ಶನಿವಾರ, ಆಗಸ್ಟ್ 20, 2022
21 °C

ಸಾಮಾಜಿಕ ನ್ಯಾಯ ರಾಜಕೀಯ ದಾಳವಾಗದಿರಲಿ

ಡಾ. ಎಲ್‌. ಹನುಮಂತಯ್ಯ Updated:

ಅಕ್ಷರ ಗಾತ್ರ : | |

ಮೂರು ದಶಕದ ಒಳಮೀಸಲಾತಿ ಹೋರಾಟವು ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ತೀರ್ಪಿನಿಂದ ನಿಟ್ಟುಸಿರು ಬಿಡುವಂತಾಗಿದೆ. ಸ್ವಾತಂತ್ರ್ಯದ ನಂತರ ಸಂವಿಧಾನದಲ್ಲಿ ಮೀಸಲಾತಿಯನ್ನು ಅಳವಡಿಸುವುದು ಶೋಷಿತ ಸಮುದಾಯವನ್ನು ಮೇಲೆತ್ತಲು ಸಹಾಯ ಮಾಡುತ್ತದೆ ಎಂಬ ಅಭಿಪ್ರಾಯವಿತ್ತು. ಆದರೆ, ಇದು ಶೋಷಿತ ಜಾತಿಗಳ ವಿಮೋಚನೆಗೆ ಸಂಪೂರ್ಣ ಪರಿಹಾರವಲ್ಲವೆಂದು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷ ಅಂಬೇಡ್ಕರ್ ಭಾವಿಸಿದ್ದರು. ಮೀಸಲಾತಿಯಿಂದ ಎಲ್ಲ ಪರಿಶಿಷ್ಟ ಜಾತಿಗಳಿಗೆ ನ್ಯಾಯ ಸಿಗುವುದಿಲ್ಲವೆಂಬ ಅರಿವು ಅವರಿಗೆ ಇತ್ತು. ‘ವಿದ್ಯಾವಂತ ಪರಿಶಿಷ್ಟ ಜಾತಿಗಳವರು ಅನಕ್ಷರಸ್ಥ, ಹಳ್ಳಿವಾಸಿಗಳಾಗಿರುವ ಬಂಧುಗಳ ಬಗೆಗೆ ಕಾಳಜಿ ತೋರುತ್ತಿಲ್ಲವೆಂದು ಅಂಬೇಡ್ಕರ್‌ ದುಃಖಿತರಾದದ್ದೂ ಉಂಟು’. ಮೀಸಲಾತಿ ಕೆಲವೇ ಜನರ ಸ್ವತ್ತಾಗಬಾರದು, ಎಲ್ಲರ ವಿಮೋಚನೆಯ ಅಸ್ತ್ರವಾಗಬೇಕೆಂದು ಅವರು ಬಯಸಿದ್ದರು. ಬಹುಶಃ ಇದುವೇ ಒಳಮೀಸಲಾತಿ ಎಂಬ ಚಿಂತನೆಯಲ್ಲಿ ಟಿಸಿಲೊಡೆಯಿತು.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಮುನ್ನೆಲೆಗೆ ಬಂದ ಸದಾಶಿವ ಆಯೋಗ ವರದಿ ಜಾರಿ ವಿಚಾರವನ್ನು ಚುನಾವಣೆ ನೆಪ ಹೇಳಿ ಮುಂದೆ ಹಾಕಲಾಯಿತು. ಈಗ, ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠವು ಒಳಮೀಸಲಾತಿ ಪರವಾದ ಅಭಿಪ್ರಾಯ ವ್ಯಕ್ತಪಡಿಸಿದೆ. ಅಸಮಾನರನ್ನು ಸಮಾನರೆಂದು ಪರಿಗಣಿಸಿ ಅನ್ಯಾಯ ಮಾಡಬಾರದೆಂಬ ಮಾನವೀಯ, ಮೈಲಿಗಲ್ಲು ನಿಲುವು ತಾಳಿದೆ. ಹಿಂದುಳಿದ ವರ್ಗಗಳಲ್ಲಿ ಒಳಮೀಸಲಾತಿ ಈಗಾಗಲೇ ಇರುವುದಾದರೆ ಪರಿಶಿಷ್ಟ ಜಾತಿಗಳಿಗೆ ಅನ್ವಯಿಸುವುದು ತಪ್ಪಲ್ಲ ಎಂಬ ಸ್ಪಷ್ಟ ಸಂದೇಶವನ್ನು ಪೀಠವು ನೀಡಿದೆ.

ಕರ್ನಾಟಕ, ಆಂಧ್ರ, ತೆಲಂಗಾಣದ ಮಾದಿಗ ಸಮುದಾಯದ ಮೂರು ದಶಕಗಳ ಹೋರಾಟವನ್ನು ಪೀಠವು ಎತ್ತಿಹಿಡಿದು ಸಾಂವಿಧಾನಿಕ ಮುದ್ರೆಯೊತ್ತಿದೆ. ಸಾಮಾಜಿಕ ನ್ಯಾಯವು ಪಕ್ಷಗಳ ರಾಜಕೀಯ ದಾಳವಾಗದೆ ನಿಜಾರ್ಥದ ನ್ಯಾಯದಾನವಾಗಬೇಕು. ಅತ್ಯಂತ ಶೋಷಿತ ಜಾತಿಗಳ ಜನರಿಗೂ ಶಿಕ್ಷಣ, ಉದ್ಯೋಗ ದೊರಕಿ ಅವರ ಮುಖಗಳಲ್ಲಿ ಮಂದಹಾಸ ಮೂಡಬೇಕು. ಇದೇ ಒಳಮೀಸಲಾತಿಯ ಮೂಲ ಮಂತ್ರವಾಗಬೇಕು.

(ಲೇಖಕ ರಾಜ್ಯಸಭಾ ಸದಸ್ಯ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು