ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕಕ್ಕೆ ಬೇಕಿದೆಯೇ ಎನ್‌ಆರ್‌ಸಿ?

ಪ್ರಜಾಸತ್ತಾತ್ಮಕ ಪ್ರಕ್ರಿಯೆ ಇಲ್ಲದ ಪ್ರಯತ್ನದಿಂದ ರಾಜಕೀಯ ಸ್ಥಿತಿಯ ಮೇಲೆ ಪರಿಣಾಮ
Last Updated 4 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

ರಾಜ್ಯದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿ ಮಾಡುವ ಬಗ್ಗೆ ಗಂಭೀರವಾದ ಚಿಂತನೆ ನಡೆದಿದೆ ಎಂದು ಕರ್ನಾಟಕ ಸರ್ಕಾರ (ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿರುವುದು) ಘೋಷಿಸಿರುವುದು ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಈ ವಿಚಾರ ಮತ್ತು ಅದರ ವಿವರಗಳ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಆಗಿದೆಯೇ? ಕರ್ನಾಟಕ ರಾಜ್ಯದಲ್ಲಿ ಭಾರಿ ಸಂಖ್ಯೆಯಲ್ಲಿ ಇರುವ ವಿದೇಶಿಯರು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಸಮರ್ಥಿಸಿಕೊಳ್ಳುವ ದತ್ತಾಂಶಗಳು ಇವೆಯೇ? ಎನ್‌ಆರ್‌ಸಿ ಜಾರಿ ಮಾಡಲು ಇರುವ ಬೇರೆ ಕಾರಣಗಳೇನು ಮತ್ತು ಅಸ್ಸಾಂನಲ್ಲಿ ಅನುಷ್ಠಾನವಾಗಿರುವ ಈ ಪ್ರಕ್ರಿಯೆಯಿಂದ ರಾಜ್ಯ ಕಲಿತಿರುವ ಪಾಠಗಳೇನು?

ವಿಧಾನಸಭೆಯಲ್ಲಿ ಖಾಲಿ ಇರುವ ಸ್ಥಾನಗಳಿಗಾಗಿ ಉಪಚುನಾವಣೆ ಬಾಕಿ ಇದೆ ಮತ್ತು ವಿಧಾನಸಭೆ ಈಗ ಪೂರ್ಣ ಸದಸ್ಯಬಲವನ್ನು ಹೊಂದಿಲ್ಲ; ಇಂತಹ ಸಂದರ್ಭದಲ್ಲಿ ಎನ್‌ಆರ್‌ಸಿಯ ಚರ್ಚೆಯನ್ನು ವಿಧಾನಸಭೆಯ ಪರಿಶೀಲನೆಗೆ ಒಳಪಡಿಸುವುದನ್ನು ಮುಂದೂಡುವುದು ಅಗತ್ಯ. ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಅನುಸರಿಸದೆ ಈ ಯೋಜನೆಯನ್ನು ಜಾರಿ ಮಾಡುವ ಯಾವುದೇ ಪ್ರಯತ್ನವು ರಾಜ್ಯದ ರಾಜಕೀಯ ಸ್ಥಿತಿಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರಲಿದೆ. ಎನ್‌ಆರ್‌ಸಿ ಜಾರಿಗೆ ಕಾರಣವೇನು ಮತ್ತು ಅದರಿಂದ ಜನರಿಗೆ ಆಗುವ ಪ್ರಯೋಜನವೇನು ಎಂಬುದನ್ನು ಗೃಹ ಸಚಿವ ಮತ್ತು ಸರ್ಕಾರವು ಗುರುತಿಸಬೇಕಾದ ಅಗತ್ಯ ಇದೆ.

ರಾಜ್ಯಕ್ಕೆ, ಅದರಲ್ಲೂ ವಿಶೇಷವಾಗಿ ಬೆಂಗಳೂರಿಗೆ ಬರುವ ವಲಸಿಗರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ (2011ರ ಜನಗಣತಿ ಪ್ರಕಾರ, ಬೆಂಗಳೂರಿನಲ್ಲಿ ಶೇ 64ರಷ್ಟು ಜನರು ರಾಜ್ಯದ ಹೊರಗಿನವರು). ಇದು ನಗರದ ಆರ್ಥಿಕ ಅಭಿವೃದ್ಧಿಯ ಸಂಕೇತ. ಕೋಲ್ಕತ್ತ, ಮುಂಬೈ ಮತ್ತು ದೆಹಲಿಯಂತಹ ನಗರಗಳ ರೀತಿಯಲ್ಲಿ ಬೆಂಗಳೂರು ಕೂಡ ಮಹಾನಗರವಾಗಿ ಬೆಳೆಯಲು ವಲಸಿಗರೂ ಕಾರಣ. ದೊಡ್ಡ ವ್ಯಾಪಾರದಿಂದ ತೊಡಗಿ ದೈಹಿಕ ಶ್ರಮ ಬೇಡುವ ಕೆಲಸ ಮಾಡುವ ಕಾರ್ಮಿಕ ವರ್ಗದವರೆಗೆ ಅವರು ಒಳಗೊಳ್ಳುತ್ತಾರೆ. ವೃದ್ಧಿಯಾಗುತ್ತಲೇ ಇರುವ ನಗರದ ಆರ್ಥಿಕತೆಯಲ್ಲಿ ವಲಸಿಗರ ಪಾಲು ದೊಡ್ಡದು. ಈ ವಲಸಿಗರಲ್ಲಿ ವಿದೇಶಿಯರ ಸಂಖ್ಯೆ ಬಹಳ ಕಡಿಮೆ. ಅವರನ್ನು ನಿಯಂತ್ರಿಸುವ ಅಥವಾ ‘ಅಪರಾಧ ಚಟುವಟಿಕೆಗಳು’ ಅಥವಾ ‘ಭಯೋತ್ಪಾದನೆ’ (ನಮ್ಮ ಕಾಲದ ಗುಮ್ಮ) ತಡೆಯುವುದಕ್ಕೆ ಬೇಕಾದ ಕ್ರಮಗಳನ್ನು ಎನ್‌ಆರ್‌ಸಿ ಇಲ್ಲದೆಯೇ ಕೈಗೊಳ್ಳಬಹುದು ಮತ್ತು ಕೈಗೊಳ್ಳಲೇಬೇಕು.

ಎನ್‌ಆರ್‌ಸಿ ಜಾರಿ ಅಥವಾ ವಲಸೆ ನಿಯಂತ್ರಣದ ಇತರ ಯಾವುದೇ ಕ್ರಮಗಳು ದತ್ತಾಂಶ ಮತ್ತು ಪುರಾವೆ
ಸಹಿತ ಸಂಶೋಧನೆಯನ್ನು ಆಧರಿಸಿರಬೇಕು. ಅಕ್ರಮ ವಲಸಿಗರು ಅಪರಾಧಿಗಳು ಮತ್ತು ಭಯೋತ್ಪಾ
ದಕರಾಗಿ ಪರಿವರ್ತನೆಗೊಳ್ಳ ಬಹುದಾದವರು ಎಂಬ ಗುಮ್ಮನನ್ನು ಆವಾಹಿಸಿಕೊಳ್ಳುವುದು ಅಪಪ್ರಚಾರ ಮಾತ್ರವಲ್ಲದೆ ಒಳ್ಳೆಯ ಆಡಳಿತದ ನೆಲೆಗಟ್ಟ‌ನ್ನೇ ಸೊಟ್ಟಗಾಗಿಸುತ್ತದೆ.

ಕಟ್ಟಡ ನಿರ್ಮಾಣ, ಸೇವಾ ವಲಯ ಮತ್ತು ಕಾಫಿ ತೋಟಗಳಲ್ಲಿ ಶ್ರಮ ಬೇಡುವ ಕೆಲಸಗಳನ್ನು ಮಾಡುವ ಕಾರ್ಮಿಕರಲ್ಲಿ ದೊಡ್ಡ ಸಂಖ್ಯೆಯ ಮಂದಿ ಈಶಾನ್ಯ ಭಾರತದವರು ಎಂಬುದನ್ನು ನಾವು ಗುರುತಿಸಲೇಬೇಕು. ಈ ವಲಸೆ ವ್ಯವಸ್ಥೆ ಮತ್ತು ಈ ಜನರು ಕರ್ನಾಟಕದ ಆರ್ಥಿಕತೆಯ ಜತೆ ಹೊಂದಿರುವ ನಂಟನ್ನು ಅಸ್ತವ್ಯಸ್ತಗೊಳಿಸುವುದು ರಾಜ್ಯದ ಮೇಲೆ ತೀವ್ರ ಪರಿಣಾಮವನ್ನು ಉಂಟು ಮಾಡಲಿದೆ. ಅಕ್ಟೋಬರ್‌ 2ರಿಂದ ಪ್ಲಾಸ್ಟಿಕ್‌ ನಿಷೇಧದ ಘೋಷಣೆಯನ್ನು ಆರ್ಥಿಕ ಹಿಂಜರಿತದ ಕಾರಣಕ್ಕೆ ಕೇಂದ್ರ ಸರ್ಕಾರವು ಕೈಬಿಟ್ಟಿದೆ. ಇಂತಹ ಸಂದರ್ಭದಲ್ಲಿ ಎನ್‌ಆರ್‌ಸಿಯನ್ನು ಜಾರಿ ಮಾಡಿ ಅರ್ಥ ವ್ಯವಸ್ಥೆಯ ದೊಡ್ಡ ವಲಯಕ್ಕೆ ಪೆಟ್ಟು ಕೊಡಲುಕರ್ನಾಟಕ ಸರ್ಕಾರ ಸಿದ್ಧವಾಗಿದೆಯೇ?

ಎನ್‌ಆರ್‌ಸಿ ಜಾರಿಯ ಜತೆಗೆ ತಳಕು ಹಾಕಿಕೊಂಡಿರುವ ಎಲ್ಲ ಸಮಸ್ಯೆಗಳನ್ನು ಅಸ್ಸಾಂನ ಅನುಭವವು ನಮ್ಮ ಮುಂದೆ ಇರಿಸಿದೆ. ಅದಕ್ಷತೆ ಮತ್ತು ಅಸ್ಪಷ್ಟತೆಯ ಆರೋಪಗಳ ಸುಳಿಯಲ್ಲಿ ಸಿಲುಕಿರುವ ಈ ಪ್ರಕ್ರಿಯೆಯು ಜನರಲ್ಲಿ (ಎಲ್ಲ ವರ್ಗಗಳಲ್ಲಿಯೂ) ಸಂಕಷ್ಟ ಸೃಷ್ಟಿಸಿದೆ. ಅದಷ್ಟೇ ಅಲ್ಲ, ಈ ಇಡೀ ಪ್ರಕ್ರಿಯೆ ಪರಿಣಾಮಕಾರಿಯೂ ಆಗಿಲ್ಲ. ಇದನ್ನು ಪುನರಾವರ್ತಿಸಲು ಕರ್ನಾಟಕ ಬಯಸುತ್ತಿದೆಯೇ? ಕಾನೂನು ಪರಿಭಾಷೆಯಲ್ಲಿ ‘ಪೌರರಲ್ಲ’ ಎಂಬ ಸಣ್ಣ ಗುಂಪನ್ನು ನಿಯಂತ್ರಿಸುವುದಕ್ಕಾಗಿ ಇಷ್ಟೊಂದು ದೊಡ್ಡ ಬೆಲೆ ತೆರಲು ಜನರು ತಯಾರಿದ್ದಾರೆಯೇ? ‘ವಿದೇಶಿಯರ ಬಂಧನ ಕೇಂದ್ರ’ವೊಂದನ್ನು (ಫಾರಿನರ್ಸ್‌ ಡಿಟೆನ್ಷನ್‌ / ಹೋಲ್ಡಿಂಗ್‌ ಸೆಂಟರ್‌) ನೆಲಮಂಗಲದಲ್ಲಿ ಸ್ಥಾಪಿಸುವುದಂತೂ ಏನೇನೂ ಚೆನ್ನಾಗಿರುವುದಿಲ್ಲ.‘ಅಕ್ರಮ ವಿದೇಶಿಯರ’ ಸಂಖ್ಯೆಯು ಪ್ರತ್ಯೇಕವಾದ ಕೇಂದ್ರವೊಂದನ್ನು ಸ್ಥಾಪಿಸುವಷ್ಟು ಹೆಚ್ಚಾಗಿದೆಯೇ? ಅಪರಾಧ ಮತ್ತು ಅಕ್ರಮ ವಲಸೆಯ ಸಮಸ್ಯೆಯನ್ನು ಕಠೋರ ಪ್ರಕ್ರಿಯೆಯನ್ನು ಹೇರುವ ಮೂಲಕವೇ ಪರಿಹರಿಸಬೇಕಾದಷ್ಟರ ಮಟ್ಟಿಗೆ ನಮ್ಮ ಪೊಲೀಸ್‌, ನ್ಯಾಯಾಂಗ ಮತ್ತು ಆಡಳಿತ ವ್ಯವಸ್ಥೆ ಅದಕ್ಷವಾಗಿವೆಯೇ?

ಆಧಾರ್‌ ನೋಂದಣಿ, ನೋಟು ರದ್ದತಿ ಮತ್ತು ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ (ಜಿಎಸ್‌ಟಿ) ಜಾರಿಯು ಆಡಳಿತದ ತಾಂತ್ರಿಕ ಕ್ರಮವಾಗಿಯಷ್ಟೇ ಉಳಿದಿವೆ, ಇವುಗಳಿಂದಾಗಿ ಬಹುಸಂಖ್ಯಾತ ಜನರಿಗೆ ಯಾವುದೇ ನಿಜವಾದ ಪ್ರಯೋಜನ ದೊರೆತಿಲ್ಲ. ಅದೇ ರೀತಿಯಲ್ಲಿ, ಕಾನೂನುಬದ್ಧ ಪೌರರತ್ತ ಸರ್ಕಾರ ಗಮನ ಹರಿಸುತ್ತದೆ ಎಂಬುದನ್ನು ಸೂಚಿಸುವ ರಾಜಕೀಯ ತಂತ್ರವಷ್ಟೇ ಆಗಲಿದೆ ಎನ್‌ಆರ್‌ಸಿ ಜಾರಿ. ಅದಲ್ಲದೆ, ಎನ್‌ಆರ್‌ಸಿಯು ಅಸಂಖ್ಯ ರೀತಿಯಲ್ಲಿ ಸರ್ಕಾರಕ್ಕೆ ಹೊರೆಯಾಗಿ ಪರಿಣಮಿಸಲಿದೆ. ಪೌರರಿಗೆ ಅವರ ಘನತೆ, ನ್ಯಾಯ ಮತ್ತು ಸಮಗ್ರ ಸೌಖ್ಯದ ನಿಜವಾದ ಹಕ್ಕುಗಳು ನಷ್ಟವಾಗಲಿವೆ.

ರಾಜ್ಯವು ತುರ್ತಾಗಿ ಗಮನ ಹರಿಸಬೇಕಿರುವ ವಿಚಾರಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಬಲ್ಲ ದೈತ್ಯ ಪ್ರಕ್ರಿಯೆಯಾಗಿ ಮಾತ್ರ ಎನ್‌ಆರ್‌ಸಿಯನ್ನು ವಿಶ್ಲೇಷಿಸಬೇಕು. ಇತ್ತೀಚಿನ ಬರಗಾಲ– ಪ್ರವಾಹ– ಸಾಂಕ್ರಾಮಿಕ ರೋಗಗಳು, ನಗರಗಳಲ್ಲಿರುವ ಹಲವು ಕೈಗಾರಿಕೆಗಳೂ ಸೇರಿ ಒಟ್ಟು ಅರ್ಥ ವ್ಯವಸ್ಥೆಯ ಹಿಂಜರಿತ, ಆರೋಗ್ಯ ಮತ್ತು ಶಿಕ್ಷಣ ಸೂಚ್ಯಂಕದಲ್ಲಿ ಇಳಿಕೆಯಂತಹ ವಿಚಾರಗಳು ಆಡಳಿತ ವ್ಯವಸ್ಥೆಯು ತಕ್ಷಣ ಗಮನ ಹರಿಸಬೇಕಾದ ವಿಚಾರಗಳು. ಪೌರರ ಅಭಿವೃದ್ಧಿಗಾಗಿ ಪಂಚಾಯತ್‌ರಾಜ್‌ ವ್ಯವಸ್ಥೆಯಂತಹ ಪ್ರಜಾಸತ್ತಾತ್ಮಕ ರಚನೆಯನ್ನು ಆರಂಭಿಸಿದ ರಾಜ್ಯವು ಈಗ ಬಲಪಂಥೀಯ ಪಕ್ಷವೊಂದರ ರಾಜಕೀಯ ಮಹತ್ವಾಕಾಂಕ್ಷೆಗೆ ಗುರಿಯಾಗಿದೆ ಎಂದೇ ಎನ್‌ಆರ್‌ಸಿ ಅನುಷ್ಠಾನದ ಪ್ರಯತ್ನವನ್ನು ನೋಡಬೇಕಾಗುತ್ತದೆ.

ಕರ್ನಾಟಕದ ಜನರು ಮತ್ತು ಚುನಾಯಿತ ಪ್ರತಿನಿಧಿಗಳು ತಮ್ಮ ಅಸ್ಮಿತೆ ಮತ್ತು ರಾಜಕೀಯ ಹಾದಿ ಉಳಿಸಿಕೊಳ್ಳಲು ಮತ್ತು ದೃಢವಾಗಿ ಪ್ರತಿಪಾದಿಸಲು ಬಯಸಿದ್ದರೆ ತಮ್ಮ ಘನತೆ ಹಾಗೂ ಮಾನವೀಯತೆಯನ್ನು ಉಳಿಸಿಕೊಳ್ಳುವಂತಹ ಸ್ಥಳೀಯ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯ ಇದೆ. ಈ ವಿಚಾರದಲ್ಲಿ ಮಾಡಿಕೊಳ್ಳುವ ಯಾವುದೇ ರಾಜಿಯು ಪ್ರಗತಿಪರ ರಾಜ್ಯ ಮತ್ತು ಪ್ರದೇಶ ಎಂಬ ಕರ್ನಾಟಕದ ವರ್ಚಸ್ಸನ್ನು ಇನ್ನಷ್ಟು ಕುಗ್ಗಿಸುವುದನ್ನಷ್ಟೇ ಮಾಡುತ್ತದೆ.

ಲೇಖಕಿ: ಸಾಮಾಜಿಕ ಮಾನವಶಾಸ್ತ್ರಜ್ಞೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT