ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಾಂದೋಲನ: ಬೇಕಿರುವುದು ಹಣವಲ್ಲ

ಮನೆಗೆ ಒಬ್ಬರಾದರೂ ಜಲಯೋಧರು ತಯಾರಾಗಿ, ಜಲಸಂರಕ್ಷಣೆಗೆ ಸಹಕರಿಸಬೇಕಿದೆ
Last Updated 6 ಮಾರ್ಚ್ 2020, 20:00 IST
ಅಕ್ಷರ ಗಾತ್ರ
ADVERTISEMENT
"ರೂಪ ಹಾಸನ"

ಈ ಬಾರಿ ಬೇಸಿಗೆ ತೀವ್ರವಾಗಿರಲಿದೆ ಎಂಬ ಮುನ್ಸೂಚನೆ ಹೊರಬಿದ್ದಿದೆ. ಆದರೆ, ಮುಂದಿನ ಮಳೆಯ ಪ್ರಮಾಣ ಹೇಗಿರುವುದೋ ತಿಳಿದಿಲ್ಲ. ಕರ್ನಾಟಕದಲ್ಲಿ 8-10 ವರ್ಷಗಳಿಂದ ನೀರಿನ ಲಭ್ಯತೆಯ ಪ್ರಮಾಣ ಮತ್ತು ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಕರ್ನಾಟಕವು ಮರುಭೂಮಿಯಾಗಿ ಪರಿವರ್ತನೆ ಆಗುವ ಅಪಾಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ರಾಜ್ಯದ ಅನೇಕ ಭಾಗಗಳಲ್ಲಿ ಕುಡಿಯುವ ನೀರಿಗೂ ತತ್ವಾರವಾಗಿ, ಟ್ಯಾಂಕರ್‌ಗಳಿಂದ ನೀರು ಪೂರೈಸಲಾಗುತ್ತಿದೆ. ಬಹಳಷ್ಟು ಹಳ್ಳಿಗಳು ಶಾಶ್ವತವಾಗಿ ನೀರಿನ ಸಂಕಷ್ಟಕ್ಕೆ ಈಡಾಗಿವೆ. ಒಂದೆಡೆ ಬರದ ಬೇಗೆ, ಮತ್ತೊಂದೆಡೆ ಸಾಲಬಾಧೆ. ಇದರಿಂದ ಬೇಸತ್ತು ಹಲವು ರೈತರು ಜೀವ ಕಳೆದುಕೊಂಡಿರುವುದು ನೋವಿನ ಸಂಗತಿ.

ಇದರೊಂದಿಗೇ, ಕಳೆದ ಎರಡು ವರ್ಷಗಳಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ಮೇಘಸ್ಫೋಟ, ಪ್ರವಾಹ, ಜಲಪ್ರಳಯದಿಂದ ಬದುಕು ಕೊಚ್ಚಿ ಹೋಗಿ, ಜನ ತತ್ತರಿಸಿದ್ದಾರೆ. ಪ್ರವಾಹದಿಂದ ನದಿ, ಹಳ್ಳಕೊಳ್ಳಗಳೆಲ್ಲವೂ ಉಕ್ಕಿ ಹರಿದಿದ್ದವು. ಆದರೆ ಕೆಲವೇ ತಿಂಗಳುಗಳಲ್ಲಿ ಅವೂ ಒಣಗಿ ಬರಡಾಗುತ್ತಿವೆ. ಇದು ಪ್ರಕೃತಿಯ ಶಾಪವಲ್ಲ, ಮನುಷ್ಯನ ದುರಾಸೆ ಮತ್ತು ಮೂರ್ಖತನದ ಫಲವೆಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಈ ಬಾರಿಯಾದರೂ ಎಚ್ಚೆತ್ತು, ಮಳೆನೀರನ್ನು ಸಮರ್ಪಕವಾಗಿ ಹಿಡಿದಿಡುವ ಪ್ರಯತ್ನ ಮಾಡದಿದ್ದರೆ ತೀವ್ರ ನೀರಿನ ಕೊರತೆ ಅನುಭವಿಸುತ್ತಿರುವ ಹಳ್ಳಿಗರು, ರೈತರ ಬದುಕು ಇನ್ನಷ್ಟು ಶೋಚನೀಯವಾಗುತ್ತದೆ.

ಬರ ಮತ್ತು ಪ್ರವಾಹವನ್ನು ಏಕಕಾಲದಲ್ಲಿ ನಿರ್ವಹಿಸಲು ಸಾಧ್ಯವಾಗುವುದು ಬಿದ್ದ ಮಳೆನೀರಿನ ಸಮರ್ಪಕ ಸಂರಕ್ಷಣೆಯಿಂದ ಮಾತ್ರ. ಅದಕ್ಕೀಗ ನಗರ ಪ್ರದೇಶಗಳಲ್ಲಿ, ಪ್ರತೀ ಕಟ್ಟಡದ ಮೇಲ್ಚಾವಣಿಯ ಮೇಲೆ ಬೀಳುವ ಮಳೆನೀರನ್ನು ಕಡ್ಡಾಯವಾಗಿ ಹಿಡಿದಿಡಲು ವ್ಯಾಪಕ ತಯಾರಿಯಾಗಬೇಕು. ಇನ್ನು ಹಳ್ಳಿಗಳಲ್ಲಿ, ನಮ್ಮ ಪೂರ್ವಿಕರು ಅಂತರ್ಜಲದ ಹೆಚ್ಚಿನ ಸಾಧ್ಯತೆ ಇರುವೆಡೆಗಳಲ್ಲಿಯೇ ಕೆರೆ, ಕಟ್ಟೆ, ಕುಂಟೆ, ತಲಪರಿಕೆ, ಕಲ್ಯಾಣಿ... ಇತ್ಯಾದಿ ಜಲಸಂಗ್ರಹಾಗಾರಗಳನ್ನು ಕಟ್ಟಿದ್ದಾರೆ. ಆದರೆ ಯಾವಾಗ ನಮ್ಮ ಮನೆಯೊಳಗೆ ನಲ್ಲಿಗಳಲ್ಲಿ ನೀರು ಬರಲು ಆರಂಭವಾಯಿತೋ ಹಳ್ಳಿಗಳ ಮನೆ ಮುಂದೆ ಕೊಳವೆಬಾವಿಗಳು ಬಂದವೋ ಆಗ ನಮಗೆ ಈ ಪಾರಂಪರಿಕ ಜಲಮೂಲಗಳು ಮರೆತೇ ಹೋದವು! ಅನೇಕ ಕೆರೆಗಳನ್ನು ಆಪೋಶನ ಪಡೆದೇ ನಗರದ ಬಡಾವಣೆಗಳು ಮೈತಳೆದವು. ಈಗ ಹಳ್ಳಿಗಳಲ್ಲಿ ಉಳಿದಿರುವ ಜಲಪಾತ್ರೆಗಳಲ್ಲಿ ಕೆಲವದರಲ್ಲಿ ಮಾತ್ರ ನೀರಿದೆ. ಉಳಿದವು ಒತ್ತುವರಿಯಾಗಿವೆ. ಪಾಳು ಬಿದ್ದಿವೆ. ಹೆಚ್ಚಿನವು ಹೂಳು ತುಂಬಿ ಬರಡಾಗಿವೆ. ಮಳೆ ಬಂದಾಗ ಕೆಲ ತಿಂಗಳು ನೀರು ತುಂಬಿಕೊಂಡರೂ ಗಟ್ಟಿಯಾದ ಹೂಳಿನ ಮೇಲ್ಪದರದಿಂದಾಗಿ ನೀರು ಭೂಮಿಯಾಳಕ್ಕೆ ಇಳಿಯದೆ, ಅಂತರ್ಜಲ ಮರುಪೂರಣಗೊಳ್ಳದೆ ಕೆಲವೇ ತಿಂಗಳುಗಳಲ್ಲಿ ಆವಿಯಾಗುತ್ತಿದೆ. ಹೀಗಾಗಿ, ನಿರ್ಲಕ್ಷ್ಯಕ್ಕೊಳಗಾಗಿರುವ ನಮ್ಮ ಪಾರಂಪರಿಕ ಜಲಪಾತ್ರೆಗಳ ಹೂಳೆತ್ತಿ ಪುನಶ್ಚೇತನಗೊಳಿಸಿಕೊಳ್ಳುವುದೀಗ ತುರ್ತು.

ಮಹಾರಾಷ್ಟ್ರದ ಹಳ್ಳಿಗಳಲ್ಲಿ ಚಲನಚಿತ್ರ ನಟ ಅಮೀರ್‌ ಖಾನ್ ಅವರ ನೇತೃತ್ವದಲ್ಲಿ 3-4 ವರ್ಷಗಳಿಂದ ‘ಪಾನೀ ಫೌಂಡೇಷನ್’ (paanifoundation.in) ಮೂಲಕ ಬರದ ವಿರುದ್ಧ ಸಮರವನ್ನೇ ಸಾರಲಾಗಿದೆ. ಜಲಸಂರಕ್ಷಣೆಯಲ್ಲಿ ಅವರೀಗ ಗೆಲ್ಲುತ್ತಿದ್ದಾರೆ. ಕರ್ನಾಟಕದಲ್ಲಿ ಸರ್ಕಾರದ ಕೆಲವು ಯೋಜನೆಗಳ ಮೂಲಕ ಸಣ್ಣ ಪ್ರಮಾಣದಲ್ಲಿ ಕೆಲವೇ ಕೆರೆಗಳ ಹೂಳೆತ್ತುವ ಕೆಲಸಕ್ಕೆ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಲಾಗುತ್ತಿದೆ. ಆದರೆ, ಹಳ್ಳಿಗಳಲ್ಲಿ ಕೆರೆಗಳ ಸಂರಕ್ಷಣೆಯ ಕೆಲಸ ಸಮರ್ಪಕವಾಗಿ ನಡೆದಿಲ್ಲ. ಭ್ರಷ್ಟ ವ್ಯವಸ್ಥೆ ಮತ್ತು ರಾಜಕೀಯ ಮೇಲಾಟಗಳೇ ಇದಕ್ಕೆ ಪ್ರಧಾನ ಕಾರಣ.‌ ಆದರೆ ಸಾಂಸ್ಥಿಕ, ಸಮುದಾಯ ಆಧಾರಿತ ಹಾಗೂ ವೈಯಕ್ತಿಕ ನೆಲೆಗಳಲ್ಲಿ ಪಾರಂಪರಿಕ ಜಲಮೂಲಗಳನ್ನು ಸಂರಕ್ಷಿಸುವ ಕೆಲಸಗಳು, ಅಲ್ಲೊಂದು ಇಲ್ಲೊಂದು ಆಗಿದ್ದರೂ ಪರಿಣಾಮಕಾರಿಯಾಗಿವೆ. ದೀರ್ಘಕಾಲದವರೆಗೂ ಈ ಜಲಪಾತ್ರೆಗಳಲ್ಲಿ ನೀರನ್ನು ಸಂರಕ್ಷಿಸಬಹುದಾಗಿದೆ.

ಹಾಸನದ ಹಸಿರುಭೂಮಿ ಪ್ರತಿಷ್ಠಾನದ ನೇತೃತ್ವ ಮತ್ತು ಪ್ರೇರಣೆಯೊಂದಿಗೆ 12 ಕೆರೆಗಳನ್ನೂ, 30ಕ್ಕೂ ಹೆಚ್ಚು ಕಲ್ಯಾಣಿಗಳನ್ನೂ ಹೂಳೆತ್ತಿ ಪುನಶ್ಚೇತನಗೊಳಿಸಲಾಗಿದೆ.ಜನಸಮುದಾಯ ಹಾಗೂ ಸಂಘಟನೆಗಳ ನೆರವಿನೊಂದಿಗೆ ಮೂರು ವರ್ಷಗಳ ಅವಧಿಯಲ್ಲಿ ಈ ಕೆಲಸ ನಡೆದಿದೆ. ಪರಿಣಾಮವಾಗಿ, ಕೆರೆಗಳು ನೀರು ತುಂಬಿಕೊಂಡು ನಳನಳಿಸುತ್ತಿವೆ. ಹಲವು ಕಲ್ಯಾಣಿಗಳಲ್ಲಿ ನೀರು ಸಂಗ್ರಹವಾಗಿದೆ. ನೀರಿನ ಸಂಗ್ರಹವಾದೊಡನೆಯೇ ಸುತ್ತಲ ಪರಿಸರದಲ್ಲಿ ಸಂಚಲನೆಯುಂಟಾಗಿದೆ! ಜನ–ಜಾನುವಾರುಗಳಷ್ಟೇ ಅಲ್ಲ, ಲೆಕ್ಕಕ್ಕೆ ಸಿಗದಷ್ಟು ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಗಳು, ಗಿಡ ಮರ ಬಳ್ಳಿಗಳು ಉಸಿರು ಪಡೆದಿವೆ. ಬತ್ತಿಹೋಗಿದ್ದ ಸುತ್ತಮುತ್ತಲ ಕೊಳವೆಬಾವಿಗಳು ತಮ್ಮಷ್ಟಕ್ಕೇ ಚಾಲನೆಗೊಂಡಿವೆ... ಒಂದು ಹಳ್ಳಿಯ ಒಂದಾದರೂ ಜಲಮೂಲಕ್ಕೆ ಜೀವ ಬಂದರೆ ಇಡೀ ಪರಿಸರ ವ್ಯವಸ್ಥೆಗೆ ಮರುಜೀವ ಬಂದಂತೆ!

ಈ ಹಿನ್ನೆಲೆಯಲ್ಲಿ, ಈ ಬಾರಿ ಮಾರ್ಚ್ 22ರ ವಿಶ್ವ ಜಲ ದಿನದಿಂದ ಪ್ರಾರಂಭಿಸಿ, ಏಪ್ರಿಲ್ 22ರ ವಿಶ್ವ ಭೂದಿನದವರೆಗೆ ‘ರಾಷ್ಟ್ರೀಯ ಹಬ್ಬದ ಮಾದರಿ’ಯಲ್ಲಿ ಹಾಸನ ಜಿಲ್ಲೆಯಾದ್ಯಂತ ಸಾಧ್ಯವಿರುವ ಎಲ್ಲ ಹಳ್ಳಿಗಳ ಪಾರಂಪರಿಕ ಜಲಸಂಗ್ರಹಾಗಾರಗಳ ಹೂಳೆತ್ತಿ ಅವುಗಳನ್ನು ಪುನಶ್ಚೇತನಗೊಳಿಸಲು ನಿರ್ಧರಿಸಲಾಗಿದೆ. ಹಸಿರುಭೂಮಿ ಪ್ರತಿಷ್ಠಾನದ ಮನವಿಯ ಮೇರೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಜನಸಮುದಾಯದ ಪಾಲ್ಗೊಳ್ಳುವಿಕೆಯಿಂದ ಜಲಮೂಲಗಳನ್ನು ಪುನಶ್ಚೇತನಗೊಳಿಸುವ ಕೆಲಸಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಸಿರುನಿಶಾನೆ ತೋರಿದ್ದಾರೆ. ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಂಘ–ಸಂಸ್ಥೆಗಳ ಸಭೆ ಕರೆದು, ಹಳ್ಳಿಗಳ ಪಾರಂಪರಿಕ ಜಲಮೂಲಗಳನ್ನು ಪತ್ತೆ ಹಚ್ಚಲು, ಜನಸಮುದಾಯದ ನೆರವಿನೊಂದಿಗೆ ಹೂಳೆತ್ತಲು ಸಮಾಲೋಚನೆ ನಡೆಸಿದ್ದಾರೆ.

ನೀರಿನ ಈ ತೀವ್ರ ಸಂಕಷ್ಟ ಕಾಲದಲ್ಲಿ, ಜನಸಮುದಾಯದ ಸಹಭಾಗಿತ್ವದಲ್ಲಿ ಸರ್ಕಾರಿ ಆಡಳಿತಯಂತ್ರವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು, ರಾಜ್ಯದ ಪ್ರತಿ ಹಳ್ಳಿಯಲ್ಲಿಯೂ ಒಂದಾದರೂ ಪಾರಂಪರಿಕ ಜಲಮೂಲವನ್ನು ಪುನಶ್ಚೇತನಗೊಳಿಸಲು ಸಾಧ್ಯವಾದರೆ, ಈ ಬಾರಿ ಬೀಳುವ ಕನಿಷ್ಠ ಅರ್ಧದಷ್ಟಾದರೂ ಮಳೆ ನೀರನ್ನು ಹಳ್ಳಿಗಳಲ್ಲಿಯೇ ಸಂಗ್ರಹಿಸಿ ಇಟ್ಟುಕೊಳ್ಳಬಹುದು. ಎಲ್ಲ ಜಿಲ್ಲೆಗಳಲ್ಲಿಯೂ ಈ ಕೆಲಸಕ್ಕೆ ಯುದ್ಧೋಪಾದಿಯಲ್ಲಿ ಚಾಲನೆ ಸಿಗಬೇಕಿದೆ.

ಈ ಕೆಲಸಕ್ಕೆ ಪ್ರತೀ ಹಳ್ಳಿಯಲ್ಲಿ ಮನೆಗೆ ಒಬ್ಬರಂತಾದರೂ ಜಲಯೋಧರು ತಯಾರಾಗಿ, ಸಂಪೂರ್ಣ ಸಹಕಾರ ನೀಡಬೇಕಿದೆ. ಸಾಧ್ಯವಿರುವೆಡೆ ಯಂತ್ರಗಳನ್ನೂ ಬಳಸಿಕೊಳ್ಳಬಹುದು. ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಎಲ್ಲರೂ ಒಗ್ಗೂಡಿ ಜನಸಂಘಟನೆಗೆ ಮುಂದಾಗಬೇಕು. ಹಳ್ಳಿ ತೊರೆದು ಪಟ್ಟಣಗಳಲ್ಲಿ ನೆಲೆಸಿರುವವರು, ಹಳ್ಳಿಗಳೊಂದಿಗೆ, ಅಲ್ಲಿನ ಜನರೊಂದಿಗೆ ನಂಟಿರುವವರೆಲ್ಲರೂ ಜಲಮೂಲದ ಪುನಶ್ಚೇತನಕ್ಕೆ ಜೊತೆಯಾಗಬೇಕು. ಮುಖ್ಯವಾಗಿ ರೈತಸಂಘ, ಜನಪರ, ಪರಿಸರಪರ ಸಂಘಟನೆಗಳು, ಮಹಿಳಾ ಮತ್ತು ಯುವಕ ಸಂಘಗಳು ಜೊತೆಗೂಡಬೇಕು. ಶಾಲೆ, ಕಾಲೇಜು, ಎನ್‍ಎಸ್‍ಎಸ್, ಎನ್‍ಸಿಸಿ, ಸ್ಕೌಟ್ಸ್‌, ಗೈಡ್ಸ್, ಸೇವಾದಳದ ವಿದ್ಯಾರ್ಥಿಗಳು ಉತ್ಸಾಹದಿಂದ ಇದರಲ್ಲಿ ಪಾಲ್ಗೊಳ್ಳಬೇಕು. ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು, ವಿವಿಧ ಕ್ಷೇತ್ರದ ಸೆಲೆಬ್ರಿಟಿಗಳು, ವ್ಯಾಪಾರಿಗಳು, ವಿವಿಧ ಸಂಘ– ಸಂಸ್ಥೆಗಳು, ಮಾಧ್ಯಮದವರು... ತಮಗೆ ಸಾಧ್ಯವಿರುವ ಎಲ್ಲ ಕೆಲಸಗಳನ್ನೂ ಬೆಂಬಲಿಸಿದರೆ, ರಾಜ್ಯದ ಜಲಮೂಲಗಳ ಚಿತ್ರಣವನ್ನೇ ಬದಲಿಸಬಹುದು. ಅಂತರ್ಜಲ ಮಟ್ಟ ಹೆಚ್ಚಿಸಬಹುದು. ಭೂಮಿಯ ತಾಪ ತಗ್ಗಿಸಬಹುದು. ನಾವು ಪ್ರತಿಯೊಬ್ಬರೂ ಒಂದಿಲ್ಲೊಂದು ರೀತಿಯಲ್ಲಿ ಹಳ್ಳಿಗೆ ಸಂಬಂಧಿಸಿದವರೇ. ಏನಿಲ್ಲವೆಂದರೂ ಹಳ್ಳಿಯಲ್ಲಿ ಬೆಳೆಯುವ ದವಸ–ಧಾನ್ಯ ಬಳಸುವವರೇ. ಹೀಗಾಗಿ ಪ್ರತಿಯೊಬ್ಬರೂ ಜಲಾಂದೋಲನಕ್ಕೆ ಕೈಜೋಡಿಸಬೇಕಿದೆ. ಇದಕ್ಕೆ ಬೇಕಿರುವುದು ಹಣವಲ್ಲ, ಮನಸ್ಸು! ನೇತೃತ್ವ, ಸಂಘಟನೆ, ಶ್ರಮ ಮಿಳಿತಗೊಂಡರೆ ಜಲಸಂರಕ್ಷಣೆಯ ಕನಸು ನನಸಾದೀತು.

ರೂಪ ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT