ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿಯ ಒಲುಮೆ, ಪ್ರಗತಿಯ ಚಿಲುಮೆ

ಉಜ್ವಲ ಹಾಗೂ ಉತ್ಕೃಷ್ಟ ಸಂಸ್ಕೃತಿ ನಮ್ಮದಾಗಿರುವಾಗ ನಾವೇಕೆ ಬಡವರು?
Last Updated 14 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ
ADVERTISEMENT
""

ಹತ್ತು– ಹನ್ನೆರಡು ವರ್ಷಗಳ ಹಿಂದೆ, ವಿಶ್ವ ಸಾಮಾಜಿಕ ವೇದಿಕೆಯ (ದಿ ವರ್ಲ್ಡ್‌ ಸೋಷಿಯಲ್‌ ಫೋರಂ) ಆಮಂತ್ರಣದ ಮೇರೆಗೆ ಬ್ರೆಜಿಲ್ ದೇಶಕ್ಕೆ ಭೇಟಿ ನೀಡಿದ್ದೆ. ನನ್ನೊಟ್ಟಿಗೆ, ಈ ಸಂಘಟನೆಯೊಂದಿಗೆ ಗುರುತಿಸಿ
ಕೊಂಡಂತಹ ಬೆಂಗಳೂರಿನ ಫೈರ್ ಫ್ಲೈಸ್ ಸಂಸ್ಥೆಯ ಸಿದ್ಧಾರ್ಥ ಮತ್ತು ನಮ್ಮ ವಿದ್ಯಾಪೀಠದ ಅರ್ಥಶಾಸ್ತ್ರ ಬೋಧಕ ಸಿ.ಎಂ. ಧರ್ಮಪ್ಪನವರು ಸಾಥ್ ನೀಡಿದರು. ಒಂದು ದಿನ ಸಂಜೆ ಆ ದೇಶದ ರಾಜಧಾನಿ ರಿಯೊ ಡಿ ಜನೈರೊದ ಸಾಮಾಜಿಕ ಹೋರಾಟಗಾರರೊಬ್ಬರ ಮನೆಗೆ ನನ್ನನ್ನು ಕರೆದುಕೊಂಡು ಹೋಗಿ ಪರಿಚಯಿಸಿದರು. ಜಗತ್ತಿನಲ್ಲಿ ನಡೆಯುತ್ತಿರುವ ಹಿಂಸೆಯನ್ನು ಸಮಾನಮನಸ್ಕರೆಲ್ಲ ಒಗ್ಗೂಡಿ ತಡೆಗಟ್ಟುವುದು ಹೇಗೆ ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ಅವರೆಲ್ಲ ಸೇರಿ ಒಂದು ಕರೆ ಕೊಡುತ್ತಾರೆ- ‘ನಿಮ್ಮ ಮನೆಯಲ್ಲಿ ಇರಬಹುದಾದ ಯಾವುದೇ ಶಸ್ತ್ರವನ್ನು ತಂದು, ನಿರ್ದಿಷ್ಟಪಡಿಸಿದ ಮೈದಾನಕ್ಕೆ ಎಸೆಯಬೇಕು’. ಅದರಂತೆ ಅವರೆಲ್ಲರೂ ನೂರಾರು ಎಕರೆಯಷ್ಟು ಮೈದಾನದಲ್ಲಿ ರೈಫಲ್, ಗನ್, ಎಕೆ 47 ಮುಂತಾದವನ್ನೆಲ್ಲ ತಂದು ಎಸೆದು, ಇನ್ನು ಮುಂದೆ ತಾವು ಶಸ್ತ್ರಾಸ್ತ್ರಗಳನ್ನು ಬಳಸುವುದಿಲ್ಲ ಎಂದು ಪ್ರತಿಜ್ಞೆಗೈದು, ಶಸ್ತ್ರಾಸ್ತ್ರಗಳ ಮೇಲೆ ಬುಲ್ಡೋಜರ್ ಹಾಯಿಸಿ ಹಾಳು ಮಾಡಿದ್ದನ್ನು ವಿವರಿಸಿದರು. ಅವರ ಆ ನಿಲುವನ್ನು ನೋಡಿ ಖುಷಿ ಆಯಿತು. ಒಂದೆಡೆ ಶಸ್ತ್ರಾಭ್ಯಾಸ; ಮತ್ತೊಂದೆಡೆ ಶಸ್ತ್ರತ್ಯಾಗ. ಬಹಿರಂಗದಲ್ಲಿ ಶಸ್ತ್ರಗಳನ್ನು ತ್ಯಾಗ ಮಾಡುವುದು ಸುಲಭ. ಅಂತರಂಗದೊಳಗಿನ ದ್ವೇಷ, ಮಾತ್ಸರ್ಯ, ಹೊಟ್ಟೆಕಿಚ್ಚಿನಂತಹ ಅಮಾನವೀಯ ಗುಣಗಳನ್ನು ತ್ಯಾಗ ಮಾಡುವುದು ಇಂದಿನ ಅನಿವಾರ್ಯ.

ಜಾಗತಿಕ ಮಟ್ಟದಲ್ಲಿ ಇಂದು ಯುದ್ಧದ ಭೀತಿ ಆವರಿಸಿದೆ. ಒಂದು ದೇಶವು ಮತ್ತೊಂದು ದೇಶದ ಮೇಲೆ ಯುದ್ಧ ಮಾಡಿದರೆ, ಅದು ಜನಜೀವನದ ಮೇಲಷ್ಟೇ ಪರಿಣಾಮ ಬೀರುವುದಿಲ್ಲ; ಅಪಾರವಾದ ಜೀವಹಾನಿ ಸಂಭವಿಸುತ್ತದೆ. ಬಡತನ, ಇನ್ನಿಲ್ಲದ ಹಾಹಾಕಾರ, ನಿರುದ್ಯೋಗ ಸಮಸ್ಯೆ, ಆರ್ಥಿಕತೆಯ ಮೇಲೆ ದುಷ್ಪರಿಣಾಮ ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ಅಣು ಯುದ್ಧ ಸಂಭವಿಸಿದರಂತೂ ಅದರ ಹಾನಿಯನ್ನು ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿಲ್ಲ. ಒಂದೆಡೆ ಇಂಥ ಅಸಹಾಯಕ ಪರಿಸ್ಥಿತಿ; ಮತ್ತೊಂದೆಡೆ ಮಾನವನ ಆಂತರ್ಯದಲ್ಲಿ ಎಲ್ಲಿಲ್ಲದ ಆತಂಕ. ಆಧುನಿಕ ಮಾನವ ದಿನನಿತ್ಯದ ಬದುಕಿನಲ್ಲಿ ಒತ್ತಡವನ್ನು ಅನುಭವಿಸುತ್ತಿದ್ದಾನೆ. ಬೆಳಗಾದರೆ ಹಿಂಸಾಚಾರ, ಅತ್ಯಾಚಾರ ಮತ್ತು ಭ್ರಷ್ಟಾಚಾರ ಪ್ರಕರಣಗಳು ಶಾಂತಿಯನ್ನು ಕದಡುತ್ತಿವೆ. ವಿಶ್ವವಿದ್ಯಾಲಯ ಮಟ್ಟದಲ್ಲಿ ದೊಂಬಿ- ದೌರ್ಜನ್ಯ ನಡೆಯುತ್ತಿವೆ.

ಯುವಜನರಲ್ಲಿ ಅಪ್ರತಿಮವಾದ ಶಕ್ತಿಯಿದೆ. ಅವರ ಕೈಗಳಿಗೆ ಕೆಲಸವನ್ನು ಕೊಡುವ ಪ್ರಯತ್ನ
ಗಳಾಗಬೇಕು. ತನ್ಮೂಲಕ ಅವರು ತಮ್ಮ ಬದುಕನ್ನು ಸಮರ್ಪಕವಾಗಿ ನಿರ್ವಹಿಸುತ್ತಾರೆ. ಉದ್ಯೋಗ ಸೃಷ್ಟಿ ಆಗದಿದ್ದಲ್ಲಿ ಯುವಜನಾಂಗವು ಬಾಹ್ಯಶಕ್ತಿಗಳ ಅಥವಾ ಇನ್ನಾವುದೋ ಪ್ರಭಾವಕ್ಕೆ ಒಳಗಾಗಿ ವಾಮಮಾರ್ಗ ಹಿಡಿಯುತ್ತದೆ. ಉದ್ಯೋಗವು ಜೀವನಯೋಗ. ಅದರಿಂದ ವ್ಯಷ್ಟಿ ಮತ್ತು ಸಮಷ್ಟಿಯ ಪ್ರಗತಿ.

ಆಧುನಿಕ ಜಗತ್ತು ಕೊರೊನಾ ವೈರಸ್‌ನ ಆಕ್ರಮಣಕ್ಕೆ ಒಳಗಾಗಿದ್ದು, ಸಾವು-ನೋವು ಸಂಭವಿಸುತ್ತಿದೆ. ಮಾನವನು ನಿಸರ್ಗದ ಮೇಲೆ ನಡೆಸುತ್ತಿರುವ ದೌರ್ಜನ್ಯ ಇದಕ್ಕೆಲ್ಲ ಮುಖ್ಯ ಕಾರಣ. ಜೀವಸಂಕುಲಕ್ಕೆ ಕಾರಣವಾಗಿರುವ ನಿಸರ್ಗವನ್ನು ಉಳಿಸಿಕೊಳ್ಳುವ ಪ್ರಯತ್ನಗಳು ನಡೆಯಬೇಕು. ಆದಷ್ಟು ಬೇಗನೆ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರಲಿ. ಜೀವಸಂಕುಲ ಉಳಿದು ಬರಲಿ ಎಂದು ನಾವೆಲ್ಲ ಪ್ರಾರ್ಥಿಸೋಣ.

ಆಗಿಹೋದ ಸತ್ಪುರುಷರ ವಿಚಾರಗಳು ಕೆಲವರ ಮೂಲಕ ಮೂರ್ತಸ್ವರೂಪ ಪಡೆದುಕೊಳ್ಳಬಹುದು. ಯಾರಾದರೂ ಆ ಕಾರ್ಯವನ್ನು ನಿರ್ವಹಿಸಬಹುದು ಅಥವಾ ವಿಷಮ ಪರಿಸ್ಥಿತಿಯಲ್ಲಿ ಯಾರಾದರೂ ಆಪದ್ಬಾಂಧವರಂತೆ ಬರಬಹುದು. ಸೃಷ್ಟಿಯ ಚಲನೆಯೊಂದಿಗೆ ದಾರ್ಶನಿಕರ ವಿಚಾರಗಳ ಚಾಲನೆ. ಈ ಬ್ರಹ್ಮಾಂಡವು ಯಾವೊತ್ತಿಗೂ ತನ್ನ ಜೀವಂತಿಕೆಯನ್ನು ಉಳಿಸಿಕೊಳ್ಳುತ್ತಾ ಬಂದಿದೆ. ವಿಶ್ವದ ಉಳಿವಿನ ಹಿನ್ನೆಲೆಯಲ್ಲಿ ವಿಶ್ವಶಾಂತಿಯು ಅತ್ಯಗತ್ಯ. ನಾನಳಿದರೂ ತೊಂದರೆಯಿಲ್ಲ; ಈ ಜಗತ್ತು ಉಳಿದು ಬರಬೇಕು. ಜೀವಸಂಕುಲ ಮುಂದುವರಿಯಬೇಕು. ಜೀವ ಮತ್ತು ಜಗತ್ತಿನ ಅಳಿವು-ಉಳಿವು ಇಂದಿನ ಜ್ವಲಂತ ಸಮಸ್ಯೆ.

ಗೌತಮ ಬುದ್ಧ ತಮ್ಮ ಇಡೀ ಬದುಕಿನಲ್ಲಿಮಾನವೀಯತೆಯನ್ನು ಬೆಸೆದರು. ಭಾರತೀಯ ತತ್ವಜ್ಞಾನಿ
ಗಳು ಸಾಧನೆಯಿಂದ ತಮ್ಮ ಒಳಅರಿವನ್ನು ಜಗತ್ತಿಗೆ ನೀಡಿದರು. ಏಸುಕ್ರಿಸ್ತನು ವಿಶ್ವಪ್ರೇಮವನ್ನು ಬೋಧಿಸುತ್ತಾ ಪರಿತ್ಯಕ್ತರನ್ನು ಉದ್ಧರಿಸಿದರು. ಪೈಗಂಬರರು ಮಹಿಳೆ ಮತ್ತು ಮಕ್ಕಳ ಹಕ್ಕುಗಳನ್ನು ಪೊರೆದರು. ಮಹಾವೀರರು ಜಗತ್ತಿಗೆ ಅಹಿಂಸೆಯ ಉಪದೇಶ ಮಾಡುತ್ತಾ ಹಿಂಸಾಕೃತ್ಯವನ್ನು ತಡೆದರು. ಬಸವಾದಿ ಶರಣರು ಸಾಮಾಜಿಕ ಸಮಾನತೆ ತರಲು ಉತ್ತಮ ಹಾಗೂ ಅಂತ್ಯಜರ ನಡುವೆ ವಿವಾಹ ಏರ್ಪಡಿಸಿದರು. ಲಿಂಗ ತಾರತಮ್ಯ ನಿವಾರಣೆಗಾಗಿ ಅರ್ಥಾತ್ ಮಹಿಳಾ ಹಕ್ಕುಗಳಿಗಾಗಿ ಮನೆಬಿಟ್ಟ ಮಹಾಪುರುಷ ಬಸವಣ್ಣನವರು. ಕಾಯಕಪ್ರಧಾನ ಸಮಾಜ ರಚನೆಯಲ್ಲಿ ಎಲ್ಲ ಕಸುಬುಗಳೂ ಶ್ರೇಷ್ಠವೆಂದು ಅವುಗಳಿಗೆ ಮಾನ್ಯತೆ ನೀಡಿದ್ದು ಅಂದಿನ ಅನುಭವ ಮಂಟಪ. ಅಲ್ಲಮನಂಥ ಮಹಾನುಭಾವಿಯನ್ನು ಅನುಭವ ಮಂಟಪದ ಅಧ್ಯಕ್ಷರನ್ನಾಗಿಸುವ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಗೆ ನಾಂದಿ ಹಾಡಿದರು ಬಸವಾದಿ ಶರಣರು. ಕಾಯಕ ನಿರ್ವಹಿಸುತ್ತಲೇ ದಾಸೋಹ ಭಾವನೆಗೆ ಶರಣರು ಇಂಬಾದರು. ಶಿವಯೋಗವೆಂಬ ವಿನೂತನ ಧ್ಯಾನ ವಿಧಾನವನ್ನು ವಿಶ್ವಕ್ಕೆ ಪರಿಚಯಿಸಿದರು. ಅದರ ಪ್ರಾತ್ಯಕ್ಷಿಕೆ ನಡೆದು, ಅಸಂಖ್ಯರು ಸಾಕ್ಷೀಕರಿಸಿದ್ದು ಹೊಸ ಅಧ್ಯಾಯಕ್ಕೆ ಆರಂಭ ದೊರಕಿತು.

ಕನಕದಾಸರು ಕುಲದ ಕಲಹ ಬೇಡವೆಂದರು. ವಾಲ್ಮೀಕಿ ಮಹರ್ಷಿಯು ಮಹಾಕಾವ್ಯವನ್ನು ರಚಿಸಿಕೊಟ್ಟರು. ಗುರುನಾನಕರು ಜನರ ಜ್ಞಾನದ ಹಸಿವನ್ನು ಇಂಗಿಸಿದರು. ಕೇರಳದ ನಾರಾಯಣ ಗುರುಗಳು ಪಾರಮಾರ್ಥ ಪ್ರಕಾಶ ಬೀರಿದರು. ಪುರಂದರ ದಾಸರಲ್ಲದೆ ಸಂತಶ್ರೇಷ್ಠರು ಭಕ್ತಿಪಂಥವನ್ನು ಹುಲುಸಾಗಿ ಬೆಳೆಸಿದರು. ಮಹಾತ್ಮ ಜ್ಯೋತಿಬಾಫುಲೆ ಅವರ ಶ್ರೀಮತಿ ಸಾವಿತ್ರಿಬಾಯಿ, ಶಾಹುಮಹಾರಾಜರು, ನಾಲ್ವಡಿ ಕೃಷ್ಣರಾಜ ಒಡೆಯರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದರು. ಸೂಫಿ ಸಂತರು, ಬಂದೇನವಾಜ್, ಶಿಶುನಾಳ ಶರೀಫರು ತತ್ವಪದಕಾರರಾಗಿ ಕಂಗೊಳಿಸಿದರು. ಇಂಥ ಉನ್ನತವಾದ ಪರಂಪರೆಗೆ ಸೇರಿದವರು ನಾವು. ಕುವೆಂಪು ಅವರಂಥ ಕವಿಗಳು ಕನ್ನಡದ ಕಂಪನ್ನು ಸೂಸಿದರು.

ಇಂಥ ಉಜ್ವಲ ಹಾಗೂ ಉತ್ಕೃಷ್ಟ ಸಂಸ್ಕೃತಿಯು ನಮ್ಮದಾಗಿರುವಾಗ ನಾವೇಕೆ ಬಡವರು? ನಾವೇಕೆ ದರಿದ್ರರು? ಬೇರಾವುದೋ ನಮ್ಮನ್ನು ಮುನ್ನಡೆಸುವ ಬದಲು, ಆದರ್ಶ ನಮ್ಮನ್ನು ಮುನ್ನಡೆಸಬೇಕು.
ಪ್ರಯತ್ನಪಟ್ಟಾದರೂ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಬದುಕಿನಲ್ಲಿ ಪ್ರಗತಿಯನ್ನು ಸಾಧಿಸಬೇಕು. ವ್ಯಕ್ತಿಯ ಪ್ರಗತಿಯು ಅಪರೋಕ್ಷವಾಗಿ ರಾಷ್ಟ್ರದ ಪ್ರಗತಿ. ಏಕವ್ಯಕ್ತಿ ಪ್ರಗತಿಯು ಬಹುವ್ಯಕ್ತಿ ಪ್ರಗತಿಗೆ ಪ್ರೇರಣೆ ಆಗುತ್ತದೆ. 12ನೇ ಶತಮಾನದಲ್ಲಿ ಬಸವಣ್ಣ ಮತ್ತವರ ಶರಣ ಸಂಕುಲವು ಏಕವ್ಯಕ್ತಿ ಸಾಧನೆಗೆ ಒತ್ತು ಕೊಡುತ್ತಲೇ ಸಮಷ್ಟಿ ಸಾಧನೆಗೆ ಒತ್ತಾಸೆಯಾಯಿತು. ಸಮೂಹ ಸಾಧನೆ ಮತ್ತು ಸಮೂಹ ಜೀವನ. ಕೂಡಿ ದುಡಿಯುವಿಕೆ; ಕೂಡಿ ವಿತರಿಸುವಿಕೆ. ಪ್ರಗತಿಯನ್ನು ಸಾಧಿಸುತ್ತಲೇ ವ್ಯಕ್ತಿಯು ತನ್ನ ಜೀವನದಲ್ಲಿ ಶಾಂತಿ, ಸಮಾಧಾನ ಹೊಂದಬೇಕು. ಕೆಲವರು ಶಾಂತಿ... ಶಾಂತಿ ಎನ್ನುತ್ತ ಕುಳಿತುಕೊಂಡುಬಿಡುತ್ತಾರೆ. ಪ್ರಗತಿಯತ್ತ ಪ್ರಯತ್ನ ಇರುವುದಿಲ್ಲ. ಕೆಲವರು ಪ್ರಗತಿ ಪ್ರಗತಿ ಅನ್ನುತ್ತಾರೆ; ಅಂಥವರ ಬದುಕಲ್ಲಿ ಶಾಂತಿ ಮಾಯವಾಗುತ್ತದೆ. ಪ್ರಗತಿ ಇಲ್ಲದ ಶಾಂತಿಯು ಕುಂಟನಂತೆ; ಶಾಂತಿಯಿಲ್ಲದ ಪ್ರಗತಿಯು ಕುರುಡನಂತೆ. ಒಬ್ಬನಿಗೆ ಕಾಲಿಲ್ಲ; ಮತ್ತೊಬ್ಬನಿಗೆ ಕಣ್ಣಿಲ್ಲ. ಕುಂಟನಿಗೆ ಕುರುಡನು ಕಾಲಾಗಬೇಕು; ಕುರುಡನಿಗೆ ಕುಂಟನು ಕಣ್ಣಾಗಬೇಕು. ಆಗ ನಿರ್ದಿಷ್ಟ ಗುರಿಯನ್ನು ತಲುಪಲು ಸಾಧ್ಯ. ಪ್ರಗತಿಸಾಧಕರಿಗೆ ಶಾಂತಿಯ ಒಲುಮೆ; ಶಾಂತಿಸಾಧಕರಿಗೆ ಪ್ರಗತಿಯತ್ತ ಒಲುಮೆ ಆಗಬೇಕು.

ಇರುವುದೊಂದೇ ಭೂಮಿ. ಅದರಂತೆ ಭಾರತೀಯರಿಗೆ ಇರುವುದೊಂದೇ ದೇಶ. ನಮ್ಮೆಲ್ಲರಿಗೂ ಆಶ್ರಯತಾಣವಾದ ಭಾರತ. ಬಹುಭಾಷೆ, ಬಹುಜಾತಿ, ಬಹುತ್ವದ ಭಾರತ. ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ, ಸಿಖ್, ಪಾರ್ಸಿ, ಬಸವಧರ್ಮ ಎಲ್ಲರಿಗೂ ಭಾರತ ಒಂದೇ. ಆಂತರಿಕ ಕಚ್ಚಾಟಗಳು ಕೊನೆಗೊಳ್ಳಲಿ. ಅಖಂಡ ಭಾರತ ಬೆಳೆದು ಬರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT