರು ವಿದೇಶಾಂಗ ಇಲಾಖೆಯ ಕಾರ್ಯದರ್ಶಿಯಾಗಿ, ಎರಡು ಬಾರಿ ಲಂಡನ್ ನಗರದ ಮೇಯರ್‌ ಆಗಿ ಛಾಪು ಮೂಡಿಸಿದವರು. ಮುಕ್ತ ಮಾರುಕಟ್ಟೆ ತಂತ್ರಜ್ಞಾನ ಒಪ್ಪಿದ್ದ ಇವರಿಗೆ ತಾಳ್ಮೆ ದೊಡ್ಡ ಶಕ್ತಿ.  

ವೈಯಕ್ತಿಯ ನೆಲೆಯಲ್ಲಿಯೂ ವರ್ಣಮಯ ವ್ಯಕ್ತಿತ್ವದ ಜಾನ್ಸನ್‌, ಕೆನಡಾದ ಎಟೋನ್ ಕಾಲೇಜಿನ ವಿದ್ಯಾರ್ಥಿ. ಆಕ್ಸ್‌ಫರ್ಡ್‌ ಒಕ್ಕೂಟದ ಅಧ್ಯಕ್ಷರಾಗಿ, ಇತಿಹಾಸಕಾರರಾಗಿ, ಸಂಪಾದಕರಾಗಿ, ಸಂಸದರಾಗಿ ಬದುಕಿನ ಹಲವು ಮಜಲುಗಳಲ್ಲಿ ಯಶ ಕಂಡವರು. 

‌ಅಲೆಕ್ಸಾಂಡ್‌ ಬೋರಿಸ್‌ ಡಿ ಫಿಎಫೆಲ್‌ ಜಾನ್ಸನ್‌ ಜೂನ್‌ 19, 1964ರಂದು ಅಮೆರಿಕದ ನ್ಯೂಯಾರ್ಕ್‌ನಲ್ಲಿ ಮೇಲ್ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಯುರೋಪಿಯನ್‌ ಶಾಲೆ, ಎಟೋನ್‌ ಕಾಲೇಜುಗಳಲ್ಲಿ ಶಿಕ್ಷಣ ಪಡೆದು, ಆಕ್ಸ್‌ಫರ್ಡ್‌ ಒಕ್ಕೂಟದ ಅಧ್ಯಕ್ಷರಾಗಿ 1986ರಲ್ಲಿ ಆಯ್ಕೆಯಾದರು. ಆ ಮೂಲಕ ಕಾಲೇಜು ದಿನಗಳಲ್ಲಿಯೇ ನಾಯಕತ್ವದ ವ್ಯಕ್ತಿತ್ವ ಮೈಗೂಡಿಸಿಕೊಂಡಿದ್ದರು. ‘ದಿ ಟೈಮ್ಸ್‌’ನಲ್ಲಿ ಪತ್ರಕರ್ತರಾಗಿ ವೃತ್ತಿಜೀವನ ಆರಂಭಿಸಿದ ಅವರು, ‘ಟೆಲಿಗ್ರಾಫ್‌’ ಪತ್ರಿಕೆಯಲ್ಲಿ ಬ್ರಸೆಲ್ಸ್‌ ವರದಿಗಾರರಾಗಿಯೂ ಕೆಲಸ ಮಾಡಿದ ಅನುಭವ ಪಡೆದರು. ನಂತರ 1994ರಿಂದ 1999ರವರೆಗೆ ಟೆಲಿಗ್ರಾಫ್‌ನ ಸಂಪಾದಕರಾಗಿದ್ದರು. ಅಮೆರಿಕ ಮತ್ತು ಬ್ರಿಟನ್‌ – ಎರಡೂ ದೇಶಗಳ ಪೌರತ್ವ ಪಡೆದಿದ್ದಾರೆ. 

ಹೆನ್ಲೆಯ ಸಂಸದರಾಗಿ 2001ರಲ್ಲಿ ಆಯ್ಕೆಯಾದರು. ಕನ್ಸರ್ವೇಟಿವ್‌ ನಾಯಕರಾದ ಮಿಷೆಲ್‌ ಹಾವರ್ಡ್‌ ಮತ್ತು ಡೇವಿಡ್‌ ಕ್ಯಾಮರಾನ್‌ ಅವರ ನೆರಳಿನಲ್ಲಿಯೇ ರಾಜಕೀಯದ ಚದುರಂಗದಾಟ ಕಲಿತರು. ಕನ್ಸರ್ವೇಟಿವ್‌ ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿದ್ದರೂ ಸಲಿಂಗಿಗಳ ಹಕ್ಕುಗಳ ಬಗ್ಗೆ ಉದಾರ ನಿಲುವು ವ್ಯಕ್ತಪಡಿಸಿದ್ದರು. 2008ರಲ್ಲಿ ಕೆನ್‌ ಲಿವಿಂಗ್‌ಸ್ಟೋನ್‌ ಅವರನ್ನು ಸೋಲಿಸಿ ಮೇಯರ್‌ ಆಗಿ ಆಯ್ಕೆಯಾದರು. ನಗರದ ಸಾರ್ವಜನಿಕ ಸಾರಿಗೆಯಲ್ಲಿ ಮದ್ಯ ಸೇವಿಸುವುದನ್ನು ಮೇಯರ್‌ ಆಗಿ ಮೊದಲ ಬಾರಿಗೆ ನಿಷೇಧಿಸಿದರು. ಬಾಡಿಗೆ ಸೈಕಲ್‌, ಥೇಮ್ಸ್‌ ಕೇಬಲ್‌ ಕಾರು ಯೋಜನೆಗಳನ್ನು ಜಾರಿಗೆ ತಂದರು. 2012ರಲ್ಲಿ ಮರು ಆಯ್ಕೆಯಾದರು. 2015ರಲ್ಲಿ ಆಕ್ಸ್‌ಬ್ರಿಜ್‌ನ ಸಂಸದರಾಗಿ ಆಯ್ಕೆಯಾದರು. 

ದಾಂಪತ್ಯದಲ್ಲಿ ಬಿರುಕು, ಮರುಮದುವೆ ಬೋರಿಸ್‌ ಅವರ ಬದುಕಿನ ಸಹಜ ಘಟನೆಗಳೇ ಆಗಿಹೋಗಿವೆ. ವಿಶ್ವವಿದ್ಯಾಲಯಕ್ಕೆ ಸೇರುವ ಮೊದಲೇ ‘ಕೊಕೇನ್‌’ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದೆ’ ಎಂದು ಹೇಳಿಕೆ ಸ್ವತಃ ನೀಡಿ ವಿವಾದಕ್ಕೆ ಗುರಿಯಾಗಿದ್ದರು. ಸೈಕ್ಲಿಂಗ್ ಇಷ್ಟಪ‍ಡುವ ಅವರು ಆರೋಗ್ಯ ಕಾಳಜಿಯಿಂದಲೇ ದೇಹದ ತೂಕ ಇಳಿಸಿದ್ದಾರೆ. ಸತತ ಸೈಕಲ್‌ ಸವಾರಿಯಿಂದ ತೂಕ ಕಳೆದುಕೊಂಡಿರಾ ಅಥವಾ ತಿನ್ನದೇ ತೂಕ ಇಳಿಸಿಕೊಂಡಿರಾ ಎಂಬ ಸಂದರ್ಶಕರ ಪ್ರಶ್ನೆಗೆ, ‘ಈಗ ನನ್ನ ದೇಹದ ತೂಕ 100 ಕೆ.ಜಿ. ಎಂದು ಹೇಳಿಕೊಳ್ಳಲು ನಾಚಿಕೆಯೇನಿಲ್ಲ. ಹಾಗೆಂದು ಸೈಕ್ಲಿಂಗ್‌ ಮರೆತಿಲ್ಲ. ಲಂಡನ್‌ನಲ್ಲಿ ಸುರಕ್ಷಿತವಾಗಿ ಸೈಕ್ಲಿಂಗ್ ಮಾಡಬಹುದು’ ಎಂಬ ಭರವಸೆಯನ್ನೂ ನೀಡುತ್ತಾರೆ. 

2016ರಲ್ಲಿ ಬ್ರೆಕ್ಸಿಟ್ ಪರ ದನಿ ಎತ್ತಿದ ಇವರನ್ನು ಬ್ರೆಕ್ಸಿಟ್ ಹೀರೊ ಎಂದೇ ಕರೆಲಾಯಿತು. ಯುರೋಪ್ ಒಕ್ಕೂಟದಲ್ಲೇ ಉಳಿಯುವ ಪ್ರಧಾನಿ ಡೇವಿಡ್ ಕ್ಯಾಮರಾನ್ ಅವರ ನಿರ್ಧಾರವನ್ನು ವಿರೋಧಿಸಿ ಬ್ರೆಕ್ಸಿಟ್ ಆಂದೋಲನದಲ್ಲಿ ಸಕ್ರಿಯವಾಗಿ ಭಾಗಿಯಾಗಿ
ದ್ದರು. ಮೇಯರ್‌ ಆಗಿ ಹಲವು ಜನಪರ ಯೋಜನೆಗಳನ್ನು ತಂದಿದ್ದ ಬೋರಿಸ್‌ ಜಾನ್ಸನ್ ಪ್ರಧಾನಿಯಾಗಿಯೂ ಹೊಸ ದಿಕ್ಕು ತೋರಬಹುದು ಎಂಬ ನಿರೀಕ್ಷೆ ಬ್ರಿಟನ್ ಜನರಲ್ಲಿ ಇದೆ. 

Post Comments (+)