ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕನ ಏಳಿಗೆ, ಗೆಲುವಿನ ಸಂಕಥನ

2014ರಲ್ಲಿ ರಚನೆಯಾಗಿದ್ದು ಬಿಜೆಪಿ ನೇತೃತ್ವದ ಸರ್ಕಾರ, 2019ರಲ್ಲಿ ಆಗಿದ್ದು ‘ಮೋದಿ ಸರ್ಕಾರ’
Last Updated 19 ಜೂನ್ 2020, 19:31 IST
ಅಕ್ಷರ ಗಾತ್ರ

2019ರ ಲೋಕಸಭಾ ಚುನಾವಣೆಯ ನಂತರ ಭಾರತದ ರಾಜಕೀಯದಲ್ಲಿ ಒಂದು ಪರಿವರ್ತನೆಯ ವಿದ್ಯಮಾನ ಕಂಡುಬಂತು. 2014ರ ಲೋಕಸಭಾ ಚುನಾವಣೆಯು ಬಿಜೆಪಿ ನೇತೃತ್ವದ ಸರ್ಕಾರದ ರಚನೆಗೆ ಕಾರಣವಾಯಿತು. 2019ರ ಚುನಾವಣೆಯು ‘ಮೋದಿ ಸರ್ಕಾರ’ದ ರಚನೆಗೆ ಕಾರಣವಾಯಿತು. ಇವೆರಡೂ ಸ್ಪಷ್ಟವಾಗಿ ಬೇರೆ ಬೇರೆ. ಪ್ರಜಾತಾಂತ್ರಿಕ ನಿಯಮಗಳಿಗೆ ಬದ್ಧವಾಗಿರುವ ರಾಜಕೀಯ ಪಕ್ಷವೊಂದು ತಮ್ಮನ್ನು ಆಳುತ್ತಿದೆ ಎಂದು ಯಾರಾದರೂ ಭಾವಿಸಿದ್ದರೆ, ಹಾಗೆ ಭಾವಿಸಿರುವುದು ದೊಡ್ಡ ತಪ್ಪು! ಅಧಿಕಾರದಲ್ಲಿ ಮೇಲೆ ಬರಲು ಪಕ್ಷದ ವ್ಯವಸ್ಥೆಯನ್ನು ಏಣಿಯಂತೆ ಬಳಸಿಕೊಳ್ಳಲಾಯಿತು. ಆ ವ್ಯವಸ್ಥೆಯನ್ನು ಒದ್ದು ಬಹಳ ಕಾಲ ಸಂದಿದೆ.

‘ಮೋದಿ ಸರ್ಕಾರ’ ರಚನೆಯತ್ತ ದೃಢವಾದ ಹಾಗೂ ಆರಂಭಿಕ ಹೆಜ್ಜೆಗಳನ್ನು 2014ರ ಚುನಾವಣೆ ಮುಗಿದ ತಕ್ಷಣ ಇರಿಸಲಾಯಿತು. ಪಕ್ಷದ ಹಿರಿಯರ ಬಗ್ಗೆ ಸೌಜನ್ಯ ತೋರದೆ, ಅವರಿಗೆ ‘ಮಾರ್ಗದರ್ಶಕ ಮಂಡಲ’ದಲ್ಲಿ ಕೆಲಸ ಇಲ್ಲದ ಹುದ್ದೆಗಳನ್ನು ನೀಡಲಾಯಿತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಹೊಸದಾಗಿ ಆಯ್ಕೆಯಾದ ಅಮಿತ್ ಶಾ ಅವರು ಪಕ್ಷದ ನೂತನ ಸಂಸದೀಯ ಮಂಡಳಿಯ ರಚನೆಯನ್ನು ಪ್ರಕಟಿಸಿದರು. ಅದರಲ್ಲಿ ಪಕ್ಷದ ಮೂವರು ಸಂಸ್ಥಾಪಕ ಸದಸ್ಯರು ಇರಲಿಲ್ಲ– ಅಟಲ್ ಬಿಹಾರಿ ವಾಜಪೇಯಿ (ಅವರು ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಅದು ಅವರು ಸರಿಯಾಗಿ ಮಾತನಾಡದಂತೆ, ಮಾಮೂಲಿನಂತೆ ಓಡಾಡಲು ಸಾಧ್ಯವಾಗದಂತೆ ಮಾಡಿತು. ನಂತರ ಅವರು ಕೋಮಾಕ್ಕೆ ಜಾರಿದರು), ಎಲ್.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ (ಇಬ್ಬರೂ ಆಗ ಸಂಸದರಾಗಿದ್ದರು. ಕುತೂಹಲದ ಅಂಶವೆಂದರೆ, ಜೋಷಿ ಅವರು ತಮ್ಮ ವಾರಾಣಸಿ ಕ್ಷೇತ್ರವನ್ನು ಮೋದಿ ಅವರಿಗೆ ಬಿಟ್ಟು ಕೊಟ್ಟು, ಕಾನ್ಪುರದಿಂದ ಸ್ಪರ್ಧಿಸಿದ್ದರು). ಇದಾದ ನಂತರ ಪಕ್ಷದ ಹಿರಿಯರಾದ ಯಶವಂತ್ ಸಿನ್ಹಾ, ಅರುಣ್ ಶೌರಿ ಮತ್ತು ಶತ್ರುಘ್ನ ಸಿನ್ಹಾ ಪಕ್ಷ ತೊರೆದರು. ಪಕ್ಷದಲ್ಲೇ ಉಳಿದ ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ್ ಮುಂತಾದವರು ಕಳೆದ ಅವಧಿಯಲ್ಲಿ ನಿರ್ಲಕ್ಷ್ಯಕ್ಕೆ ಗುರಿಯಾದರು.

ಪ್ರಧಾನಿ ಮೋದಿ ಅವರ ಕೃಪೆಯಿಂದಾಗಿ ನೀವು ಸಂಪುಟದಲ್ಲಿ ಇದ್ದೀರಿ ಎಂಬುದನ್ನು ಅವರಿಗೆ ಬಹುಬೇಗ ಮನವರಿಕೆ ಮಾಡಿಕೊಡಲಾಯಿತು. ಪಕ್ಷವನ್ನು ಹಲವು ನೆಲೆಗಳಲ್ಲಿ ಪುನರ್‌ ರೂಪಿಸಲಾಯಿತು. ವಾಜಪೇಯಿ ಅವರು ಪ‍್ರಧಾನಿಯಾಗಿದ್ದಾಗ ಅವರಿಗೆ ವೈಯಕ್ತಿಕವಾಗಿ ನಿಷ್ಠರಾಗಿರದೆ ಇದ್ದರೂ ಪಕ್ಷಕ್ಕೆ ಹಾಗೂ ದೇಶಕ್ಕೆ ಬಹುಕಾಲದಿಂದ ಸೇವೆ ಸಲ್ಲಿಸಿದವರು ಸರ್ಕಾರದ ಭಾಗವಾಗಿದ್ದರು. ಕೆಲವು ಅರ್ಹತೆಗಳನ್ನು ಹೊಂದಿದ್ದವರಿಗೂ ಜವಾಬ್ದಾರಿ ನೀಡಲಾಗಿತ್ತು. ಆದರೆ, ಈಗ ನಿಯಮಗಳಲ್ಲಿ ಬದಲಾವಣೆ ಆಯಿತು. ಅದನ್ನು ಆರಂಭದ ದಿನದಿಂದಲೂ ಸ್ಪಷ್ಟವಾಗಿ ಹೇಳಲಾಯಿತು. ನೀವು ಸರ್ಕಾರದಲ್ಲಿ, ಪಕ್ಷದಲ್ಲಿ ಅಥವಾ ಶಾಸನಸಭೆಯಲ್ಲಿ ಇರುವುದು ‘ಮಹಾನ್ ನಾಯಕ’ನ ಕಾರಣದಿಂದಾಗಿ, ಯಾರೂ ತಮ್ಮ ಜನಪ್ರಿಯತೆಯ ಆಧಾರದಲ್ಲಿ ಗೆದ್ದು ಬಂದಿಲ್ಲ, ‘ನಾಯಕ’ನ ಕಾರಣದಿಂದಾಗಿ ಗೆಲುವು ದಕ್ಕಿದೆ ಎಂಬ ಸಂಕಥನವನ್ನು ಕಟ್ಟಲಾಯಿತು.

ಪಕ್ಷವನ್ನು ಪುನರ್‌ರೂಪಿಸುತ್ತಿದ್ದ ಹೊತ್ತಿನಲ್ಲೇ ಸರ್ಕಾರಿ ಸಂಸ್ಥೆಗಳನ್ನು, ಸಾಂವಿಧಾನಿಕ ಸಂಸ್ಥೆಗಳನ್ನು ರಾಜಕೀಯ ಇಚ್ಛೆಗೆ ಅನುಗುಣವಾಗಿ ಬದಲಾಯಿಸಲಾಯಿತು. ಈ ಪ್ರಕ್ರಿಯೆಯು ಆರ್‌ಬಿಐ, ಚುನಾವಣಾ ಆಯೋಗ, ಸಿಬಿಐ, ಸಿಎಜಿ ಮತ್ತು ಇತರ ಸಂಸ್ಥೆಗಳ ಮೇಲೆ ಪರಿಣಾಮ ಬೀರಿತು. ಇಷ್ಟೊಂದು ಸಂಸ್ಥೆಗಳ ಶಕ್ತಿ ಕುಂದಿಸುವ ಕೆಲಸ ಹಿಂದೆಂದೂ ಆಗಿರಲಿಲ್ಲ. ಕಳೆದ ಆರು ವರ್ಷಗಳಲ್ಲಿ ಆಗಿರುವಂತೆ, ಗುಜರಾತ್‌ ಕೇಡರ್‌ನ ಐಎಎಸ್‌ ಅಧಿಕಾರಿಗಳಿಗೆ ದೆಹಲಿಯಲ್ಲಿ ಈ ಮಟ್ಟಿಗಿನ ಪ್ರಭಾವ ಬೆಳೆಸಿಕೊಳ್ಳಲು ಹಿಂದೆಂದೂ ಸಾಧ್ಯವಾಗಿರಲಿಲ್ಲ. ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ ಹುದ್ದೆಗಿಂತ ಮೇಲಿನವುಗಳಲ್ಲಿ ಒಟ್ಟು 370 ಜನ ಗುಜರಾತ್ ಕೇಡರ್‌ನ ಐಎಎಸ್‌ ಅಧಿಕಾರಿಗಳು ಇದ್ದಾರೆ ಎಂಬುದನ್ನು 2019ರ ಆಗಸ್ಟ್‌ನಲ್ಲಿ ಆರ್‌ಟಿಐ ಅರ್ಜಿಯೊಂದು ಕಂಡುಕೊಂಡಿತ್ತು. ಇದು ನಿಜವಾದ ‘ಗುಜರಾತ್ ಮಾದರಿ’. ಆಗ ಮುಖ್ಯಮಂತ್ರಿ ಆಗಿದ್ದವರ ಜೊತೆ ನೀವು ಕೆಲಸ ಮಾಡಿದ್ದೀರಿ, ಈಗ ಕೇಂದ್ರದಲ್ಲಿ ಮಹತ್ವದ ಹುದ್ದೆಯನ್ನು ನಿಭಾಯಿಸಲಿದ್ದೀರಿ. ಪ್ರಧಾನಿಯವರ ಕಾರ್ಯಶೈಲಿ ನಿಮಗೆ ತಿಳಿದಿರುವುದಷ್ಟೇ ಅಲ್ಲ, ಅವರಿಗೆ ಕೆಲಸ ಮಾಡಿಕೊಡುವುದು ಹೇಗೆ ಎಂಬುದೂ ನಿಮಗೆ ಗೊತ್ತು. ಆದೇಶಗಳನ್ನು ಪಾಲಿಸುವುದಕ್ಕೆ ನಿಯಮಗಳು ಅಡ್ಡಿ ಬರುವುದಿಲ್ಲ, ಅದು ಮುಖ್ಯ!

ಇದು ಪ್ರಭುತ್ವವನ್ನು ಟೊಳ್ಳಾಗಿಸುವ ಉದ್ದೇಶ ಪೂರ್ವಕ ಹಾಗೂ ಯೋಜನಾಬದ್ಧ ಪ್ರಕ್ರಿಯೆ. ಟೊಳ್ಳಾಗಿಸುವ ಈ ಪ್ರಕ್ರಿಯೆಗೆ ಎರಡು ಆಯಾಮಗಳಿವೆ. ಮೊದಲನೆಯದು, ‘ಸಂಸ್ಥೆ’ಯ ವಸ್ತುನಿಷ್ಠ ಗುಣವನ್ನು ನಾಶಗೊಳಿಸುವುದು, ಅದನ್ನು ವ್ಯಕ್ತಿಯೊಬ್ಬರ ಅಗತ್ಯಕ್ಕೆ ತಕ್ಕಂತೆ ಪರಿವರ್ತಿಸುವುದು. ಅಲ್ಲಿ ಆಯ್ದ ಕೆಲವರನ್ನು ಪ್ರಮುಖ ಹುದ್ದೆಗಳಿಗೆ ನಿಯೋಜಿಸುವುದು. ಎರಡನೆಯದು, ಈ ಸಂಸ್ಥೆಗಳನ್ನು ಕಟ್ಟಿದ ಉದ್ದೇಶವನ್ನೇ ಪ್ರಶ್ನಿಸುವುದು. ‘ಕಾರ್ಯಾಂಗದ ಮೇಲೆ ನಿಯಂತ್ರಣ ಇಡುವುದು’, ‘ಎಲ್ಲ ಪ್ರಜೆಗಳ ಹಿತವನ್ನು ಕಾಯುವುದು’ ಇಂಥವು ಈ ಸಂಸ್ಥೆಗಳ ಉದ್ದೇಶ. ಇದನ್ನೇ ಪ್ರಶ್ನೆ ಮಾಡುವುದು ಎರಡನೆಯ ಉದ್ದೇಶ.

2019ರ ಲೋಕಸಭಾ ಚುನಾವಣೆಯಲ್ಲಿ ಒಂದು ಪ್ರಮುಖ ಹಾಗೂ ಸಂದೇಶವೊಂದನ್ನು ರವಾನಿಸುವ ಘೋಷವಾಕ್ಯದ ಬಳಕೆಯಾಯಿತು. ‘ಮೋದಿ ಇದ್ದರೆ ಸಾಧ್ಯ’ ಎಂಬುದು ಆ ಘೋಷವಾಕ್ಯ. ನಿರ್ದಿಷ್ಟ ದಾಳಿಯ ಮೂಲಕ ಪಾಕಿಸ್ತಾನದ ಮೇಲೆ ಪ್ರತಿದಾಳಿ ನಡೆಸುವುದಿರ ಬಹುದು, ದೇಶದಲ್ಲಿನ ‘ಜಗಳಗಂಟ ಅಲ್ಪಸಂಖ್ಯಾತ’ ಸಮುದಾಯವನ್ನು ಹದ್ದುಬಸ್ತಿನಲ್ಲಿ ಇರಿಸುವುದು ಆಗಿರಬಹುದು, ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ನಿಯಂತ್ರಿಸುವುದಾಗಿರಬಹುದು, ಭಾರತದಲ್ಲೇ ತಯಾರಿಸಿ ಅಭಿಯಾನ ಇರಬಹುದು ಅಥವಾ ಭಾರತದ ಅರ್ಥವ್ಯವಸ್ಥೆಯನ್ನು ₹ 375 ಲಕ್ಷ ಕೋಟಿಗೆ ಹಿಗ್ಗಿಸುವುದಿರಬಹುದು... ಇವೆಲ್ಲವೂ ಸಾಧ್ಯವಾಗುವುದು ಮೋದಿ ಅವರು ಅಧಿಕಾರದಲ್ಲಿ ಇದ್ದರೆ ಮಾತ್ರ ಎಂದು ನಮಗೆ ಹೇಳಲಾಯಿತು.

ಮಹಾನ್ ನಾಯಕನ ಶಕ್ತಿಯನ್ನು ಬಿಂಬಿಸುವ ಪ್ರಕ್ರಿಯೆಗೆ ಕೋವಿಡ್–19 ಸಾಂಕ್ರಾಮಿಕದ ಹರಡುವಿಕೆಯು ಇನ್ನೊಂದು ತಿರುವು ನೀಡಿತು. ನಾಯಕ ತಮ್ಮ ಶಕ್ತಿಯನ್ನು ಪರೀಕ್ಷೆಗೆ ಒಡ್ಡಿದರು. ಒಂದಲ್ಲ, ಮೂರು ಬಾರಿ ತಮ್ಮ ಶಕ್ತಿಯನ್ನು ಪರೀಕ್ಷಿಸಿಕೊಂಡರು. ಇಡೀ ದೇಶವು ಒಬ್ಬ ವ್ಯಕ್ತಿಯಂತೆ ತಮ್ಮ ನಿರ್ದೇಶನಗಳನ್ನು ಪಾಲಿಸುತ್ತದೆ ಎಂಬುದನ್ನು ಕಂಡುಕೊಂಡರು. ಲಾಕ್‌ಡೌನ್‌ ಕ್ರಮಗಳನ್ನು ಘೋಷಿಸಿದಾಗ, ಅದರ ಅಗತ್ಯವನ್ನು ದೇಶ ಒಪ್ಪಿಕೊಂಡಿದ್ದು ಮಾತ್ರವೇ ಅಲ್ಲ, ಚಪ್ಪಾಳೆ ತಟ್ಟಬೇಕು, ದೀಪ ಹಚ್ಚಬೇಕು ಎಂಬ ಕರೆಯನ್ನು ದೇಶ ಪಾಲಿಸಿತು. ಕೊರೊನಾ ಯೋಧರಿಗೆ ಧನ್ಯವಾದ ಸಮರ್ಪಿಸುವುದು ಜನರಲ್ಲಿ ನಿಜಕ್ಕೂ ಉತ್ಸಾಹ ತುಂಬಿರಬಹುದು. ಆದರೆ ಅದರ ಮೂಲಕ ರವಾನೆಯಾದ ಸಂದೇಶ ಹಾಗೂ 130 ಕೋಟಿ ಜನ ಸಾಮೂಹಿಕವಾಗಿ ಒಂದು ಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು ಎಂಬ ಸೂಚನೆಯು ಇನ್ನೊಂದು ಉದ್ದೇಶವನ್ನು ಕೂಡ ಈಡೇರಿಸಿತು. ಸೂತ್ರದ ಗೊಂಬೆ ಆಡಿಸುವವನ ರೀತಿಯಲ್ಲಿ ಜನರನ್ನು ತಾನು ನಿಯಂತ್ರಿ ಸುತ್ತೇನೆ, ಅವರ ಕ್ರಿಯೆಗಳನ್ನು ನಿರ್ದೇಶಿಸುತ್ತೇನೆ ಎಂಬುದನ್ನು ಮಹಾನ್ ನಾಯಕ ತೋರಿಸಿಕೊಟ್ಟರು. ಈ ರಾಷ್ಟ್ರದ ಇತಿಹಾಸದಲ್ಲಿ ಯಾವುದೇ ನಾಯಕನಿಗೆ ಇಂಥದ್ದೊಂದು ಕೆಲಸ ಸಾಧ್ಯವಾಗಿರಲಿಲ್ಲ.

ಇದು ಭಯ ಮೂಡಿಸುವಂಥದ್ದು. ಈ ಶಕ್ತಿಯನ್ನು ಇನ್ನೊಮ್ಮೆ ಬಳಸಿಕೊಳ್ಳಬಹುದು. ಇನ್ನೊಮ್ಮೆ ಬಳಸಿಕೊಳ್ಳುವುದು ಒಳ್ಳೆಯ ಉದ್ದೇಶಕ್ಕೆ ಅಲ್ಲದಿರಲೂಬಹುದು. ಈಗ ಸಾಂಕ್ರಾಮಿಕದ ಹರಡುವಿಕೆ ಹೆಚ್ಚುತ್ತಿದೆ. ಅರ್ಥ ವ್ಯವಸ್ಥೆಯ ಬೆಳವಣಿಗೆ ಕುಸಿದಿದೆ. ಈಗ ಸಾರ್ವಜನಿಕರ ನಿಗಾದಿಂದ ಹಾಗೂ ಅವರ ಆಕ್ರೋಶದಿಂದ ಮಹಾನ್ ನಾಯಕನನ್ನು ರಕ್ಷಿಸಬೇಕು. ಮಹಾನ್ ನಾಯಕನ ಚರಿಷ್ಮಾ ಅದೆಷ್ಟು ಮೌಲ್ಯಯುತ ಎಂದರೆ, ಅದನ್ನು ಮತ್ತೆ ಮತ್ತೆ ಬಳಸುತ್ತ ಇರಲು ಆಗದು.

ಲೇಖಕ: ಕ್ಯಾಬಿನೆಟ್ ಸಚಿವಾಲಯದ ಮಾಜಿ ಅಧಿಕಾರಿ, ಅಬ್ಸರ್ವರ್ ಸಂಶೋಧನಾ ಪ್ರತಿಷ್ಠಾನದ ಸಂದರ್ಶಕ ಫೆಲೊ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT