ಮಂಗಳವಾರ, ಜೂನ್ 2, 2020
27 °C
ಭೋಗರೋಗಕ್ಕೆ ನಮ್ಮೊಳಗೇ ಇರುವ ಮದ್ದನ್ನು ಅರೆಯದಿದ್ದರೆ ನಮಗೆ ಉಳಿಗಾಲವಿಲ್ಲ

ಆತ್ಮಶೋಧನಕ್ಕಿದು ಪರಿಪಕ್ವ ಕಾಲ

ಗೀತಾ ವಸಂತ Updated:

ಅಕ್ಷರ ಗಾತ್ರ : | |

Prajavani

ಕಾಲಗರ್ಭದಲ್ಲಿ ಏನೇನು ಅಡಗಿದೆಯೋ ಯಾರು ಬಲ್ಲರು? ಕಾಲಜ್ಞಾನಿಗಳೇ ಅಳಿದುಹೋದರು. ಎಲ್ಲವನ್ನೂ ಅಳಿಸಿಹಾಕಲು ಸಾವಿಗೊಂದು ನೆಪ ಸಾಕು. ವಿಕಾಸದ ಸರಪಳಿಯಲ್ಲಿ ಕೊಂಡಿಮಾತ್ರವಾದ ಮಾನವ ತನ್ನ ಸರ್ವಶ್ರೇಷ್ಠತೆಯ ಭ್ರಮೆ ಕಳಚಿಕೊಳ್ಳಲು ನಿಸರ್ಗವು ಮೈಕೊಡವಿ ಎದ್ದು ನಿಲ್ಲಬೇಕಾಯಿತು.

ಭೂಕಂಪ, ಸುನಾಮಿ, ಅತಿವೃಷ್ಟಿ, ಅನಾವೃಷ್ಟಿಗಳಂಥ ನಿಸರ್ಗದ ಕೋಪಕ್ಕೆ ಕಂಗಾಲಾದ ಮಗುವಿನಂತೆ ತಳಮಳಿಸಿದ ಮನುಷ್ಯ, ರೋಗ ರುಜಿನಗಳು ನಿಧಾನವಾಗಿ ತನ್ನನ್ನು ತಿಂದುಹಾಕತೊಡಗಿದಾಗ ಅಸಹಾಯಕನಾಗಿ ಮೊರೆಯಿಡತೊಡಗುತ್ತಾನೆ. ಸಾವಿಗಿಂತ ಸಾವಿನ ಭಯ ದೊಡ್ಡದು. ಅದನ್ನು ಮರೆಯಲೆಂದೇ ಕೆಲವರು ಮೋಜಿಗಿಳಿದರೆ, ಹಲವರು ಬೌದ್ಧಿಕ ಸಾಹಸಕ್ಕಿಳಿಯುತ್ತಾರೆ. ಕಲೆ, ಸಾಹಿತ್ಯ, ವಿಜ್ಞಾನ, ತತ್ವಜ್ಞಾನ, ಧರ್ಮ ಏನೆಲ್ಲ ಮನುಷ್ಯನಿರ್ಮಿತ ಮಾಧ್ಯಮಗಳು ಸಾವಿನ ಕುರಿತು ಜಿಜ್ಞಾಸೆ ನಡೆಸಿವೆ. ಎಷ್ಟೋ ಸಲ ಸಾವಿನ ಭಯದಿಂದ ಪಾರಾಗಲು ಮನುಷ್ಯ ಇವುಗಳ ಮರೆಯಲ್ಲಿ ಅವಿತುಕೊಂಡಿದ್ದಾನೆ. ಆದರೂ ಸಾವು ಬೆನ್ನುಬಿಟ್ಟಿಲ್ಲ. ಹೊಸ ಹೊಸ ರೂಪ ತಾಳಿ ಹೊಂಚುಹಾಕುತ್ತಲೇ ಇದೆ.

ಕೆಲವೇ ದಿನಗಳ ಹಿಂದೆ ಇವೆಲ್ಲ ಅರಿವೇ ಇಲ್ಲದಂತೆ ಬದುಕು ಲಯಬದ್ಧವಾಗಿ ಸಾಗಿತ್ತು. ಜಿಮ್, ಬ್ಯೂಟಿಪಾರ್ಲರ್, ಮಾಲ್‌ಗಳಲ್ಲಿ ಜನ ಸಾವನ್ನು ಗೆಲ್ಲುವ ತಾಲೀಮು ನಡೆಸಿದ್ದರು. ದೇಹವನ್ನು ಹುರಿಗೊಳಿಸುತ್ತ, ಸುಕ್ಕುಗಳನ್ನು ಅಳಿಸುತ್ತ, ದೇಹದ ಪರಮಸುಖಗಳ ಅನ್ವೇಷಣೆಯಲ್ಲಿ ತೊಡಗಿದ್ದರು. ಆಸ್ಪತ್ರೆಗಳಲ್ಲಂತೂ ತರಹೇವಾರಿ ಯಂತ್ರಗಳು ದೇಹವನ್ನೆಲ್ಲ ಸ್ಕ್ಯಾನ್ ಮಾಡಿ, ಒಳಗೆ ಅಡಗಿರಬಹುದಾದ, ಮುಂದೆ ಬರಬಹುದಾದ ರೋಗಲಕ್ಷಣಗಳನ್ನೆಲ್ಲ ಹುಡುಕಿ ಬೀಗಿದವು. ಜೇಬು ಖಾಲಿಯಾದರೂ ಸಾವನ್ನು ಮುಂದೂಡಿದ ಸಾಹಸಿ ತಾನೆಂದು ಶ್ರೀಸಾಮಾನ್ಯ ವಿಜಯೋನ್ಮಾದದಿಂದ ನಕ್ಕ.

ಅವರ ಡೈನಿಂಗ್ ಟೇಬಲ್ಲನ್ನು ಬಣ್ಣಬಣ್ಣದ ಮಾತ್ರೆಗಳು ಅಲಂಕರಿಸಿದವು. ಈ ಆಸ್ಪತ್ರೆಗಳಿಗೆ ಸಮಾನಾಂತರವಾಗಿ ಹುಟ್ಟಿಕೊಂಡ ಫಿಟ್ನೆಸ್‍ ತಜ್ಞರು, ಡಯಟೀಶಿಯನ್‌ಗಳು, ಸೌಂದರ್ಯ ಸಲಹೆಗಾರರು ಪುತಪುತನೆ ಉದ್ಭವಿಸಿದರು. ವೀಕೆಂಡ್ ಅಧ್ಯಾತ್ಮದ ವಿವಿಧ ವರಸೆಗಳು ರೂಪುಗೊಳ್ಳುತ್ತಾ ನಡೆದವು.

ದೈಹಿಕ, ಮಾನಸಿಕ, ಆಧ್ಯಾತ್ಮಿಕ ಆರೋಗ್ಯದ ಹುಡುಕಾಟದಲ್ಲಿ ಜನ ವ್ಯಸ್ಥರಾಗಿದ್ದರೆ, ಇದನ್ನು ವ್ಯಾಪಾರ ಮಾಡುವ ಲಾಭಕೋರ ಉಪಾಯಗಳು ಹೊರಗೆ ಮಿಥ್ಯೆಗಳನ್ನು ಸೃಜಿಸುತ್ತ, ಕಣ್ಣ ಹಿಂದೆ ಕಾಣದ ಕತ್ತಲೊಂದು ಬೆಳೆಯುತ್ತ ಹೋಯಿತು. ಅತ್ತ ಕತ್ತಲಲ್ಲಿ ಇಳಿದಿಳಿದು ಹೋಗುತ್ತ, ಇತ್ತ ಝಗಮಗಿಸುವ ದೀಪಗಳನ್ನು ಹೊತ್ತಿಸಿ ಇರುಳನ್ನೂ ಹಗಲು ಮಾಡುವ ವಿದ್ಯೆಗಳನ್ನು ಕೈವಶ ಮಾಡಿಕೊಂಡ ಮಾನವ, ದೀಪದ ಕೆಳಗಿನ ಕತ್ತಲನ್ನು ಅರಿಯದೇಹೋದ.

ಇಂದು ಒಮ್ಮೆಲೇ ಕತ್ತಲು ಕವಿದಂತೆ ಭಯಭೀತರಾಗಿದ್ದೇವೆ. ಗಿಜಿಗುಡುತ್ತಿದ್ದ ಬದುಕಲ್ಲಿ ಖಾಲಿತನವೊಂದು ಆವರಿಸಿದೆ. ಕಣ್ಣಿಗೆ ಕಾಣದ ಪರಾವಲಂಬಿ ವೈರಾಣು ವೊಂದು ಜಗತ್ತಿನ ನಂಬಿಕೆಗಳನ್ನೇ ತಲೆಕೆಳಗಾಗಿಸಿದ ಪರಿ ನಿಜಕ್ಕೂ ಚೋದ್ಯ. ಅದರೊಂದಿಗೇ ಮನುಷ್ಯನೊಳಗಿನ ಎಷ್ಟೆಲ್ಲ ಗುಪ್ತಮುಖಗಳು ಒಂದೊಂದೇ ಹೊರಬರುತ್ತ, ಈ ರೋಗಗ್ರಸ್ತ ಸ್ಥಿತಿಯಿಂದ ಹೊರಬರಲು ಸಾಧ್ಯವೇ ಇಲ್ಲವೇನೋ ಅನಿಸತೊಡಗಿದೆ. ನಾವೇ ಕಟ್ಟಿಕೊಂಡ ಧರ್ಮ, ಸಂಸ್ಕೃತಿ, ಜ್ಞಾನವಲಯಗಳೆಲ್ಲ ವೈರಸ್‌ಪೀಡಿತವಾಗಿ ತೋರುತ್ತಿವೆ. ರಾಜಕೀಯ ಹುನ್ನಾರಗಳು ಒಳಗೊಳಗೆ ಮಸೆಯುತ್ತ, ತಣ್ಣನೆಯ ಕ್ರೌರ್ಯವೊಂದು ಮುಸುಕಿನಲ್ಲೇ ಕೊಲ್ಲತೊಡಗಿದೆ. ಎಷ್ಟು ತೀಕ್ಷ್ಣ ದ್ರಾವಣಗಳಿಂದ ಕೈತೊಳೆದರೂ ಬದುಕು ಶುದ್ಧಗೊಳ್ಳುವ ದಾರಿಗಳು ತೆರೆಯುತ್ತಿಲ್ಲ. ಇದೆಲ್ಲ ಒಳಗಿನ ತಲ್ಲಣಗಳಾದರೆ, ಹೊರಗೆ ಸಂಶಯದ ಹುತ್ತವೆದ್ದಿದೆ. ಹಿಂದೆಲ್ಲ ಆಪ್ತರೆನಿಸುತ್ತಿದ್ದ ನೀರಿನವ, ಹಾಲಿನವ, ತರಕಾರಿಯವಳು, ಹೂವಿನವಳು ದೂರವಾಗತೊಡಗಿದ್ದಾರೆ. ಅವರೆಲ್ಲ ಸಾವಿನ ವಾಹಕರಾಗಿರಬಹುದೆಂಬ ಕಲ್ಪನೆಗಳೇ ಇರಿಸುಮುರಿಸುಗೊಳಿಸುತ್ತಿವೆ. ಸಾಮಾಜಿಕ ಅಂತರ, ದೈಹಿಕ ಅಂತರಗಳಾಚೆ ಜಗತ್ತಿನ ಎಲ್ಲ ಸಂಬಂಧಗಳ ಕೊಂಡಿಯೂ ಕಳಚಿ ಛಿದ್ರವಾಗುತ್ತಿರುವಂತೆ ಎನಿಸುತ್ತದೆ. ಕಟ್ಟಿಕೊಂಡದ್ದೆಲ್ಲ ಕಳಚಿಬೀಳುವ ಸದ್ದು ಅಂಜಿಸುತ್ತಿದೆ.

ಅಂದು ಸರ್ಕಾರ ದಿಢೀರೆಂದು ಲಾಕ್‌ಡೌನ್ ಘೋಷಿಸಿದಾಗ ಜನರ ದೈನಿಕದ ಲಯವೇ ತಪ್ಪಿಹೋದಂತಾಯಿತು. ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಿಕೊಳ್ಳಲು ಉಳ್ಳವರು ಮುಗಿಬಿದ್ದರು. ಇಲ್ಲದವರು ಕಂಗಾಲಾದರು. ಸೋಂಕಿನಿಂದ ಸಾಯುವುದಕ್ಕಿಂತ ಹಸಿವಿನಿಂದ ಸಾಯುವ ಕಲ್ಪನೆಯೇ ಆ ಕ್ಷಣಕ್ಕೆ ಭೀಕರವಾಗಿ ಕಂಡಿತು. ಮಂದಿರ, ಮಸೀದಿ, ಚರ್ಚುಗಳೆಂಬ ನಂಬಿಕೆಗಳ ಕೋಳುಗಂಬ ಕುಸಿದುಬಿತ್ತು. ಮಡಿವಂತರು, ಮುಟ್ಟಬಾರದವರು, ಮುಟ್ಟಾದವರು ಎಂಬ ಭೇದವಿಲ್ಲದೆ ಎಲ್ಲರೂ ಹೊರಗೇ ಉಳಿದರು. ಧರ್ಮದ ಭಯಕ್ಕಿಂತ ಸಾವಿನ ಭಯ ದೊಡ್ಡದು ಎಂದು ಅರಿವಾಯಿತು. ಅಂದು ಹಸಿದ ದೇವರುಗಳಂತೆ ಗುಳೆಹೋದ ಜನ ಎಲ್ಲಿ ಹೋದರು? ಮನೆ ತಲುಪಿದರಾ? ದಾರಿಯಲ್ಲೇ ಕಳೆದುಹೋದರಾ? ಹಸಿದ ಕಂದಮ್ಮಗಳ ಅಳು ಹಿಂಗಿದ್ದು ಹೇಗೆ? ಗರ್ಭಿಣಿಯರು, ಬಾಣಂತಿಯರು ಏನಾದರು? ಅವರ ವಯಸ್ಸಾದ ತಂದೆತಾಯಿಯರು ಬದುಕಿ ಉಳಿದಿದ್ದಾರಾ? ಎಷ್ಟೆಲ್ಲ ಪ್ರಶ್ನೆಗಳು ತುತ್ತು ಬಾಯಿಗಿಡುವಾಗ ಗಂಟಲು ಕಟ್ಟುವಂತೆ ಮಾಡುತ್ತವೆ. ಕಾಣದ ವೈರಸ್‍ನ ಜೊತೆ ಕಾದಾಡುವುದಕ್ಕಿಂತ ಕಾಡುವ ಹಸಿವು ಅತಂತ್ರ ಸ್ಥಿತಿಯನ್ನು ದಾಟುವ ಸವಾಲಿಗೆ ಈ ಜನ ಓಗೊಟ್ಟರು. ಸತ್ತರೂ ತಮ್ಮ ನೆಲದಲ್ಲಿ ತಮ್ಮವರೊಂದಿಗೇ ಮಣ್ಣಾಗಬೇಕೆಂಬ ಆಳದ ತಲ್ಲಣವೊಂದು, ಬೊಬ್ಬೆಯೆದ್ದ ಪಾದಗಳನ್ನೂ ಲೆಕ್ಕಿಸದೆ ನೂರಾರು ಮೈಲಿಗಳನ್ನು ನಡೆದೇತೀರುವ ಧೈರ್ಯವನ್ನು ತುಂಬಿಬಿಟ್ಟಿತು. ಅಲ್ಲಲ್ಲಿ ಸಿಕ್ಕಿಕೊಂಡಿರುವ ಈ ಸಹಜೀವಿಗಳ ನೆರಳು ಲಾಕ್‌ಡೌನ್‍ನ ಮೌನವನ್ನು ಕಲಕುತ್ತ ಮನವನ್ನು ಮತ್ತೆ ಕತ್ತಲಾಗಿಸುತ್ತಿರುವುದು ಸುಳ್ಳಲ್ಲ.

ಇಂದಿನ ನಿಶ್ಶಬ್ದದಲ್ಲಿ ನಂಬಿಕೆಯ ಸೇತುವೆಗಳು ಮುರಿದುಬೀಳುವ ಸದ್ದು ನಿಜಕ್ಕೂ ನಮ್ಮನ್ನು ಕಂಗೆಡಿಸುತ್ತಿದೆ. ಇತಿಹಾಸದ ಗಾಯಗಳನ್ನು ಮತ್ತೆ ಕೆದಕುವ ದುರಿತ ಕಾಲವನ್ನು ನಾವೇ ನಮ್ಮ ಮಾಧ್ಯಮಗಳ ಮೂಲಕ ಸೃಷ್ಟಿಸಿಕೊಳ್ಳುತ್ತಿದ್ದೇವೆ. ಒಳಿತು ಕೆಡುಕುಗಳಿಗೆಲ್ಲ ಮತೀಯತೆಯ ಲೇಪ ಹಚ್ಚುತ್ತ ಮನಸ್ಸುಗಳು ಉದ್ವಿಗ್ನಗೊಂಡಿವೆ. ತಣ್ಣಗೆ ಅರಿಯುವ ತಾಳ್ಮೆಯನ್ನು ಕಳೆದುಕೊಂಡಿದ್ದೇವೆ. ಮನುಷ್ಯ ಮನುಷ್ಯರ ನಡುವೆ ಅಪನಂಬಿಕೆಗಳ ವೈರಸ್‌ಗಳು ವೇಗವಾಗಿ ಹಬ್ಬುತ್ತಿವೆ. ಅದನ್ನು ತಡೆಯುವ ದಾರಿಗಳೇ ತೆರೆಯದಾಗಿವೆ. ಆತ್ಮಾವಲೋಕನಕ್ಕಿಳಿದು ಮನದ ತಿಳಿಗೊಳದಲ್ಲಿ ಶುದ್ಧಗೊಳ್ಳುವ ಸಾಧ್ಯತೆಯನ್ನು ನಾವು ಕೈಚೆಲ್ಲಬಾರದಿತ್ತು. ನಮ್ಮ ನಮ್ಮ ಅಹಂ, ಸ್ವಾರ್ಥಗಳಲ್ಲಿ ಕದಡಿ ರಾಡಿಗೊಂಡ ಜಗತ್ತನ್ನು ತೊಳೆಯಲು ಮುಂದೆ ನಾವು ತೆರಬೇಕಾದ ಬೆಲೆ ದೊಡ್ಡದಿದೆ.

ಇಂಥ ಕತ್ತಲಲ್ಲೂ ಕೆಲವು ಬೆಳಕಿನ ಕಥನಗಳಿವೆ. ರೋಗಪೀಡಿತರ ಶುಶ್ರೂಷೆಗೆ ಅರ್ಪಿಸಿಕೊಂಡ ದಾದಿಯರು, ವೈದ್ಯರು, ಊರಕಸ ಸ್ವಚ್ಛಗೊಳಿಸುವ ಪೌರಕಾರ್ಮಿಕರು, ದುಡಿವ ರೈತರು ನಮ್ಮನ್ನು ಪೊರೆಯುತ್ತಿದ್ದಾರೆ. ಈ ಗೃಹಬಂಧನ ತಮಗೇನೂ ಹೊಸದಲ್ಲ
ಎಂಬಂತೆ ಮಧ್ಯಮವರ್ಗದ ಗೃಹಿಣಿಯರು ಹಪ್ಪಳ– ಸಂಡಿಗೆ, ಬರಲಿರುವ ಶುಭಕಾಲದ ಹೊಸಿಲಿಗೆ ರಂಗೋಲಿ ಬರೆಯುತ್ತಿದ್ದಾರೆ. ತಮ್ಮ ಗಂಡ, ಮಕ್ಕಳಿಗೂ ಸಹನೆಯ ಪಾಠ ಮಾಡುತ್ತ ಕಲಿಸುತ್ತಿದ್ದಾರೆ. ಇವೆಲ್ಲಕ್ಕೂ ಮೀರಿ ಪ್ರಕೃತಿ ಹೂಬಿಟ್ಟು ವಿಕಸಿಸುತ್ತಿದೆ. ಭೃಂಗದ ಸಂಗೀತ ಕೇಳಿಬರುತ್ತಿದೆ. ಹಕ್ಕಿಗಳು ನಿರಾಯಾಸ ಹಾರಾಡುತ್ತಿವೆ. ಆಕಾಶ ನಿರಾಳವಾಗಿ ಮುಗುಳ್ನಗುತ್ತಿದೆ. ಭೂಮಿ ಮಣ್ಣ ಕಂಪಿಗೆ ನವಿರೆದ್ದು ಮೊದಲಗಿತ್ತಿಯಂತಾಗಿದ್ದಾಳೆ. ಈ ವೈರುಧ್ಯಗಳನ್ನೆಲ್ಲ ಹೇಗೆ ಗ್ರಹಿಸುವುದೆಂಬ ದ್ವಂದ್ವದಲ್ಲಿ ನಾವಿದ್ದೇವೆ. ಮತ್ತೆ ಇದು ನಾವೇ ಕಟ್ಟಿಕೊಂಡ ದ್ವಂದ್ವ. ನಾವೇ ಇದರ ಗಂಟು ಬಿಡಿಸಬೇಕಾದವರು ಕೂಡಾ. ಈ ಭೋಗರೋಗಕ್ಕೆ ಮದ್ದರೆಯದೇ ನಮಗೆ ಉಳಿಗಾಲವಿಲ್ಲ. ರೋಗಬಂದಾಗ ಮದ್ದಿಗೆ ಅಲೆದರೆ ಅದು ದೊರಕುವುದೂ ಇಲ್ಲ. ರೋಗ ನಿರೋಧಕಶಕ್ತಿ ಹೆಚ್ಚಿಸಿಕೊಳ್ಳುವುದೊಂದೇ ನಮಗಿರುವ ಪರಿಹಾರ. ಪ್ರೀತಿ, ಸಹನೆ, ಸಂಯಮ, ಸಹಭಾಗಿತ್ವ, ಸಹಿಷ್ಣುತೆಗಳೇ ನಮ್ಮೊಳಗಿನ ನಿರೋಧಕಶಕ್ತಿ ಹೆಚ್ಚಿಸುವ ಔಷಧಗಳು. ಅವು ಹೊರಗಿಲ್ಲ, ನಮ್ಮೊಳಗೇ ಇವೆ. ಮುಟ್ಟಿನೋಡಿ
ಕೊಳ್ಳುವ ಆತ್ಮಶೋಧನೆಗೆ ಕಾಲವಿಂದು ಪಕ್ವವಾಗಿದೆ.

ಲೇಖಕಿ: ಸಹಾಯಕ ಪ್ರಾಧ್ಯಾಪಕಿ, ಕನ್ನಡ ವಿಭಾಗ, ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜು, ತುಮಕೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು