ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್ 1ರಿಂದ ಪ್ಲಾಸ್ಟಿಕ್ ವಿರುದ್ಧ ಅಭಿಯಾನ

ಪ್ಲಾಸ್ಟಿಕ್ ಕೈಚೀಲ ವಿರುದ್ಧ ದೊಡ್ಡ ಪ್ರಮಾಣದ ಕಾರ್ಯಾಚರಣೆ
Last Updated 30 ಮೇ 2018, 9:49 IST
ಅಕ್ಷರ ಗಾತ್ರ

ಶಿವಮೊಗ್ಗ: ವಿಶ್ವ ಪರಿಸರ ದಿನದ ಅಂಗವಾಗಿ ಜೂನ್ 1ರಿಂದ 12ರವರೆಗೆ ಜಿಲ್ಲೆಯಾದ್ಯಂತ ಸಾರ್ವಜನಿಕರ ಸಹಕಾರದೊಂದಿಗೆ ಪ್ಲಾಸ್ಟಿಕ್ ವಿರುದ್ಧ ಅಭಿಯಾನ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ರೂಪುರೇಷೆಗಳ ಸಿದ್ಧಪಡಿಸಲು ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಎಲ್ಲಾ ರೀತಿಯ ಪ್ಲಾಸ್ಟಿಕ್ ಕೈಚೀಲಗಳನ್ನು ಈಗಾಗಲೇ ನಿಷೇಧಿಸಿದ್ದರೂ ಇನ್ನೂ ಮಾರುಕಟ್ಟೆಯಲ್ಲಿ ಬಳಕೆಯಲ್ಲಿವೆ. ಅಭಿಯಾನದ ಅವಧಿಯಲ್ಲಿ ಪ್ಲಾಸ್ಟಿಕ್ ಕೈಚೀಲಗಳ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಬೇಕು. ಪ್ಲಾಸ್ಟಿಕ್ ಕೈಚೀಲಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ಪ್ಲಾಸ್ಟಿಕ್ ಕೈಚೀಲಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಬೇಕು. ಈ ಅವಧಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ರಾಜ್ಯದಲ್ಲೇ ಪ್ಲಾಸ್ಟಿಕ್‌ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಸಹಕರಿಸಬೇಕು. ಇದಕ್ಕಾಗಿ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ಕ್ರಿಯಾ ಯೋಜನೆ ರೂಪಿಸಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.

ಮಕ್ಕಳಲ್ಲಿ ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜೂನ್ 5ರಂದು ಎಲ್ಲಾ ಮಕ್ಕಳು ತಮ್ಮ ಮನೆಯಲ್ಲಿರುವ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‍ಗಳು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಶಾಲೆಗೆ ತೆಗೆದುಕೊಂಡು ಬರುವಂತೆ ಪ್ರೇರೇಪಿಸಬೇಕು. ಈ ರೀತಿ ಅತಿ ಹೆಚ್ಚು ಪ್ಲಾಸ್ಟಿಕ್ ಸಂಗ್ರಹಿಸುವ ಶಾಲೆಗಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು ಎಂದು ಹೇಳಿದರು.

ರಸ್ತೆ ಬದಿಯಲ್ಲಿ ಪಾನಿಪೂರಿ ಸೇರಿ ಸಿದ್ಧ ಆಹಾರ ಮಾರಾಟ ಮಾಡುವವರು ಶುಚಿತ್ವ ಪಾಲಿಸಲು ಕ್ರಮ ಕೈಗೊಳ್ಳಬೇಕು. ಅವರಿಗೆ ಕೈಗವಸು ಬಳಕೆ ಕಡ್ಡಾಯಗೊಳಿಸಬೇಕು. ಆಹಾರ ತಿನಿಸುಗಳನ್ನು ವೃತ್ತ ಪತ್ರಿಕೆಯಲ್ಲಿ ಕಟ್ಟಿ ನೀಡುವುದನ್ನು ನಿರ್ಬಂಧಿಸಲಾಗಿದೆ. ಈ ಕುರಿತು ಜಾಗೃತಿ ಮೂಡಿಸಬೇಕು ಎಂದರು.

ಜೋಗ ಜಲಪಾತಕ್ಕೆ ತೆರಳುವ ರಸ್ತೆಯಲ್ಲಿನ ಎಲ್ಲಾ ಪ್ಲಾಸ್ಟಿಕ್‍ಗಳನ್ನು ಸಂಗ್ರಹಿಸಬೇಕು. ಇನ್ನಿತರ ಪ್ರವಾಸಿ ತಾಣಗಳು, ದೇವಾಲಯಗಳು, ಕಲ್ಯಾಣ ಮಂಟಪಗಳು, ಅಂಗಡಿ ಮುಂಗಟ್ಟುಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿರ್ಬಂಧಿಸಬೇಕು. ಪ್ರವಾಸಿ ತಾಣಗಳು, ಸರ್ಕಾರಿ ಕಚೇರಿಗಳ ಪ್ರವೇಶ ದ್ವಾರದಲ್ಲಿ ಪ್ಲಾಸ್ಟಿಕ್ ಸಂಗ್ರಹ ಚೀಲ ಇಟ್ಟು, ತಮ್ಮಲ್ಲಿರುವ ಪ್ಲಾಸ್ಟಿಕ್‍ಗಳನ್ನು ಅದರಲ್ಲಿ ಹಾಕುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಪರಿಸರ ದಿನಾಚರಣೆ: ಈ ಬಾರಿ ಸಸಿ ನೆಡುವ ಅಭಿಯಾನವನ್ನು ದೊಡ್ಡ ಪ್ರಮಾಣದಲ್ಲಿ ಹಮ್ಮಿಕೊಳ್ಳಬೇಕು. ಎಲ್ಲಾ ಶಾಲಾ ಕಾಲೇಜುಗಳು, ಆಸ್ಪತ್ರೆಗಳು, ಸರ್ಕಾರಿ ಕಚೇರಿಗಳು ಸೇರಿ ಲಭ್ಯವಿರುವ ಎಲ್ಲಾ ಕಡೆಗಳಲ್ಲಿ ಸಸಿಗಳನ್ನು ನೆಡಬೇಕು. ಜೂನ್ 6ರಂದು ಎಲ್ಲಾ ಸರ್ಕಾರಿ ನೌಕರರ ಸಹಯೋಗದಲ್ಲಿ ಶಿವಮೊಗ್ಗ ಸುತ್ತ ಯಾವುದಾದರೂ ಸೂಕ್ತ ಪ್ರದೇಶವನ್ನು ಆಯ್ಕೆ ಮಾಡಿ ಸಾವಿರಕ್ಕೂ ಅಧಿಕ ಸಸಿಗಳನ್ನು ನೆಡುವ ಬೃಹತ್ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ರಾಜಪ್ಪ, ಅರಣ್ಯ ಇಲಾಖೆ, ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT