ಭಾನುವಾರ, ಸೆಪ್ಟೆಂಬರ್ 27, 2020
24 °C

ಸಾಧ್ಯತೆ ಕಮರಿಸುವ ಹತಾಶೆಯ ಪ್ರತಿಕ್ರಿಯೆ

ಅರವಿಂದ ಚೊಕ್ಕಾಡಿ Updated:

ಅಕ್ಷರ ಗಾತ್ರ : | |

ವೈಚಾರಿಕತೆಗಳು ಸಮಾಜದ ಯೋಚನೆಯನ್ನು ಪರಿಗಣಿಸದೆ ತಮ್ಮ ವಿಚಾರವನ್ನು ಹೇರಿದಾಗ ಸಮಾಜ ಅದನ್ನು ತಿರಸ್ಕರಿಸುತ್ತದೆ. ಪರಿಣಾಮ ಹತಾಶೆ. ಹತಾಶೆಯಿಂದ ಸಿಟ್ಟು. ಸಿಟ್ಟಿನ ಪ್ರತಿಕ್ರಿಯೆಯಿಂದ ವೈಚಾರಿಕತೆ ಜನರಿಂದ ದೂರವಾಗುತ್ತದೆ. ಇಲ್ಲೀಗ ಪ್ರಬಲ ಜಾತಿಗಳು ಮತ್ತು ಸೆಮೆಟಿಕ್ ಧರ್ಮೀಯರಲ್ಲದ ಅಲ್ಪಸಂಖ್ಯಾತರ ಸಂಸ್ಕೃತಿ ಪ್ರಧಾನವಾದ ಒಂದು ಆಲೋಚನಾ ಕ್ರಮ ಹಾಗೂ ಸೆಮೆಟಿಕ್ ಧರ್ಮೀಯರು ಮತ್ತು ಕೆಳಜಾತಿಗಳ ಸಂಸ್ಕೃತಿ ಪ್ರಧಾನವಾದ ಒಂದು ಆಲೋಚನಾಕ್ರಮ ಸಮಾಜದಲ್ಲಿ ಮುಖಾಮುಖಿಯಾಗಿ ಹತಾಶೆಯ ಪ್ರತಿಕ್ರಿಯೆಯನ್ನೇ ಕೊಡುತ್ತಿವೆ. ಹೇಳಲು ಸುಲಭವಾಗುವುದಕ್ಕಾಗಿ ಇವುಗಳಲ್ಲಿ ಮೊದಲನೆಯದನ್ನು ಹಿಂದುತ್ವ ಎಂದೂ, ಎರಡನೆಯದನ್ನು ಜಾತ್ಯತೀತತೆ ಎಂದೂ ಕರೆಯಬಹುದು.

ಆಕ್ರಮಣವು ಹತಾಶೆಯ ಪರಿಣಾಮವೇ. ಹಿಂದುತ್ವದವರಿಗೆ ಅಫ್ಗಾನಿಸ್ತಾನದ ಕ್ರಿಕೆಟ್ ತಂಡ ಮಿತ್ರರಂತೆ ಕಾಣುತ್ತದೆ. ಆದರೆ ನಮ್ಮದೇ ದೇಶದ ಒಬ್ಬ ಮುಸ್ಲಿಂ, ಮಿತ್ರನಂತೆ ಕಾಣುವುದಿಲ್ಲ ಎಂದಾದರೆ ಅದಕ್ಕೆ ಕಾರಣ ಹತಾಶೆ. ಅಫ್ಗಾನಿಸ್ತಾನದ ಮುಸ್ಲಿಂ ತನ್ನ ಹಿಂದುತ್ವದ ಸಹಿತವಾಗಿಯೇ ತನ್ನನ್ನು ಸ್ವೀಕರಿಸುತ್ತಿದ್ದಾನೆಂದು ಭಾವಿಸುವವನು ತನ್ನ ದೇಶದ ಮುಸ್ಲಿಮರು ತನ್ನನ್ನು ಸ್ವೀಕರಿಸುತ್ತಿಲ್ಲ ಎಂದು ಹತಾಶೆಗೊಂಡು ಆಕ್ರಮಣಕ್ಕೆ ಇಳಿಯುತ್ತಾನೆ. ಆಕ್ರಮಣವು ಸೋಲಿನ ಕಡೆಗೆ ಒಯ್ಯುತ್ತದೆ. ಹಿಂದುತ್ವದ ಚಿಂತನೆಯು ಭಾವನಾತ್ಮಕ ಇರಬಹುದು. ಆದರೆ ಸಮಾಜದ ನಿರ್ವಹಣೆಯ ಗೆಲುವು ಭಾವನಾತ್ಮಕ ಅಲ್ಲ. ಉದ್ಯೋಗ ಸೃಷ್ಟಿ ಆಗಬೇಕು. ಆದರೆ ಆಕ್ರಮಣದ ವರ್ಚಸ್ಸಿನ ದೇಶಕ್ಕೆ ವಿದೇಶಿ ಬಂಡವಾಳ ಬರದು. ಆಗ ಉದ್ಯೋಗ ಕುಸಿತವಾಗಿ, ಹಣದ ಇಳಿತವಾಗಿ 1929ರಲ್ಲಿ ಅಮೆರಿಕದಲ್ಲಿ ಆದಂತಹ ಆರ್ಥಿಕ ಮುಗ್ಗಟ್ಟು ಉಂಟಾಗಿ ಹಿಂದುತ್ವದ ವೈಚಾರಿಕತೆ ವಿಫಲವಾಗುತ್ತದೆ.

ಇವತ್ತು, ಯಾವುದೇ ದೇಶದ ಯಶಸ್ಸು ಅಂತರರಾಷ್ಟ್ರೀಯ ಬೆಂಬಲದಿಂದಲೇ ಸಾಧ್ಯ. ದೇಶವನ್ನು ದಾಟಿದಾಗ ಗಾಂಧಿಯ ನಾಡಿನವ ಎಂದೇ ಪರಿಚಯಿಸಿಕೊಳ್ಳಬೇಕಾಗುತ್ತದೆ. ಒಳಗೆ ಗಾಂಧೀಜಿಗೆ ಬೈಯ್ಯುತ್ತಾ ಇದ್ದರೆ ಹೊರಗೆ ಪರಿಚಯಿಸಿಕೊಳ್ಳುವುದು ಹೇಗೆ? ಭಾರತ ಹೊರದೇಶಗಳಿಗೆ ಪರಿಚಯಿಸಲ್ಪಟ್ಟದ್ದು ಅಲ್ಪಸಂಖ್ಯಾತರಿಗೆ ಸುರಕ್ಷಿತವಾದ ಧರ್ಮನಿರಪೇಕ್ಷ ರಾಷ್ಟ್ರವಾಗಿಯೇ. ಪಾಕಿಸ್ತಾನಕ್ಕೆ ಈ ಸಮಸ್ಯೆ ಇಲ್ಲ. ಅದು ಅಲ್ಪಸಂಖ್ಯಾತರನ್ನು ದಮನಿಸುವ ರಾಷ್ಟ್ರವಾಗಿಯೇ ಪ್ರಾರಂಭದಿಂದಲೂ ಜಗತ್ತಿಗೆ ತನ್ನನ್ನು ಪರಿಚಯಿಸಿಕೊಂಡು, ಆ ವರ್ಚಸ್ಸಿನಿಂದ ಬಹಳಷ್ಟು ನಷ್ಟವನ್ನೂ ಅನುಭವಿಸಿದೆ.

ಹಿಂದೂಗಳಲ್ಲಿ ಸನಾತನ ಧರ್ಮದ ಒಂದು ಮನಃಸ್ಥಿತಿ ಇರುತ್ತದೆಂಬ ಅರಿವು ಹಿಂದುತ್ವದವರಿಗೆ ಇರಬೇಕು. ಅದು ದೈಹಿಕ ಆಕ್ರಮಣವನ್ನು ಒಪ್ಪದು. ಋಗ್ವೇದದ ‘ಋತ’ದ ಪರಿಕಲ್ಪನೆಯು ‘ಜೀವನದ ಸಹಜ ಹರಿವಿಗೆ ಯಾವ ತಡೆಯೂ ಆಗಬಾರದು’ ಎನ್ನುತ್ತದೆ. ಸನಾತನಿಗಳ ಬದುಕಿನ ಸಹಜ ಹರಿವಿಗೆ ಧಕ್ಕೆ ಬಂದಾಗೆಲ್ಲ ಸನಾತನ ಧರ್ಮವು ಸಂಘಟನಾತ್ಮಕ ರೂಪದಲ್ಲಿ ಸ್ವರಕ್ಷಣೆಗೆ ಮುಂದಾಗಿದೆ. ಹಿಂದೂ ಎನ್ನುವುದೂ ಆ ರೀತಿಯ ಸಂಘಟನೆಯಷ್ಟೇ. ಜಗತ್ತಿನ ಎಲ್ಲ ಜೀವಿಗಳನ್ನೂ ನಿನ್ನ ಆತ್ಮವೆಂದೇ ತಿಳಿಯಬೇಕು ಎನ್ನುವ ಸನಾತನ ಧರ್ಮದ ತಿರುಳನ್ನು ತಿರಸ್ಕರಿಸುತ್ತಾ ಹೋದರೆ, ಅದನ್ನು ಪ್ರಶ್ನಿಸಲು ಸಾವಿರಾರು ಅರ್ಜುನರನ್ನು ಸೃಷ್ಟಿಸಿದ ಧರ್ಮಕ್ಕೆ ಮುಂದೆಯೂ ಅದು ಸಾಧ್ಯವಿರುತ್ತದೆ.

ಜಾತ್ಯತೀತರು ಹಿಂದುತ್ವದವರಿಗಿಂತ ಹೆಚ್ಚು ಚಿಂತನಶೀಲರೆಂದು ಗ್ರಹಿಕೆ. ಈ ತಂಡದಲ್ಲಿ ಸನ್ನಿವೇಶದ ಗ್ರಹಿಕೆಯೇ ದುರ್ಬಲವಾಗುತ್ತಿದೆ. ‘ಆಕ್ರಮಣಕ್ಕೆ ಮುಸ್ಲಿಮನಾಗಿ ಹುಟ್ಟಿದ್ದೇ ಕಾರಣವೇ’ ಎಂದು ಪ್ರಶ್ನಿಸಿದೊಡನೆ, ‘ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯಕ್ಕೆ ಯಾರು ಹೊಣೆ’ ಎಂಬ ಪ್ರತಿಪ್ರಶ್ನೆ ಬಂದಾಗುತ್ತದೆ. ಆಮೇಲೆ ಮನುಸ್ಮೃತಿ-ಘಜ್ನಿ ಮಹಮ್ಮದ್ ಎಂದು ಚರ್ಚೆ ಇತಿಹಾಸಕ್ಕೆ ಹೋಗುತ್ತದೆ. ‘ಆಕ್ರಮಣ ಯಾರೇ ಮಾಡಿದರೂ ತಪ್ಪೇ. ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರಿಗೆ ಜಾಸ್ತಿ ಭದ್ರತೆ ಕೊಡಬೇಕು. ಉಳಿದ ಭಾಗಗಳಲ್ಲಿ ಮುಸ್ಲಿಮರಿಗೆ ಜಾಸ್ತಿ ಭದ್ರತೆ ಕೊಡಬೇಕು’ ‌ಎಂಬ ನಿಲುವನ್ನು ತೆಗೆದುಕೊಂಡಾಗ ಚರ್ಚೆ ವರ್ತಮಾನದಲ್ಲೇ ಉಳಿಯುತ್ತದೆ. ಈ ಬಗೆಯ ಚರ್ಚೆಗಳು ಮೂಲ ತತ್ವವನ್ನು ಸರಿಯಾಗಿ ಗ್ರಹಿಸಬೇಕು. ಆಕ್ರಮಣ ನಡೆದಾಗ ಆಕ್ರಮಣಕಾರನ ಸಮುದಾಯಕ್ಕೆ ಕ್ರಮ ತೆಗೆದುಕೊಳ್ಳುವ ಅಧಿಕಾರವಿರುವುದಿಲ್ಲ. ಅದು ಕಾನೂನು ಮಾಡಬೇಕಾದ ಕೆಲಸ. ಹಾಗಿರುವಾಗ ಒಂದು ಕುಕೃತ್ಯಕ್ಕೆ ಸಮುದಾಯವನ್ನು ಹೊಣೆಗಾರನನ್ನಾಗಿಸಿ ಮಿತಿಮೀರಿದ ತೀಕ್ಷ್ಣ ಭಾಷೆಯನ್ನು ಬಳಸಿದರೆ ಆ ಸಮುದಾಯದ ಸಹಾನುಭೂತಿ ಕಡಿಮೆಯಾಗಬಹುದೇ ವಿನಾ ಜಾಸ್ತಿಯಂತೂ ಆಗುವುದಿಲ್ಲ.

ಈ ವೈಚಾರಿಕತೆಯ ಹತಾಶೆಯು ಭಿನ್ನಾಭಿಪ್ರಾಯವನ್ನು ‘ಬ್ರಾಹ್ಮಣಶಾಹಿ’ ಎಂದು ತಿರಸ್ಕರಿಸಿಬಿಡುತ್ತದೆ. ಭಿನ್ನಾಭಿಪ್ರಾಯ ಇರುವವರನ್ನೆಲ್ಲ ಕಳಚಿಕೊಳ್ಳುತ್ತಾ ಹೋದರೆ ಉಳಿಯುವವರಾರು? ಹೇಡಿತನ, ಕುತಂತ್ರಗಳನ್ನು ಸಮುದಾಯಕ್ಕೆ ಆರೋಪಿಸಲಾಗುತ್ತದೆ. ಆದರದು ಹಾಗೆಯೇ ಇಲ್ಲ. ತಾರಿಖ್-ಇ-ಫೆರಿಷ್ತ ಕೃತಿಯಲ್ಲೊಂದು ಉಲ್ಲೇಖವಿದೆ.  ಹಿಂದೂಗಳು ಮತಾಂತರವಾಗಬೇಕು ಅಥವಾ ಕಾಶ್ಮೀರದಿಂದ ಹೋಗಬೇಕು ಎಂದು ಸಿಕಂದರ್ ರಾಜ ಆದೇಶಿಸುತ್ತಾನೆ. ಆಗ ಬ್ರಾಹ್ಮಣರು ಸಾಮೂಹಿಕವಾಗಿ ವಿಷ ತೆಗೆದುಕೊಳ್ಳುತ್ತಾರೆ.  ಎದುರಿಸುವ ಸಾಮರ್ಥ್ಯವಿಲ್ಲದಾಗ ನಮ್ಮ ಪ್ರಾಣ ಕೊಟ್ಟೇ ರಾಜಾಜ್ಞೆಯನ್ನು ತಿರಸ್ಕರಿಸುತ್ತೇವೆ ಎನ್ನುವುದೇ ಅದರ ಸಂದೇಶ. ಇದು ಹೇಡಿಗಳ ವರ್ತನೆಯಾಗಲಾರದು.

ದೇಶದಾದ್ಯಂತ ಇರುವವರು ಮುಸ್ಲಿಮರು ಮತ್ತು ಬ್ರಾಹ್ಮಣರು. ಮುಸ್ಲಿಮರಿಗೆ ಎಲ್ಲರೊಂದಿಗೆ ವ್ಯಾವಹಾರಿಕ ಸಂಬಂಧಗಳಿವೆ. ಆದರೆ ಸಾಂಸ್ಕೃತಿಕ ಸಂಪರ್ಕವಿಲ್ಲ. ಬ್ರಾಹ್ಮಣ ವ್ಯವಸ್ಥೆ ಉಳಿದೆಲ್ಲ ಸಮುದಾಯಗಳನ್ನು ಸಾಂಸ್ಕೃತಿಕವಾಗಿ ಸಂಪರ್ಕಿಸುತ್ತದೆ. ಅಲ್ಲಿ ಅನೇಕ ಏಕಸೂತ್ರಗಳೂ ಇವೆ. ಉದಾಹರಣೆಗೆ, ದನವು ಸೆಮೆಟಿಕ್ ಧರ್ಮೀಯರನ್ನು ಹೊರತುಪಡಿಸಿದರೆ ಎಲ್ಲರಿಗೂ ಗೌರವಾರ್ಹ ಪ್ರಾಣಿಯೇ. ಇದು ಗಾಂಧೀಜಿಗೆ ಗೊತ್ತಿತ್ತು. ‘ನಾನು ಗೋಪೂಜಕ’ ಎನ್ನುವ ಮೂಲಕ ಇಡೀ ದೇಶವನ್ನು ಅವರು ಸಂಪರ್ಕಿಸಿದರು. ‘ಆದರೆ ಸ್ವಇಚ್ಛೆಯಿಂದ ಆಗಬೇಕಾದ ಕೆಲಸವನ್ನು ಗೋಹತ್ಯಾ ನಿಷೇಧ ಕಾಯ್ದೆಯ ಮೂಲಕ ಮಾಡುವುದನ್ನು ಒಪ್ಪುವುದಿಲ್ಲ’ ಎಂದರು.

ಪ್ರಾದೇಶಿಕ ಸಮುದಾಯಗಳ ಆದರ್ಶಪುರುಷರು ಆಯಾ ಪ್ರದೇಶದಲ್ಲಿ ಅದೆಷ್ಟೇ ಪ್ರಬಲರಾಗಿದ್ದರೂ ಭಾರತದಾದ್ಯಂತ ಅವರು ಸಂಪರ್ಕವನ್ನು ಏರ್ಪಡಿಸಲಾರರು. ಆದರೆ ರಾಮ, ಕೃಷ್ಣ, ಶಿವ ಇಡೀ ಭಾರತವನ್ನು ಸಾಂಸ್ಕೃತಿಕವಾಗಿ ಸಂಪರ್ಕಿಸಬಲ್ಲರು. ಆದ್ದರಿಂದ ಪ್ರಾದೇಶಿಕ ಸಮುದಾಯಗಳಿಗೆ ಈ ಬ್ರಾಹ್ಮಣೀಯ ರಚನೆಗಳ ಮುಖಾಂತರವೇ ಭಾರತವನ್ನು ಸಂಪರ್ಕಿಸುವುದು ಅನಿವಾರ್ಯವಾಗುತ್ತದೆ. ಅಂದಮಾತ್ರಕ್ಕೆ ಅವರು ತಮ್ಮ‌ ತತ್ವ ಬಿಟ್ಟು ಬ್ರಾಹ್ಮಣ ರಚನೆಯ ಅಡಿಯಾಳುಗಳಾಗಿದ್ದಾರೆಂದು ಅರ್ಥವಲ್ಲ. ಕೇವಲ ಶುದ್ಧ ಆರ್ಥಿಕ ಸಿದ್ಧಾಂತ ಮಾತ್ರ ಈ ಸಾಂಸ್ಕೃತಿಕ ಏಕಸೂತ್ರದ ಹಂಗಿಲ್ಲದೆ ಇಡೀ ರಾಷ್ಟ್ರವನ್ನು ಸಂಪರ್ಕಿಸಬಲ್ಲದು. ಆದರೆ ಭಾರತ ಎನ್ನುವುದು ಚಿಕ್ಕಚಿಕ್ಕ ಸಾಂಸ್ಕೃತಿಕ ಸಮುದಾಯಗಳೇ ಇರುವ ದೊಡ್ಡ ದೇಶ. ಶುದ್ಧ ಆರ್ಥಿಕ ಭಾಷೆಯನ್ನು ಜನ ಸ್ವೀಕರಿಸುವುದಿಲ್ಲ. ಆಗ ‘ರಾಷ್ಟ್ರೀಯತೆಯೇ ಇಲ್ಲ’ ಎನ್ನುವುದಕ್ಕೂ ‘ಧಾರ್ಮಿಕ ರಾಷ್ಟ್ರೀಯತೆ ಎಂದು ಇಲ್ಲ’ ಎನ್ನುವುದಕ್ಕೂ ಇರುವ ವ್ಯತ್ಯಾಸದ ಅರಿವು ಇರಬೇಕಾಗುತ್ತದೆ.

ಇಡೀ ದೇಶದ ಸ್ಪಷ್ಟ ಅರಿವು ಇದ್ದವರು ಗಾಂಧಿವಾದಿಗಳು. ಆದರೆ ಗಾಂಧಿ ನಂತರ ಗಾಂಧಿಯ ಶಿಷ್ಯಂದಿರೆಲ್ಲರೂ ಹಠಾತ್ ಆಗಿ ರಾಷ್ಟ್ರೀಯ ವೇದಿಕೆಯಿಂದ ಕಣ್ಮರೆಯಾದರು. ಯಾವ ದೇಶದಲ್ಲೂ ನಾಯಕ ಹೊರಟುಹೋದ ಕೂಡಲೇ ಶಿಷ್ಯರು ಏಕಾಏಕಿ ಕಣ್ಮರೆಯಾದದ್ದಿಲ್ಲ. ಭಾರತದಲ್ಲಿ ಅದು ಆಯಿತು. ಆದ್ದರಿಂದ ದೇಶವನ್ನು ಸಮಗ್ರವಾಗಿ ಗ್ರಹಿಸುವ ವೈಚಾರಿಕತೆ ದುರ್ಬಲವಾಯಿತು. ಆಗ ಹತಾಶೆಗಳು ಬಲುಬೇಗ ವೈಚಾರಿಕತೆಗೆ ಪ್ರವೇಶಿಸಿ ಅದನ್ನು  ದುರ್ಬಲಗೊಳಿಸುತ್ತವೆ. ‘ನನ್ನದೇ ಸರಿ ಮತ್ತು ಶ್ರೇಷ್ಠ’ ಎಂಬ ಆಲೋಚನಾಕ್ರಮ ಇದಕ್ಕೆ ಕಾರಣ. ಈ ಹಂತದಲ್ಲಿ ಬಸವಣ್ಣನ ಕಿವಿಮಾತು ಎರಡೂ ತಂಡಗಳಲ್ಲಿ ವಿವೇಕವನ್ನು ಪ್ರಜ್ವಲಿಸಬಲ್ಲದು. ‘ಎನಗಿಂತ ಕಿರಿಯರಿಲ್ಲ’ ಎಂದು ಯೋಚನೆ, ಏನು ಮಾಡಬೇಕೆಂಬ ವಿವೇಕವನ್ನೂ ಹುಟ್ಟಿಸಬಲ್ಲದು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.