ಭಾನುವಾರ, ಜನವರಿ 19, 2020
27 °C
ವಿಶ್ವಭಾರತಿಗೆ ಆರತಿ ಎತ್ತಿದ ಜ್ಞಾನಭಾರತಿ ನಮ್ಮ ದಾರಿ ಎಂದ ಹಿರಿಯರನ್ನು ನೆನಪಿಸಿಕೊಳ್ಳೋಣ

ಶಾಂತಿಪಥದ ವಿಳಾಸ ನೀಡಿ

ಸಬಿತಾ ಬನ್ನಾಡಿ Updated:

ಅಕ್ಷರ ಗಾತ್ರ : | |

prajavani

ಇದೇನಾಗುತ್ತಿದೆ? ಕ್ಯಾಂಪಸ್ ಗಲಾಟೆಗಳಲ್ಲಿ ಹುಡುಗರು ಲಾಂಗು, ಮಚ್ಚುಗಳನ್ನು ಹಿಡಿದು ಹೊಡೆದಾಡುವುದನ್ನು ನಮ್ಮ ಜನಪ್ರಿಯ ಸಿನಿಮಾಗಳಲ್ಲಿ ವೈಭವೀಕರಣ ಮಾಡಿ ತೋರಿಸಿ ತೋರಿಸಿ, ಅದನ್ನೊಂದು ಸಾಧಿಸಬೇಕಾದ ಆದರ್ಶವನ್ನಾಗಿಸಿ ಮನೆಮನೆಗಳ ಮನಸ್ಸುಗಳಲ್ಲಿ ಬಿತ್ತಿದ್ದು ಸಾಮಾನ್ಯ ಸಂಗತಿಯಾಗಿ ದಶಕಗಳೇ ಸಂದುಹೋಗಿವೆ. ಈಗ ನಾವೇನು ಕಡಿಮೆ ಎಂದು ಹೆಣ್ಣುಮಕ್ಕಳೂ ಮುಸುಕು ಧರಿಸಿ ರಾಡು, ಲಾಟಿ ಹಿಡಿದು ಜೆಎನ್‌ಯು ಕ್ಯಾಂಪಸ್‍ಗೆ ನುಗ್ಗಿ ಅಮಾನುಷವಾಗಿ ಹಲ್ಲೆ ಮಾಡಿ ಠೇಂಕರಿಸಿ
ದ್ದನ್ನು ಯಾವ ಕಣ್ಣಿನಿಂದ ನೋಡಬೇಕೋ ತಿಳಿಯುತ್ತಿಲ್ಲ. ಹಾಗೆ ನುಗ್ಗಿದವರು ಯಾರೇ ಆಗಿರಲಿ, ಅದು ಯಾರೂ ಮಾಡಬೇಕಾದ ಕೃತ್ಯವಲ್ಲವೇ ಅಲ್ಲ. ಎಂತಹ ಬೀಜಗಳನ್ನು ನಾವು ಬಿತ್ತುತ್ತಿದ್ದೇವೆ? ಅದರ ಪರಿಣಾಮವಾದರೂ ಎಲ್ಲಿಗೆ ತಲುಪೀತು? ಯಾಕೋ ನಮ್ಮ ದೇಶ ‘ಹಿರಿಯರಿಲ್ಲದ ನೆರವಿ’ಯಂತೆ ಕಾಣತೊಡಗಿದೆ.

ಜನ್ನ ಕವಿ ‘ಪಾಪ ಕಳಾ ಪಂಡಿತೆ’ ಎಂಬ ಪದವೊಂದನ್ನು ಬಳಸುತ್ತಾನೆ. ಅಬ್ಬಾ! ಎಂತಹ ಪದ. ಇಂದು ಈ ಪಾಂಡಿತ್ಯಕ್ಕೆ ಬಹಳ ದೊಡ್ಡ ಬೆಲೆ ಬಂದಂತಿದೆ. ಎಲ್ಲ ಕಾಲದಲ್ಲೂ ದುಷ್ಟರು ಇದ್ದೇ ಇರುತ್ತಾರೆ. ಅವರು ನೇರ ಕಣ್ಣನೋಟಕ್ಕೆ ಕಾಣಿಸುತ್ತಿದ್ದರು. ಆದರೆ ದುಷ್ಟರು ಶಿಷ್ಟರ ಮುಖವಾಡ ಧರಿಸಿ, ಸಾಮಾಜಿಕ ಸಮ್ಮತಿ ಗಳಿಸಿ ಸಾಮಾಜಿಕರನ್ನು ಆಳತೊಡಗುತ್ತಾರಲ್ಲಾ, ಅದು ಅತ್ಯಂತ ಕಷ್ಟದ ಕಾಲ. ಅದು ಯಾಕೆ ಕಷ್ಟದ ಕಾಲ ಎಂದರೆ, ಜನರಿಗೆ ಅದರ ಹಿಂದಿನ ಸತ್ಯವನ್ನು ವಿವರಿಸಿ ಹೇಳುವುದೇ ಸಾಧ್ಯವಾಗುವುದಿಲ್ಲ. ಅವರು ನಿಜ ಹೇಳುವವರನ್ನು ನಂಬುವುದಿಲ್ಲ. ಯಾಕೆಂದರೆ, ಸತ್ಯವು ಅನಾಕರ್ಷಕವಾಗಿರುತ್ತದೆ. ಯಾತನಾದಾಯಕ
ವಾಗಿರುತ್ತದೆ. ವಾಸ್ತವವನ್ನು ಅಂಗೀಕರಿಸುವುದಕ್ಕೆ ಮನಸ್ಸು ಒಪ್ಪುವುದಿಲ್ಲ. ಅದೇ ಸುಳ್ಳು ಎಂಬುದು ಬಣ್ಣ
ಗಳಲ್ಲಿ ಅದ್ದಿಕೊಂಡು ಸೆಳೆಯುತ್ತಿರುತ್ತದೆ. ನಾವೇನೋ ಲೋಕಕ್ಕಾಗಿ (ದೇಶಕ್ಕಾಗಿ, ಧರ್ಮಕ್ಕಾಗಿ, ತಮ್ಮ ಜಾತಿಗಾಗಿ) ಮಾಡುತ್ತಿದ್ದೇವೆ ಎಂಬ ಸಾರ್ಥಕತೆಯನ್ನು ತುಂಬುತ್ತಿರುತ್ತದೆ. ನಾವು ಯಾರೋ ಅಧಿಕಾರದ ಸಿಂಹಾಸನದಲ್ಲಿ ಕುಳಿತುಕೊಳ್ಳಲು ನಿರ್ಮಿಸುತ್ತಿರುವ ಮೆಟ್ಟಿಲುಗಳಡಿಯ ಕಲ್ಲುಗಳಾಗಿದ್ದೇವೆ ಎಂಬುದು ಅವರಿಗೆ ಅರಿವಿಗೇ ಬರದೆ, ನಾವೇ ದೇಶ ಕಟ್ಟುತ್ತಿರುವವರು ಎಂಬ ಭ್ರಮೆಯಲ್ಲಿ ಅವರನ್ನು ತೇಲಿಸುತ್ತದೆ.

ಕೃಷಿಋಷಿ ನಾರಾಯಣ ರೆಡ್ಡಿ ಒಂದು ಮಾತು ಹೇಳುತ್ತಾರೆ. ಕೀಟಗಳಲ್ಲಿ ಎರಡು ರೀತಿ ಇರುತ್ತದೆ. ಒಂದು ಶತ್ರುಕೀಟ, ಇನ್ನೊಂದು ಮಿತ್ರ ಕೀಟ. ಬೆಳೆ ತಿನ್ನಲು ಮೊದಲು ಬರುವ ಕೀಟಗಳನ್ನು ಕೊಲ್ಲದೆ ಸ್ವಲ್ಪ ದಿನ ಹಾಗೇ ಬಿಡಬೇಕು. ಅಷ್ಟೊತ್ತಿಗೆ ಆ ಕೀಟಗಳನ್ನು ತಿನ್ನುವ ಕೀಟಗಳು ಬರುತ್ತವೆ. ಸಮತೋಲನ ಸಾಧಿಸುತ್ತದೆ. ಆದರೆ ನಾವು ಕೀಟ ಬಂದ ತಕ್ಷಣವೇ ಕೀಟನಾಶಕವನ್ನು ಸುರಿಯತೊಡಗುತ್ತೇವೆ. ದುಷ್ಟ ಕೀಟಗಳಿಗೆ ಬಲಿಷ್ಠವಾದ ಕವಚ ಇರುತ್ತದೆ. ಹೀಗಾಗಿ ಅವು ಕೀಟನಾಶಕಕ್ಕೆ ಸಾಯುವುದಿಲ್ಲ. ಬದಲಿಗೆ ಇವುಗಳನ್ನು ತಿನ್ನಲು ಬರುವ ಮಿತ್ರ ಕೀಟಗಳಿಗೆ ಕವಚ ಇರುವುದಿಲ್ಲ. ಅವು ಸಾಯುತ್ತವೆ. ಇತ್ತ ಹಣವೂ ಹಾಳು. ಅತ್ತ ಪರಿಸರವೂ ಹಾಳು. ಆದರೆ ದುಷ್ಟ ಶತ್ರು ಕೀಟಗಳು ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಳ್ಳುತ್ತಲೇ ಇರುತ್ತವೆ. ಇಂದು ಸತ್ಯ, ಅಹಿಂಸೆ, ಸಹನೆ, ಸೌಹಾರ್ದದ ಮಾತುಗಳನ್ನು ಆಡುತ್ತಿರುವವರು ಕೀಟಗಳಂತೆ ಕಾಣುತ್ತಿರಬಹುದು. ಆದರೆ ಇವರು ಮಿತ್ರಕೀಟಗಳು ಎಂಬ ತಿಳಿವಳಿಕೆಯನ್ನು ಮೂಡಿಸುವುದೇ ಕಠಿಣವೆನಿಸಿದೆ. ಜನ ಹೇಗಾಗಿ ಹೋಗಿದ್ದಾರೆಂದರೆ, ಬೀದಿ ಬದಿಯ ನಾಯಿಯ ದುರವಸ್ಥೆಗೆ ಮರುಗಿ ಊಟ ಹಾಕಬಲ್ಲ ಸಹೃದಯರೆನಿಸಿ
ಕೊಂಡವರೂ, ಅನ್ಯ ಧರ್ಮದವರ ಕುರಿತು ವಿಷಕಾರುತ್ತಿರುತ್ತಾರೆ. ಇದಂತೂ ಸಾಧಾರಣಕ್ಕೆ ಅರ್ಥವಾಗುವ ವಿದ್ಯಮಾನವಲ್ಲ.

ನನ್ನ ಗೆಳತಿಯೊಬ್ಬಳು ಮೂವತ್ತು ವರ್ಷದ ಹಿಂದಿನ ಸಂಗತಿಯೊಂದನ್ನು ಹೇಳಿದ್ದಳು. ಆಗ ಈಗಿನಂತೆ ಎಡ- ಬಲ ಚಿಂತನೆಯವರ ನಡುವೆ ಕಂದಕದಂತಹ ಬಿರುಕಿರಲಿಲ್ಲ. ಆದರೆ, ಒಬ್ಬರೆಡೆಗೆ ಇನ್ನೊಬ್ಬರಿಗೆ ಅನುಮಾನವಂತೂ ಇತ್ತು. ಅವಳು ಎಡಪಂಥೀಯಳು. ಎಡಪಂಥೀಯನನ್ನೇ ಪ್ರೀತಿಸಿದಳು. ಅವನಿಗೆ ಭದ್ರವಾದ ಉದ್ಯೋಗವೂ ಇದ್ದಿರಲಿಲ್ಲ. ಆದರೆ ಅವರು ಮದುವೆಯಾಗುವುದೆಂದು ತೀರ್ಮಾನಿಸಿದರು. ಅವನ ತಮ್ಮ, ತನ್ನದಲ್ಲದ ಜಾತಿಯವಳಾದರೂ ತನ್ನ ಅತ್ತಿಗೆಯಾಗುವಾಕೆಯನ್ನು ಭೇಟಿಯಾದ. ಮೊದಲಿಗೇ, ಅತ್ತಿಗೆ ಎಂದೇ ಕರೆದು ಮನಗೆದ್ದ. ತಂದೆಯಿಲ್ಲದ, ಊರಲ್ಲಿ ಚೂರುಪಾರು ಜಮೀನು ನೋಡಿಕೊಳ್ಳುವ ಆತ ಅಣ್ಣನ ಓದಿಗೆ ಬೆನ್ನೆಲುಬಾಗಿ ನಿಂತಿದ್ದ. ಈಗ ಅಣ್ಣನ ಮದುವೆ ಮಾಡಿಸಲು ಬೇಕಾದ ಖರ್ಚನ್ನು ತಾನೇ ಭರಿಸಿದ. ಮದುವೆ ಆಯ್ತು. ಹುಲ್ಲುಮಾಡಿನ ಆ ಪುಟ್ಟ ಮನೆಗೆ, ಸಾಕಷ್ಟು ಅನುಕೂಲದಲ್ಲೇ ಬೆಳೆದಿದ್ದ ಆ ಹುಡುಗಿ ಸೊಸೆಯಾಗಿ ಕಾಲಿಟ್ಟಾಗ, ಆ ಮನೆಯ ಗೋಡೆಯ ಮೇಲೆ ಸಾಲು ಸಾಲು ಜೋಡಿಸಿದ್ದ ಫೋಟೊಗಳನ್ನು ನೋಡಿ ಗಾಬರಿಗೊಂಡಳು. ಭಗತ್ ಸಿಂಗ್ ಜೊತೆಗೇ ಹೆಡಗೇವಾರ್, ಗೋಲ್ವಳ್ಕರ್ ಮೊದಲಾದವರ ಚಿತ್ರಗಳು ಅಲ್ಲಿದ್ದವು. ಅಣ್ಣನ ರೂಮಿನಲ್ಲಿ ಕಾರ್ಲ್‌ಮಾರ್ಕ್ಸ್ ಭಾವಚಿತ್ರ ಇದ್ದರೆ, ತಮ್ಮನ ರೂಮಿನಲ್ಲಿ ಇವರುಗಳು. ಇದು ಹೇಗೆ ಸಾಧ್ಯ ಅಂತ ಅವಳಿಗೆ ಅನ್ನಿಸಿತು. ಆ ತಮ್ಮ, ತನ್ನ ಸಿದ್ಧಾಂತದಿಂದ ಭ್ರಷ್ಟಾಚಾರರಹಿತ ಭಾರತ
ನಿರ್ಮಾಣವಾಗುತ್ತೆ ಎಂದು ಮುಗ್ಧವಾಗಿ ನಂಬಿದ್ದ.

ಆ ತಮ್ಮನಿಗೆ ಮುಂದೆ ಅವನ ತೋಟದ ಗಡಿತಂಟೆಯ ನೆಪದಲ್ಲಿ ಜೀವನಾಧಾರಕ್ಕೇ ಧಕ್ಕೆ ತಂದವರಲ್ಲಿ ಹಿಂದೂಗಳೂ ಮುಸ್ಲಿಮರೂ ಇದ್ದರು. ಅವನಿಗೆ ಜೊತೆ ನೀಡಿದ ಅತ್ಯಂತ ಆತ್ಮೀಯ ಸ್ನೇಹಿತರಲ್ಲಿ ಹಿಂದೂಗಳೊಂದಿಗೆ ಮುಸ್ಲಿಮರೂ ಇದ್ದರು. ಅವನ ಮಗಳು ಅವರುಗಳ ಮನೆಯಲ್ಲಿ ಬಿರಿಯಾನಿ ತಿಂದು
ಕೊಂಡೇ ಬೆಳೆದಳು! ಇದು ನಮ್ಮ ಹಳ್ಳಿಗಳ ಭಾರತ. ಆದರೆ ಇಂದು, ತಾನು ನಂಬದ ಸಿದ್ಧಾಂತದ ಸಹಪಾಠಿಗಳ ತಲೆಯೊಡೆಯಲೂ ತಯಾರಾಗಿದ್ದಾರೆ ಭವಿಷ್ಯದ ಕುಡಿಗಳು. ಸಿರಿಯಾದ ಉಗ್ರರು, ಅಫ್ಗಾನ್‌ನ ತಾಲಿಬಾನೀಯರು, ಸಾಲು ಸಾಲು ಪ್ರಗತಿಪರ ಪತ್ರಕರ್ತರನ್ನು ಕೊಂದ ಕೆಲವು ವರ್ಷಗಳ ಹಿಂದಿನ ಬಾಂಗ್ಲಾ ಮೂಲಭೂತವಾದಿಗಳು, ಇಂತಹ ಹಲವರಿಗಿಂತ ಇವರು ಭಿನ್ನರೇ? ಇದನ್ನು ಸಮರ್ಥಿಸುವುದಕ್ಕಾಗಿ ಇನ್ಯಾವುದೋ ಉದಾಹರಣೆಗಳನ್ನು ದಯವಿಟ್ಟು ಕೊಡದಿರಿ. ಯಾಕೆಂದರೆ, ಅವೆಲ್ಲವೂ ಖಂಡನೀಯವೇ ಆಗಿರುತ್ತವೆ. ಕೊಡುವುದೇ ಆದರೆ, ಈ ಒಂದು ತಿಂಗಳಲ್ಲಿ ಲಕ್ಷ ಲಕ್ಷ ಜನ ಸೇರಿ ಪ್ರತಿಭಟನೆ ಮಾಡಿದಾಗಲೂ ಯಾವುದೇ ಗಲಾಟೆ, ಗದ್ದಲ, ಸಾವು ನೋವು ಆಗದೇ ಇರುವ ಘಟನೆಗಳನ್ನೇ ಉದಾಹರಿಸಿ. ಶಾಂತಿಯುತ ಪ್ರತಿಭಟನೆ ಎಲ್ಲರ ಹಕ್ಕು. ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಮಾತ್ರವಲ್ಲ, ಪರವೂ ಮೆರವಣಿಗೆಗಳು ಆಯೋಜನೆಗೊಂಡಿವೆಯಲ್ಲ. ಅಂದಮೇಲೆ ವಿರುದ್ಧದವರ ದಾರಿ ತಪ್ಪು, ಪರದವರದ್ದು ಮಾತ್ರ ಸರಿ ಎಂದು ಹೇಳಲು ಸಾಧ್ಯವೇ?

ಭಾರತದಲ್ಲಿ ಹತ್ತು–ಹನ್ನೆರಡನೇ ಶತಮಾನದ ಹೊತ್ತಿಗೆ ಭಕ್ತಿ ಚಳವಳಿಗಳು ವ್ಯಾಪಕವಾಗಿ ಬೆಳೆಯತೊಡಗಿ
ದವು. ಇವು, ಎಲ್ಲ ಅಧಿಕಾರ ರಾಜಕಾರಣದ ವಿರುದ್ಧವಾಗಿದ್ದವು. ಧಾರ್ಮಿಕ ಸಂಸ್ಥೆಗಳೇ ಬೃಹತ್ತಾಗಿ ಬೆಳೆದು, ಪ್ರಭುತ್ವದೊಂದಿಗೆ ಸೇರಿಕೊಂಡು ಶೋಷಣೆಯ ಕೇಂದ್ರಗಳಾದಾಗ, ಇವು ಆ ಸಂಸ್ಥೆಗಳಿಂದ ಸಿಡಿದು ಹೊರಬಂದವು. ಆಲಯವನ್ನು ಬಯಲಿಗೆ ತಂದವು. ಕನ್ನಡದ ಶರಣ ಚಳವಳಿ, ದೇಹದಲ್ಲೇ ದೇವಾಲಯ ಇದೆ ಎಂದು ಸಾರಿತು. ಪ್ರತಿ ವ್ಯಕ್ತಿಯೂ ಇದನ್ನು ಸಾಧಿಸಿಕೊಳ್ಳಬಹುದು. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ ಎನ್ನುತ್ತಾ ಸಾಮುದಾಯಿಕ ಸರಳ ಬದುಕನ್ನು ಪ್ರತಿಪಾದಿಸಿತು. ಇದು, ಅಧಿಕಾರವೇ ಅಂತಿಮ, ಯಜಮಾನಿಕೆಯೇ ದಿಗ್ವಿಜಯ ಎಂದು ಭಾವಿಸುವುದರ ವಿರುದ್ಧಧ್ರುವದಲ್ಲಿದೆ. ಕಾಲ ಮತ್ತೆ ಇನ್ನೊಂದು ಸುತ್ತು ಹಾಕಿದೆ. ಶರಣರ ಚಿಂತನೆ ನಾಲಿಗೆಯಲ್ಲಲ್ಲ, ಹೃದಯದಲ್ಲಿ ನೆಲೆಸಬೇಕಾಗಿದೆ ಮತ್ತು ಇಂತಹ ಚಿಂತನೆಗಳು ಮಾತ್ರ ಭಾರತದ ಭವಿಷ್ಯದ
ದಾರಿಗಳಾಗಬಲ್ಲವು.

ಲೇಖಕಿ: ಕನ್ನಡ ಪ್ರಾಧ್ಯಾಪಕಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತರೀಕೆರೆ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು