ಸೋಮವಾರ, ಜೂನ್ 21, 2021
21 °C
ಆನ್‍ಲೈನ್‌ನಲ್ಲಿ ವಸ್ತುಗಳನ್ನು ಖರೀದಿಸುವಾಗ ಉಂಟಾಗುವ ಅವ್ಯವಸ್ಥೆಗೆ ಹೊಸ ನಿಯಮದಿಂದ ಕಡಿವಾಣ

ಆನ್‌ಲೈನ್‌ ಖರೀದಿ: ಗ್ರಾಹಕನಿಗೆ ಬಲ

ವೈ.ಜಿ.ಮುರಳೀಧರನ್ Updated:

ಅಕ್ಷರ ಗಾತ್ರ : | |

Prajavani

ಬಳಕೆದಾರರೊಬ್ಬರು ಆನ್‍ಲೈನ್ ಮೂಲಕ ಪಾದರಕ್ಷೆ ಆರ್ಡರ್ ಮಾಡಿದ್ದರು. ಪಾದರಕ್ಷೆಗಳೇನೋ ತಲುಪಿದವು. ಆದರೆ ಅವರ ದುರದೃಷ್ಟ, ಎರಡೂ ಪಾದರಕ್ಷೆಗಳು ಬಲಗಾಲಿನದ್ದೇ ಆಗಿದ್ದವು. ಮತ್ತೊಬ್ಬರು ಮನೋವಿಜ್ಞಾನಕ್ಕೆ ಸಂಬಂಧಪಟ್ಟ ಪುಸ್ತಕವನ್ನು ಆರ್ಡರ್ ಮಾಡಿದ್ದರೂ ಬಂದದ್ದು ಸಣ್ಣಕಥೆಗಳ ಸಂಕಲನ. ಇನ್ನೊಬ್ಬ ಬಳಕೆದಾರರು ಏನನ್ನೂ ಆರ್ಡರ್ ಮಾಡದಿದ್ದರೂ ಅವರ ವಿಳಾಸಕ್ಕೆ ಯಾವುದೋ ಔಷಧಿಯ ಪ್ಯಾಕೆಟ್ ಬಂದಿದೆ. ಈ ಮೂವರೂ ಬಳಕೆದಾರರು ದೂರು ದಾಖಲಿಸಿ ಹತ್ತಾರು ದಿನಗಳಾದರೂ ಯಾರಿಂದಲೂ ಉತ್ತರವಿಲ್ಲ.

ತಾವು ಆರ್ಡರ್ ಮಾಡುವ ವಸ್ತುವಿಗೆ ಬದಲಾಗಿ ಮತ್ತೊಂದು ವಸ್ತುವನ್ನು ಸರಬರಾಜು ಮಾಡುವುದು, ವಸ್ತು ತಲುಪದಿದ್ದರೂ ಅದನ್ನು ಬಳಕೆದಾರರಿಗೆ ‘ನೇರವಾಗಿ ತಲುಪಿಸಲಾಗಿದೆ’ ಎಂಬ ಸಂದೇಶ ಕಳುಹಿಸುವುದು, ಹಿಂತಿರುಗಿಸಿದ ವಸ್ತುವಿಗೆ ಹಣ ಮರುಪಾವತಿ ಮಾಡದಿರುವಂತಹ ಸಮಸ್ಯೆಗಳು ಆನ್‌ಲೈನ್‌ ಮೂಲಕ ವಸ್ತುಗಳನ್ನು ಖರೀದಿಸುವ ಗ್ರಾಹಕರನ್ನು ಕಾಡುತ್ತಿವೆ. ಆನ್‍ಲೈನ್ ವ್ಯಾಪಾರದಲ್ಲಿನ ಇಂತಹ ಕುಂದುಕೊರತೆಗಳಿಗೆ ಪರಿಹಾರ ನೀಡುವ ವೇದಿಕೆ ಇದುವರೆಗೆ ಇರಲಿಲ್ಲ. ಗ್ರಾಹಕ ವೇದಿಕೆಗಳಲ್ಲಿ ದೂರು ಸಲ್ಲಿಕೆಯಾದರೂ ತಾಂತ್ರಿಕ ಕಾರಣಗಳಿಗಾಗಿ ದೂರುಗಳನ್ನು ತಿರಸ್ಕರಿಸಲಾಗುತ್ತಿತ್ತು. ಆದರೆ, ಈಗ ಗ್ರಾಹಕ ಸಂರಕ್ಷಣಾ ಅಧಿನಿಯಮ– 2019ರ ಅಡಿಯಲ್ಲಿ ಮಾಡಿರುವ ಇ-ಕಾಮರ್ಸ್ ನಿಯಮಗಳು (ಜುಲೈ 23ರಿಂದ ಜಾರಿಗೆ ಬಂದಿವೆ) ಸಹಾಯಕ್ಕೆ ಬರಲಿವೆ.

ಆನ್‍ಲೈನ್ ಮಾರಾಟದಲ್ಲಿ ಇ- ಕಾಮರ್ಸ್ ಎನ್‍ಟಿಟಿ, ಇನ್ವೆಂಟರಿ (ದಾಸ್ತಾನು) ಇ-ಕಾಮರ್ಸ್ ಎನ್‌ಟಿಟಿ ಹಾಗೂ ಮಾರ್ಕೆಟ್ ಪ್ಲೇಸ್ (ಮಾರುಕಟ್ಟೆ) ಇ-ಕಾಮರ್ಸ್ ಎನ್‍ಟಿಟಿ ಎಂಬ ಮೂರು ಸಂಸ್ಥೆಗಳು ಪಾತ್ರ ವಹಿಸುತ್ತವೆ. ಇವೆಲ್ಲವುಗಳಿಗೆ ಇ-ಕಾಮರ್ಸ್ ನಿಯಮ ಅನ್ವಯಿಸಲಿದೆ. ವಿದ್ಯುನ್ಮಾನ ವ್ಯವಹಾರದಲ್ಲಿ ಈ ಸಂಸ್ಥೆಗಳ ಕರ್ತವ್ಯ, ಜವಾಬ್ದಾರಿ ಮತ್ತು ಅನುಸರಿಸಬೇಕಾದ ವಿಧಾನವನ್ನು ನಿಯಮದಲ್ಲಿ ಸೂಚಿಸಲಾಗಿದೆ.

ಇ-ಕಾಮರ್ಸ್ ಎನ್‍ಟಿಟಿ ಎಂದರೆ, ಡಿಜಿಟಲ್ ಅಥವಾ ವಿದ್ಯುನ್ಮಾನ ವೇದಿಕೆಗಳನ್ನು (ಪ್ಲಾಟ್‍ಫಾರ್ಮ್) ಹೊಂದಿರುವ ಸಂಸ್ಥೆಗಳು. ಈ ಎನ್‍ಟಿಟಿಗಳು, ಮಾರಾಟಗಾರರು ತಮ್ಮ ಸರಕುಗಳನ್ನು ಬಳಕೆದಾರರಿಗೆ ಮಾರಾಟ ಮಾಡಲು ಒಂದು ವೇದಿಕೆಯನ್ನು ಮಾತ್ರ ಒದಗಿಸುತ್ತವೆ. ಯಾವುದೇ ಸರಕನ್ನು ತಾನೇ ನೇರವಾಗಿ ಮಾರಾಟ ಮಾಡುವುದಿಲ್ಲ. ಇನ್ವೆಂಟರಿ ಇ-ಕಾಮರ್ಸ್ ಎನ್‍ಟಿಟಿಗಳು ಸರಕುಗಳನ್ನು ದಾಸ್ತಾನು ಮಾಡಿ, ಬಳಕೆದಾರರಿಗೆ ನೇರವಾಗಿ ಮಾರಾಟ ಮಾಡುತ್ತವೆ. ಇವು ಒಂದೇ ಬ್ರ್ಯಾಂಡ್ ಸರಕನ್ನು ದಾಸ್ತಾನು ಮಾಡಿ, ಚಿಲ್ಲರೆಯಾಗಿ ಹಾಗೂ ವಿವಿಧ ಮಾರಾಟ ಮಾದರಿಗಳ ಮೂಲಕ ಮಾರಾಟ ಮಾಡಬಹುದು. ಮಾರಾಟಗಾರರು ಮತ್ತು ಬಳಕೆದಾರರನ್ನು ಆನ್‍ಲೈನ್‍ನಲ್ಲಿ ಭೇಟಿ ಮಾಡಿಸಲು ಡಿಜಿಟಲ್ ಅಥವಾ ವಿದ್ಯುನ್ಮಾನ ಜಾಲದಲ್ಲಿ ಮಾಹಿತಿ ತಂತ್ರಜ್ಞಾನದ ಪ್ಲಾಟ್‍ಫಾರ್ಮ್ ಒದಗಿಸುವುದೇ ಮಾರ್ಕೆಟ್ ಪ್ಲೇಸ್ ಇ-ಕಾಮರ್ಸ್ ಎನ್‍ಟಿಟಿ.

ಬಳಕೆದಾರರ ಹಿತರಕ್ಷಣೆಯ ದೃಷ್ಟಿಯಿಂದ, ಇ-ಕಾಮರ್ಸ್ ವ್ಯಾಪಾರದಲ್ಲಿರುವ ಈ ಮೂರೂ ಪಾತ್ರಧಾರಿಗಳು ಅನೇಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇ-ಕಾಮರ್ಸ್ ಎನ್‍ಟಿಟಿಯು ಕಂಪನಿ ಅಧಿನಿಯಮ ಮತ್ತು ವಿದೇಶಿ ವಿನಿಮಯ ನಿರ್ವಹಣಾ ಅಧಿನಿಯಮದ ಅನುಸಾರ ನೋಂದಾಯಿಸಲ್ಪಟ್ಟಿರಬೇಕು. ಗ್ರಾಹಕ ಸಂರಕ್ಷಣಾ ಅಧಿನಿಮಯ ಮತ್ತು ಇತರ ನಿಯಮಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಹೊತ್ತಿರುವ ಒಬ್ಬ ಹಿರಿಯ ಅಧಿಕಾರಿಯನ್ನು ನೇಮಕ ಮಾಡಬೇಕು. ಎನ್‍ಟಿಟಿಯು ತನ್ನ ಸಂಸ್ಥೆಯ ಹೆಸರು, ಭೌಗೋಳಿಕ ವಿಳಾಸ, ವೆಬ್‍ ಜಾಲತಾಣದ ವಿವರಗಳನ್ನು ಸಾರ್ವಜನಿಕರಿಗೆ ಗೋಚರಿಸುವ ರೀತಿಯಲ್ಲಿ ವೆಬ್‍ ಜಾಲತಾಣದಲ್ಲಿ ಅಳವಡಿಸಬೇಕು. ಯಾವುದೇ ರೀತಿಯ ಅನುಚಿತ ವ್ಯಾಪಾರ ಪದ್ಧತಿಯನ್ನು ಅನುಸರಿಸಬಾರದು.

ಇ-ಕಾಮರ್ಸ್ ನಿಯಮದಲ್ಲಿ ಬಳಕೆದಾರರ ಕುಂದುಕೊರತೆ ನಿವಾರಣೆಗೆ ಹೆಚ್ಚಿನ ಪ್ರಾಮುಖ್ಯ ನೀಡಲಾಗಿದೆ. ಬಳಕೆದಾರರಿಂದ ಬರುವ ಪ್ರತೀ ದೂರನ್ನೂ ಸ್ವೀಕರಿಸಿ ಅದಕ್ಕೆ 48 ಗಂಟೆಯ ಕಾಲಮಿತಿಯೊಳಗೆ ಸ್ವೀಕೃತಿ ನೀಡಬೇಕಿದೆ. ದೂರುಗಳಿಗೆ ಪ್ರತ್ಯೇಕ ಡಾಕೆಟ್ ಸಂಖ್ಯೆಯನ್ನು ನೀಡುವುದು ಇ-ಕಾಮರ್ಸ್ ಎನ್‍ಟಿಟಿಗಳ ಜವಾಬ್ದಾರಿ. ಬಳಕೆದಾರರು ಈ ಸಂಖ್ಯೆಯನ್ನು ಉಪಯೋಗಿಸಿಕೊಂಡು, ದೂರಿಗೆ ಸಂಬಂಧಿಸಿದ  ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂಬುದನ್ನು ತಿಳಿದುಕೊಳ್ಳಬಹುದು. ದೂರುಗಳನ್ನು ಸ್ವೀಕರಿಸಿದ ಒಂದು ತಿಂಗಳ ಒಳಗೆ ಅದನ್ನು ಪರಿಹರಿಸಬೇಕು.

ಹೊರದೇಶಗಳಿಂದ ಆಮದು ಮಾಡಿಕೊಂಡ ಸರಕುಗಳನ್ನು ಮಾರಾಟಕ್ಕೆ ನೀಡುವಾಗ, ದೇಶದ ಹೆಸರು, ಯಾರಿಂದ ಆಮದು ಮಾಡಿಕೊಳ್ಳಲಾಗಿದೆ ಮತ್ತು ಅದನ್ನು ಮಾರಾಟ ಮಾಡುತ್ತಿರುವವರ ಸಂಪೂರ್ಣ ಮಾಹಿತಿಯನ್ನು ಇ-ಕಾಮರ್ಸ್ ಎನ್‍ಟಿಟಿಗಳು ತಮ್ಮ ವೆಬ್‍ ಜಾಲತಾಣದಲ್ಲಿ ಪ್ರಕಟಿಸಬೇಕು. ಬಳಕೆದಾರರು ಬಯಸುವ ಸರಕುಗಳನ್ನು ಪ್ರತ್ಯಕ್ಷವಾಗಿ ಪರೀಕ್ಷಿಸುವ ಅವಕಾಶವಿಲ್ಲದ ಕಾರಣ, ಇ-ಕಾಮರ್ಸ್ ಸಂಸ್ಥೆಯು ಸರಕಿನ ಬಗ್ಗೆ ಪೂರ್ಣ ಮಾಹಿತಿಯನ್ನು ತನ್ನ ವೆಬ್‍ ಜಾಲತಾಣದಲ್ಲಿ ನೀಡಬೇಕು. ಬಳಕೆದಾರರು ಆನ್‍ಲೈನ್ ಮೂಲಕ ಪಾವತಿಸುವ ಹಣದ ಸುರಕ್ಷತೆಗೆ ಇ-ಕಾಮರ್ಸ್ ಎನ್‍ಟಿಟಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಿಯಮ ಹೇಳುತ್ತದೆ.

ಬಳಕೆದಾರರು ಖರೀದಿಸಬೇಕೆಂದಿದ್ದ ಸರಕನ್ನು ತಿರಸ್ಕರಿಸಿದಲ್ಲಿ ಇ-ಕಾಮರ್ಸ್ ಎನ್‌ಟಿಟಿಯು ಬಳಕೆದಾರರಿಂದ ಕ್ಯಾನ್ಸಲೇಷನ್ ಶುಲ್ಕವನ್ನು ವಸೂಲು ಮಾಡುತ್ತಿದೆ. ಹೊಸ ನಿಯಮದ ಅನುಸಾರ, ಹಾಗೆ ಮಾಡುವಂತಿಲ್ಲ. ಕ್ಯಾನ್ಸಲೇಷನ್ ಶುಲ್ಕವನ್ನು ಇ-ಕಾಮರ್ಸ್ ಎನ್‍ಟಿಟಿ ಮಾರಾಟಗಾರರಿಗೆ ನೀಡಿದ್ದಲ್ಲಿ ಮಾತ್ರ ಬಳಕೆದಾರರಿಂದ ಅದನ್ನು ವಸೂಲು ಮಾಡಬಹುದು. ಇ-ಕಾಮರ್ಸ್ ಎನ್‍ಟಿಟಿಗಳು ಯಾವುದೇ ಕಾರಣಕ್ಕೂ ಸರಕಿನ ಬೆಲೆಯನ್ನು ಬದಲಿಸುವಂತಿಲ್ಲ ಅಥವಾ ಅಧಿಕ ಶುಲ್ಕವನ್ನು ವಿಧಿಸುವಂತಿಲ್ಲ.

ಒಂದು ವಸ್ತುವನ್ನು ಖರೀದಿಸಲು ಮುಂದಾದಾಗ ಒಂದು ನಿರ್ದಿಷ್ಟ ಬ್ರ್ಯಾಂಡ್ ಅಥವಾ ಹಿಂದೆ ಖರೀದಿಸಿದ್ದ ಬ್ರ್ಯಾಂಡ್‍ಗೆ ಸ್ಪರ್ಧಿಯಾಗಿರುವ ಬ್ರ್ಯಾಂಡ್‌ ಮೊದಲು ಗೋಚರಿಸುವುದನ್ನು ಬಳಕೆದಾರರು ಗಮನಿಸಿರಬಹುದು. ಇದರ ಹಿಂದೆ ಮಾಹಿತಿ ತಂತ್ರಜ್ಞಾನದ ಕೈಚಳಕವಿದೆ ಹಾಗೂ ಇ-ಕಾಮರ್ಸ್ ಎನ್‌ಟಿಟಿ, ತಯಾರಕರು ಮತ್ತು ಮಾರಾಟಗಾರರ ಗುಂಪುಗಾರಿಕೆ ಇದೆ. ಇದು ಬಳಕೆದಾರರನ್ನು ಒಂದು ಬ್ರ್ಯಾಂಡ್‍ನತ್ತ ಸೆಳೆಯುವ ತಂತ್ರ. ಸಾಮಾನ್ಯವಾಗಿ ಬಳಕೆದಾರರು ಅದನ್ನೇ ಖರೀದಿಸುತ್ತಾರೆ ಎಂಬುದು ಅಧ್ಯಯನಗಳಿಂದ ದೃಢಪಟ್ಟಿದೆ. ಈ ಕಾರಣದಿಂದ, ತಾವು ತಯಾರಿಸುವ ಸರಕು ಅಥವಾ ತಮ್ಮ ಸಂಸ್ಥೆಯ ಹೆಸರು ಜಾಲತಾಣಗಳಲ್ಲಿ ಮೊದಲು ಕಾಣಿಸಿಕೊಳ್ಳಬೇಕೆಂದು ತಯಾರಕರು ಇಚ್ಛಿಸುತ್ತಾರೆ. ಇದಕ್ಕಾಗಿ ಕೋಟ್ಯಂತರ ಹಣ ಖರ್ಚು ಮಾಡುತ್ತಾರೆ. ಆದರೆ, ಇದರಲ್ಲಿ ನಡೆಯುತ್ತಿರುವ ಅನುಚಿತ ವ್ಯಾಪಾರ ರೀತಿಗೆ ಕಡಿವಾಣ ಹಾಕಲು ನಿಯಮ ಪ್ರಯತ್ನಿಸಿದೆ. ಇ-ಕಾಮರ್ಸ್ ಎನ್‍ಟಿಟಿಗಳು ಮಾರಾಟಗಾರರೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳ ಬಗ್ಗೆ ಮಾಹಿತಿ ಒದಗಿಸಬೇಕೆಂದು ನಿಯಮ ಹೇಳುತ್ತದೆ.

ಆನ್‍ಲೈನ್ ಮೂಲಕ ಸರಕು ವಿತರಿಸುವ ಮಾರಾಟಗಾರರು ಸಹ ಇ-ಕಾಮರ್ಸ್ ಎನ್‍ಟಿಟಿಯ ಜಾಲತಾಣದಲ್ಲಿ ಅಗತ್ಯ ಮಾಹಿತಿ ಒದಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆನ್‍ಲೈನ್ ಮೂಲಕ ಖರೀದಿಸುವ ಬಳಕೆದಾರರು ತಾವು ಖರೀದಿಸಲು ಇಷ್ಟಪಡುವ ವಸ್ತುಗಳ ಬಗ್ಗೆ ಇತರ ಬಳಕೆದಾರರು ತಮ್ಮ ಅನಿಸಿಕೆ ವ್ಯಕ್ತಪಡಿಸಿರುವುದನ್ನು ಕಾಣಬಹುದು. ಕೆಲವರು ಸ್ಟಾರ್ ರೇಟಿಂಗ್ ಮಾದರಿಯಲ್ಲಿ ವಸ್ತು ಮತ್ತು ತಯಾರಕರ ಸೇವಾ ಗುಣಮಟ್ಟದ ಬಗ್ಗೆ ಅಭಿಪ್ರಾಯ ಸೂಚಿಸಿರುತ್ತಾರೆ. ಆದರೆ ಕೆಲವು ಪ್ರಕರಣಗಳಲ್ಲಿ ತಯಾರಕರೇ ಬಳಕೆದಾರರ ಸೋಗಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವುದು ಕಂಡುಬಂದಿದೆ. ಈ ನಯವಂಚನೆಯನ್ನು ತಡೆಗಟ್ಟಲು ನಿಯಮದಲ್ಲಿ ಕೆಲವು ಅಂಶಗಳನ್ನು ಸೇರಿಸಲಾಗಿದೆ.


ವೈ.ಜಿ.ಮುರಳೀಧರನ್

ಸರಬರಾಜು ಮಾಡಿದ ವಸ್ತುವಿನಲ್ಲಿ ದೋಷವಿದ್ದು ಅಥವಾ ವಿತರಣೆಯಲ್ಲಿ ವಿಳಂಬವಾದಲ್ಲಿ ಆ ವಸ್ತುವನ್ನು ಹಿಂಪಡೆಯಲು ತಯಾರಕರು ನಿರಾಕರಿಸುವಂತಿಲ್ಲ. ಮಾರಾಟಗಾರರು ಸುಳ್ಳು ಅಥವಾ ಉತ್ಪ್ರೇಕ್ಷಿತ ಜಾಹೀರಾತು ನೀಡುವಂತಿಲ್ಲ. ಇ-ಕಾಮರ್ಸ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಇರುವ ಅವಕಾಶಗಳು, ಆನ್‌ಲೈನ್‌ ಖರೀದಿದಾರರ ವಿಶ್ವಾಸ ಹೆಚ್ಚಿಸುವಲ್ಲಿ ಪೂರಕವಾಗಿವೆ.

ಲೇಖಕ: ಸಂಸ್ಥಾಪಕ, ಗ್ರಾಹಕರ ಹಕ್ಕು, ಶಿಕ್ಷಣ ಮತ್ತು ಜಾಗೃತಿ ವೇದಿಕೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.