ಶನಿವಾರ, ಮೇ 30, 2020
27 °C
ಹಳ್ಳಿಗಳು ಮತ್ತು ಸನಿಹದ ಸಣ್ಣ ಪೇಟೆಗಳ ನಡುವೆ ಆರ್ಥಿಕ ಸಂಯೋಜನೆ ಏರ್ಪಡಬೇಕು

ವಿಶ್ಲೇಷಣೆ | ಗ್ರಾಮೀಣ ಆರ್ಥಿಕತೆ: ಮರುರಚನೆ ಸಾಧ್ಯತೆ

ಅರವಿಂದ ಚೊಕ್ಕಾಡಿ Updated:

ಅಕ್ಷರ ಗಾತ್ರ : | |

representational image

ಬದಲಾದ ಜಾಗತಿಕ ಸನ್ನಿವೇಶವು ಆರ್ಥಿಕ ರಚನೆಗಳಲ್ಲಿ ಬದಲಾವಣೆಯ ಅಗತ್ಯವನ್ನೂ ಹೊತ್ತು ತಂದಿದೆ. ನಗರದಲ್ಲಿ ಇದ್ದವರು ಹಳ್ಳಿಗಳ ಕಡೆಗೆ ಚಲಿಸುವುದು, ವಿದೇಶಗಳಲ್ಲಿ ಇದ್ದವರು ಸ್ವದೇಶಕ್ಕೆ ಹಿಂದಿರುಗುವುದು ಭಾವನಾತ್ಮಕವಾಗಿ ಅಪೇಕ್ಷಣೀಯ ಎನಿಸುತ್ತದೆ. ಆದರೆ ವಾಸ್ತವ ಅಷ್ಟು ಆಪ್ತವಲ್ಲ.

ಮಾನವ ನಾಗರಿಕತೆ ಮೂಲತಃ ಕೃಷಿ ಭೂಮಿಯಿಂದಲೇ ಬಂದದ್ದು. ಒಬ್ಬ ರೈತನಿಗೆ ಎರಡು ಎಕರೆ ಭೂಮಿ ಇದ್ದು ನಾಲ್ವರು ಮಕ್ಕಳಿದ್ದಾಗ, ಮೂವರು ಹಳ್ಳಿಯಿಂದ ಹೊರಗೆ ಉದ್ಯೋಗದಲ್ಲಿರುವ ಸ್ಥಿತಿಯಲ್ಲಿ, ಎರಡು ಎಕರೆ ಭೂಮಿ ಎರಡು ಎಕರೆಯಾಗಿಯೇ
ಉಳಿಯುತ್ತದೆ. ನಾಲ್ವರೂ ಹಳ್ಳಿಗೆ ಹೋದಾಗ ಎರಡು ಎಕರೆ ಭೂಮಿಯು ಅರ್ಧ ಎಕರೆಯಾಗಿ ಬದಲಾಗುತ್ತದೆ. ಭೂಹಿಡುವಳಿಗಳ ಛಿದ್ರೀಕರಣ ಉಂಟಾಗುತ್ತದೆ. ಕೃಷಿಭೂಮಿಯ ಪ್ರಮಾಣ ಕಡಿಮೆಯಾಗುತ್ತದೆ.

ಇದು ಆರ್ಥಿಕ ಸನ್ನಿವೇಶವಾದರೆ, ಇದು ಹಲವು ರೀತಿಯ ಸಾಮಾಜಿಕ ಪರಿಣಾಮಗಳನ್ನೂ ಉಂಟು ಮಾಡುತ್ತದೆ. ರೈತನ ನಾಲ್ವರು ಮಕ್ಕಳಲ್ಲಿ ಮೂವರು ನಗರದಲ್ಲಿ ಉದ್ಯೋಗ ಕಂಡುಕೊಂಡಾಗ, ಹಳ್ಳಿಯಲ್ಲಿರುವ ಒಬ್ಬನು ಭೂಮಿಯ ಒಡೆತನ ತನ್ನದಾಗಿರುತ್ತದೆ ಎಂದು ಭಾವಿಸಿರುತ್ತಾನೆ. ಅದಕ್ಕೆ ತಕ್ಕಹಾಗೆ ನಗರದಲ್ಲಿದ್ದವರೂ ತಮಗೆ ಅದರ ಅಗತ್ಯವಿಲ್ಲವೆಂದೋ ಪಾಲಿನ ಬಾಬ್ತು ಹಣ ತೆಗೆದುಕೊಳ್ಳುವುದನ್ನೋ ಮಾಡಿರುತ್ತಾರೆ. ನಗರದಿಂದ ಮತ್ತೆ ಹಳ್ಳಿಗಳಿಗೆ ವಲಸೆ ಹೋದಾಗ, ತಮ್ಮ ಪಾಲಿನ ಭೂಮಿಗಾಗಿ ಹಲವು ವೈಮನಸ್ಯಗಳು ಹುಟ್ಟಿಕೊಳ್ಳಲು ಅವಕಾಶವಿದೆ ಅಥವಾ ಪ್ರತ್ಯೇಕ ಹಿಡುವಳಿಯ ಖರೀದಿ ನಡೆಯಬಹುದು. ಇದನ್ನು ಗ್ರಹಿಸಿರುವ ಸರ್ಕಾರ, ರಿಯಲ್ ಎಸ್ಟೇಟ್ ಉದ್ಯಮಕ್ಕೆ ಪ್ರೋತ್ಸಾಹದಾಯಕವಾಗಿಯೂ ವರ್ತಿಸಿದೆ. ಈ ಕ್ಷಣಕ್ಕೆ ರಿಯಲ್ ಎಸ್ಟೇಟ್ ಉದ್ಯಮ ವೇಗ ಪಡೆಯುವುದಿಲ್ಲ. ಸದ್ಯಕ್ಕೆ ಹಣವನ್ನು ಕರೆನ್ಸಿ ನೋಟಿನ ರೂಪದಲ್ಲಿ ಉಳಿಸಿಕೊಳ್ಳುವ ಮನಃಸ್ಥಿತಿಯೇ ಹೆಚ್ಚಿನವರಲ್ಲಿ ಇರುತ್ತದೆ. ಕೊರೊನಾ ಒತ್ತಡ ಸ್ವಲ್ಪ ಕಡಿಮೆಯಾದ ಹಾಗೆ ಆರ್ಥಿಕ ಸ್ಥಿತಿ ಬಿಚ್ಚಿಕೊಳ್ಳತೊಡಗುತ್ತದೆ.

ಇದನ್ನೂ ಓದಿ: ಕೋವಿಡ್ ನಂತರದ ಬದುಕು | ಉದ್ಯೋಗಿಗಳಲ್ಲ ಉದ್ಯಮಿಗಳಾಗಿ

ನಗರದಿಂದ ಹಳ್ಳಿಗಳಿಗೆ, ವಿದೇಶಗಳಿಂದ ಸ್ವದೇಶಕ್ಕೆ ಹಿಂದಿರುಗಿದ ಎಲ್ಲರೂ ಹಳ್ಳಿಯಲ್ಲೇ ಉಳಿಯುತ್ತಾರೆ ಎಂದೇನಿಲ್ಲ. ಆದರೆ ಎಲ್ಲರೂ ವಾಪಸ್ ಬರಲು ಸಾಧ್ಯವಾಗುವುದಿಲ್ಲ ಎನ್ನುವುದೂ ಅಷ್ಟೇ ಸತ್ಯ. ಯಾವ ಉದ್ಯಮ ಹೆಚ್ಚು ಹೊಡೆತ ಅನುಭವಿಸುತ್ತದೆ ಎಂಬುದು ಇನ್ನು ಗೊತ್ತಾಗಬೇಕಷ್ಟೆ. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ವಿಲಾಸಿ ವಸ್ತುಗಳ ತಯಾರಿಕಾ ಉದ್ಯಮಗಳು ಮತ್ತು ಅಭಿವೃದ್ಧಿಯನ್ನೇ ಕೇಂದ್ರೀಕರಿಸಿ ನಡೆಯುವ ಸೇವಾ ಉದ್ಯಮಗಳು ಹೊಡೆತವನ್ನು ಅನುಭವಿಸುತ್ತವೆ. ಅಕ್ಷಾಂಶ- ರೇಖಾಂಶಗಳ ಲೆಕ್ಕಾಚಾರದಂತೆ, ಭಾರತ ಒಂದು ವಿಶಿಷ್ಟ ಭೌಗೋಳಿಕ ಆಯಕಟ್ಟಿನಲ್ಲಿದ್ದು, ಇಲ್ಲಿನ ಜನಾಂಗೀಯ ಲಕ್ಷಣಗಳು ಮತ್ತು ಆಹಾರ ಪದ್ಧತಗಳಿಂದಾಗಿ ಕೊರೊನಾದಿಂದ ಭಾರತವು ಹೆಚ್ಚು ಬಾಧೆಗೊಳಗಾಗಲಾರದೆಂದು ಪರಿಗಣಿಸಿದರೂ ಆರ್ಥಿಕತೆಯ ಮೇಲಿನ ಪರಿಣಾಮವನ್ನು ಅನುಭವಿಸಲೇ ಬೇಕಾಗುತ್ತದೆ. ಏಕೆಂದರೆ 1991ರ ನಂತರದ ಆರ್ಥಿಕತೆಯಲ್ಲಿ ದೇಶೀಯ ಕೊಡುಗೆ ಬಹಳ ಕಡಿಮೆ ಮತ್ತು ಭಾರತದ ವಿದೇಶಿ ವ್ಯಾಪಾರದ ದಿಕ್ಕು ಯಾವ ರಾಷ್ಟ್ರಗಳೊಂದಿಗಿತ್ತೋ ಆ ರಾಷ್ಟ್ರಗಳು ಕೊರೊನಾದಿಂದಲೇ ತೀವ್ರ ಹೊಡೆತ ಅನುಭವಿಸಿವೆ.

ಇವೆಲ್ಲವೂ ಹೇಗೆ ಅನನುಕೂಲಕಾರಿಯೋ ಹಾಗೆಯೇ ಬೇರೆ ರೀತಿಯಲ್ಲಿ ಅನುಕೂಲಕಾರಿಯೂ ಹೌದು. ಗಾಂಧಿ ಆರ್ಥಿಕತೆ, ಸ್ವದೇಶಿ, ಸ್ಥಳೀಯ ಆರ್ಥಿಕತೆಯ ಆಕರ್ಷಕ ಮಾತುಗಳು ಬೇರೆ; ವಾಸ್ತವ ಬೇರೆ. ಗಾಂಧಿ ಆರ್ಥಿಕತೆಯನ್ನು ಸಾಧಿಸಬೇಕಾದರೆ ಜನರ ಜೀವನದೃಷ್ಟಿ, ಜೀವನ ಪದ್ಧತಿ, ಆಡಳಿತಾತ್ಮಕ ಸಂಸ್ಥೆಗಳು ಎಲ್ಲವೂ ಗಾಂಧಿ ಪರಿಕಲ್ಪನೆಯಂತೆ ಬದಲಾಗಿ, ಕನಿಷ್ಠ ಮೂರು ತಲೆಮಾರುಗಳ ಕಾಲ ಅದೇ ಚಿಂತನೆಯಲ್ಲಿ ಮುಂದುವರಿಯಬೇಕು. ಅದು ಪ್ರಜ್ಞಾಪೂರ್ವಕ ಪ್ರಯತ್ನದ ಫಲವಾಗಿ ಆಗುವಂತಹುದೇ ಹೊರತು ಒಂದು ಅನಿವಾರ್ಯ ಸಂದರ್ಭದಲ್ಲಿ ಹಠಾತ್ತಾಗಿ ಆಗಿಬಿಡುವಂತಹುದಲ್ಲ.

ಮೊತ್ತ ಮೊದಲು ಹಳ್ಳಿಗಳು ಮತ್ತು ಅದರ ಪಕ್ಕದಲ್ಲಿರುವ ಸಣ್ಣ ಪೇಟೆಗಳ ನಡುವಿನ ಆರ್ಥಿಕ ಸಂಯೋಜನೆಯನ್ನು ಏರ್ಪಡಿಸಬೇಕು. ಮರಳುವಿಕೆಯ ನಂತರ ಒಂದು ತಾಲ್ಲೂಕಿನ ಜನಸಂಪನ್ಮೂಲ, ಮೂಲಭೂತ ಅವಶ್ಯಕತೆಗಳು ಮತ್ತು ದ್ವಿತೀಯ ಹಂತದ ಅವಶ್ಯಕತೆಗಳು, ಆ ತಾಲ್ಲೂಕಿನ ಸ್ವಾಭಾವಿಕ ಸಂಪನ್ಮೂಲ ಮತ್ತು ಆ ಸಂಪನ್ಮೂಲವನ್ನು ಬಳಸಲು ಕೌಶಲ ಹೊಂದಿರುವ ಜನಸಂಪನ್ಮೂಲ ಹಾಗೂ ಲಭ್ಯ ಸಂಪನ್ಮೂಲವನ್ನು ಉನ್ನತೀಕರಿಸಿ, ಉತ್ಪಾದಿಸಬಹುದಾದ ವಸ್ತುಗಳ ಅಂದಾಜನ್ನು ತಯಾರಿಸಬೇಕು.

ಇದನ್ನೂ ಓದಿ: ಉತ್ಪಾದನೆಯಷ್ಟೇ ಮಾರುಕಟ್ಟೆ- ಹಂಚಿಕೆಗೂ ಆದ್ಯತೆ ಸಿಗಲಿ

ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ಭೂಹಿಡುವಳಿಗಳು ಛಿದ್ರೀಕರಣವಾಗದ ಹಾಗೆ ನೋಡಿಕೊಳ್ಳಬೇಕು. ಆಗ ಕೌಟುಂಬಿಕ ಸಾಮರಸ್ಯ ಉಳಿದರೂ ಆರ್ಥಿಕ ಸಮಸ್ಯೆ ಬರುತ್ತದೆ. ಮರೆಮಾಚಿದ ನಿರುದ್ಯೋಗದ ಸಮಸ್ಯೆ ಬರುತ್ತದೆ. ಒಂದು ಭೂಹಿಡುವಳಿಯಲ್ಲಿ ನಾಲ್ವರು ದುಡಿಯುವಾಗ ಬಂದಷ್ಟೇ ಉತ್ಪಾದನೆಯು ಎಂಟು ಜನ ದುಡಿಯುವಾಗಲೂ ಬಂದರೆ, ನಾಲ್ವರ ಉದ್ಯೋಗವು ಮರೆಮಾಚಿದ ನಿರುದ್ಯೋಗವಾಯಿತು. ವೈಯಕ್ತಿಕ ಮತ್ತು ರಾಷ್ಟ್ರೀಯ ಆರ್ಥಿಕತೆಗೆ ಇದರಿಂದ ಏನೂ ಉಪಯೋಗವಾಗದು. ಆಗ ಹೆಚ್ಚುವರಿ ಶ್ರಮವು ಪೋಲಾಗದೆ ಇರಬೇಕಾದರೆ ಕೃಷಿಯೇತರ ಗ್ರಾಮೀಣ ಆರ್ಥಿಕತೆಯನ್ನು ಸಬಲಗೊಳಿಸಬೇಕು.

ಯಾವ ವಸ್ತುಗಳನ್ನು ಕೊಂಡೊಯ್ದು ವ್ಯಾಪಾರ ಮಾಡಲು ಯುರೋಪಿಯನ್ನರು ಭಾರತಕ್ಕೆ ಬಂದಿದ್ದರೋ ಆ ವಸ್ತುಗಳ ಬಹುತೇಕ ಉತ್ಪಾದನೆ ನಡೆಯುತ್ತಿದ್ದುದು ಕೃಷಿಯೇತರ ಗ್ರಾಮೀಣ ಆರ್ಥಿಕತೆಯಲ್ಲಿ. ಬ್ರಿಟಿಷರು ಭಾರತದಿಂದ ಹೋದ ನಂತರ ಹಳ್ಳಿಗಳಲ್ಲಿ ಕೃಷಿಯನ್ನು ಉಳಿಸಿಕೊಳ್ಳಲಾಯಿತೇ ಹೊರತು ಕೃಷಿಯೇತರ ಗ್ರಾಮೀಣ ಆರ್ಥಿಕತೆಯನ್ನು ಕಟ್ಟಲಿಲ್ಲ. ಅದರಿಂದಾಗಿ ಕೃಷಿಯು ಪರಾವಲಂಬಿ ಆಗುವಂತಾಯಿತು. ಪ್ರಸ್ತುತ ಸರ್ಕಾರದ ನೀತಿಯೂ ಗ್ರಾಮೀಣ ಉದ್ದಿಮೆಗಳಿಗೆ ಪೂರಕವಾಗಿರುವುದರಿಂದ, ಇದನ್ನು ಮರುರಚನೆ ಮಾಡಲು ಇದು ಸುವರ್ಣಾವಕಾಶವಾಗಿದೆ. ಈ ಪ್ರಕ್ರಿಯೆಯು, ಮರಳಿದವರು ತಮಗೆ ಹೆಚ್ಚು ಅನುಭವವಿಲ್ಲದ ಕೃಷಿಯನ್ನು ಹೊಸದಾಗಿ ಕಲಿತು ಅದಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡಬೇಕಾದ ಅನಿವಾರ್ಯವನ್ನು ತಪ್ಪಿಸುತ್ತದೆ. ಹಿಡುವಳಿಗಳ ಛಿದ್ರೀಕರಣವನ್ನು ತಪ್ಪಿಸುತ್ತದೆ. ಮರೆಮಾಚಿದ ನಿರುದ್ಯೋಗವನ್ನು ತಪ್ಪಿಸುತ್ತದೆ. ಮರಳಿದವರು ಆತ್ಮಸ್ಥೈರ್ಯ ಕಳೆದುಕೊಳ್ಳುವುದನ್ನು ತಪ್ಪಿಸುತ್ತದೆ.

ಆದರೆ ಈ ಯೋಜನೆಯ ನೀಲ ನಕಾಶೆಯನ್ನು ರಾಷ್ಟ್ರಕ್ಕೆ ಒಂದು ಎಂದು ಮಾಡಲು ಆಗುವುದಿಲ್ಲ. ಆಯಾ ತಾಲ್ಲೂಕು ಮಟ್ಟದಲ್ಲೇ ಆಗಬೇಕು. ಹಳ್ಳಿಗಳು ಮತ್ತು ಪೇಟೆಗಳ ನಡುವೆ ನಿರಂತರ ಸಂಪರ್ಕ ಏರ್ಪಡದಿದ್ದರೆ ಹಳ್ಳಿಗಳಲ್ಲಿನ ಮೂಢನಂಬಿಕೆ, ಕಂದಾಚಾರ, ಜಾತೀಯತೆ ಹೆಚ್ಚುವ ಸಮಸ್ಯೆ ಇರುತ್ತದೆ. ಆದ್ದರಿಂದ ತಾಲ್ಲೂಕು ಆಡಳಿತ ಮತ್ತು ಗ್ರಾಮಾಡಳಿತಗಳಿಗೆ ಇದರಲ್ಲಿ ಹೆಚ್ಚಿನ ಪಾತ್ರವಿದೆ. ಈ ರೀತಿಯ ಮರುರಚನೆಯು ಈಗಾಗಲೇ ಇರುವ ಕೃಷಿರಂಗಕ್ಕೆ ಬಲವನ್ನು ತುಂಬುತ್ತದೆ. ಪೇಟೆ ಮತ್ತು ಹಳ್ಳಿಗಳ ನಡುವೆ ಏರ್ಪಡುವ ಮಾರುಕಟ್ಟೆ ಜಾಲವು ಸಾಕಷ್ಟು ಉದ್ಯೋಗ ಸೃಷ್ಟಿಯನ್ನು ಮಾಡುತ್ತದೆ. ನಿಧಾನವಾಗಿ ಇದು ವಿಸ್ತರಿಸಿಕೊಂಡಂತೆಲ್ಲ ಬಲಿಷ್ಠ ಪರ್ಯಾಯ ಆರ್ಥಿಕತೆಯೊಂದು ರೂಪುಗೊಳ್ಳುತ್ತದೆ.

ಸದ್ಯಕ್ಕೆ ಆರೋಗ್ಯದ ಪ್ರಶ್ನೆ ಮುಖ್ಯವಾಗಿದೆ. ಆದ್ದರಿಂದ ಸ್ಥಳೀಯ ಆರ್ಥಿಕತೆಗೆ ಆದ್ಯತೆ ಕೊಡಬೇಕು. ಜೀವನಾವಶ್ಯಕ ವಸ್ತುಗಳನ್ನು ಸಾಧ್ಯವಾದಷ್ಟೂ ನಮಗೆ ಗೊತ್ತಿರುವವರಿಂದ ಖರೀದಿಸಬೇಕು. ಗೊತ್ತಿರುವವರಿಗೆ ಮಾರಬೇಕು. ಕುಗ್ಗಬೇಕಾದ ಅಗತ್ಯವಿಲ್ಲ. ಆರ್ಥಿಕತೆ ಕುಸಿಯಿತು ಎನ್ನುವ ಮಾತಿನ ಅರ್ಥವು, ರಚನೆಯಾದ ಆರ್ಥಿಕತೆ ಕುಸಿಯುತ್ತಿದೆ ಎನ್ನುವುದಷ್ಟೆ. ಒಂದು ಕುಸಿಯುತ್ತಿದ್ದ ಹಾಗೆ ಬದಲಿಯಾಗಿ ಮತ್ತೊಂದು ಆರ್ಥಿಕತೆಯ ವಿಕಾಸವೂ ಪ್ರಾರಂಭವಾಗಿರುತ್ತದೆ. ಅದನ್ನು ಹೇಗೆ ನಿರ್ವಹಿಸಬೇಕು ಎನ್ನುವುದನ್ನಷ್ಟೇ ಯೋಚಿಸಬೇಕಾದದ್ದು. ಆರೋಗ್ಯ ರಕ್ಷಣೆಯ ರೂಪದ ಸ್ಥಳೀಯ ಆರ್ಥಿಕತೆಯು ವಿದೇಶಿ ಆರ್ಥಿಕ ಆಕ್ರಮಣವನ್ನು ತಡೆಯಬಲ್ಲ ಸ್ವದೇಶಿ ಆರ್ಥಿಕತೆಯಾಗಿ ಹಂತ ಹಂತವಾಗಿ ಬೆಳೆಯುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು