ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಬಳಿ ಐದು ರೂಪಾಯಿ ಕೇಳಿ ದೇಶ ಗೆಲ್ಲುವ ತಂತ್ರ ರೂಪಿಸಿದೆ ಬಿಜೆಪಿ

ಬಿಜೆಪಿಯಂಥ ಶ್ರೀಮಂತ ಪಕ್ಷವೇಕೆ ನಮೋ ಆ್ಯಪ್ ಮೂಲಕ ಐದು ರೂಪಾಯಿ ಕೇಳುತ್ತಿದೆ
Last Updated 30 ಅಕ್ಟೋಬರ್ 2018, 11:37 IST
ಅಕ್ಷರ ಗಾತ್ರ

ನಮೋ ಆ್ಯಪ್ ಮೂಲಕ ಮೋದಿ ಅವರು ಐದು ರೂಪಾಯಿ ಕೇಳ್ತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರಬಹುದು. ಹೀಗೆ ಐದು ರೂಪಾಯಿ ಕೇಳುವ ಉದ್ದೇಶ ಏನು ಅನ್ನೋದು ಗೊತ್ತೆ?ಇದು ದುಡ್ಡಿನ ವಿಷಯ ಅಲ್ಲವೇ ಅಲ್ಲ ಅನ್ನೋದೆ ಇದರಲ್ಲಿರುವ ಮಜಾ. ಆದರೆ ಹೀಗೆ ದುಡ್ಡು ಕೇಳುವ ಮೂಲಕ ಬಿಜೆಪಿಯಂಥ ಬೃಹತ್ ರಾಷ್ಟ್ರೀಯ ಪಕ್ಷ ದೊಡ್ಡ ಮನಃಶಾಸ್ತ್ರೀಯ ಆಟವನ್ನೇ ಹೂಡಿದೆ.ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಮೋ ಆ್ಯಪ್ ಮೂಲಕ ₹5ರಿಂದ ₹1000ದವರೆಗೆ ದೇಣಿಗೆ ನೀಡುವಂತೆ ಕೋರುತ್ತಿದ್ದಾರೆ. ಮೋದಿ ಪ್ರಕಾರ ಇದು ‘ರಾಜಕೀಯದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ನೆರವಾಗುತ್ತದೆ’.

ಬಿಜೆಪಿಯ ಈ ಚಿಂತನೆ ಹಲವು ಕಾರಣಗಳಿಂದ ಕುತೂಹಲ ಕೆರಳಿಸುತ್ತದೆ.

ಮೊದಲನೆಯದಾಗಿ ಬಿಜೆಪಿಗೆ ಅಷ್ಟು ಸಣ್ಣ ಮೊತ್ತದ ದೇಣಿಗೆಗಳು ಬೇಕಾಗಿಯೇ ಇಲ್ಲ. 2016–17ರಲ್ಲಿ, ಒಂದೇ ವರ್ಷದಲ್ಲಿ ಬಿಜೆಪಿ ₹1000 ಕೋಟಿ ಸಂಪಾದಿಸಿ ದೇಶದ ಶ್ರೀಮಂತ ರಾಜಕೀಯ ಪಕ್ಷ ಎನಿಸಿಕೊಂಡಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್‌ ಈ ಅವಧಿಯಲ್ಲಿ ಸಂಪಾದಿಸಿದ್ದು ಕೇವಲ ₹225 ಕೋಟಿ ಮಾತ್ರ. ಅಧಿಕಾರಕ್ಕೆ ಮರಳುವ ವಿಶ್ವಾಸದಲ್ಲಿರುವ ಬಿಜೆಪಿಯುಚುನಾವಣಾ ವರ್ಷದಲ್ಲಿ ಮತ್ತಷ್ಟು ಹಣ ಸಂಪಾದಿಸುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ.

ಎರಡನೆಯದಾಗಿ, ನರೇಂದ್ರ ಮೋದಿ ಅವರು ಹೇಳುವಂತೆ ಬಿಜೆಪಿಯು ಹೀಗೆ ದೇಣಿಗೆ ಸಂಗ್ರಹಿಸುವ ಉದ್ದೇಶ ಪಾರದರ್ಶಕತೆಯನ್ನು ಉತ್ತೇಜಿಸುವುದೇ ಆಗಿದ್ದರೆ, ಚುನಾವಣಾ ಬಾಂಡ್‌ಗಳನ್ನು ಏಕೆ ಜಾರಿಗೆ ತಂದರು. ಈ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳು ಕೋಟ್ಯಂತರ ರೂಪಾಯಿ ಸಂಗ್ರಹಿಸಿವೆ. ಆದರೆ ಯಾರು ಯಾವ ಪಕ್ಷಕ್ಕೆ ಎಷ್ಟು ಕೋಟಿ ಕೊಟ್ಟರು ಎಂಬುದು ಮಾತ್ರ ಎಲ್ಲಿಯೂ ಬಹಿರಂಗಗೊಳ್ಳುವುದಿಲ್ಲ.

ಮೂರನೆಯದಾಗಿ ನಮೋ ಆ್ಯಪ್ ಇಂಥ ದೇಣಿಗೆಗಳನ್ನು ಈ ಹಿಂದೆ ಏಕೆ ಸ್ವೀಕರಿಸುತ್ತಿರಲಿಲ್ಲ? 2019ರ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಮೊದಲು ಇಂಥ ಕಾರ್ಯಕ್ರಮ ಜಾರಿಗೆ ಬರಲು ಕಾರಣವೇನು?

ನಾಲ್ಕನೆಯದಾಗಿ, ಕೇವಲ ಐದು ರೂಪಾಯಿಯಷ್ಟು ಕನಿಷ್ಠ ಮೊತ್ತದ ದೇಣಿಗೆ ಸ್ವೀಕರಿಸುವ ಮೂಲಕ ಬಿಜೆಪಿ ತನ್ನನ್ನು ತಾನು ಬಡವರ ಪಕ್ಷ ಎಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿದೆ. ಶ್ರೀಮಂತರ ಪರವಾಗಿರುವವರ ಪಕ್ಷ ಎನ್ನುವ ಹಣೆಪಟ್ಟಿ ಕಳಚಿಕೊಳ್ಳಲು ಐದು ರೂಪಾಯಿ ದೇಣಿಗೆ ನೆರವಾಗಬಹುದು ಎಂಬುದು ಪಕ್ಷದ ನಿರೀಕ್ಷೆ.

ಇಂಥ ಸಣ್ಣಸಣ್ಣ ದೇಣಿಗೆಗಳಿಂದ ಹಣ ಸಂಗ್ರಹಿಸಬೇಕು ಎನ್ನುವುದು ಬಿಜೆಪಿಯ ಉದ್ದೇಶ ಅಲ್ಲವೇ ಅಲ್ಲ. ತನ್ನ ಇಮೇಜ್ ಸುಧಾರಿಸಿಕೊಳ್ಳಲೂ ಬಿಜೆಪಿ ಈ ಯತ್ನ ನಡೆಸುತ್ತಿಲ್ಲ. ದೇಣಿಗೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಆಡುತ್ತಿರುವ ಆಟ ಬೇರೆಯೇ ಆಗಿದೆ. ಅದೇನು ಗೊತ್ತೆ?

ನಂಬಿಕೆ ಮತ್ತು ವಿಶ್ವಾಸ

ಚುನಾವಣೆಗಳಲ್ಲಿ ನಡಾವಳಿ ಮನಃಶಾಸ್ತ್ರದ ನಿಯಮಗಳನ್ನು ಹೇಗೆಲ್ಲಾ ಜಾರಿಗೆ ತರಬಹುದು ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ. ಮೋದಿ 2014ರ ಚುನಾವಣೆಯಲ್ಲಿ ಇದನ್ನು ಪ್ರಯೋಗಿಸಿದ್ದರು. ಪಾಶ್ಚಿಮಾತ್ಯ ದೇಶಗಳಲ್ಲಿ ರಾಜಕೀಯ ಪಕ್ಷಗಳ ಇಂಥ ನಡೆ ತೀರಾ ಸಾಮಾನ್ಯ ಎನಿಸಿದೆ.

ನೀವು ಐದು ರೂಪಾಯಿ ದೇಣಿಗೆ ನೀಡುವ ಮೂಲಕ ಕೇವಲ ಐದು ರೂಪಾಯಿಯಷ್ಟನ್ನೇ ಕೊಡುವುದಿಲ್ಲ. ಅದಕ್ಕೆ ಮೀರಿದ ಎಷ್ಟೋ ಮೌಲ್ಯವನ್ನು ನೀಡುತ್ತೀರಿ. ಒಂದು ಪಕ್ಷ ಅಥವಾ ವ್ಯಕ್ತಿಯ ಮೇಲೆ ನೀವು ಇರಿಸಿರುವ ನಂಬಿಕೆ ಮತ್ತು ವಿಶ್ವಾಸವನ್ನು ಪುನಃ ಖಾತ್ರಿಪಡಿಸಿಕೊಳ್ಳುತ್ತೀರಿ. ನಿಮ್ಮ ಭಾವನಾತ್ಮಕ ಅಥವಾ ಬೌದ್ಧಿಕ ಬೆಂಬಲವು ಈಗ ನಿಜ ನಿಜವಾಗಿಯೂ ಸಾಕಾರಗೊಂಡಿದೆ ಎನ್ನುವ ಭಾವ ನಿಮ್ಮಲ್ಲಿ ಮೂಡುತ್ತದೆ.

ಇದು ದೇಗುಲ ಅಥವಾ ಸೂಫಿ ದರ್ಗಾಗಳಲ್ಲಿ ಹುಂಡಿಗೆ ಹಣ ಹಾಕಿದಂತೆ. ಹುಂಡಿಗೆ ಹಣ ಹಾಕುವ ಮೂಲಕ ನೀವು ಕೇವಲ ದುಡ್ಡನ್ನಷ್ಟೇ ಕೊಡುವುದಿಲ್ಲ. ಒಂದು ಅಲೌಕಿಕ ಅಧ್ಯಾತ್ಮಿಕ ಶಕ್ತಿಗೆ ಶರಣಾದ ಭಾವ ಅನುಭವಿಸುತ್ತೀರಿ. ಗೌರವ ಮತ್ತು ಮರ್ಯಾದೆ ಕೊಟ್ಟ ಭಾವ ನಿಮ್ಮನ್ನು ತುಂಬಿಕೊಳ್ಳುತ್ತದೆ. ಇದಕ್ಕೆ ಪ್ರತಿಫಲವಾಗಿ ನೀವು ಮತ್ತೇನನ್ನೋ ಅಪೇಕ್ಷಿಸಬಹುದು.

ಧಾರ್ಮಿಕ ಸ್ಥಳಗಳಲ್ಲಿ ಹಣವನ್ನು ಹೇಗೆ ನೀಡಬೇಕು ಎನ್ನುವುದನ್ನು ತುಂಬಾ ವ್ಯವಸ್ಥಿತವಾಗಿ ರೂಢಿ ಮಾಡಿಸಿರಲಾಗುತ್ತದೆ. ಹಣ ಕೊಡುವುದನ್ನು ಪರಂಪರೆಯ ಭಾಗ ಎಂದೇ ಬಿಂಬಿಸಲಾಗುತ್ತದೆ. ಇಂಥ ರೂಢಿಗಳು ನಿಮ್ಮ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ. ಇದೇ ರೀತಿ ನಮೋ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವುದು ಮತ್ತು ದೇಣಿಗೆ ನೀಡುವ ಮೂಲಕ ಬಿಜೆಪಿ ಮತ್ತು ನರೇಂದ್ರ ಮೋದಿ ಅವರೆಡೆಗಿನ ನಿಮ್ಮ ನಂಬಿಕೆ ಮತ್ತು ವಿಶ್ವಾಸವನ್ನು ನೀವು ಇನ್ನಷ್ಟು ಗಟ್ಟಿಮಾಡಿಕೊಳ್ಳುತ್ತೀರಿ. ಇದನ್ನೆಲ್ಲಾ ಯೋಚಿಸಿಯೇ ದೇಣಿಗೆ ಪಡೆಯುವ ಲಿಂಕ್ ಮತ್ತು ವಿಧಾನವನ್ನು ನಮೋ ಆ್ಯಪ್‌ನಲ್ಲಿ ನೀಡಲಾಗಿದೆ. ಬಿಜೆಪಿ ವೆಬ್‌ಸೈಟ್‌ ಮೂಲಕ ದೇಣಿಗೆಯನ್ನು ಯಾರೂ ಕೇಳುತ್ತಿಲ್ಲ. ಹೀಗಾಗಿಯೇ ಇದು ನಮೋ ಪ್ರಚಾರಾಂದೋಲನ. ಬಿಜೆಪಿಗೆ ಇಲ್ಲಿ ಎರಡನೇ ಆದ್ಯತೆ.

ನಿಮ್ಮ ಬಗ್ಗೆಯೇ ನಿಮಗೆ ಖುಷಿ

ಒಮ್ಮೆ ನೀವು ದೇಣಿಗೆ ನೀಡಿದ ನಂತರ ನಿಮ್ಮ ಬಗ್ಗೆ ನಿಮಗೆ ಖುಷಿ ಎನಿಸಿದಂತೆ ಆಗುತ್ತದೆ. ಇದು ನೀವು ಯಾವ ಉದ್ದೇಶಕ್ಕಾಗಿ ದೇಣಿಗೆ ಕೊಟ್ಟಿದ್ದೀರೋ ಆ ಉದ್ದೇಶದ ಬಗೆಗಿನ ನಂಬಿಕೆಯನ್ನು ಪುನಃಸ್ಥಾಪಿಸುತ್ತದೆ. ದೇಣಿಗೆ ಕೇಳುವವರು ನಿಮ್ಮ ಮಿದುಳಿನ ಈ ವಿದ್ಯಮಾನವನ್ನು ಅರ್ಥಮಾಡಿಕೊಂಡಿರುತ್ತಾರೆ. ಯಾವುದೋ ಒಂದು ಪ್ರಬಲ ಕಾರಣಕ್ಕಾಗಿ ನೀವು ಮಹತ್ತರ ಕೆಲಸ ಮಾಡಿದ್ದೀರಿ ಎನ್ನುವ ಖುಷಿ ನಿಮ್ಮ ಮನಸ್ಸನ್ನು ಆವರಿಸುವಂತೆ ಮಾಡುವುದು ಹೀಗೆ ದೇಣಿಗೆ ಸಂಗ್ರಹಿಸುವವರ ಉದ್ದೇಶವಾಗಿರುತ್ತದೆ.

ನಮೋ ಆ್ಯಪ್ ಮೂಲಕ ದೇಣಿಗೆ ಕೊಡುವವರು ಈಗಾಗಲೇ ಬಿಜೆಪಿಯ, ನರೇಂದ್ರ ಮೋದಿ ಅವರ ಬೆಂಬಲಿಗರೇ ಆಗಿರುತ್ತಾರೆ. ಹೀಗೆ ದೇಣಿಗೆ ಸಂಗ್ರಹಿಸುವ ಮೂಲಕ ನಿಮ್ಮ ಪ್ರೇರಣೆಯ ಮಟ್ಟವನ್ನು ಹೆಚ್ಚಿಸುವುದು ಆ್ಯಪ್ ರೂಪಿಸಿದವರ ಉದ್ದೇಶವಾಗಿರುತ್ತದೆಯೇ ವಿನಃ, ಹಣ ಸಂಗ್ರಹಿಸುವುದಷ್ಟೇ ಅಲ್ಲ. ಚುನಾವಣೆ ವರ್ಷದಲ್ಲಿ ನಾಯಕನ ಬೆಂಬಲಿಗರ ಪ್ರೇರಣೆಯ ಮಟ್ಟವನ್ನು ಕಾಪಾಡಿಕೊಳ್ಳುವುದು ಪಕ್ಷಕ್ಕೆ ಬಹುಮುಖ್ಯವಾಗಿರುತ್ತದೆ. 2014ಕ್ಕೆ ಹೋಲಿಸಿದರೆ, ಈಗ ಮೋದಿ ಬೆಂಬಲಿಗರ ಉತ್ಸಾಹ ಸಾಕಷ್ಟು ಕುಸಿದಿರುವುದನ್ನು ಗಮನಿಸಬಹುದು.

ಒಳ್ಳೇ ಸಮಯ

ನಾವು ಮಾಡಿದ ತಪ್ಪನ್ನು ಕೆಲ ಸಮಯದವರೆಗೂ ಒಪ್ಪಿಕೊಳ್ಳದೇ ಮುಂದೂಡಲು ಎಲ್ಲರೂ ಬಯಸುತ್ತೇವೆ. ಇದು ಮನುಷ್ಯನ ಸಹಜ ಸ್ವಭಾವವೇ ಆಗಿದೆ. ಯಾವುದಾದರೂ ಒಂದು ವಸ್ತುವನ್ನು ಖರೀದಿಸಿದ ನಂತರ ಅದು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದಾದರೂ ಅದನ್ನು ಒಪ್ಪಿಕೊಳ್ಳಲು ಕೆಲ ಸಮಯ ತೆಗೆದುಕೊಳ್ಳುತ್ತೇವೆ. ನೀವು ಒಪ್ಪಿಕೊಳ್ಳುವ ಮೊದಲು ಸಾಕಷ್ಟು ಸಮಯ ಕಳೆದುಹೋಗಿರುತ್ತದೆ.

ಉದಾಹರಣೆಗೆ ಹೊಸ ಮೊಬೈಲ್ ಖರೀದಿಸಿದವರ ವರ್ತನೆ ಗಮನಿಸಿ. ನನ್ನ ಮೊಬೈಲ್‌ನಲ್ಲಿ ಅತ್ಯುತ್ತಮ ಕ್ಯಾಮೆರಾ ಇದೆ, ಫ್ಲ್ಯಾಷ್ ಇದೆ ಎಂದೆಲ್ಲಾ ಜನರು ಹೊಗಳುತ್ತಿರುತ್ತಾರೆ. ಪ್ರತಿಸ್ಪರ್ಧಿ ಕಂಪನಿ ಬಿಡುಗಡೆ ಮಾಡಿರುವ ಮೊಬೈಲ್ ಇದಕ್ಕಿಂತ ಉತ್ತಮವಾದುದು ಎಂದು ಒಪ್ಪಿಕೊಳ್ಳಲು ಹಿಂಜರಿಯುತ್ತಾರೆ. ಒಮ್ಮೆ ಒಂದು ಖರೀದಿ ಪ್ರಕ್ರಿಯೆ ಮುಗಿದ ನಂತರ, ರಿಟೇಲ್ ಥೆರೆಪಿಯು ಖುಷಿಯ ಹಾರ್ಮೋನ್‌ಗಳನ್ನು ಸ್ರವಿಸಿದ ನಂತರ ನಮ್ಮ ನಿರ್ಧಾರವನ್ನು ಪುನರ್‌ ವಿಮರ್ಶೆಗೆ ಒಳಪಡಿಸಿಕೊಳ್ಳಲು ತಿಂಗಳುಗಟ್ಟಲೆ ಸಮಯ ಬೇಕಾಗುತ್ತದೆ.

ಇದೇ ಕಾರಣಕ್ಕೆ ನರೇಂದ್ರ ಮೋದಿ ಕಳೆದ ನಾಲ್ಕು ವರ್ಷಗಳಲ್ಲಿ ನಮೋ ಆ್ಯಪ್‌ಗೆ ಬಂದು ಐದು ರೂಪಾಯಿ ದೇಣಿಗೆ ಕೊಡಿ ಎಂದು ಕೇಳಲಿಲ್ಲ. ಈಗ ಚುನಾವಣೆ ಹೊಸಿಲಲ್ಲಿ ಇರುವಾಗ ಅವರಿಗೆ ದೇಣಿಗೆ ಸಂಗ್ರಹದ ಔಚಿತ್ಯ ಅರ್ಥವಾಗಿದೆ. ಪ್ರಚಾರ ಕಾವೇರಿದ ನಂತರ ನಿಮಗೆ ದೇಣಿಗೆ ನೀಡಿದ ಖುಷಿಯೂ ದಕ್ಕಬೇಕು ಎನ್ನುವ ಲೆಕ್ಕಾಚಾರದಲ್ಲಿಯೇ ಅವರು ದೇಣಿಗೆ ಕೋರಿದ್ದಾರೆ. ಈ ಮೂಲಕ ನಿಮ್ಮ ಬೆಂಬಲವನ್ನು ಖಾತ್ರಿಪಡಿಸಿಕೊಳ್ಳುವ, ನಿಮ್ಮ ಪ್ರೇರಣೆಯ ಪ್ರಮಾಣವನ್ನು ಹೆಚ್ಚಿಸುವ, 2014ರ ಮಾದರಿಯಲ್ಲಿ ಸಮೂಹ ಬೆಂಬಲದ ವಾತಾವರಣ ರೂಪಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ.

2014ರಲ್ಲಿ ಮೋದಿ ಅವರು ಇಂಥದ್ದೇ ಕೆಲಸವನ್ನು ವಿಭಿನ್ನವಾಗಿ ನಿರ್ವಹಿಸಿದ್ದು ನಿಮಗೆ ನೆನಪಿರಬಹುದು. ಆಗ ಮೋದಿ ಅವರ ಕೆಲ ರ‍್ಯಾಲಿಗಳಲ್ಲಿ ಪಾಲ್ಗೊಂಡು ಭಾಷಣ ಕೇಳಲು ನೀವು ಐದು ರೂಪಾಯಿ ಪಾವತಿಸಬೇಕಿತ್ತು. ಇದು ಪ್ರಶಾಂತ್ ಕಿಶೋರ್ ನೇತೃತ್ವದ ಸಿಟಿಜನ್ಸ್ ಫಾರ್ ಅಕೌಂಟಬಲ್ ಗವರ್ನೆನ್ಸ್ ಸಂಸ್ಥೆಯ ಆವಿಷ್ಕಾರವಾಗಿತ್ತು.

ವಿರೋಧಿಗಳ ಮೇಲೆ ಪರಿಣಾಮ

ಮೋದಿ ಅವರ ಐದು ರೂಪಾಯಿ ದೇಣಿಗೆ ವಿಚಾರ ಬೆಂಬಲಿಗರಲ್ಲದವರ ಮೇಲೆಯೂ ಪರಿಣಾಮ ಬೀರಲಿದೆ. ಸುಲಭವಾಗಿ ಬೆಂಬಲಿಸಬಹುದಿದ್ದ ಮಹಾನ್ ನಾಯಕನನ್ನು ಬೆಂಬಲಿಸಲಿಲ್ಲ ಎನ್ನುವ ಭಾವ ಇಂಥವರಲ್ಲಿ ಸ್ಫುರಿಸುತ್ತದೆ. ಅಕ್ಕಪಕ್ಕದ ಜನರು ದೇಣಿಗೆ ನೀಡುತ್ತಿದ್ದಾಗ ಸುಮ್ಮನಿರುವುದು ನಿಮ್ಮ ಮನಸ್ಸಿಗೆ ತಪ್ಪು ಎನಿಸುವಂತೆ ಮಾಡುತ್ತದೆ. ಇತರ ರಾಜಕೀಯ ಪಕ್ಷಗಳ ನಾಯಕರ ಭಾಷಣಗಳಿಗೆ ಜನರನ್ನು ದುಡ್ಡು ಕೊಟ್ಟು ಸೇರಿಸುವಾಗ, ನೀವು ಮಾತ್ರ ಒಬ್ಬ ರಾಜಕೀಯ ನಾಯಕನ ಭಾಷಣ ಕೇಳಲು ಹಣಕೊಟ್ಟು ಹೋಗುತ್ತೀರಿ ಎನ್ನುವುದು ಹೆಮ್ಮೆಗೆ ಕಾರಣವಾಗುತ್ತದೆ. ಇದು ಸಾಧ್ಯವಾಗಲು ನಮೋ ಆ್ಯಪ್ ಸಣ್ಣ ದೇಣಿಗೆಗಳ ಬಹುದೊಡ್ಡ ಅಂಕಿಸಂಖ್ಯೆಗಳನ್ನು ಬಹಿರಂಗಪಡಿಸುವುದು ಅನಿವಾರ್ಯವಾಗುತ್ತದೆ.

ದತ್ತಾಂಶ ಸಂಚಯ

ನೀವು ಕೊಡುವ ಐದು ರೂಪಾಯಿಗಳಿಗಿಂತ, ಆ ಐದು ರೂಪಾಯಿ ಕೊಡುವಾಗ ನೀಡುವ ಮಾಹಿತಿ ನರೇಂದ್ರ ಮೋದಿ ಅವರಿಗೆ ಅಮೂಲ್ಯ. ನಮೋ ಆ್ಯಪ್‌ಗೆ ದೇಣಿಗೆ ಕೊಡುವಷ್ಟು ಕಟ್ಟರ್ಬೆಂಬಲಿಗರ ಒಂದು ದತ್ತಸಂಚಯ (ಡೇಟಾಬೇಸ್) ರೂಪಿಸಲು ಇದು ನೆರವಾಗುತ್ತದೆ. ಚುನಾವಣಾ ಪ್ರಚಾರಗಳಲ್ಲಿ ಇಂಥ ಬೆಂಬಲಿಗರನ್ನು ಗುರಿಯಾಗಿಸಿ ಪ್ರಚಾರವನ್ನು ರೂಪಿಸಬೇಕು. ಇತರರನ್ನು ನೀವು ಭೇಟಿಯಾಗಿ ಮೋದಿಗೆ ಮತ ಚಲಾಯಿಸಿ ಎಂದು ಇಂಥವರಿಂದ ಹೇಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT