ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮಿಸಿಬಿಡಿ ಬಾಪೂ, ಆತ್ಮವಂಚನೆಯನ್ನು!

ಗ್ರಾಮ ಭಾರತದ ಕಲ್ಯಾಣಕ್ಕೆ ಪೂರಕವಾದ ಗ್ರಾಮಸಭೆಯ ತೀರ್ಮಾನವನ್ನೇ ತಿರಸ್ಕರಿಸಿದರೆ?
Last Updated 26 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಅಕ್ಟೋಬರ್ ಎರಡು ಸಮೀಪಿಸುತ್ತಿದೆ. ‘ಗಾಂಧಿ 150’ ಎನ್ನುತ್ತ ದೇಶದಾದ್ಯಂತ ಗಾಂಧೀಜಿಯವರನ್ನು ನೆನೆಯಲಾಗುತ್ತದೆ. ಎಲ್ಲಾ ಪತ್ರಿಕೆಗಳಲ್ಲಿ ಲೇಖನಗಳು, ವೇದಿಕೆಯ ಮೇಲೆ ಭಾಷಣಗಳು, ಹಾಡು, ನಾಟಕಗಳು... ಮರುದಿನ ಮರೆಯಲಿಕ್ಕಾಗಿ ಅಂದು ನೆನೆಯುತ್ತೇವೆ. ಗಾಂಧಿ ವಿಚಾರದ ವಿರುದ್ಧ ಪಥದಲ್ಲಿರುವ ನಾವು, ಅದೊಂದು ದಿನ ಅವರನ್ನು ನೆನೆಯಲಿದ್ದೇವೆ.

ಗಾಂಧೀಜಿ ವಿಚಾರಗಳು ಒಂದೇ, ಎರಡೇ? ಅಂತ್ಯೋದಯ, ಪ್ರಜಾಪ್ರಭುತ್ವ, ಗ್ರಾಮಸ್ವರಾಜ್ಯ, ಗ್ರಾಮೀಣ ಆರ್ಥಿಕತೆ, ಶಿಕ್ಷಣ, ಪರಿಸರ, ಮಹಿಳೆ, ಮದ್ಯ ಮಾರಾಟ... ಹೀಗೆ ಒಂದೊಂದು ವಿಚಾರದಲ್ಲೂ ಕಟ್ಟಕಡೆಯ ಮನುಷ್ಯರನ್ನು ಮೇಲೆತ್ತುವ ಬಗ್ಗೆ, ಅವರ ದನಿಯನ್ನು ಕೇಳಿಸಿಕೊಳ್ಳುವ ಬಗ್ಗೆ, ಅವರಿಗೆ ಸಹ್ಯ ಜೀವನವನ್ನು ಕಲ್ಪಿಸುವ ಬಗ್ಗೆ ಅವರು ಮಾತನಾಡಿದ್ದರು.

ಗ್ರಾಮ ಭಾರತವು ಗಾಂಧಿಯವರ ಎಲ್ಲಾ ಕನಸುಗಳ ಕೇಂದ್ರ. ಆ ಕೇಂದ್ರದ ಕೇಂದ್ರಬಿಂದು ಸ್ಥಳೀಯ ಆಡಳಿತ. ಇಡೀ ದೇಶದ ಆರ್ಥಿಕತೆಯು ಗ್ರಾಮ ಭಾರತದೊಳಗೆ ರೂಪುಗೊಂಡು, ಗ್ರಾಮ ಕೈಗಾರಿಕೆಗಳ ಮೂಲಕ ನಿಯಂತ್ರಣಕ್ಕೆ ಒಳಪಡಬೇಕು ಎಂದು ಅವರು ಹಂಬಲಿಸಿದ್ದರು.

ನೆಹರೂ ಭಾರತವು ಪಾಶ್ಚಾತ್ಯ ಅಭಿವೃದ್ಧಿ ಮಾದರಿಯ ಬೆನ್ನು ಹತ್ತಿದರೂ ಗಾಂಧಿಯವರ ಕನಸನ್ನು ಸಾಕ್ಷಾತ್ಕರಿಸಲೋ ಎಂಬಂತೆ ಸ್ಥಳೀಯ ಜನರಿಗಾಗಿ ಸ್ಥಳೀಯ ಸರ್ಕಾರವು 1992ರಲ್ಲಿ ಮೈದಳೆದದ್ದು ಪಂಚಾಯತ್ ರಾಜ್ ಕಾನೂನಿನ ಮೂಲಕ.

ಗ್ರಾಮ ಪಂಚಾಯಿತಿಯ ಕೇಂದ್ರಬಿಂದು ಗ್ರಾಮಸಭೆ. ಗ್ರಾಮದ ಪ್ರತಿಯೊಬ್ಬರೂ ಗ್ರಾಮಸಭೆಯ ಸದಸ್ಯರು. ಗ್ರಾಮಸಭೆಯ ತೀರ್ಮಾನಕ್ಕೆ, ಅದೇ ಪ್ರಜೆಗಳು ಆರಿಸಿ ತಂದ ಪ್ರಭುಗಳೂ, ಪ್ರಜೆಗಳ ತೆರಿಗೆಯ ಹಣದಲ್ಲಿ ನೌಕರಿ ಮಾಡುವ ನೌಕರರೂ ಬದ್ಧರಾಗಿರಬೇಕು. ಗ್ರಾಮಸಭೆಯ ತೀರ್ಮಾನವೇ ಅಂತಿಮ ಎನ್ನುತ್ತದೆ ಕಾನೂನು. ಆದರೆ, ಪ್ರಜೆಗಳ ಅಭಿಪ್ರಾಯಕ್ಕೆ, ನಿರ್ಣಯಕ್ಕೆ ಕಿಂಚಿತ್ ಬೆಲೆ ಕೊಡದ ರೀತಿಯಲ್ಲಿ ನಡೆದಿದೆ ಆಡಳಿತ. ತಮ್ಮ ಪಂಚಾಯಿತಿಯ ಪ್ರದೇಶದಲ್ಲಿ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಬೇಕು, ಕಳ್ಳಬಟ್ಟಿಗಳು, ಕದ್ದುಮುಚ್ಚಿ ಮದ್ಯ ಮಾರಾಟ ಮಾಡುವುದು ಕೂಡ ಸಂಪೂರ್ಣ ನಿಲ್ಲಬೇಕು ಎಂದು ಬೆಳಗಾವಿ, ರಾಯಚೂರು, ರಾಮನಗರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಗ್ರಾಮಸಭೆ ಸದಸ್ಯರು ನಿರ್ಣಯ ಕೈಗೊಂಡಿದ್ದರು. ಆದರೆ ಈ ಯಾವ ಪಂಚಾ
ಯಿತಿಗೆ ಬೇಕಾದರೂ ಹೋಗಿ ನೋಡಿಬನ್ನಿ, ಪ್ರಜೆಗಳ ಆದೇಶವನ್ನು ಪ್ರಭುಗಳು ಪಾಲಿಸುತ್ತಿಲ್ಲ. ಧಿಕ್ಕರಿಸಿದ್ದಾರೆ. ಅರಣ್ಯ ದೋಚುವುದಕ್ಕೆ ಅಡ್ಡಿಪಡಿಸುವವರೆಂದು ಬ್ರಿಟಿಷ್ ಪ್ರಭುತ್ವವು ಅರಣ್ಯವಾಸಿ ಆದಿವಾಸಿಗಳ ಸದ್ದಡಗಿಸಲು ಕಾನೂನುಗಳನ್ನು ತಂದು, ಅರಣ್ಯ ಇಲಾಖೆಯನ್ನು ಸೃಷ್ಟಿಸಿ, ಕಾಡಿನಿಂದ ಅವರನ್ನು ಹೊರಹಾಕಿತು. ದಟ್ಟ ಅರಣ್ಯದೊಳಗೆ ಅಗಲಗಲ ಹಾದಿಗಳಾಗಿ ಕಾಡಿನ ಸಂಪತ್ತನ್ನು ದೋಚುತ್ತಿದ್ದಾಗ, ಅತ್ತ ಹೊರಹಾಕಲ್ಪಟ್ಟ ಅರಣ್ಯವಾಸಿ ಜನರ ಬದುಕು ಅಲ್ಲೋಲಕಲ್ಲೋಲವಾಯಿತು.

1972ರಲ್ಲಿ ವನ್ಯಜೀವಿ ಕಾಯ್ದೆಯು, ಪ್ರಾಣಿಗಳು ಮಾತ್ರ ಅರಣ್ಯದೊಳಗೆ ಇರತಕ್ಕದ್ದೆಂದು ಹೇಳಿ ಮನುಷ್ಯರೆಲ್ಲರನ್ನೂ ಹೊರದೂಡುವ ಕಾರ್ಯ ನಡೆಸಿತು. ಸರ್ಕಾರಕ್ಕೆ ಅದು ಸಾಧ್ಯವಾಗದಾದಾಗ ಸ್ವಯಂ ಸೇವಾ ಸಂಸ್ಥೆಗಳನ್ನು ಬಳಸಿಕೊಂಡು, ವನವಾಸಿಗರ ಮನವೊಲಿಸಿ ಕರ್ನಾಟಕದಲ್ಲಿ ಬಳ್ಳೆ, ನಾಗರಹೊಳೆ ಅಭಯಾರಣ್ಯಗಳಿಂದ ಅರಣ್ಯವಾಸಿಗಳನ್ನು ಹೊರತಂದುಬಿಟ್ಟರು. ಅಂಥದ್ದೊಂದು ಬುಡಕಟ್ಟು ಕಾಲೊನಿ, ಮಾಸ್ತಿಗುಡಿ. ಹೆಗ್ಗಡದೇವನಕೋಟೆ, ಹುಣಸೂರು, ಪಿರಿಯಾಪಟ್ಟಣ ತಾಲ್ಲೂಕುಗಳ ಕಾಡಿನೊಳಗಿನ ಹಾಡಿಗಳಿಂದ ಮಾಸ್ತಿಗುಡಿಗೆ 210 ಕುಟುಂಬಗಳನ್ನು ‘ನಿಮಗೆ ಭೂಮಿಯನ್ನೂ ಕೊಡುತ್ತೇವೆ, ಮನೆಗಳನ್ನೂ ಕೊಡುತ್ತೇವೆ’ ಎಂದು ಹೇಳಿ ಕರೆತರಲಾಯಿತು. ಇವರನ್ನು ನಂಬಿ ಮುಗ್ಧ ಜನ ಮಾಸ್ತಿಗುಡಿಗೆ ಬಂದರು. ಆದರೆ ಒಂದು ವರ್ಷವೇ ಕಳೆದರೂ ಅವರಿಗೆ ಭೂಮಿಯಾಗಲೀ, ಮನೆಗಳ ಹಕ್ಕುಪತ್ರವಾಗಲೀ ದೊರೆತಿಲ್ಲ. ಇಂದು ಕೊಡಗಿನ ಕಾಫಿ ತೋಟಗಳಲ್ಲಿ ಹೊಟ್ಟೆಪಾಡಿಗಾಗಿ ಜೀತ ಮಾಡುತ್ತಿದ್ದಾರೆ ಈ ಜನ.

ಇದು ಒಂದು ಉದಾಹರಣೆ ಮಾತ್ರ. 1972ರಲ್ಲಿ ಸಾವಿರಾರು ಜನರನ್ನು ಕಾಡಿನಿಂದ ಹೊರಹಾಕಿದಾಗ ನೆಲೆ ತಪ್ಪಿದ 3,145 ಕುಟುಂಬಗಳ ಪರವಾಗಿ ‘ಬುಡಕಟ್ಟು ಕೃಷಿಕರ ಸಂಘ’ವು ‘ಡೀಡ್’ ಎಂಬ ಸಂಸ್ಥೆಯೊಂದಿಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು 1986ರಲ್ಲಿ ದಾಖಲಿಸಿತು. ಅದಕ್ಕೆ ಹೈಕೋರ್ಟ್, 90 ದಿನಗಳ ಒಳಗಾಗಿ ಆ ಎಲ್ಲಾ ಜನರ ಪುನರ್ವಸತಿ ಆಗಬೇಕೆಂದು 2014ರಲ್ಲಿ ತೀರ್ಪಿತ್ತಿತು. ಇನ್ನೂವರೆಗೆ ಒಂದೂ ಕುಟುಂಬದ ಸರಿಯಾದ ಪುನರ್ವಸತಿ ಆಗಿಲ್ಲ. ‘ಹಕ್ಕು ಮಂಡನೆ ಅರ್ಜಿ ತಿರಸ್ಕೃತಗೊಂಡಿರುವ ಅರಣ್ಯವಾಸಿಗಳೆಲ್ಲ ಹೊರಹೋಗಬೇಕು’ ಎಂದು ಸುಪ್ರೀಂ ಕೋರ್ಟ್‌ ಕೆಲವು ತಿಂಗಳುಗಳ ಹಿಂದೆ ಆದೇಶಿಸಿದೆ. ಒಂದೆಡೆ ಹೈಕೋರ್ಟ್ ಆಜ್ಞೆ, ಇನ್ನೊಂದೆಡೆ ಸುಪ್ರೀಂ ಕೋರ್ಟ್‌ನ ಆದೇಶ. ಅರಣ್ಯ ಹಕ್ಕು ಕಾಯ್ದೆಯೊಂದು ಜಾರಿಯಾದರೆ ಸಾಕು, ಕೋರ್ಟ್‌ನ ಮಧ್ಯಪ್ರವೇಶವೇ ಬೇಕಿಲ್ಲ ಎನ್ನುತ್ತಾರೆ ಅರಣ್ಯಮೂಲ ಬುಡಕಟ್ಟು ಕೃಷಿಕರು.

ಅರಣ್ಯಮೂಲ ಬುಡಕಟ್ಟು ಜನರಿಗೆ ಆದ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸುವುದಕ್ಕಾಗಿ 2006ರ ಅರಣ್ಯ ಹಕ್ಕು ಕಾಯ್ದೆಯು ಜಾರಿಗೆ ಬಂದಿತು. ಅಂದಿನಿಂದಲೂ ಬೇರೆ ಬೇರೆ ಅರಣ್ಯ ಕಾಯ್ದೆಗಳಿಂದಾಗಿ ನೆಲೆ ತಪ್ಪಿದ್ದ ಬುಡಕಟ್ಟು ಜನರು ‘ನಮ್ಮ ನೆಲೆಗಳನ್ನು ನಮಗೆ ಕೊಡಿ’ ಎಂದು ದೇಶದೆಲ್ಲೆಡೆ ಹೋರಾಟಗಳನ್ನು ನಡೆಸಿಯೇ ಇದ್ದಾರೆ. ಈ ಕಾಯ್ದೆಗೆ 2010 ಮತ್ತು 2012ರಲ್ಲಿ ಆದ ತಿದ್ದುಪಡಿಗಳು, ಅರ್ಜಿಗಳನ್ನು ಸಲ್ಲಿಸಿದವರು ಅದಕ್ಕೆ ತಕ್ಕ ದಾಖಲೆಗಳನ್ನು ಒದಗಿಸಲಿಕ್ಕೆ ಆಗದಿದ್ದ ಪಕ್ಷದಲ್ಲಿ ತಾವು ಹಿಂದೆ ವಾಸಿಸುತ್ತಿದ್ದ ಜಾಗದ ಕುರುಹುಗಳನ್ನು, ಅಂದರೆ ದೇವಸ್ಥಾನ, ಹಿರಿಯರ ಸಮಾಧಿ, ನೀರಿನ ಹೊಂಡ, ಅರೆಯುವ ಕಲ್ಲಿನಂಥ ನಿತ್ಯ ಬಳಸುತ್ತಿದ್ದ ಸಾಮಗ್ರಿಗಳನ್ನು ತೋರಿಸಿ ಪ್ರಮಾಣೀಕರಿಸಬೇಕು. ‘ಅರಣ್ಯ ಹಕ್ಕು ಸಮಿತಿಯು ತೆಗೆದುಕೊಂಡ ಎಲ್ಲ ನಿರ್ಧಾರಗಳಿಗೆ ಗ್ರಾಮ ಸಭೆಯು ಅನುಮತಿ ನೀಡಬೇಕು. ಗ್ರಾಮಸಭೆಯ ಪತ್ರದ ಮೂಲಕ ಅರಣ್ಯ ಹಾಗೂ ಕಂದಾಯ ಇಲಾಖೆಗಳಿಗೆ ಸೂಚನೆ ಕಳುಹಿಸಿದಾಗ, ಆ ಕಚೇರಿಯ ಅಧಿಕಾರಿಗಳ ಜೊತೆಗೆ ಜಂಟಿ ಸಮೀಕ್ಷೆ ನಡೆಸಿ, ಸ್ಥಳದ ಪರಿಶೀಲನಾ ವರದಿಯನ್ನು ತಯಾರಿಸಿ, ಅಲ್ಲೇ ವರದಿಗೆ ಸಹಿಯನ್ನೂ ಹಾಕಬೇಕು. ಗ್ರಾಮಸಭೆ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ’ ಎಂದು ನಿಯಮ ಹೇಳುತ್ತದೆ.

ಕಲಿತ, ಅಧಿಕಾರಸ್ಥರ ಎದುರು ಈ ಅನಕ್ಷರಸ್ಥ ಜನ ಮಾತಿನಲ್ಲಿ ಗೆಲ್ಲಲಾರರು, ಸಮರ್ಥವಾಗಿ ವಾದ ಮಂಡಿಸಲಾರರು ಎಂಬ ಕಾರಣಕ್ಕೇ ಅರಣ್ಯ ಹಕ್ಕು ಸಮಿತಿ ಹಾಗೂ ಗ್ರಾಮಸಭೆಗೆ ಪರಮೋಚ್ಚ ಅಧಿಕಾರವನ್ನು ಕೊಡಲಾಗಿದೆ. ಆದರೆ ಗ್ರಾಮಸಭೆಯಲ್ಲಿ ಜನರು ಮಾಡಿದ ತೀರ್ಮಾನವನ್ನು ಅಧಿಕಾರಶಾಹಿ ಅರಣ್ಯ ಇಲಾಖೆ ತಕರಾರು ಎತ್ತಿ ಮತ್ತೆ ಮತ್ತೆ ಹಿಂದಕ್ಕೆ ಕಳಿಸುತ್ತಿದೆ. ಈ ತೀರ್ಮಾನವನ್ನು ಧಿಕ್ಕರಿಸಿ, ಅರ್ಜಿ ತಿರಸ್ಕೃತವಾಗುವಂತೆ ಮಾಡುತ್ತದೆ.

ಬಾಪೂ, ಅಂತ್ಯೋದಯ ಎಂದಿರಿ ನೀವು. ಗ್ರಾಮ ರಾಜ್ಯ ಎಂದಿರಿ ನೀವು. ಎಲ್ಲಿವೆ ಅವೆಲ್ಲ? ಅಕ್ಷರಸ್ಥ ಜನರೆಲ್ಲ ಅವುಗಳ ಅರ್ಥವನ್ನೇ ಕಲಿಯಲಿಲ್ಲವೇನೋ! ಕಾನೂನುಗಳಲ್ಲಿ ಎಲ್ಲವನ್ನೂ ಬರೆದಿದ್ದಾರೆ. ವಾಸ್ತವದಲ್ಲಿ ಅಧಿಕಾರಿಗಳು ಗತ್ತಿನಲ್ಲಿ ಹೇಳಿದ್ದೇ ಸತ್ಯ. ಬಡ, ಅನಕ್ಷರಸ್ಥ, ಭಾಷೆ ಬಾರದ ಜನರು ಹೇಳಿದ್ದೆಲ್ಲವೂ ಮಿಥ್ಯ. ಅವಕ್ಕೆ ಬೆಲೆಯಿಲ್ಲ. ಇಲಾಖೆಗೆ ಈ ಕಾಡಿನ ಮಕ್ಕಳೆಲ್ಲ ಸುಳ್ಳುಗಾರರು.

ಸಮಾಜದ ಕಟ್ಟಕಡೆಯ ಜನ- ಮಹಿಳೆ, ದಲಿತರು, ಆದಿವಾಸಿಗಳು, ಅಂಗವಿಕಲರು- ಇವರಿಗೆಲ್ಲ ಮಾತನಾಡಲು ಅವಕಾಶ ಸಿಗಬಹುದಾದದ್ದು ಗ್ರಾಮಸಭೆಯಲ್ಲಿ ಮಾತ್ರ. ಆದರೆ ಗ್ರಾಮಸಭೆಯ ತೀರ್ಮಾನವನ್ನೇ ತಿರಸ್ಕರಿಸುತ್ತಾ ನಡೆದರೆ? ಕಾಡಿನ ಜನರ ತೀರ್ಮಾನಕ್ಕೆ ಪ್ರಾಧಾನ್ಯ ಇರುವುದು ಅರಣ್ಯ ಹಕ್ಕು ಕಾನೂನಿನಲ್ಲಿ. ಗ್ರಾಮೀಣ ಜನರ ತೀರ್ಮಾನಕ್ಕೆ ಪ್ರಾಶಸ್ತ್ಯ ಪಂಚಾಯತ್‌ ರಾಜ್ ಕಾನೂನಿನಲ್ಲಿ. ಆದರೆ ವಾಸ್ತವದಲ್ಲಿ? ಆ ಕಾನೂನುಗಳನ್ನು ಬರೆದಿರುವ ವರ್ಗವೇ ಕಾನೂನುಗಳನ್ನು ಉಪೇಕ್ಷಿಸುತ್ತಿದೆ. ಅತ್ತ ಬಾಪೂ ಹೇಳಿದಂತೆ ಬರೆಯುವುದು, ಇತ್ತ ಅದು ಜಾರಿಯಾಗದಂತೆ ನೋಡಿಕೊಳ್ಳುವುದು. ಈ ವೈರುಧ್ಯ, ಈ ಆತ್ಮವಂಚನೆಯನ್ನು ಕ್ಷಮಿಸಿಬಿಡಿ ಬಾಪೂ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT