ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈವಿಧ್ಯ ಮತ್ತು ಒಳಗೊಳ್ಳುವಿಕೆ ಎಂಬ ಸವಾಲು

ಸಾಮಾಜಿಕ ಸಂಸ್ಥೆಗಳಲ್ಲಿ ವೈವಿಧ್ಯದಿಂದ ಮಾತ್ರ ನಿಜವಾದ ಒಳಗೊಳ್ಳುವಿಕೆ ಸಾಧ್ಯ
Last Updated 30 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

‘ವೈವಿಧ್ಯ’ ಮತ್ತು ‘ಒಳಗೊಳ್ಳುವಿಕೆ’ ಎಂಬ ಪದಗಳು ಇಂದಿನ ಕಾರ್ಪೊರೇಟ್ ಪ್ರಪಂಚದಲ್ಲಿ ವ್ಯಾಪಕವಾಗಿ ಚಾಲ್ತಿಯಲ್ಲಿವೆ. ಪ್ರತಿ ಕಂಪನಿಯೂ ಈ ‘ವೈವಿಧ್ಯ’ ಸಾಧನೆಯ ಪ್ರಯತ್ನದಲ್ಲಿ ಗೆಲ್ಲಲು ಹವಣಿಸುತ್ತಿರುವಂತೆ ಕಾಣುತ್ತಿದೆ. ವೈವಿಧ್ಯ ಎಂಬ ಪದವು ನಮ್ಮ ನಡುವೆ ಭಿನ್ನತೆಗಳಿರುತ್ತವೆ ಎಂಬುದನ್ನು ಒಪ್ಪಿಕೊಳ್ಳುತ್ತದೆ. ಅಷ್ಟೇ ಅಲ್ಲ, ವೈವಿಧ್ಯ ಸಾಧನೆ ಎಂದರೆ ಜನಾಂಗ, ಲಿಂಗ, ವಯಸ್ಸು, ರಾಷ್ಟ್ರೀಯತೆ, ವೈಕಲ್ಯ, ಲೈಂಗಿಕ ನಿಲುವು, ಶಿಕ್ಷಣ, ಧರ್ಮ ಮುಂತಾದ ಎಲ್ಲ ಭಿನ್ನತೆಗಳನ್ನೂ ಗೌರವಿಸುವುದು ಮತ್ತು ಸರಿಯಾಗಿ ಅರ್ಥಮಾಡಿಕೊಳ್ಳುವುದು ಎಂದು ಅರ್ಥ.

‘ಒಳಗೊಳ್ಳುವಿಕೆ’ ಎನ್ನುವುದು ಇಂಥ ವೈವಿಧ್ಯಗಳು ಜೊತೆಯಾಗಿ ಸೌಹಾರ್ದವಾಗಿ‍ ಇರುವುದಕ್ಕೆ ಅನುವು ಮಾಡಿಕೊಡುತ್ತದೆ. ವೈವಿಧ್ಯವು ನಮ್ಮಲ್ಲಿರುವ ವಿಭಿನ್ನತೆಯ ಪ್ರತಿಬಿಂಬ. ಒಳಗೊಳ್ಳುವಿಕೆ ಎಂಬುದು ಇಂಥ ವಿಭಿನ್ನ ಜನಸಮುದಾಯಗಳನ್ನು ಗೌರವಿಸುತ್ತದೆ. ಪ್ರತಿಯೊಂದು ವಿಭಿನ್ನತೆಗೂ ಮೌಲ್ಯವಿದೆ ಮತ್ತು ಸೂಕ್ತ ಗೌರವವಿದೆ ಎಂಬುದನ್ನು ಖಚಿತಪಡಿಸುತ್ತದೆ. ಇಂಥ ವಿಭಿನ್ನ ಜನಸಮುದಾಯಗಳು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದೇ ನಿಜವಾದ ಒಳಗೊಳ್ಳುವಿಕೆ.

ಸಾಮಾಜಿಕ ವಲಯದ ಸಂಸ್ಥೆಗಳು ನಮ್ಮ ಸಮಾಜದಲ್ಲಿರುವ ತಾರತಮ್ಯಗಳನ್ನು ಹೋಗಲಾಡಿಸಲು ಶ್ರಮಿಸುತ್ತಿವೆ. ಈ ಪೈಕಿ ಕೆಲವು ಸಂಸ್ಥೆಗಳು ಸಮಾಜದಲ್ಲಿ ಕಡೆಗಣನೆಗೆ ಒಳಗಾದ ವರ್ಗದವರಿಗೆ ಉತ್ತಮ ಶೌಚಾಲಯ ಮತ್ತು ಒಳ್ಳೆಯ ಆಹಾರ ಪೂರೈಸಲು, ಇನ್ನು ಕೆಲವು ಸಂಸ್ಥೆಗಳು ಒಳ್ಳೆಯ ಶಿಕ್ಷಣ ನೀಡಲು, ಮತ್ತಷ್ಟು ಸಂಸ್ಥೆಗಳು ಸುಸ್ಥಿರತೆ ಸಾಧಿಸಲು ಶ್ರಮಿಸುತ್ತಿವೆ. ಆದರೆ, ಅಂತಹ ಸಂಸ್ಥೆಗಳು, ನಮ್ಮ ಸಮಾಜದ ಮೂಲದಲ್ಲೇ ಇರುವ ಕೆಡುಕುಗಳನ್ನು ಹೋಗಲಾಡಿಸಲು ಶ್ರಮಿಸದೇ ಹೋದರೆ, ಅವು ಮಾಡುತ್ತಿರುವ ಯಾವ ಕೆಲಸವೂ ಸಮಾಜದ ಮೇಲೆ ದೀರ್ಘಾವಧಿ ಪರಿಣಾಮ ಬೀರಲು ಸಾಧ್ಯವಿಲ್ಲ. ಹೀಗಾಗಿ, ಸಾಮಾಜಿಕ ಸಂಸ್ಥೆಗಳು ನಿಜವಾದ ‘ಒಳಗೊಳ್ಳುವಿಕೆ’ ಎಂದರೇನು ಎಂಬುದಕ್ಕೆ ತಾವೇ ಉತ್ತಮ ನಿದರ್ಶನವಾಗಬೇಕಾಗುತ್ತದೆ. ಆದುದರಿಂದಲೇ ಅವು ತಮ್ಮೊಳಗೆ ‘ವೈವಿಧ್ಯ’ ಹೊಂದಿರುವುದು ಅತಿಮುಖ್ಯ.

ವೈವಿಧ್ಯವನ್ನು ಕಾರ್ಯರೂಪಕ್ಕೆ ತರುವಲ್ಲಿ ಅನೇಕ ಸವಾಲುಗಳಿವೆ. ಅಭಿವೃದ್ಧಿ ವಲಯದ ಹೆಚ್ಚಿನ ಸಂಸ್ಥೆಗಳು ಸಾಮಾನ್ಯವಾಗಿ ಯಾವುದೇ ಅನುಕೂಲಗಳಿಲ್ಲದ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುತ್ತವೆ. ಇಂತಹ ಸ್ಥಳವನ್ನು ತಲುಪಲು ಅದರ ಉದ್ಯೋಗಿಯೊಬ್ಬರು ಮೂರು– ನಾಲ್ಕು ಬಸ್ಸುಗಳನ್ನು ಹಿಡಿಯಬೇಕಾಗಬಹುದು ಅಥವಾ ದುರ್ಗಮವಾದ ದಾರಿಯಲ್ಲಿ ನಡೆದುಕೊಂಡೇ ಹೋಗಬೇಕಾಗಬಹುದು. ಉಳಿದುಕೊಳ್ಳಬೇಕಾದ ಹೋಟೆಲುಗಳು ಸುರಕ್ಷಿತವಲ್ಲದೇ ಇರಬಹುದು. ಇಂತಹ ಸವಾಲುಗಳು ಗಂಡಸರಿಗಾಗಲೀ ಹೆಂಗಸರಿಗಾಗಲೀ ಒಂದೇ ತರಹದ್ದಾದರೂ ನಮ್ಮ ಸಮಾಜ ಬೆಳೆದುಬಂದ ರೀತಿಯನ್ನು ಗಮನಿಸಿದರೆ, ಈ ತಾಣಗಳು ಮಹಿಳೆಯರಿಗೆ ‘ಅಸುರಕ್ಷಿತ’ವೆಂದು ಪರಿಗಣಿಸಬೇಕಾಗಬಹುದು.

ಎರಡನೆಯದಾಗಿ, ಅಭಿವೃದ್ಧಿ ವಲಯದ ಸಂಸ್ಥೆಗಳು ಸಾಮಾನ್ಯವಾಗಿ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ
ಪ್ರತಿಗಾಮಿಯಾದ, ವಿಪರೀತವೆನಿಸುವಷ್ಟು ಜಾತಿ ಮನೋಭಾವದಿಂದ ಕೂಡಿರುವ, ಅತಿಯಾದ ಲೈಂಗಿಕ ಭಾವನೆಗಳನ್ನುಳ್ಳ, ಪುರುಷ ಪ್ರಧಾನವಾದ ವ್ಯವಸ್ಥೆಯ ವಿರುದ್ಧ ಕೆಲಸ ಮಾಡುತ್ತಿರುತ್ತವೆ (ಇದು ನಾವು ಮೀರಿ ನಿಲ್ಲಬೇಕಾದ ಸಾಮಾಜಿಕ ಕೇಡುಗಳ ಸಣ್ಣ ಪಟ್ಟಿಯಷ್ಟೆ). ಇಂತಹ ಸಂಕೀರ್ಣತೆಗಳೊಂದಿಗೆ ಕೆಲಸ ಮಾಡುವಾಗ ವೈವಿಧ್ಯಮಯವಾದ ಉದ್ಯೋಗಿಗಳ ಪಡೆಯನ್ನು ಹೊಂದುವುದು ಈ ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳನ್ನು ಅದೆಷ್ಟೋ ಪಟ್ಟು ಜಾಸ್ತಿ ಮಾಡುತ್ತದೆ.

ಉದ್ಯೋಗದಾತ ಸಂಸ್ಥೆಗಳಲ್ಲಿ ವೈವಿಧ್ಯ ಮತ್ತು ಒಳಗೊಳ್ಳುವಿಕೆಯ ಅಂಶಗಳನ್ನು ಸುಧಾರಿಸಲು ನಾವು ಗಮನಾರ್ಹವಾದ ಪ್ರಯತ್ನಗಳನ್ನು ಕೈಗೊಂಡಿದ್ದೇವೆ, ನಿಜ. ಆದರೆ, ದೀರ್ಘಾವಧಿಯಲ್ಲಿ ಈ ಎರಡೂ ಅಂಶಗಳನ್ನು ಉತ್ತೇಜಿಸಲು ಮತ್ತು ಭದ್ರವಾಗಿ ಭವಿಷ್ಯದಲ್ಲಿ ನೆಲೆಯೂರಿಸಲು ಅಗತ್ಯವಾದ ನೀತಿಗಳನ್ನು ಪ್ರತಿಷ್ಠಾಪಿಸಲು ನಾವಿನ್ನೂ ಬಹುದೂರ ಕ್ರಮಿಸಬೇಕಾಗಿದೆ. ಈ ನಿಟ್ಟಿನಲ್ಲಿ, ಕೆಲವು ಸಂಸ್ಥೆಗಳು ವೈವಿಧ್ಯ ಮತ್ತು ಒಳಗೊಳ್ಳುವಿಕೆಯ ಅಂಶಗಳನ್ನು ನಾಮಕಾವಸ್ತೆ ಪ್ರದರ್ಶಿಸುವುದನ್ನು ನಿಲ್ಲಿಸಬೇಕು. ಉದಾಹರಣೆಗೆ, ಮಹಿಳಾ ಉದ್ಯೋಗಿಗಳಿಗೆ ‘ಮುಟ್ಟಿನ ರಜೆ’ ಕೊಡುವುದು ಮಹಿಳೆಯರನ್ನು ಬೆಂಬಲಿಸುವ ನಿಟ್ಟಿನಲ್ಲಿ ಸರಿಯಾದ ಸಂದೇಶವನ್ನೇ ಕೊಡುವಂತೆ ಕಾಣುತ್ತದೆ. ಆದರೆ, ನಿಜಕ್ಕೂ ವೈವಿಧ್ಯವನ್ನು ನಾವು ಸಾಧಿಸಬೇಕೆಂದರೆ, ಆ ಸಂಸ್ಥೆಗಳಲ್ಲಿ ಮಹಿಳಾ ಉದ್ಯೋಗಿಗಳು ಪುರುಷರಿಗೆ ಸಿಗುತ್ತಿರುವಂತಹ ಅವಕಾಶಗಳನ್ನೇ ಸಮಾನವಾಗಿ ಪಡೆಯಬೇಕು. ಎಲ್ಲ ಬಗೆಯ ಹಿನ್ನೆಲೆಗಳ ಜನರೂ ನಮ್ಮಲ್ಲಿ ಅರ್ಜಿ ಹಾಕಿಕೊಳ್ಳಲು ನಾವು ಉತ್ತೇಜಿಸಬೇಕು. ಮೂಲಸೌಲಭ್ಯಗಳ ಕೊರತೆ ನಿವಾರಿಸಲು, ವಾಸ್ತವ್ಯಕ್ಕೆ ಸುರಕ್ಷಿತ ಹೋಟೆಲುಗಳು ಸಿಗುವಂತೆ ಮಾಡಲು ಮತ್ತು ಕ್ಷೇಮವಾಗಿ ಪ್ರಯಾಣ ಮಾಡುವಂತಾಗಲು ಶ್ರಮಿಸಬೇಕು. ಉದ್ಯೋಗ ಸ್ಥಳಗಳಲ್ಲಿ ಸುರಕ್ಷತೆಯ ಬಗ್ಗೆ ಇರುವ ಸಮಸ್ಯೆಗಳನ್ನು ಸರಿಯಾಗಿ ಗುರುತಿಸಿ, ಸ್ಪಂದಿಸುವಂತಹ ನೀತಿಗಳನ್ನು ರೂಪಿಸಬೇಕು. ನೇಮಕಾತಿ ಅಧಿಕಾರಿಗಳು ಮತ್ತು ಸಂದರ್ಶಕರು ಉದ್ಯೋಗ ನೇಮಕಾತಿ ಪ್ರಕ್ರಿಯೆ ಸಂದರ್ಭದಲ್ಲಿ ಯಾವುದೇ ನಿರ್ದಿಷ್ಟ ಲಿಂಗ, ಧರ್ಮ ಅಥವಾ ಜಾತಿಯವರನ್ನು ಆಯ್ಕೆ ಮಾಡದಂತೆ, ಅಂತರ್ಗತ ಪೂರ್ವಗ್ರಹಗಳನ್ನು ಬೇರುಸಹಿತ ಕಿತ್ತುಹಾಕುವಂತೆ ಅವರಿಗೆ ತರಬೇತಿ ನೀಡಬೇಕು. ಜನರ ಹಿನ್ನೆಲೆ ಮತ್ತು ಅವರವರ ನಂಬಿಕೆಗಳ ಬಗ್ಗೆ ಸಹಾನುಭೂತಿಯುಳ್ಳ ನೀತಿಗಳು ನಮಗೆ ಅಗತ್ಯವಾಗಿವೆ.

ಹೊಸ ಆಲೋಚನೆಯನ್ನು ಒಪ್ಪಲು ಜನರಿಗೆ ಒಂದಿಷ್ಟು ಕಾಲಾವಕಾಶ ಬೇಕಾಗುತ್ತದೆ. ನಾವು ಕೆಲಸ ಮಾಡುತ್ತಿರುವಂತಹ ಸಮಾಜಗಳಲ್ಲಿ ಮೊದಲಿಗೆ ತಳಮಟ್ಟದಲ್ಲಿ ಬದಲಾವಣೆಗಳು ಬರುವಂತೆ ನೋಡಿಕೊಳ್ಳ ಬೇಕು. ಸಮಾಲೋಚನೆಯಿಂದ ಇದು ಸಾಧ್ಯ.

ಈಗ ಕಾಲ ಬದಲಾಗುತ್ತಿದ್ದು, ಅತ್ಯಂತ ಸವಾಲಿನಿಂದ ಕೂಡಿರುವಂತಹ ಹುದ್ದೆಗಳಲ್ಲೆಲ್ಲ ಮಹಿಳೆಯರಿಗೆ ಹೆಚ್ಚು ಅವಕಾಶಗಳು ದೊರೆಯುತ್ತಿವೆ. ಸಂಸ್ಥೆಗಳು ಸೂಕ್ಷ್ಮವೂ ಸಂವೇದನಾಶೀಲವೂ ಆಗಿರುವಂತಹ ನೀತಿಗಳನ್ನು ರೂಪಿಸುವ ಬಗ್ಗೆ ಎಚ್ಚರ ವಹಿಸುತ್ತಿವೆ. ಕೆಲಸವು ಅರ್ಥಪೂರ್ಣವಾದಾಗ ಜಾತಿ-ಧರ್ಮಗಳ ಸೀಮೆಗಳು ಅಪ್ರಸ್ತುತಆಗುವುದನ್ನು ನಾವು ನೋಡಿದ್ದೇವೆ. ಅಭಿವೃದ್ಧಿ ವಲಯದಲ್ಲಿ ಕ್ರಿಯಾಶೀಲವಾಗಿರುವ ಸಂಸ್ಥೆಗಳು ತಮ್ಮಲ್ಲಿರುವ ವೈವಿಧ್ಯವನ್ನು ತೋರಿಸಿಕೊಳ್ಳದೇ ಇರಬಹುದು. ಆದರೆ, ಅವುಗಳ ಕ್ಷೇತ್ರಗಳಿಂದ ನಿಜಕ್ಕೂ ಹೃದಯಸ್ಪರ್ಶಿಯಾಗಿರುವಂತಹ ಕತೆಗಳು ಬೆಳಕಿಗೆ ಬರುತ್ತಿವೆ. ಉದಾಹರಣೆಗೆ, ಸಾಂಪ್ರದಾಯಿಕ ಮುಸ್ಲಿಂ ಕುಟುಂಬದ ಒಬ್ಬ ಹೆಣ್ಣುಮಗಳು ರಾಜಸ್ಥಾನದ ಸಿರೋಹಿಯಲ್ಲಿರುವ ನಮ್ಮ ಶಾಲೆಯೊಂದರಲ್ಲಿ ಸಂಸ್ಕೃತವನ್ನು ಬೋಧಿಸುತ್ತಿದ್ದಾರೆ. ಹಾಗೆಯೇ ಹೆಚ್ಚಿನ ಮಹಿಳೆಯರು ತಮ್ಮನ್ನು, ದೇಶದ ಅತ್ಯಂತ ದುರ್ಗಮವಾದ ಪ್ರದೇಶಗಳಲ್ಲಿ ಒಂದಾಗಿರುವ ಉತ್ತರಕಾಶಿ ಜಿಲ್ಲೆಯಲ್ಲಿರುವ ನಮ್ಮ ಸಂಸ್ಥೆಗೆ ನೇಮಿಸಬೇಕೆಂದು ಕೇಳಿಕೊಳ್ಳುತ್ತಿದ್ದಾರೆ. ಸಮಾಜದಲ್ಲಿ ನಿಜವಾದ ಬದಲಾವಣೆ ತರಬೇಕೆನ್ನುವುದು ಇವರ ಅದಮ್ಯ ಬಯಕೆಯಾಗಿದೆ. ಹೀಗಾಗಿ ಇವರೆಲ್ಲ ಯಾವ ಕಷ್ಟಕ್ಕೂ ಹೆದರುವವರಲ್ಲ. ಇನ್ನು ಕೆಲವು ಸಂಸ್ಥೆಗಳಲ್ಲಿ ಲಿಂಗ ಪರಿವರ್ತಿತರನ್ನು ಉದ್ಯೋಗಿಗಳನ್ನಾಗಿ ಒಪ್ಪಿಕೊಳ್ಳುತ್ತಿರುವ ಕತೆಗಳನ್ನು ನಾವು ಕೇಳುತ್ತಿದ್ದೇವೆ.

ಸಮಾಜದಲ್ಲಿ ‘ನಾವು ಮಾತ್ರ ಶ್ರೇಷ್ಠರು’ ಎನ್ನುವಂತಹ ಮನೋಭಾವ ಬೆಳೆಯಲು ನಾವು ಆಸ್ಪದ ನೀಡಬಾರದು. ಅವಕಾಶವಂಚಿತರ ಪರವಾಗಿ ನಾವು ಮುಂದಡಿ ಇಟ್ಟಾಗ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳನ್ನು ಒದಗಿಸಬೇಕು. ಆದರೆ, ವೈವಿಧ್ಯವನ್ನು ಸಾಧಿಸಲು ಗಮನ ನೀಡುವ ಭರದಲ್ಲಿ ವೃತ್ತಿಪರ ಪ್ರತಿಭೆಯನ್ನು ಮರೆಯಬಾರದು. ಸಮಸ್ಯೆಗಳಿಗೆ ವಾಸ್ತವದ ನೆಲೆಗಟ್ಟಿನಲ್ಲಿ ಸ್ಪಂದಿಸಬೇಕಲ್ಲದೆ, ಇದು ಸಂದರ್ಭೋಚಿತವಾಗಿಯೂ ಇರಬೇಕು. ಸಕಲರಿಗೂ ಒಪ್ಪಿಗೆಯಾಗುವಂತಹ ಉತ್ತರ ನಮಗೆ ಎಂದಿಗೂ ಸಿಕ್ಕುವುದಿಲ್ಲ. ಆದರೆ, ನಿಧಾನವಾಗಿ ನಾವು ಸರಿಯಾದ ದಿಕ್ಕಿನಲ್ಲಿ ಹೆಜ್ಜೆಗಳನ್ನು ಇಡುತ್ತಿದ್ದೇವೆ.

ಲೇಖಕ: ಚೀಫ್ ಪೀಪಲ್ ಆಫೀಸರ್, ಅಜೀಂ ಪ್ರೇಮ್‌ಜಿ ಫೌಂಡೇಷನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT