ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಞಪ್ರಸಾದ್ ಬರಹ | ಹೇಗಿತ್ತು, ಹೇಗಾಯ್ತು ರಾಜ್ಯ ರಾಜಕೀಯ!

Last Updated 11 ಜುಲೈ 2019, 1:32 IST
ಅಕ್ಷರ ಗಾತ್ರ

ಸ್ವಲ್ಪವಾದರೂ ಸಭ್ಯತೆ ಉಳಿಸಿಕೊಂಡಿರುವ ವಿವೇಕಿ ಕನ್ನಡಿಗ, ಈಗ ನಡೆಯುತ್ತಿರುವ ರಾಜಕೀಯ ಅಗೌರವದ ವಿದ್ಯಮಾನಗಳಿಗೆ ಅರ್ಥ ಹುಡುಕುವ ಕೆಲಸಕ್ಕೆ ಮುಂದಾಗುವುದಿಲ್ಲ. ಪ್ರಜಾತಂತ್ರವನ್ನು ಕಾಯುವ ಅಧಿಕಾರ ಹೊಂದಿರುವ ವ್ಯಕ್ತಿಗಳಿಂದಲೇ ಪ್ರಜಾತಂತ್ರದ ಮೇಲೆ ನಡೆಯುತ್ತಿರುವ ಅತ್ಯಾಚಾರದ ಬಗ್ಗೆ ವಿಶ್ಲೇಷಣೆ ನಡೆಸುವುದಕ್ಕಿಂತ– ಅದರಲ್ಲೂ ವಿಶ್ವಕಪ್ ಕ್ರಿಕೆಟ್ ಟೂರ್ನಿ ನಡೆಯುತ್ತಿರುವ ಈ ಹೊತ್ತಿನಲ್ಲಿ – ಚಿಂತಿಸಲು ಬೇಕಾದಷ್ಟು ಬೇರೆ ವಿಷಯಗಳಿವೆ. ಆದರೆ, 21ನೆಯ ಶತಮಾನದಲ್ಲಿ ಕರ್ನಾಟಕದ ರಾಜಕೀಯವು ಆಘಾತಕಾರಿ ಮಟ್ಟಕ್ಕೆ ಕುಸಿದಿದ್ದನ್ನು ನಾವು ಮೂರು ಮೈಲುಗಲ್ಲುಗಳನ್ನು ಗುರುತಿಸಿ, ಅರ್ಥ ಮಾಡಿಕೊಳ್ಳಬಹುದು.

ಮೊದಲ ಮೈಲುಗಲ್ಲು 1881. ಚುನಾಯಿತ ಪ್ರತಿನಿಧಿಗಳು ಹಾಗೂ ಅವರು ಪ್ರತಿನಿಧಿಸುವ ರಾಜಕೀಯ ಪಕ್ಷಗಳು ಪ್ರಜಾತಂತ್ರವನ್ನು ವಿರೂಪಗೊಳಿಸುವ ಕಾರ್ಯವನ್ನುನಿರ್ಲಜ್ಜವಾಗಿ ನಡೆಸುತ್ತಿರುವುದು, ದೇಶದ ಪ್ರಜಾತಂತ್ರ ವ್ಯವಸ್ಥೆಯ ಬೀಜ 138 ವರ್ಷಗಳ ಹಿಂದೆಯೇ ಮೊದಲ ಬಾರಿಗೆ ಬಿತ್ತನೆಯಾದ ನೆಲದಲ್ಲಿ. ಹತ್ತನೆಯ ಚಾಮರಾಜ ಒಡೆಯರ್ ಅವರ ಆಡಳಿತಾವಧಿಯಲ್ಲಿ, 1881ರ ಆಗಸ್ಟ್‌ನಲ್ಲಿ, ಮೈಸೂರಿನ ದಿವಾನರಾಗಿದ್ದ ಸಿ.ವಿ.ರಂಗಾಚಾರ್ಲು ಅವರು ದೇಶದ ಮೊದಲ ಚುನಾಯಿತ ‘ಪ್ರಜಾ ಪ್ರತಿನಿಧಿ ಸಭಾ’ ರಚಿಸಿದರು. ಇದು ಆಧುನಿಕ ವಿಧಾನಸಭೆಯ ಮೊದಲ ಅವತಾರದಂತಿತ್ತು. ಜನರಿಗೆ ದನಿ ನೀಡುವುದು ಇದರ ಉದ್ದೇಶವಾಗಿತ್ತು.

ಕಾಂಗ್ರೆಸ್ ಮತ್ತು ಜೆಡಿಎಸ್‌ನ ಕೆಲವು ಶಾಸಕರು ಬಿಜೆಪಿಯಲ್ಲಿನ ತಮ್ಮ ಸಹವರ್ತಿಗಳಿಂದ ಪ್ರೇರಣೆ ಪಡೆದು, ದೆಹಲಿಯ ಕಾಣದ ಕೈಗಳ ಗೊಂಬೆಗಳಾಗಿ, ತಮ್ಮ ಕ್ಷೇತ್ರಗಳಲ್ಲಿನ ಮತದಾರರ ವಿಶ್ವಾಸವನ್ನು ಅದೆಷ್ಟು ಬಹಿರಂಗವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರೆ, ‘ಪ್ರಜಾಪ್ರತಿನಿಧಿ ಸಭೆ’ಯನ್ನು ಸ್ಥಾಪಿಸಿದ್ದರ ಹಿಂದಿನ ಆಶಯಗಳನ್ನು ಅಡಿಮೇಲು ಮಾಡುವಂತೆ ಇವೆ ಅವರ ಕೃತ್ಯಗಳು. ಮತದಾರರ ಹಿತ ಕಾಯಲು ಈ ಕೆಲಸ ಮಾಡುತ್ತಿರುವುದಾಗಿ ಶಾಸಕರು ಹೇಳುತ್ತಾರೆ. ಆದರೆ, ಪ್ರಜ್ಞೆ ಸ್ಥಿಮಿತದಲ್ಲಿ ಇರುವ ಯಾವ ವ್ಯಕ್ತಿ ಈ ಶಾಸಕರ ನಡತೆ ನೋಡಿ, ಅವರ ಮಾತನ್ನು ನಂಬುತ್ತಾನೆ?

ಇಂತಹ ವಿದ್ಯಮಾನ ರಾಜ್ಯದಲ್ಲಿ ಆಗುತ್ತಿರುವುದು ಇದೇ ಮೊದಲಲ್ಲ ಎಂಬುದೊಂದೇ ಈಗ ಹೇಳಿಕೊಳ್ಳಬಹುದಾದ ಸಮಾಧಾನ. ಜನತಾ ಪಕ್ಷವನ್ನು ತ್ಯಜಿಸಿ ಕಾಂಗ್ರೆಸ್‌ಗೆ ಬರುವಂತೆ ಸೆಳೆಯಲು ವೀರಪ್ಪ ಮೊಯಿಲಿ ತಮಗೆ ₹ 2 ಲಕ್ಷದ ಆಮಿಷ ಒಡ್ಡಿದ್ದರು ಎಂದು ಸಿ. ಬೈರೇಗೌಡ ಅವರು 1983ರಲ್ಲಿ ಆರೋಪ ಮಾಡಿದಾಗಲೇ ಕರ್ನಾಟಕದ ಶಾಸಕರು ತಾವು ‘ಅನುಮಾನಾಸ್ಪದ ಪ್ರಾಮಾಣಿಕತೆಯ ಖರೀದಿಸಬಹುದಾದ ವಸ್ತುಗಳು’ ಎಂಬುದನ್ನು ಸಾಬೀತುಮಾಡಿದ್ದರು. ಮೊಯಿಲಿ ಅವರ ಜೊತೆ ನಡೆದದ್ದು ಎನ್ನಲಾದ ಮಾತುಕತೆಯನ್ನು ರಹಸ್ಯವಾಗಿ ದಾಖಲಿಸಿಕೊಂಡು, ಅದನ್ನು ಬೈರೇಗೌಡ ಅವರು ಬಹಿರಂಗಪಡಿಸಿದ್ದರು. ಬೈರೇಗೌಡ ಅವರ ಹಲವು ಹೇಳಿಕೆಗಳಲ್ಲಿ ನ್ಯೂನತೆಗಳನ್ನು ಕಂಡ ನ್ಯಾಯಾಂಗ ಆಯೋಗವು ಮೊಯಿಲಿ ಅವರನ್ನು ದೋಷಮುಕ್ತಗೊಳಿಸಿತು. ಆದರೆ, ಆ ಘಟನೆಯಿಂದ ಇಲ್ಲಿಯವರೆಗೆ ಕುಸಿಯುವಿಕೆಗೆ ತಡೆ ಇಲ್ಲದಂತಾಗಿದೆ.

ಎರಡನೆಯ ಮೈಲುಗಲ್ಲು 1984ರದ್ದು. 35 ವರ್ಷಗಳಹಿಂದೆ ‘ಪ್ರಜಾತಂತ್ರದ ಪುನರ್‌ ಸ್ಥಾಪನೆಯ ಹೋರಾಟ’ದಲ್ಲಿ ಕರ್ನಾಟಕ ವಹಿಸಿದ ಪ್ರಶಂಸಾರ್ಹ ಪಾತ್ರಕ್ಕೆ ಹೋಲಿಸಿದರೆ ಇಂದಿನ ಅಸಹ್ಯಕರ, ಚುನಾವಣಾ ಪ್ರಕ್ರಿಯೆಯ ಅಣಕದಂತೆ ಇರುವ ನಾಟಕವು ತೀರಾ ಭಿನ್ನವಾಗಿ ನಿಲ್ಲುತ್ತದೆ.

1984ರ ಆಗಸ್ಟ್‌ನಲ್ಲಿ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಆಂಧ್ರಪ್ರದೇಶದಲ್ಲಿ ಟಿಡಿಪಿ ಪಕ್ಷದ ಎನ್.ಟಿ.ರಾಮರಾವ್‌ ನೇತೃತ್ವದ ಸರ್ಕಾರವನ್ನು ರಾಜ್ಯಪಾಲರು, ದೆಹಲಿಯ ಕಾಂಗ್ರೆಸ್ ಮುಖಂಡರ ಆಣತಿ ಆಧರಿಸಿ ವಜಾಗೊಳಿಸಿದರು. ಆಂಧ್ರಪ್ರದೇಶ ವಿಧಾನಸಭೆಯಲ್ಲಿಟಿಡಿಪಿಗೆ ಬಹುಮತ ಇದ್ದರೂ ಸರ್ಕಾರವನ್ನು ವಜಾಗೊಳಿಸಿದ್ದು ಪ್ರಾದೇಶಿಕ ಹಾಗೂ ರಾಷ್ಟ್ರೀಯ ಪಕ್ಷಗಳಿಂದ ತೀಕ್ಷ್ಣ ಪ್ರತಿಕ್ರಿಯೆಗೆ ಗುರಿಯಾಯಿತು.

ಕಾಂಗ್ರೆಸ್ ಮತ್ತು ಅದರ ಏಜೆಂಟರು ಟಿಡಿಪಿ ಶಾಸಕರನ್ನು ಸೆಳೆಯಲು ಯತ್ನಿಸಿದಾಗ, ಎನ್‌ಟಿಆರ್‌ ಹಾಗೂ ಅವರ ಅಳಿಯ ಎನ್. ಚಂದ್ರಬಾಬು ನಾಯ್ಡು ಅವರು ಶಾಸಕರನ್ನು ಕರ್ನಾಟಕಕ್ಕೆ ಕಳುಹಿಸಿದರು. ಅವರು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ‘ಸರ್ಕಾರಿ ಅತಿಥಿ’ ಗಳಾದರು. ಒಂದಿಷ್ಟು ಶಾಸಕರನ್ನು ನಂದಿಬೆಟ್ಟದಲ್ಲಿ,ಇನ್ನೊಂದಿಷ್ಟು ಶಾಸಕರನ್ನು ಮೈಸೂರಿನಲ್ಲಿ ಇರಿಸಲಾಗಿತ್ತು. ಇದು ಆರಂಭದ ಕಾಲಘಟ್ಟದ ರೆಸಾರ್ಟ್‌ ರಾಜಕೀಯಗಳಲ್ಲೊಂದು. ಆದರೆ, 2019ರಲ್ಲಿ ರಾಜ್ಯವು ತನ್ನದೇ ಶಾಸಕರ ಪಾಲಿಗೆ ಸುರಕ್ಷಿತವಾಗಿ ಉಳಿದಿಲ್ಲ. ಈಗ ಪಾತ್ರಗಳು ಅದಲುಬದಲಾಗಿವೆ. ತನ್ನ ಶಾಸಕರನ್ನು ಬಿಜೆಪಿ ಕೈಯಿಂದ ರಕ್ಷಿಸಿಕೊಳ್ಳಲು ಕಾಂಗ್ರೆಸ್ ಯತ್ನಿಸುತ್ತಿದೆ.

ವ್ಯವಸ್ಥಿತವಾಗಿ ನಡೆದ ರಾಜೀನಾಮೆ ಪ್ರಸಂಗ, ಶಾಸಕರಪಕ್ಷಾಂತರ, ಹಣ ಭಾರಿ ಪ್ರಮಾಣದಲ್ಲಿ ಕೈಬದಲಾಗಿದೆ ಎಂಬ ಮಾತುಗಳು, ನಿಷ್ಠೆ ಬದಲಿಸುತ್ತಿರುವುದಕ್ಕೆ ಶಾಸಕರು ಶಾಲಾ ಮಕ್ಕಳಂತೆ ಕಾರಣ ಹೇಳುತ್ತಿರುವುದು... ಇವನ್ನೆಲ್ಲ ನೋಡಿದರೆ 1980ರ ದಶಕದಲ್ಲಿ ರಾಮಕೃಷ್ಣ ಹೆಗಡೆ ಅವರ ನೇತೃತ್ವದಲ್ಲಿ ದೇಶಕ್ಕೆ ಮೌಲ್ಯಾಧಾರಿತ ರಾಜಕಾರಣದ ಪರಿಕಲ್ಪನೆಯನ್ನು ನೀಡಿದ ನಾಡು ಇದುವೇ ಎಂಬುದನ್ನು ನಂಬುವುದು ಕಷ್ಟವಾಗುತ್ತಿದೆ. ಪಂಚಾಯತ್ ರಾಜ್ ಸುಧಾರಣೆಯಲ್ಲಿ ಮುಂಚೂಣಿಯಲ್ಲಿದ್ದ ರಾಜ್ಯದ ರಾಜಕಾರಣಿಗಳ ಮನಸ್ಸಿನಿಂದ ಮೌಲ್ಯಗಳು ಕಣ್ಮರೆಯಾಗಿವೆ.

ಮೂರನೆಯ ಹಾಗೂ ಕೊನೆಯ ಮೈಲುಗಲ್ಲು 1999. ಆ ವರ್ಷ ಸೋನಿಯಾ ಗಾಂಧಿ ಅವರು ‘ಬಳ್ಳಾರಿ ರಿಪಬ್ಲಿಕ್‌’ನಲ್ಲಿ ಗೆಲುವು ಸಾಧಿಸಿದ ನಂತರದ್ದು. ಸೋನಿಯಾ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದು ಸುಷ್ಮಾ ಸ್ವರಾಜ್. ಸುಷ್ಮಾ ಅವರ ಚುನಾವಣಾ ಅಭಿಯಾನಕ್ಕೆ ಹಣಕಾಸಿನ ನೆರವು ನೀಡಿದ್ದು ರೆಡ್ಡಿ ಸಹೋದರರು. ಹೊಸದಾಗಿ ಆಯ್ಕೆಯಾದ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿ, ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ‘ಆಪರೇಷನ್ ಕಮಲ’ ಶಬ್ದಕೋಶದಲ್ಲಿ ಸ್ಥಾನ ಪಡೆಯಲು ಕಾರಣ ಇವರು. ರೆಡ್ಡಿ ಸಹೋದರರಿಂದ ಸುಷ್ಮಾ ದೂರ ಸರಿದರಾದರೂ, 2018ರ ವಿಧಾನಸಭಾ ಚುನಾವಣೆಯವರೆಗೂ ರೆಡ್ಡಿ ಸಹೋದರರ ಪ್ರಭಾವ ಕಂಡುಬಂತು. ಆ ಚುನಾವ
ಣೆಯಲ್ಲಿ ಜನಾರ್ದನ ರೆಡ್ಡಿ ಬಿಜೆಪಿ ಅಭ್ಯರ್ಥಿಗಳ ಪರ ಬಹಿರಂಗ ಪ್ರಚಾರ ನಡೆಸಿದರು. ಕಾಂಗ್ರೆಸ್– ಜೆಡಿಎಸ್ ಶಾಸಕರು ಬಿಜೆಪಿಯಿಂದ ನೇಮಕಗೊಂಡ ರಾಜ್ಯಪಾಲರ ಎದುರು ಛಾಯಾಚಿತ್ರಕ್ಕೆ ಪೋಸ್‌ ಕೊಡುವುದು, ಬಿಜೆಪಿ ಸಂಸದರ ಮಾಲೀಕತ್ವದ ವಿಮಾನದಲ್ಲಿ ಪ್ರಯಾಣಿಸುವುದು, ಅವರ ಜೊತೆ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಇರುವುದು... ರೆಡ್ಡಿ ಸಹೋದರರು ತೆರೆಯಿಂದ ಹಿಂದೆ ಸರಿದಿದ್ದರೂ ಅವರ ವಿಶಿಷ್ಟ ತಂತ್ರಗಾರಿಕೆಗಳು ಬಿಜೆಪಿಯಲ್ಲಿ ಆಳವಾಗಿ ಬೇರೂರಿರುವುದನ್ನು ತೋರಿಸುತ್ತವೆ.

ಹಿಂದೆಲ್ಲ ಸರ್ಕಾರವನ್ನು ಉರುಳಿಸಲು ಅತ್ಯಂತ ಒರಟಾಗಿ ಯತ್ನ ನಡೆಸಿದ್ದರೂ, ಈಗಿನ ಯತ್ನವು ಆಧುನಿಕ ಬಿಜೆಪಿಯ ಬ್ರಹ್ಮಾಸ್ತ್ರವನ್ನು ಒಳಗೊಂಡಿದೆ: ಈ ವಿದ್ಯಮಾನಗಳಲ್ಲಿ ತನ್ನ ಪಾತ್ರ ಇಲ್ಲ ಎಂದು ಅದು ಹೇಳುತ್ತಿದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಈ ಬಿಕ್ಕಟ್ಟಿಗೆ ಕಾರಣ ಬಿಜೆಪಿಯೇ ಎಂದು ಕೋರ್ಟ್‌ನಲ್ಲಿ ಬೊಟ್ಟು ಮಾಡಿ ಹೇಳುವುದು ಕಷ್ಟವಾಗಬಹುದಾದರೂ, ಇಡೀ ಬೆಳವಣಿಗೆಯಲ್ಲಿ ಬಿಜೆಪಿಯ ಹೆಜ್ಜೆ ಗುರುತುಗಳಿವೆ. ಎಷ್ಟಿವೆ ಎಂದರೆ, ಹವ್ಯಾಸಿ ವಿಧಿವಿಧಾನ ತಜ್ಞ ಕೂಡ, ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಹೆಚ್ಚು ಕಷ್ಟಪಡದೆಯೇ ಹೇಳಬಲ್ಲ. ಕರ್ನಾಟಕದ ರಾಜಕೀಯ ಮಟ್ಟ ಕುಸಿದಿದ್ದಕ್ಕೆ 1881, 1984 ಮತ್ತು 1999ರ ಮೈಲುಗಲ್ಲುಗಳ ನಡುವೆ ಎಲ್ಲೋ ಒಂದೆಡೆ ಉತ್ತರದ ಸುಳಿವು ಇದೆ. ಅವು: ಮೌಲ್ಯಗಳ ಕಣ್ಮರೆ, ರಾಜಕೀಯದ ಅಪರಾಧೀಕರಣ, ಸಿದ್ಧಾಂತದ ಸಂಪೂರ್ಣ ಕುಸಿತ. ರಾಜ್ಯದ ಹಲವು ಶಾಸಕರು ಕೋಟ್ಯಧಿಪತಿಗಳು ಎಂಬುದರಲ್ಲಿ ಆಶ್ಚರ್ಯದ ಸಂಗತಿಯೇನಾದರೂ ಇದೆಯೇ?

‘ನ್ಯಾಯಬದ್ಧವಲ್ಲದ ಈ ನಡೆಯ ನಂತರ ರಾಜ್ಯದ ರಾಜಕೀಯ ಸ್ಥಿತಿ ಇನ್ನಷ್ಟು ವಿಷಮಗೊಂಡರೆ, ಕೇಂದ್ರ ಸರ್ಕಾರ ಹಾಗೂ ರಾಜಕೀಯವಾಗಿ ಅಸ್ಥಿರಗೊಳಿಸುವ ಈ ಆಟದಲ್ಲಿ ಕೇಂದ್ರದ ಜೊತೆ ಹೆಜ್ಜೆ ಹಾಕಿದವರು ಜವಾಬ್ದಾರಿ ಹೊರಬೇಕು’ ಎಂದು 35 ವರ್ಷಗಳ ಹಿಂದೆ, ಟಿಡಿಪಿ ಶಾಸಕರು ಕರ್ನಾಟಕದಲ್ಲಿ ಇದ್ದಾಗ ಪತ್ರಿಕೆಯೊಂದರ ಸಂಪಾದಕೀಯದಲ್ಲಿ ಬರೆಯಲಾಗಿತ್ತು. ಈ ಸಂದರ್ಭದಲ್ಲಿ ಕೂಡ ಇವೇ ಸಾಲುಗಳನ್ನು ಪುನರುಚ್ಚರಿಸಬಹುದು.

ಲೇಖಕ: ‘ಔಟ್‌ಲುಕ್‌’ ಮಾಜಿ ಪ್ರಧಾನ ಸಂಪಾದಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT