ಮಂಗಳವಾರ, ಜೂನ್ 28, 2022
28 °C
ಗೆದ್ದವರಿಗಷ್ಟೇ ಸಚಿವಗಿರಿ: ಆಡಳಿತ ಪಕ್ಷಕ್ಕೆ ನೆಮ್ಮದಿ

ರಾಜಕೀಯ ವಿಶ್ಲೇಷಣೆ | ಬಿಜೆಪಿಗೆ ವರ: ಅನರ್ಹ ಶಾಸಕರ ದಾರಿದೂರ

ವೈ. ಗ. ಜಗದೀಶ್‌ Updated:

ಅಕ್ಷರ ಗಾತ್ರ : | |

ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಕರ್ನಾಟಕವನ್ನು ಆಳುತ್ತಿರುವ ಬಿಜೆಪಿ ಹಾಗೂ ಸರ್ಕಾರದ ಸಾರಥ್ಯ ವಹಿಸಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ವರವಾಗಿ ಪರಿಣಮಿಸಿದೆ. ಆದರೆ, ಅನರ್ಹ ಶಾಸಕರ ಪಾಲಿಗೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಸಿಕ್ಕಿದ್ದು ಬಿಟ್ಟರೆ ಸಚಿವ ಸ್ಥಾನ ಗಿಟ್ಟಿಸುವ ‘ದಾರಿ’ಯನ್ನು ದೂರವಾಗಿಸಿದೆ.

ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಸರ್ಕಾರ ಕಟ್ಟಲು ನೆರವಾದ ಎಲ್ಲ ಅನರ್ಹರಿಗೆ ಸಚಿವ ಸ್ಥಾನವನ್ನು ತಕ್ಷಣಕ್ಕೆ ಕೊಡಬೇಕಾದ ಅನಿವಾರ್ಯದಿಂದ ಬಿಜೆಪಿ ನಾಯಕರು ಬಚಾವಾಗಿದ್ದಾರೆ. ಎಲ್ಲ ದಿಕ್ಕಿನಿಂದ ಅಳೆದುತೂಗಿ ಅವಲೋಕಿಸಿದರೆ ಈ ತೀರ್ಪಿನಿಂದಾಗಿ ನೆಮ್ಮದಿಯ ನಿಟ್ಟುಸಿರು ಬಿಡುವ ಸರದಿ ಕಮಲ ಪಕ್ಷದ ನೇತಾರರಿಗೆ ಸಿಕ್ಕಿದೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಸಚಿವ ಸ್ಥಾನ ಕೊಡಲಾಗುವುದು, ಮುಂದೆ ನಡೆಯಲಿರುವ ಉಪಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರಲು ‘ಸಕಲ’ ರೀತಿಯ ನೆರವು ನೀಡಲಾಗುವುದು ಎಂದು ಯಡಿಯೂರಪ್ಪ ಸೇರಿಕೊಂಡಂತೆ ಬಿಜೆಪಿ ವರಿಷ್ಠರು ಅನರ್ಹಗೊಂಡವರಿಗೆ ‘ವಾಗ್ದಾನ’ ಮಾಡಿದ್ದರು. ಆದರೆ, ಶಾಸಕರ ರಾಜೀನಾಮೆಯ ನಂತರದ ದಿನಗಳಲ್ಲಿ ಬಿಜೆಪಿ ನಾಯಕರು ಅಂದುಕೊಂಡಂತೆ ಎಲ್ಲವೂ ನಡೆಯಲಿಲ್ಲ.

ರಾಜೀನಾಮೆ ಕೊಟ್ಟವರಿಗೆ ಪಾಠ ಕಲಿಸಲು ಮುಂದಾದ ಕಾಂಗ್ರೆಸ್–ಜೆಡಿಎಸ್‌ ನಾಯಕರು ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಅವರೆಲ್ಲರ ವಿರುದ್ಧ ಕ್ರಮ ಜರುಗಿಸುವಂತೆ ಸಭಾಧ್ಯಕ್ಷರಿಗೆ ದೂರು ಕೊಟ್ಟರು. ಇದರ ಫಲವೆಂಬಂತೆ ಎಲ್ಲ 17 ಶಾಸಕರನ್ನು ಅನರ್ಹಗೊಳಿಸಿದ ಅಂದಿನ ಸಭಾಧ್ಯಕ್ಷ ಕೆ.ಆರ್. ರಮೇಶ್‌ಕುಮಾರ್‌, ಈ ವಿಧಾನಸಭೆಯ ಅವಧಿ ಮುಗಿಯುವ 2023ರವರಗೆ ಚುನಾವಣೆಗೆ ಸ್ಪರ್ಧಿಸದಂತೆ, ಸಚಿವ ಸ್ಥಾನ ಸೇರಿದಂತೆ ಯಾವುದೇ ಸಾಂವಿಧಾನಿಕ ಹುದ್ದೆ ಹೊಂದುವ ಅವಕಾಶ ಇಲ್ಲದಂತೆ ನಿರ್ಬಂಧ ವಿಧಿಸಿ ತೀರ್ಪು ಕೊಟ್ಟರು. 

ಸಭಾಧ್ಯಕ್ಷರು ರಾಜೀನಾಮೆ ಸ್ವೀಕರಿಸಿದ್ದರೆ ಸಚಿವರಾಗುವ ಹಾದಿ ಈ ಎಲ್ಲರಿಗೆ ಸುಲಭವಾಗುತ್ತಿತ್ತು. ಸಚಿವರಾಗಿಯೇ ಚುನಾವಣೆ ಎದುರಿಸುವ ಅಮೂಲ್ಯ ಅವಕಾಶವೂ ಸಿಗುತ್ತಿತ್ತು. ಸಭಾಧ್ಯಕ್ಷರ ತೀರ್ಪು ಅನರ್ಹಗೊಂಡ ಶಾಸಕರಿಗೆ ಆ ‘ಸೌಭಾಗ್ಯ’ವನ್ನೇ ತಪ್ಪಿಸಿಬಿಟ್ಟಿತು. ಸರ್ಕಾರ ರಚಿಸಲು ಪರೋಕ್ಷ ಬೆಂಬಲ ನೀಡಿದ ಎಲ್ಲರಿಗೆ ಸಚಿವ ಸ್ಥಾನ ಕೊಡಲೇಬೇಕಾದ ಇಕ್ಕಟ್ಟಿನಿಂದ ಬಿಜೆಪಿ ನಾಯಕರು ಪಾರಾದರು.

ಶಾಸಕರನ್ನು ಅನರ್ಹಗೊಳಿಸಿದ ಹಾಗೂ ಸಾಂವಿಧಾನಿಕ ಹುದ್ದೆ ಹೊಂದಲು ನಿರ್ಬಂಧ ವಿಧಿಸಿದಸಭಾಧ್ಯಕ್ಷರ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿರುವುದರಿಂದಲೂ ಬಿಜೆಪಿಗೆ ಲಾಭವಾಗಿದೆ. ಅನರ್ಹತೆಯನ್ನೇ ರದ್ದುಮಾಡಿದ್ದರೆ ಎಲ್ಲ 17 ಅನರ್ಹರಿಗೆ ಸಚಿವ
ಸ್ಥಾನ ಕೊಟ್ಟು, ಅವರನ್ನು ಚುನಾವಣೆ ಹುರಿಯಾಳಾಗಿಸಬೇಕಾದ ಸಂಕಷ್ಟ ಎದುರಾಗುತ್ತಿತ್ತು. ಈಗಿನ ಪರಿಸ್ಥಿತಿಯಲ್ಲಿ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಿ ಗೆದ್ದಮೇಲಷ್ಟೇ ಲಾಭದಾಯಕ ಹುದ್ದೆಯನ್ನು ಅನುಭವಿಸಬೇಕಾದ ಷರತ್ತನ್ನು ಸುಪ್ರೀಂ ಕೋರ್ಟ್‌ ವಿಧಿಸಿದೆ. 

ಬಿಜೆಪಿ ಬಹುಮತ ಗಳಿಸಬೇಕಾದರೆ ಉಪಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳ ಪೈಕಿ 8ರಲ್ಲಿ ಗೆಲ್ಲಲೇಬೇಕಿದೆ. ಆದ್ದರಿಂದ, ಸರ್ಕಾರದ ಹೆಜ್ಜೆಹೆಜ್ಜೆಗೆ ಅಡ್ಡಗಾಲು ಹಾಕುವ, ತಕರಾರಿನ ಸರದಾರರನ್ನು ಗೆಲ್ಲಿಸದೇ ತಮ್ಮ ಅಂಕೆಗೆ ತಕ್ಕಂತೆ ನಡೆಯಬಲ್ಲವರನ್ನು ಗೆಲ್ಲಿಸುವ ‘ತಂತ್ರ’ ಹೆಣೆಯಲು ಅವಕಾಶ ಒದಗಿಸಿದೆ. ಚುನಾವಣೆಯಲ್ಲಿ ಗೆದ್ದ ಮೇಲಷ್ಟೇ ಸಚಿವ ಸ್ಥಾನ ನೀಡಬೇಕಾಗಿರುವುದರಿಂದ ಕೆಲವರು ಗೆಲ್ಲದಂತೆ ನೋಡಿಕೊಳ್ಳುವ ಕಿರುದಾರಿಯೊಂದು ಸುಪ್ರೀಂ ಕೋರ್ಟ್ ತೀರ್ಪಿನಿಂದ ಸಿಕ್ಕಿದೆ. ಉಪಚುನಾವಣೆ ಬಳಿಕ ಸಂಪುಟ ವಿಸ್ತರಣೆ ಮಾಡುವಾಗ ಸಚಿವ ಸ್ಥಾನ ಸಿಗದೇ ಅತೃಪ್ತಿಯಿಂದ ಕುದಿಯುತ್ತಿರುವ ಬಿಜೆಪಿಯಲ್ಲಿನ ಕೆಲವರನ್ನು ಸಂತೃಪ್ತಗೊಳಿಸುವ ಹಾದಿಯೂ ಆ ಪಕ್ಷದ ನಾಯಕರಿಗೆ ಸಿಗಲಿದೆ. 

ಗೆದ್ದರಷ್ಟೇ ಸಚಿವರಾಗುವ ಭಾಗ್ಯ ದೊರೆಯುವುದರಿಂದ ಚುನಾವಣೆಯಲ್ಲಿ ಗೆಲ್ಲಲೇಬೇಕಾದ ಇಕ್ಕಟ್ಟಿಗೆ ಅನರ್ಹ ಶಾಸಕರು ಸಿಕ್ಕಿಕೊಂಡಿದ್ದಾರೆ. ಸಚಿವರಾಗಿ ಚುನಾವಣೆ ಎದುರಿಸಿದರೆ ಗೆಲ್ಲುವಷ್ಟು ಸುಲಭವಾಗಿ, ಈಗ ಗೆಲ್ಲುವುದು ಸಲೀಸಲ್ಲ. ಗೆದ್ದಮೇಲೂ ಸಚಿವ ಸ್ಥಾನ ಸಿಗುತ್ತದೆ ಎಂಬ ಭರವಸೆಯಿಲ್ಲದೇ ಚುನಾವಣೆ ಎದುರಿಸಬೇಕಾದ ಅಡಕತ್ತರಿಯಲ್ಲಿ ಅನರ್ಹರು ಸಿಕ್ಕಿ ಹಾಕಿಕೊಂಡಿದ್ದಾರೆ.

ಕಾಂಗ್ರೆಸ್‌ ಲೆಕ್ಕ: ಪಕ್ಷಕ್ಕೆ ಕೈಕೊಟ್ಟವರು ಈ ವಿಧಾನಸಭೆ ಅವಧಿ ಮುಗಿಯುವವರೆಗೆ ಮತ್ತೆ ಶಾಸಕರಾಗಬಾರದು ಎಂದು ಕಾಂಗ್ರೆಸ್ ನಾಯಕರು ಹಟಕ್ಕೆ ಬಿದ್ದಿದ್ದರು. ಸುಪ್ರೀಂ ಕೋರ್ಟ್ ತೀರ್ಪಿನಿಂದ ಕೈ ಪಾಳಯಕ್ಕೆ ತುಸು ಹಿನ್ನಡೆಯಾದಂತೆ ಮೇಲ್ನೋಟಕ್ಕೆ ಅನ್ನಿಸುತ್ತದೆ.

ಆದರೆ, ಪಕ್ಷಾಂತರ ಕಾಯ್ದೆಯಲ್ಲಿ ಇಲ್ಲದ ಅವಕಾಶ ಸಿಗುತ್ತದೆ ಎಂಬ ನಿರೀಕ್ಷೆ ಕಾಂಗ್ರೆಸ್‌ ನಾಯಕರಿಗೆ ಆಂತರ್ಯದಲ್ಲಿ ಇದ್ದಂತೆ ಕಾಣಿಸುತ್ತಿಲ್ಲ. ಸಚಿವರಾಗಿ ಚುನಾವಣೆ ಎದುರಿಸಿದರೆ ಗೆಲುವು ಸಲೀಸು, ಅದಕ್ಕೆ ನಿರ್ಬಂಧ ಹೇರಬೇಕೆಂಬುದಷ್ಟೇ ಕಾಂಗ್ರೆಸ್‌ ನೇತಾರರ ಅಪೇಕ್ಷೆಯಾಗಿದ್ದಂತೆ ತೋರುತ್ತದೆ. ಹಾಗಾಗಿ, ಕಾಂಗ್ರೆಸ್ ನಾಯಕರಿಗೆ ಇದು ದೊಡ್ಡ ಮಟ್ಟದ ಹಿನ್ನಡೆಯಲ್ಲ.

ಅನರ್ಹ ಶಾಸಕರು ಮಾಡಿದ್ದು ಸರಿಯೇ ಅಥವಾ ತಪ್ಪೇ ಎಂಬ ‘ಪ್ರಜಾತೀರ್ಪು’ ಕೊಡುವ ಅವಕಾಶವನ್ನು ಸುಪ್ರೀಂ ಕೋರ್ಟ್ ಮತದಾರರಿಗೆ ಕೊಟ್ಟಿದೆ. ಮುಂದಿನ ಮೂರುವರೆ ವರ್ಷ ಚುನಾವಣೆಗೆ ಸ್ಪರ್ಧಿಸಲು ಅವಕಾಶವನ್ನೇ ನೀಡದಿದ್ದರೆ, ಅಷ್ಟೊತ್ತಿಗೆ ಉಪಚುನಾವಣೆ ನಡೆದು ಅನರ್ಹಗೊಂಡವರ ಕುಟುಂಬದವರೋ ಅಥವಾ ಬೇರೆ ಯಾರೋ ಗೆದ್ದೋ ಸೋತೋ ಈ ವಿಚಾರವೇ ಜನರಿಂದ ಮರೆಯಾಗಿಬಿಡುತ್ತಿತ್ತು. ಈಗ ತಕ್ಷಣವೇ ಚುನಾವಣೆ ನಡೆಯುತ್ತಿರುವುದರಿಂದ ಅನರ್ಹ ಶಾಸಕರ ನಡೆಯನ್ನು ಪರೀಕ್ಷೆಗೊಡ್ಡಿ ತೀರ್ಪು ನೀಡುವ ಅಧಿಕಾರವನ್ನು ಮತದಾರರಿಗೆ ನೀಡಿದಂತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು