ಬುಧವಾರ, ಜನವರಿ 22, 2020
28 °C
ಆಶ್ರಯ ಬಯಸಿ ಬರುವವರಿಗೆ ಶ್ರದ್ಧಾ ಕೇಂದ್ರವು ಸಾಂತ್ವನ ಕೇಂದ್ರವೂ ಆಗಬೇಕು

ಅನುಮಾನ, ಅವಮಾನ, ಅಭಿಮಾನ

ಡಾ. ಶಿವಮೂರ್ತಿ ಮುರುಘಾ ಶರಣರು Updated:

ಅಕ್ಷರ ಗಾತ್ರ : | |

prajavani

ಚಿತ್ರದುರ್ಗದಲ್ಲಿ ಶ್ರೀಮಠದ ಕಾರ್ಯಾಲಯದಲ್ಲಿಇದ್ದೆ. ಕೆಲವರು ಭೇಟಿಗೆ ಬರುತ್ತಾ ಹೋಗುತ್ತಾ ಇದ್ದರು. ಬಂದವರೊಂದಿಗೆ ಸಂಭಾಷಣೆ ಮತ್ತು ಕಡತಗಳ ಪರಿಶೀಲನೆ ನಡೆಸುತ್ತಿರುವಾಗ ಇಬ್ಬರು ವಿವಾಹಿತ ಮಹಿಳೆಯರು ಬಂದರು. ಅವರಲ್ಲಿ ಒಬ್ಬರಿಗೆ ಸುಮಾರು ಐವತ್ತು ವರ್ಷ ಇದ್ದಿರಬಹುದು. ದುಃಖತಪ್ತರಾಗಿ- ‘ನಾನು ಮನೆ ಬಿಟ್ಟು ಬಂದಿದ್ದೇನೆ. ಇಲ್ಲಿರಲು ನನಗೆ ಆಶ್ರಯ ನೀಡಬೇಕು’ ಎಂದು ಕೇಳಿಕೊಂಡರು.

‘ನೀವು ವಿವಾಹಿತ ಮಹಿಳೆ. ಮನೆಬಿಟ್ಟು ಬರಬಾರದಿತ್ತು. ಮನೆಯನ್ನು ತೊರೆದು ಮಠಕ್ಕೆ ಬರುವಂತಹ ಪ್ರಸಂಗ ಯಾಕೆ ಬಂತು’ ಎಂದು ಕೇಳಿದೆ. ಆ ಮಹಿಳೆಯು ರೋದಿಸುತ್ತ- ‘ನನ್ನ ಯಜಮಾನರು ನನ್ನ ಮೇಲೆ ಸುಖಾಸುಮ್ಮನೆ ಅನುಮಾನಪಡುತ್ತಾರೆ’ ಎಂದರು. ಆ ಮಹಿಳೆಗೆ ನಾನು ಸಾಂತ್ವನ ನೀಡಿದ್ದು ಹೀಗೆ: ‘ವ್ಯಕ್ತಿ ಹತ್ತಿರ ಇದ್ದಾಗ ಅವರ ಮಹತ್ವ ಗೊತ್ತಾಗುವುದಿಲ್ಲ; ದೂರ ಇದ್ದಾಗ ಒಬ್ಬ ವ್ಯಕ್ತಿಯ ಮಹತ್ವ ಅರಿವಿಗೆ ಬರುತ್ತದೆ. ನೀವು ಶ್ರೀಮಠದಲ್ಲಿ ಒಂದು ಕೊಠಡಿಯನ್ನು ಪಡೆದು 3-4 ದಿನ ನಿಶ್ಚಿಂತೆಯಿಂದ ಇರಿ. ನಿಮ್ಮ ಯಜಮಾನರೇ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ. ಅವರು ಬಾರದಿದ್ದಲ್ಲಿ ಫೋನ್‌ ಮಾಡಿ ಅಥವಾ ಶ್ರೀಮಠದ ಕಾರ್ಯಕರ್ತರನ್ನು ಅಲ್ಲಿಗೆ ಕಳಿಸಿ ಅವರನ್ನು ಕರೆಸಲು ಯತ್ನಿಸುತ್ತೇವೆ. ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇವೆ’.

ಇಂತಹ ಸಂದಿಗ್ಧ ಸಂದರ್ಭದಲ್ಲಿ ದುಡುಕಿ ಗಂಡಾಂತರ ತಂದುಕೊಳ್ಳುವ ಬದಲು ಆಶ್ರಯಕ್ಕೆಂದು ಮುರುಘಾಮಠಕ್ಕೆ ಬಂದದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳಿದೆ. ಜೀವನದಲ್ಲಿ ಪ್ರತಿಕೂಲ ಪರಿಸ್ಥಿತಿ ಎದುರಾದಾಗ ಮನೆಬಿಟ್ಟು ಬರುವುದರ ಹಿಂದೆ ಇರುವುದು ಅಸಹಾಯಕತೆ ಮಾತ್ರ. ಅಂತಹವರಿಗೆ ಆಶ್ರಯದ ವ್ಯವಸ್ಥೆ ಬೇಕು. ಇಂತಹ ವ್ಯವಸ್ಥೆ ರೂಪಿಸುವಲ್ಲಿ ಸರ್ಕಾರ, ಸಂಘಸಂಸ್ಥೆಗಳಲ್ಲದೆ ಧಾರ್ಮಿಕ ಕೇಂದ್ರಗಳ ಜವಾಬ್ದಾರಿಯೂ ಇದೆ. ಇಂತಹ ವ್ಯವಸ್ಥೆಯು ಕಟ್ಟಡವಷ್ಟೇ ಆಗಿ ಉಳಿದರೆ ಸಾಲದು, ಅದು ಸಾಂತ್ವನ ಕೇಂದ್ರವೂ ಆಗಬೇಕು. ಶ್ರದ್ಧಾ ಕೇಂದ್ರವೊಂದನ್ನು ಸಾಂತ್ವನ ಕೇಂದ್ರವಾಗಿಸಲು ಹೃದಯವಂತಿಕೆ ಬೇಕಾಗುತ್ತದೆ.

ಆಧುನಿಕ ಜಗತ್ತು ತುಂಬಾ ಯಾಂತ್ರಿಕವಾಗಿದೆ. ಅಷ್ಟೇ ಲೆಕ್ಕಾಚಾರದಿಂದ ಕೂಡಿದುದೂ ಆಗಿದೆ. ಅವರವರ ಲೆಕ್ಕಾಚಾರದಲ್ಲಿ ಅವರವರು ಇರುತ್ತಾರೆ. ತಮ್ಮ ಬದುಕೇ ಸರ್ವಸ್ವ; ವೈಯಕ್ತಿಕ ಸುಖ– ಸಂತೋಷವೇ ಮಿಗಿಲು ಎಂಬ ಸ್ವಾರ್ಥಭಾವದಲ್ಲಿ ಮಾನವ ಕಳೆದುಹೋಗುತ್ತಿದ್ದಾನೆ. ತಂದೆ-ತಾಯಿಗೇ ಆಶ್ರಯ ಕೊಡಲಾರದಷ್ಟು ಸ್ವಾರ್ಥವಾಗಿದೆ ಈ ಜಗತ್ತು. ಇನ್ನು ಪರರ ಕಷ್ಟ-ನಷ್ಟಗಳಿಗೆ ಸ್ಪಂದಿಸುವ ಹೃದಯ ಎಲ್ಲಿ ದೊರಕೀತು?

ಕಷ್ಟ-ನಷ್ಟಗಳಿಗೆ ಸ್ಪಂದಿಸುವ ವಿಶಾಲಭಾವ ತೋರಿದರೆ, ಅದನ್ನು ದುರುಪಯೋಗ ಮಾಡಿಕೊಳ್ಳುವವರೂ ಇರುತ್ತಾರೆ. ಅಂಥವರು ಆಗಾಗ ಭೇಟಿ ಆಗುತ್ತಿರುತ್ತಾರೆ. ಕೆಲ ದಿನಗಳ ಹಿಂದೆ ಇಬ್ಬರು ಮಹನೀಯರು ಬಂದರು. ಅವರು ತಮ್ಮ ಪೈಕಿ ಒಬ್ಬ ಮಹಿಳೆಯ ಕಾಯಿಲೆ ವಿಚಾರವನ್ನು ಪ್ರಸ್ತಾಪಿಸಿದರು. ಈ ಭಾಗದವರಾಗಿದ್ದಿದ್ದರೆ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬಹುದಿತ್ತು ಎಂದೆ. ಅವರು- ‘ಇಲ್ಲ, ಅವರನ್ನು ನೋಡಿಕೊಳ್ಳಲು ಆಗುತ್ತಿಲ್ಲ. ತುಂಬಾ ಖರ್ಚಿನ ವಿಷಯ. ಜಮೀನನ್ನು ಒತ್ತೆಯಿಟ್ಟುಕೊಂಡಾದರೂ ದೊಡ್ಡಮೊತ್ತದ ಹಣವನ್ನು ಕೊಡಿ’ ಎಂದು ಅಂಗಲಾಚಿದರು. ‘ಇಲ್ಲ, ನಾನಿಲ್ಲಿ ಅಂಥ ಯಾವುದೇ ಲೇವಾದೇವಿ ಮಾಡುವುದಿಲ್ಲ. ನಿಮ್ಮ ಕಡೆ ಯಾವುದಾದರೂ ಬ್ಯಾಂಕ್‍ನಲ್ಲಿ ಜಮೀನು ಒತ್ತೆಯಿಟ್ಟು ಹಣ ಪಡೆಯಬಹುದಲ್ಲ’ ಎಂದು ಕೇಳಿದಾಗ ಅವರಿಂದ ಬಂದ ಉತ್ತರ- ‘ಅಷ್ಟು ದೊಡ್ಡಮೊತ್ತದ ಹಣವನ್ನು ಬ್ಯಾಂಕ್‌ಗಳಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಹೆಚ್ಚು ಬಡ್ಡಿ ಹಾಕುತ್ತಾರೆ’ ಎಂದರು.

ಮತ್ತೊಬ್ಬ ವ್ಯಕ್ತಿಯ ಭೇಟಿ. ಸಹಾಯಕ್ಕಾಗಿ ಕೋರಿಕೊಂಡರು. ದುಃಖತಪ್ತನಾದ ಆತನ ಕೈಗೆ ನಾನು 500 ರೂಪಾಯಿ ನೋಟನ್ನು ಕೊಡಲು ಹೋದೆ. ಆತ ಅದನ್ನು ತಿರಸ್ಕರಿಸಿ ಹೋದ. ಸಹಕಾರವಾಗಲೀ ಆಶ್ರಯವಾಗಲೀ ಸೂಕ್ತ ವ್ಯಕ್ತಿಗಳಿಗೆ ಸಲ್ಲಬೇಕು. ಕೆಲವೊಮ್ಮೆ ಖೊಟ್ಟಿ ಫಲಾನುಭವಿಗಳು ನಿರಾಸೆಗೊಳಿಸುತ್ತಾರೆ. ಕೆಲವರದು ಎಲ್ಲಿಲ್ಲದ ನಿರೀಕ್ಷೆ. ಅವರು ಕೇಳಿದಾಕ್ಷಣ ದೊಡ್ಡ ಮೊತ್ತದ ಹಣವನ್ನು ಕೊಟ್ಟುಬಿಡಬೇಕು. ಅವರ ನಿರೀಕ್ಷೆಗೆ ಸೂಕ್ತ ಸ್ಪಂದನ ಸಿಗದಿದ್ದಲ್ಲಿ ಪೆಚ್ಚು ಮೋರೆ ಹಾಕಿಕೊಂಡು ಹೋಗುತ್ತಾರೆ. ಆಶ್ರಯ ನೀಡಲು ಮುಂದಾದವರನ್ನು ಶಪಿಸುತ್ತಾ ಹೋಗುತ್ತಾರೆ. ಅಂಥವರಿಂದಾಗಿ, ನಿಜವಾದ ಅಸಹಾಯಕರಿಗೆ ನೆರವು ತಪ್ಪಬಾರದು. ಆಶ್ರಯ ನೀಡುವವರು ಇರುವಂತೆ, ಆಶ್ರಯವನ್ನು ದುರುಪಯೋಗಪಡಿಸಿಕೊಳ್ಳುವವರೂ ಇರುವುದು ವಿಪರ್ಯಾಸ!

ತನ್ನ ಪತಿಯ ಅನುಮಾನದ ಗುಣದಿಂದಾಗಿ ಮನೆ ತೊರೆದು ಬಂದಂತಹ ಮಹಿಳೆಯ ಒಳಗುದಿ ಕುರಿತು ಚಿಂತಿಸಬೇಕಾಗಿದೆ. ಒಬ್ಬರ ಮೇಲೆ ಅತಿಯಾದ ಅನುಮಾನ ಮತ್ತೊಂದು ಹಂತದಲ್ಲಿ ಅವರಿಗೆ ಮಾಡುವ ಅವಮಾನ. ವಿನಾಕಾರಣ ಅನುಮಾನಪಟ್ಟಲ್ಲಿ ತಮ್ಮ ಆಪ್ತರಿಂದಲೇ ಅವಮಾನಪಡಬೇಕಾದ ದುಃಸ್ಥಿತಿ ಬರಬಹುದು. ಪತಿಯ ಮೇಲೆ ಸತಿಯ ಅನುಮಾನ, ಸತಿಯ ಮೇಲೆ ಪತಿಯ ಅನುಮಾನ; ಅನುಮಾನ ಮತ್ತು ಅವಮಾನ ಸಹಿಸಲಾರದವರಲ್ಲಿ ಪರಮ ಸ್ವಾಭಿಮಾನ. ಅನುಮಾನವು ಮಾನವ ಕುಲದ ಒಂದು ಕಾಯಿಲೆ. ಅದು ಅಷ್ಟು ಸುಲಭವಾಗಿ ನಿವಾರಣೆ ಆಗುವಂತಹದ್ದಲ್ಲ. ಅದಕ್ಕೆ ಪರಸ್ಪರ ತಿಳಿವಳಿಕೆ, ಜೀವನಾನುಭವ, ಸಾರಾಸಾರ ನ್ಯಾಯ ವಿಮರ್ಶೆ ಎಲ್ಲವೂ ಬೇಕು.

ಸಮಾಜ ಸುಧಾರಣೆ, ಅನ್ವೇಷಣೆ, ಸಂಶೋಧನೆ ಮುಂತಾದ ಸಾಧನೆಗೆ ತೊಡಗಿಸಿಕೊಂಡಾಗ ಜನ ಮೊದಮೊದಲು ಮೂದಲಿಸುತ್ತಾರೆ; ಅವಮಾನಿಸುತ್ತಾರೆ. ನಂತರ ಅಭಿಮಾನ, ಸನ್ಮಾನ. ಒಂದು ದಿನದ, ಆ ಕ್ಷಣದ ಸನ್ಮಾನಕ್ಕೆ ನೂರಾರು ಸಲ ಅವಮಾನ ಅನುಭವಿಸಬೇಕಾಗುತ್ತದೆ. ಸಮಾಜ ಸುಧಾರಕರು ಅವಮಾನವನ್ನು ಹಿನ್ನಡೆ ಎಂದು ಭಾವಿಸುವುದಿಲ್ಲ, ಯಶಸ್ಸಿಗೆ ಸೋಪಾನವೆಂದು ಬಗೆಯುತ್ತಾರೆ. ಸಾಮಾಜಿಕ ಸವಾಲುಗಳಾದ ಅಸಮಾನತೆ, ಜಾತೀಯತೆ, ಭ್ರಷ್ಟತೆ, ಅಮಾನವೀಯತೆ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯವನ್ನು ಸತ್ಪುರುಷರು ಕೈಗೆತ್ತಿಕೊಳ್ಳುತ್ತಾರೆ. ವಿಜ್ಞಾನಿ, ತಂತ್ರಜ್ಞಾನಿ ಮತ್ತು ಸಂಶೋಧಕರು ಅನ್ವೇಷಣೆಗೆ ಮುಂದಾದಾಗ ಮತ್ತು ದಾರ್ಶನಿಕರು ಸಾಮಾಜಿಕ ಪರಿವರ್ತನೆಗೆ ಮುಂದಾದಾಗ ಸಂಪ್ರದಾಯವಾದಿಗಳಿಂದ ವಿರೋಧ ಎದುರಾಗುತ್ತದೆ. ಮಾತ್ರವಲ್ಲದೆ ಸಾಹಿತ್ಯ ಕ್ಷೇತ್ರ, ಧಾರ್ಮಿಕ ಕ್ಷೇತ್ರ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸುಧಾರಣೆಗಳು ನಡೆದಾಗಲೂ ಮೂಲಭೂತವಾದಿಗಳ ಅವಕೃಪೆಗೆ ಒಳಗಾಗುವುದು ಅನಿವಾರ್ಯ. ಧಾರ್ಮಿಕ ಮೂಲಭೂತವಾದವು ಎಲ್ಲ ಧರ್ಮಗಳಲ್ಲೂ ಎಲ್ಲ ಕಾಲದಲ್ಲೂ ಕೆಲಸ ಮಾಡುತ್ತದೆ. ಸಂಪ್ರದಾಯವಾದಕ್ಕಿಂತ ಮೂಲಭೂತವಾದವು ಅತ್ಯಂತ ಅಪಾಯಕಾರಿ. ಧಾರ್ಮಿಕ ಸಹಿಷ್ಣುತೆಯು ಸಮಕಾಲೀನ ಸಂದರ್ಭದ ಅಗತ್ಯವಾಗಿದೆ.

ಜನಸಾಮಾನ್ಯರ ವಿಚಾರ ಗ್ರಹಿಕೆಗೂ ದಾರ್ಶನಿಕರ ವಿಚಾರಧಾರೆಗೂ ಅಂತರವಿರುತ್ತದೆ. ದಾರ್ಶನಿಕರ ವಿಚಾರಗಳನ್ನು ಸ್ವೀಕರಿಸಲು ಸಮಯ ಬೇಕಾಗುತ್ತದೆ. ದಾರ್ಶನಿಕರು ಬದುಕಿದ್ದಾಗ ಅವರ ವಿಚಾರಗಳನ್ನು ವಿರೋಧಿಸಲಾಗುತ್ತದೆ; ಅವರು ಮರೆಯಾದಾಗ ಅವರ ಹೆಸರಿನಲ್ಲಿ ಗುಡಿ, ಗೋಪುರ ಕಟ್ಟಿ ಆರಾಧಿಸಲಾಗುತ್ತದೆ. ಅದು ಸಮಾಜದ ಸ್ಥಿತಿ. ತಮಗೆ ಅವಮಾನ ಆಗುತ್ತದೆಂದು ದಾರ್ಶನಿಕರು ಪರಿವರ್ತನೆಗೆ ಪ್ರಯತ್ನಿಸುವುದನ್ನು ಬಿಡುವುದಿಲ್ಲ. ಅವಮಾನದ ನಡುವೆ ದಾರ್ಶನಿಕರಾಗಿ ಎದ್ದುಬರುತ್ತಾರೆ. ಸಮಾಜದ ಒಳಿತಿಗಾಗಿ ದೂಷಣೆ ಅನುಭವಿಸುತ್ತಾರೆ. ಇದೆಲ್ಲವನ್ನೂ ದಾಟಿದಾಗ ಅಭಿಮಾನ.

ಸ್ವಾಭಿಮಾನವು ಬದುಕಿನ ಮಾನವನ್ನು ಕಾಯುತ್ತದೆ. ಈ ದಿಸೆಯಲ್ಲಿ ಸರ್ಕಾರ, ಸಂಘ-ಸಂಸ್ಥೆಗಳು ಜನಸಾಮಾನ್ಯರ ಕೈಗಳಿಗೆ ಕಾಯಕವನ್ನು ನೀಡುತ್ತವೆ. ಕಾಯಕಪ್ರಧಾನ ಸಮಾಜವು ಸ್ವಾಭಿಮಾನ
ಪೂರ್ಣ ಸಮಾಜ. ಒಂದು ಉತ್ತಮ ಸರ್ಕಾರ ಅಥವಾ ಆಡಳಿತವು ಪ್ರಜೆಗಳು ಬೇಡುವಂತೆ ಮಾಡುವುದಿಲ್ಲ. ಅವರು ದುಡಿಯುವಂತೆ ನೋಡಿಕೊಂಡಾಗ ಸರ್ಕಾರದ ಬೊಕ್ಕಸಕ್ಕೆ ವರಮಾನ ಹರಿದುಬರುತ್ತದೆ. ಜನರು ಕೈ ಒಡ್ಡುವಂತೆ ಮಾಡುವುದು ಪರಾವಲಂಬಿತನ. ಕೃಷಿಕರ ಬೆಳೆಗೆ ಸೂಕ್ತ ಬೆಲೆಯನ್ನು ನಿಗದಿಪಡಿಸಿದಾಗ, ಅವರಿಗೆ ಮತ್ಯಾವ ಭಿಕ್ಷೆಯ ಅಗತ್ಯವಿಲ್ಲ. ಸ್ವಾಭಿಮಾನದ ಜಾಗೃತಿಯೇ ನಿಜವಾದ ಅಭಿಮಾನ.

ಪ್ರತಿಕ್ರಿಯಿಸಿ (+)