ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಬ್ಯಾಂಕ್‌ ನಿರ್ವಹಣೆಯಲ್ಲಿ ಕೊಂಕಣ ಸುತ್ತುವುದು

ವಿತ್ತ ವ್ಯವಸ್ಥೆಯಲ್ಲಿನ ಬಿಕ್ಕಟ್ಟನ್ನು ಬ್ಯಾಂಕುಗಳಿಗೂ ವಿಸ್ತರಿಸುವ ಅಪಾಯಕಾರಿ ಯೋಜನೆ ರೂಪುಗೊಂಡಿದೆ
Last Updated 17 ಆಗಸ್ಟ್ 2020, 21:46 IST
ಅಕ್ಷರ ಗಾತ್ರ
ADVERTISEMENT
"ಎಂ.ಎಸ್. ಶ್ರೀರಾಮ್"

ಬ್ಯಾಂಕಿಂಗ್ ವ್ಯವಸ್ಥೆಯನ್ನು ಸರ್ಕಾರ ಹೇಗೆ ನಿರ್ವಹಿಸುತ್ತಿತ್ತು ಮತ್ತು ನಿರ್ವಹಿಸುತ್ತಿದೆ ಎನ್ನುವುದರ ಬಗೆಗಿನ ಒಳನೋಟಗಳು, ಈಚೆಗೆ ಬಿಡುಗಡೆಯಾದ, ಆರ್‌ಬಿಐನ ಮಾಜಿ ಗವರ್ನರ್ ಉರ್ಜಿತ್ ಪಟೇಲ್ ಮತ್ತು ಮಾಜಿ ಡೆಪ್ಯುಟಿ ಗವರ್ನರ್ ವಿರಲ್ ಆಚಾರ್ಯ ಅವರ ಪುಸ್ತಕಗಳಿಂದ ನಮಗೆ ದಕ್ಕುತ್ತವೆ. ಸರ್ಕಾರವು ಬ್ಯಾಂಕಿಂಗ್ ವ್ಯವಸ್ಥೆಯನ್ನು ನಿರ್ವಹಿಸುತ್ತಿರುವ ಪರಿಯನ್ನು ಮೂರು ಕಾಲಘಟ್ಟಗಳಲ್ಲಿ ವಿಭಜಿಸಬಹುದಾಗಿದೆ. ಎಲ್ಲ ಘಟ್ಟಗಳ ನಿರ್ವಹಣೆಯ ಪರಿಣಾಮ ಒಂದೇ ರೀತಿಯದ್ದಾದರೂ ಅದು ನಮ್ಮ ವಿತ್ತೀಯ ನಿರ್ವಹಣೆಯ ಮೇಲೆ ಪ್ರಭಾವ ಬೀರುವ ಸಮಯಬಿಂದು ಮಾತ್ರ ಭಿನ್ನವಾಗಿದೆ.

1969 ಮತ್ತು 1980ರಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣವಾದಾಗ, ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಸರ್ಕಾರಕ್ಕೆ ಹೆಚ್ಚಿನ ಹತೋಟಿ ಪ್ರಾಪ್ತವಾಯಿತು. ಮಾಲೀಕತ್ವ, ದಿಶಾ ನಿರ್ದೇಶನ ಮತ್ತು ನಿರ್ವಹಣೆ– ಮೂರೂ ಸ್ತರಗಳಲ್ಲಿ ಸರ್ಕಾರದ್ದೇ ಹತೋಟಿಯಿತ್ತು. ಸರ್ಕಾರದ ಇಪ್ಪತ್ತು ಅಂಶಗಳ ಕಾರ್ಯಕ್ರಮ, ಸಮಗ್ರ ಗ್ರಾಮೀಣಾಭಿವೃದ್ಧಿ ಯೋಜನೆಯಂತಹ ಅನೇಕ ಕಾರ್ಯಕ್ರಮಗಳನ್ನು ಬ್ಯಾಂಕುಗಳ ಮೂಲಕ ಜಾರಿ ಮಾಡಲಾಯಿತು. ಸರ್ಕಾರದ ವತಿಯಿಂದ ಸಾಲ ನೀಡುವ ವಿಭಾಗದಂತೆಬ್ಯಾಂಕುಗಳನ್ನು ನಿರ್ವಹಿಸಲಾಗುತ್ತಿತ್ತು. ಬ್ಯಾಂಕುಗಳು ನೀಡುತ್ತಿದ್ದ ಸಾಲಗಳು ಸರ್ಕಾರದ ಕೃಪೆಯಿಂದ ಯೋಜನಾಬದ್ಧವಾಗಿ ಇರುತ್ತಿದ್ದವು, ಇತ್ತ ಬ್ಯಾಂಕುಗಳಿಗೆ ಬರುತ್ತಿದ್ದ ಆರ್ಥಿಕ ಸಂಪನ್ಮೂಲವೆಂದರೆ ಜನರಿಂದ ಬರುತ್ತಿದ್ದ ಠೇವಣಿಗಳಾಗಿದ್ದುವು.

ಈ ಠೇವಣಿಗಳನ್ನು ನಿರ್ವಹಿಸುತ್ತಿದ್ದ ರೀತಿಯೂ ಗಮ್ಮತ್ತಿನದ್ದಾಗಿತ್ತು. ಆರ್‌ಬಿಐನ ನೀತಿಯಂತೆ ಕಡ್ಡಾಯ ದ್ರವ್ಯಾನುಪಾತ ಮತ್ತು ನಗದು ನಿಕ್ಷೇಪಾನುಪಾತ(SLR and CRR)ಹೆಚ್ಚಿನ ಮಟ್ಟದಲ್ಲಿ ಇದ್ದುದರಿಂದ ಆ ಇಡೀ ಮೊತ್ತವನ್ನು ಸರ್ಕಾರದ ಖೋತಾ ತುಂಬಲು ಉಪಯೋಗಿಸಲಾಗುತ್ತಿತ್ತು. ಸರ್ಕಾರದ ಅವಶ್ಯಕತೆಗೆ ಅನುಸಾರ ನೋಟುಗಳ ಮುದ್ರಣವನ್ನೂ ಆರ್‌ಬಿಐ ಮಾಡಿಕೊಡುತ್ತಿದ್ದುದರಿಂದ ಸರ್ಕಾರಕ್ಕೂ ಆರ್‌ಬಿಐಗೂ ನಡುವೆ ಹೆಚ್ಚಿನ ಅಂತರವಿರಲಿಲ್ಲ. ಹೀಗಾಗಿ ಸರ್ಕಾರ, ಆರ್‌ಬಿಐ ಮತ್ತು ಬ್ಯಾಂಕುಗಳ ನಡುವೆ ಒಂದು ರೀತಿಯ ವಿಚಿತ್ರ ಸಂಗಮವಿತ್ತು.

1991ರ ನಂತರ ಪರಿಸ್ಥಿತಿ ಬದಲಾಯಿತು. ಇಂತಹ ಪರಿಸ್ಥಿತಿಯಲ್ಲಿ ಈ ಮೂರೂ ಅಂಗಗಳನ್ನು ಸ್ವತಂತ್ರವಾಗಿ ನೋಡುವ ಅನಿವಾರ್ಯದತ್ತ ನಾವು ಹೆಜ್ಜೆ ಹಾಕಿದೆವು. ಬ್ಯಾಂಕಿಂಗ್ ಕ್ಷೇತ್ರವನ್ನು ಖಾಸಗಿ ವಲಯಕ್ಕೆ ಮುಕ್ತವಾಗಿಸಿದಾಗ, ಹಲವು ಖಾಸಗಿ ಬ್ಯಾಂಕುಗಳು ನಮ್ಮ ವಿತ್ತ ವ್ಯವಸ್ಥೆಯನ್ನು ಪ್ರವೇಶಿಸಿದವು. ಆಗ ಮಾರುಕಟ್ಟೆಯಲ್ಲಿ ಪೈಪೋಟಿ ಉಂಟಾದದ್ದಲ್ಲದೆ ಮಾರುಕಟ್ಟೆಯಲ್ಲಿ ಸರ್ಕಾರಿ ಬ್ಯಾಂಕುಗಳ ಪ್ರಾಮುಖ್ಯ ಕ್ರಮೇಣ ಕುಗ್ಗುತ್ತಾ ಹೋಯಿತು. ಸರ್ಕಾರಿ ಬ್ಯಾಂಕುಗಳೂ ಷೇರು ಮಾರುಕಟ್ಟೆಯಲ್ಲಿ ತಮ್ಮನ್ನು ನೋಂದಾಯಿಸಿಕೊಂಡಾಗ, ಸರ್ಕಾರಕ್ಕಲ್ಲದೆ ಮಾರುಕಟ್ಟೆಗೂ ಅವು ಜವಾಬ್ದಾರವಾದವು.

ವಿತ್ತೀಯ ಜವಾಬ್ದಾರಿ ಮತ್ತು ಆಯವ್ಯಯ ನಿರ್ವಹಣೆಯ ಕಾಯ್ದೆಯನ್ನು 2003ರ ವೇಳೆಗೆ ಕೇಂದ್ರ ಸರ್ಕಾರ ಜಾರಿ ಮಾಡಿದ ನಂತರ, ಅವಶ್ಯಕತೆಗೆ ಅನುಸಾರ ನೋಟುಗಳನ್ನು ಮುದ್ರಿಸುವ ಪ್ರಕ್ರಿಯೆಗೂ ಕಡಿವಾಣ ಹಾಕಲಾಯಿತು. ಹೀಗೆ ಸರ್ಕಾರ– ಬ್ಯಾಂಕುಗಳ ನಡುವೆ ಷೇರು ಮಾರುಕಟ್ಟೆಯ ಒಂದು ರೇಖೆಯನ್ನೂ ಸರ್ಕಾರ– ಆರ್‌ಬಿಐ ನಡುವೆ ವಿತ್ತೀಯ ಜವಾಬ್ದಾರಿ ಕಾಯ್ದೆಯ ಒಂದು ರೇಖೆಯನ್ನೂ ಬ್ಯಾಂಕು– ಆರ್‌ಬಿಐ ನಡುವೆ ಕಡ್ಡಾಯ ದ್ರವ್ಯತಾ ಮತ್ತು ನಗದು ನಿಕ್ಷೇಪ ಅನುಪಾತದ ಮಟ್ಟ ಕಡಿಮೆ ಮಾಡುವ ಮೂಲಕ ಒಂದು ರೇಖೆಯನ್ನೂ ಎಳೆದು, ಈ ಮೂರೂ ಭಿನ್ನ ಅಂಗಗಳನ್ನು ಭಿನ್ನವಾಗಿ ನೋಡುವ ಪ್ರಕ್ರಿಯೆ ಪ್ರಾರಂಭವಾಯಿತು. ಇದರಿಂದ ಸರ್ಕಾರ ನೇರವಾಗಿ ಜನರ ಠೇವಣಿಗಳಿಗೆ ಕೈ ಹಾಕುವ ಪ್ರಕ್ರಿಯೆಗೆ ಅಡ್ಡಗಾಲು ಬಿದ್ದಂತಾಯಿತು. ಹೀಗಾಗಿ ಸರ್ಕಾರ ತನ್ನ ವಿತ್ತೀಯ ನಿರ್ವಹಣೆಯಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ತೋರಿಸಬೇಕಾಯಿತು.

ಆರ್ಥಿಕ ಸಂಪನ್ಮೂಲಗಳನ್ನು ಪಡೆಯಲು ಕಷ್ಟವಾದರೂ ಸಾಲ ಕೊಡಮಾಡಲು ಬ್ಯಾಂಕುಗಳನ್ನು ಉಪಯೋಗಿಸುವ ಪ್ರಕ್ರಿಯೆಗೆ ಯಾವುದೇ ಕಡಿವಾಣ ಇರಲಿಲ್ಲ. ಆದರೆ ಹೀಗೆ ಕೊಟ್ಟ ಸಾಲಗಳು ಸುಸ್ತಿಗೆ ಬಿದ್ದಾಗ ಜವಾಬ್ದಾರಿಯು ಸರ್ಕಾರದ ವಿತ್ತೀಯ ವ್ಯವಸ್ಥೆಯ ಮೇಲೆಯೇ ಬಿತ್ತು. ಸರ್ಕಾರ ತನ್ನ ಆಯವ್ಯಯದಲ್ಲಿ ಖೋತಾ ತೋರಿಸುತ್ತಲೇ ನಷ್ಟ ತುಂಬಿಕೊಡಲು ಬ್ಯಾಂಕುಗಳಿಗೆ ಹೆಚ್ಚಿನ ಹೂಡಿಕೆ ಮಾಡುವ ಪ್ರಕ್ರಿಯೆ ಪ್ರಾರಂಭವಾಯಿತು. ಆದರೆ, ಇದರ ವಿತ್ತೀಯ ಪರಿಣಾಮ ಸರ್ಕಾರದ ಮೇಲೆ ಬಿದ್ದರೂ ಅದನ್ನು ಸರ್ಕಾರ ತನ್ನ ಲೆಕ್ಕಕ್ಕೆ ತೆಗೆದುಕೊಳ್ಳಲು, ಬ್ಯಾಂಕುಗಳು ವ್ಯವಹಾರ ನಡೆಸಿ ನಷ್ಟ ಅನುಭವಿಸುವ ಸ್ಥಿತಿ ಎದುರಾಗುವವರೆಗೆ ಕಾಯುತ್ತಿತ್ತು.

ಹೀಗೆ ಬ್ಯಾಂಕುಗಳಲ್ಲಿ ಅಧಿಕ ಬಂಡವಾಳ ಹೂಡಿ ಅವುಗಳನ್ನು ಕಾಪಾಡಿದಾಗಲೆಲ್ಲ ಆ ಮೊತ್ತ ಸರ್ಕಾರದ ಆಯವ್ಯಯಪತ್ರದಲ್ಲಿ ಸ್ಪಷ್ಟವಾಗಿ ನಮೂದಾಗುತ್ತಿದ್ದುದರಿಂದ ಅದನ್ನು ನಾವು ಗುರುತಿಸಲು ಸಾಧ್ಯವಾಗಿತ್ತು. 1991ರ ಹಿಂದಿನ ವಿಧಾನದಲ್ಲಿ, ಎಲ್ಲಿ ಲೆಕ್ಕ ನಮೂದಾಗಿದೆ ಎನ್ನುವುದು ಗೋಚರಿಸುತ್ತಿರಲಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ಯಾಂಕುಗಳ ಮೂಲಧನ ಯಾವ ಮಟ್ಟದಲ್ಲಿರಬೇಕು ಎಂದು ನಿರ್ದೇಶಿಸುವ ಬಾಸಲ್ ನಿಯಮಗಳು ಜಾರಿಯಾಗುತ್ತಿದ್ದಂತೆ, ಸರ್ಕಾರಿ ಬ್ಯಾಂಕುಗಳೂ ಮಾರುಕಟ್ಟೆಗೆ ಹೆಚ್ಚಿನ ಜವಾಬ್ದಾರಿಯನ್ನು ತೋರಿಸಬೇಕಾಗುತ್ತಿತ್ತು. ಹೀಗಾಗಿ, ಬ್ಯಾಂಕುಗಳನ್ನು ತನ್ನ ವಿಭಾಗವಾಗಿ ನೋಡುತ್ತಿದ್ದ ಸರ್ಕಾರ ಈಗ ಅದನ್ನು ಸ್ವತಂತ್ರ ಸಂಸ್ಥೆಯಾಗಿ ಪರಿಗಣಿಸಿತು. ಹಾಗಿದ್ದಾಗ್ಯೂ ಅದರ ಕೈ ತಿರುಚಿ, ತನಗಿಷ್ಟ ಬಂದ ಸಾಲಗಳನ್ನು ಕೊಡುವಂತೆ ಒತ್ತಡ ಹೇರುವುದನ್ನು ಮುಂದುವರಿಸಿತು. ಆದರೆ ಈ ಒತ್ತಡವಿದ್ದದ್ದು ಸರ್ಕಾರಿ ಬ್ಯಾಂಕುಗಳ ಮೇಲೆಯೇ ಹೊರತು ಖಾಸಗಿ ಬ್ಯಾಂಕುಗಳ ಮೇಲಲ್ಲ. ಹೀಗಾಗಿ ಖಾಸಗಿ ಬ್ಯಾಂಕುಗಳು ಈ ಒಂದು ನಿರಂಕುಶತೆಯಿಂದ ತಪ್ಪಿಸಿಕೊಂಡವು.

ಎಂ.ಎಸ್. ಶ್ರೀರಾಮ್

ಕೋವಿಡ್– 19 ಕಾಣಿಸಿಕೊಂಡ ನಂತರ ಸರ್ಕಾರ ಘೋಷಿಸಿದ ನೀತಿಗಳು 1991ರ ಮುಂಚಿನ ಪರಿಸ್ಥಿತಿಗೆ ನಮ್ಮನ್ನು ಹಿನ್ನಡೆಸುತ್ತಿವೆ. ಸುಸ್ತಿಯಾಗುವ ಮತ್ತು ಮೂಲಧನವನ್ನು ಏರ್ಪಾಟು ಮಾಡಬೇಕಾದ ಒತ್ತಡವಿಲ್ಲದೇ ಅನೇಕ ವಲಯಗಳಿಗೆ ಸಾಲಗಳನ್ನು ಕೊಡುವಂತೆ ಈ ನೀತಿ ಪ್ರೇರೇಪಿಸುತ್ತಿದೆ. ಸರ್ಕಾರವು ಸಾಲಗಳನ್ನು ನೀಡುವ (ನಿರ್ದೇಶನದಂತಹ) ಗುರಿಯನ್ನು ಬ್ಯಾಂಕುಗಳಿಗೆ ಕೊಟ್ಟು, ಅದಕ್ಕೆ ತನ್ನ ಆಯವ್ಯಯ ಪತ್ರದಲ್ಲಿ ಯಾವುದೇ ಸಂಪನ್ಮೂಲವನ್ನು ಮೀಸಲಿಡದೇ ಪಾರಾಗುವ ಅದ್ಭುತ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯಡಿ ಬ್ಯಾಂಕುಗಳು ನೀಡುವ ಸಾಲದ ಮರುಪಾವತಿಗೆ ಸರ್ಕಾರವು ಭರವಸೆ- ಖಾತರಿ ನೀಡುತ್ತದೆ. ತನ್ನ ಬೊಕ್ಕಸದಿಂದ ಸಾಲ ಕೊಟ್ಟು ಅದನ್ನು ಲೆಕ್ಕಕ್ಕೆ ಒಡ್ಡದಿರುವ ಅದ್ಭುತ ಯೋಜನೆಯನ್ನು ಸರ್ಕಾರ ರೂಪಿಸಿದೆ. 1991ಕ್ಕಿಂತ ಹಿಂದಿಗೂ ಇಂದಿಗೂ ಇರುವ ವ್ಯತ್ಯಾಸವೆಂದರೆ– ಈ ಯೋಜನೆಯ ಆಟದಲ್ಲಿ ಖಾಸಗಿ ಬ್ಯಾಂಕುಗಳನ್ನೂ ಸರ್ಕಾರ ಸೇರಿಸಿಕೊಂಡಿದೆ.

ಬಂಡವಾಳ ಯಾವ ಮಟ್ಟದಲ್ಲಿ ಇರಬೇಕೆನ್ನುವ ಬಾಸಲ್ ನಿಯಮಗಳು 1991ಕ್ಕೆ ಮುನ್ನ ಸ್ಪಷ್ಟ ಮತ್ತು ಕಡ್ಡಾಯವಾಗಿರಲಿಲ್ಲ. ಸರ್ಕಾರದ ಪರವಾಗಿ ಬ್ಯಾಂಕುಗಳು ವ್ಯವಹಾರ ನಡೆಸುತ್ತಿವೆ ಎಂಬ ನಂಬಿಕೆ ಮತ್ತು ಭಿನ್ನತೆಯ ಗೆರೆಗಳು ಇರಲಿಲ್ಲವಾದ್ದರಿಂದ ಆಗ ಇದು ಸಾಧ್ಯವಾಗಿತ್ತು. ಆದರೆ ಈಗ ಸರ್ಕಾರಕ್ಕೂ ಬ್ಯಾಂಕುಗಳಿಗೂ ನಡುವಿನ ಸರಹದ್ದಿನ ರೇಖೆ ಸ್ಪಷ್ಟವಾಗಿದೆ. ಹೀಗಾಗಿ ಈ ವ್ಯವಹಾರದಿಂದ ಆಗುವ ನಷ್ಟವನ್ನು ಸರ್ಕಾರ ಮುಂದೊಂದು ದಿನ ಭರಿಸಲೇಬೇಕಾಗುತ್ತದೆ. ಆದರೆ ಬೀಸೋ ದೊಣ್ಣೆ ತಪ್ಪಿದರೆ ಮುಂದೆ ನೋಡೋಣ ಎನ್ನುವ ನಿಲುವು ಸರ್ಕಾರದ್ದು. ಕೋವಿಡ್ ನಂತರದ ಈ ಯೋಜನೆಯಲ್ಲಿ ಖಾಸಗಿ ಬ್ಯಾಂಕುಗಳನ್ನೂ ಷಾಮೀಲು ಮಾಡಿರುವುದರಿಂದ ಬ್ಯಾಂಕುಗಳ ನಿರ್ವಹಣೆಯಲ್ಲಿ ಹೆಚ್ಚಿದ ವಿತ್ತೀಕರಣದ ಭೀತಿಯು ನಿಜವಷ್ಟೇ ಅಲ್ಲ– ಬೃಹತ್ ಗಾತ್ರದಲ್ಲೂ ಇದೆ.

ಇದು ಪ್ರಪಂಚಕ್ಕೂ ವಿತ್ತ ವ್ಯವಸ್ಥೆಗಳಿಗೂ ಕಷ್ಟಕಾಲ. ಬ್ಯಾಂಕುಗಳಿಗೆ ಇನ್ನೂ ಅಧಿಕ ಕಷ್ಟದ ಕಾಲ. ಜನರ ಸಣ್ಣ ವ್ಯವಹಾರಗಳ ಜೇಬಿಗೆ ನೇರ ನಗದು ಪಾವತಿ ಮಾಡಿ ಇತ್ಯರ್ಥ ಮಾಡಬಹುದಾಗಿದ್ದ ಸಹಾಯಧನವನ್ನು, ಲಾಭಾರ್ಥಿಗಳಿಗೆ ನೇರವಾಗಿ ಕೊಡಬಹುದಾಗಿದ್ದ ನೆರವನ್ನು ಸರ್ಕಾರ ಕೊಂಕಣ ಸುತ್ತಿಸಿ ಬ್ಯಾಂಕುಗಳ ಮೂಲಕ ಕೊಡಮಾಡುತ್ತಿದೆ. ವಿತ್ತ ವ್ಯವಸ್ಥೆಯಲ್ಲಿನ ಬಿಕ್ಕಟ್ಟನ್ನು ಬ್ಯಾಂಕುಗಳಿಗೂ ವಿಸ್ತರಿಸುವ ಅಪಾಯಕಾರಿ ಯೋಜನೆಗಳನ್ನು ರೂಪಿಸಿದೆ. ಈಗ ಕೊಡಮಾಡುವ ಸಾಲಗಳು ಸುಸ್ತಿಯಾಗುವುದಿಲ್ಲ ಎಂದು ನಂಬಿ ಅದಕ್ಕಾಗಿ ಪ್ರಾರ್ಥಿಸಿ, ಅದು ಸಾಕಾರಗೊಂಡಾಗ ಮಾತ್ರ ಯಾವುದೇ ವಿತ್ತೀಯ ಪ್ರಭಾವವಿಲ್ಲದೆ ಬಚಾವಾಗಬಹುದಾಗಿದೆ. ಪ್ರಸ್ತುತ ಸರ್ಕಾರಕ್ಕೆ ದೇವರಲ್ಲಿ ಅಚಲ ನಂಬಿಕೆಯಿರುವ ಕಾರಣ, ಆ ಭಗವಂತನೇ ಸರ್ಕಾರವನ್ನೂ-ನಮ್ಮನ್ನೂ ಬಚಾವು ಮಾಡಬಹುದೇನೋ!

ಲೇಖಕ: ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ ಸಾರ್ವಜನಿಕ ನೀತಿ ವಿಭಾಗದ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT