ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಮುಂದಿದೆ ನೈಜ ಸವಾಲು

ಎಲ್ಲ ಜ್ಞಾನ ಕ್ಷೇತ್ರಗಳ ತಾಯಿಯಾದ ಶಿಕ್ಷಣ ದುರ್ಬಲವಾಗದಂತೆ ನೋಡಿಕೊಳ್ಳಬೇಕಾಗಿದೆ
Last Updated 4 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಒಂದು ಕಾಲವಿತ್ತು. ಶಿಕ್ಷಕ ಬಡವನಿದ್ದರೂ ಸಮುದಾಯ ಅವನನ್ನು ಬಿಟ್ಟು ಹಾಕುತ್ತಿರಲಿಲ್ಲ. ಶಿಕ್ಷಕನ ಮಗಳ ಮದುವೆ ಇದ್ದರೆ ಬೆಂಬಲಕ್ಕೆ ಬರುತ್ತಿತ್ತು. ಶಿಕ್ಷಕರಿಂದ ಬದ್ಧತೆಯನ್ನು ಕೇಳುವಾಗ, ಶಿಕ್ಷಕರ ಮೇಲೆ ಸಮುದಾಯಕ್ಕೆ ಎಷ್ಟು ಬದ್ಧತೆ ಉಳಿದುಕೊಂಡಿದೆ ಎಂಬುದನ್ನೂ ಗಮನಿಸಬೇಕಾಗುತ್ತದೆ. ಯಾವನೇ ವ್ಯಕ್ತಿ ವೃದ್ಧಾಪ್ಯದಲ್ಲಿ ನೆಮ್ಮದಿಯನ್ನು ಬಯಸುವುದು ಅಪರಾಧವಲ್ಲ. ಎನ್.ಪಿ.ಎಸ್. ವ್ಯಾಪ್ತಿಯ ಶಿಕ್ಷಕರು ಹಳೆಯ ನಿವೃತ್ತಿ ವೇತನವನ್ನು ಕೇಳುತ್ತಿದ್ದಾರೆ. ಹೋರಾಟವನ್ನೂ ನಡೆಸುತ್ತಿದ್ದಾರೆ. ನೆಮ್ಮದಿಯ ನಿವೃತ್ತಿಯನ್ನೂ ಹೋರಾಟದಿಂದಲೇ ಪಡೆಯಬೇಕಾದ ಸ್ಥಿತಿಯಲ್ಲಿ ಶಿಕ್ಷಕರನ್ನು ಇಡಬೇಕಾಗಿಲ್ಲ. ಆದರೆ ಇಡಲಾಗಿದೆ.

ಸಾಮಾನ್ಯ ಗ್ರಹಿಕೆಗೆ, ಹಿಂದೆಯೆಲ್ಲ ಶಿಕ್ಷಕರು ತುಂಬ ಚೆನ್ನಾಗಿ ಬೋಧಿಸುತ್ತಿದ್ದರು, ಈಗ ಅಷ್ಟು ಪರಿಣಾಮಕಾರಿ ಯಾಗಿ ಬೋಧಿಸುವುದಿಲ್ಲ ಎನಿಸುತ್ತದೆ. ಆದರೆ, ಹಿಂದೆ ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿಗಳು ಯಾರು ಎಂಬುದನ್ನು ಗಮನಿಸುವುದಿಲ್ಲ. ಯಾವ ವಿದ್ಯಾರ್ಥಿಗಳಿಗೆ ಕಲಿಯಲೇ ಬೇಕೆಂಬ ಒಳ ಒತ್ತಡವಿತ್ತೋ ಅಂತಹವರು ನಾಲ್ಕಾರು ಮೈಲಿ ನಡೆದು ಶಾಲೆಗೆ ಹೋಗುತ್ತಿದ್ದರು. ಆ ರೀತಿಯ ವಿದ್ಯಾರ್ಥಿಗಳಿಗೆ ಈಗಲೂ ತುಂಬಾ ಚೆನ್ನಾಗಿಯೇ ಕಲಿಸ ಲಾಗುತ್ತಿದೆ. ಆದರೆ ಕಲಿಕೆಯ ತೀವ್ರ ಹಂಬಲವಿದ್ದ ಮಕ್ಕಳಷ್ಟೇ ಶಾಲೆಯಲ್ಲಿದ್ದಾಗ ಅವು ಹೇಗೆ ಗುಣಮಟ್ಟದ ಶಾಲೆಗಳಾಗಿ ಕಾಣಿಸುತ್ತಿದ್ದವೋ ಅದೇ ಗುಣಮಟ್ಟವನ್ನು ಈಗಲೂ ಕಾಣಲು ಸಾಧ್ಯವಿಲ್ಲ. ಹಾಗಿದ್ದರೆ ಎಲ್ಲ ಮಕ್ಕಳೂ ಶಾಲೆಗೆ ಹೋಗುವಂತಾಗಿರುವುದು ತಪ್ಪೇ ಎಂದರೆ ಖಂಡಿತ ಅಲ್ಲ. ಶೇ 100ರಷ್ಟು ಮಕ್ಕಳೂ ಶಾಲೆಯಲ್ಲಿ ಇರು ವಂತಾಗುವುದೇ ಸರಿಯಾದದ್ದು. ಆದರೆ ಎಲ್ಲರೂ ಶಾಲೆಗೆ ಹೋಗುವ ಸ್ಥಿತಿಯಲ್ಲಿ, ಆಯ್ದ ವಿದ್ಯಾರ್ಥಿಗಳು ಮಾತ್ರ ಇದ್ದಾಗ ಕಾಣಿಸುತ್ತಿದ್ದ ಗುಣಮಟ್ಟದ ಕಲಿಕಾ ಪ್ರಕ್ರಿಯೆಯೇ ಕಾಣಿಸಲು ಸಾಧ್ಯವಿಲ್ಲ ಎಂಬ ಅರಿವಿನ ಅಗತ್ಯವಿದೆ.

ಮೊದಲು ವಿದ್ಯಾರ್ಥಿಗಳನ್ನು ಕಲಿಕೆಗೆ ಸಿದ್ಧಪಡಿಸ ಬೇಕಾಗುತ್ತದೆ. ಆಸಕ್ತಿ ಇಲ್ಲದವರಲ್ಲಿ ಆಸಕ್ತಿಯನ್ನು ಸೃಷ್ಟಿಸಬೇಕು. ಶಿಕ್ಷಕರಿಗೆ ಸಾಕಷ್ಟು ಕಲಿಕಾ ನಿರಾಳತೆ ಸಿಗಬೇಕು. ಆಗ ವಿದ್ಯಾರ್ಥಿಗಳನ್ನು ವೈಯಕ್ತಿಕವಾಗಿ ಗುರುತಿಸಿ, ಅವರವರಿಗೆ ಬೇಕಾದ ರೀತಿಯಲ್ಲಿ ಯೋಜನೆಯನ್ನು ರೂಪಿಸಿ ಕಲಿಕೆಗೆ ಸನ್ನದ್ಧರಾಗುವಂತೆ ಮಾಡಲು ಸಾಧ್ಯವಾಗುತ್ತದೆ‌. ಶಿಕ್ಷಕರಿಗೆ ಈ ನಿರಾಳತೆ ದೊರಕಬೇಕಾದರೆ ಶೈಕ್ಷಣಿಕ ಆಡಳಿತ ವಿಭಾಗವೂ ಬೋಧನಾ ವಿಭಾಗವೂ ಪ್ರತ್ಯೇಕವಾಗಲೇ ಬೇಕು.

ಶಿಕ್ಷಕರಿಗೆ ಆಡಳಿತಾತ್ಮಕ ಜವಾಬ್ದಾರಿ ಹೊರಿಸುವುದರ ಬಗ್ಗೆ ದೊಡ್ಡ ಚರ್ಚೆ ಇದೆ ಮತ್ತು ಸರ್ಕಾರದ ನಿಲುವು ಶಿಕ್ಷಕರಿಗೆ ಬೋಧನೇತರವಾದ ಜವಾಬ್ದಾರಿ ಕೊಡ ಬಾರದೆಂದೇ ಇದೆ. ಪ್ರಸ್ತಾಪಿತ ರಾಷ್ಟ್ರೀಯ ಶಿಕ್ಷಣ ನೀತಿಯೂ ಇದನ್ನೇ ಹೇಳುತ್ತದೆ. ಇಲ್ಲಿರುವ ನೈಜ ಪ್ರಶ್ನೆಯೆಂದರೆ, ಸರ್ವ ಶಿಕ್ಷಣ ಅಭಿಯಾನ ಜಾರಿಗೆ ಬಂದ ಲಾಗಾಯ್ತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಅನುದಾನ ದೊರೆಯ ಲಾರಂಭಿಸಿದೆ ಮತ್ತು ಹೊಸ ಹೊಸ ಯೋಜನೆಗಳು ಜಾರಿಯಾಗಿವೆ. ಒಳ್ಳೆಯ ವಿಚಾರ ಇದು. ಆದರೆ ಹಣ ಬಂತು. ಪ್ರಥಮ ದರ್ಜೆ ಸಹಾಯಕರೊ, ಲೆಕ್ಕಿಗರೊ ನೇಮಕವಾಗಿದ್ದಾರಾ? ಇಲ್ಲ. ಹಾಗಾದರೆ ಶಿಕ್ಷಕರಲ್ಲದೆ ಬೇರೆ ಯಾರು ಆ ಹಣದ ಖರ್ಚು ವೆಚ್ಚದ ನಿರ್ವಹಣೆ ಮಾಡಬೇಕು? ಸೂಕ್ತ ಸಿಬ್ಬಂದಿಯನ್ನು ನೇಮಿಸದೆ ಶಿಕ್ಷಕರಿಗೆ ಬೋಧನೇತರ ಜವಾಬ್ದಾರಿಯನ್ನು ಕೊಡಬಾರದು ಎಂದರೆ, ಶೈಕ್ಷಣಿಕ ವಲಯದ ಅಧಿಕಾರಿಗಳಿಗೆ ಕೆಲಸ ಮಾಡುವುದಕ್ಕೇ ಸಾಧ್ಯವಿಲ್ಲ. ಶಿಕ್ಷಕರನ್ನು ಬಳಸಿಕೊಳ್ಳು ವುದು ಅವರಿಗೆ ಅನಿವಾರ್ಯ ಮತ್ತು ಆಡಳಿತಾತ್ಮಕ ಹುದ್ದೆಗಳು ಹೆಚ್ಚಿದಷ್ಟೂ ಆ ಹುದ್ದೆಗಳಿಗೆ ಬೇಕಾದ ಮೂಲ ಮಾಹಿತಿಗಳು ಶಾಲೆಗಳಿಂದಲೇ ಹೋಗಬೇಕಾಗಿರುವುದರಿಂದ, ಹೊಸ ಆಡಳಿತಾತ್ಮಕ ಹುದ್ದೆಗಳು ಶಿಕ್ಷಕರ ಸಮಯವನ್ನೇ ತಿನ್ನುತ್ತವೆ.

ಇಲ್ಲಿ, ಬೋಧನೇತರ ಜವಾಬ್ದಾರಿಗಳು ಎಂದಾಗ ಜನಗಣತಿ, ಆರ್ಥಿಕ ಗಣತಿಯಂತಹ ಕೆಲಸಗಳೇ ಸಾಮಾನ್ಯವಾಗಿ ಪರಿಗಣನೆಗೆ ಬರುವುದು. ಆದರೆ ಇವು ಸಮಸ್ಯೆಗಳಲ್ಲ. ಶೂ-ಸಾಕ್ಸ್ ತರಲು ಹೋಗುವುದು, ಇ–ಮೇಲ್ ಕಳಿಸಲು ಹೋಗುವುದು, ಅಲ್ಲಿ ಸಿಗ್ನಲ್ ಸಿಗದೆ ಮರುದಿನ ಪುನಃ ಸೈಬರ್ ಸೆಂಟರ್‌ಗೆ ಹೋಗುವುದು... ಇವೆಲ್ಲ ಶಿಕ್ಷಕರ ಬೋಧನಾ ಪ್ರಕ್ರಿಯೆಗೆ ನಿಜವಾದ ತೊಡಕುಗಳು. ಇದರ ಜೊತೆಗೆ, ಆಧುನಿಕ ಜಗತ್ತು ಬಹಳ ಸಂಕೀರ್ಣವಾಗಿ ಬೆಳೆದು, ಏನನ್ನು ಕಲಿಸಬೇಕು ಎಂಬುದು ನಾನಾ ಆಸಕ್ತಿಗಳಿಗೆ ಬಲಿಯಾಗಿ ಪಠ್ಯಗಳು ಬೃಹತ್ ಗಾತ್ರದ್ದಾಗಿವೆ. 2000ದ ಪಠ್ಯಗಳನ್ನೂ 2019ರ ಪಠ್ಯಗಳನ್ನೂ ಹೋಲಿಸಿದರೆ, 2000ಕ್ಕಿಂತ 2019ಕ್ಕೆ ಸಿಲೆಬಸ್‌ನ ಪ್ರಮಾಣ ಎರಡೂವರೆ-ಮೂರು ಪಟ್ಟು ಜಾಸ್ತಿ ಆಗಿರುವುದನ್ನು ಗಮನಿಸಬಹುದು. ಆದರೆ ಶಾಲೆಗಳು ನಿರ್ವಹಿಸಬೇಕಾದ ಕಾರ್ಯಗಳು ಎರಡೂವರೆ- ಮೂರು ಪಟ್ಟು ಜಾಸ್ತಿಯಾಗಿರುವುದರಿಂದ ಶಿಕ್ಷಕರ ಬೋಧನಾ ಅವಧಿ ಕಡಿಮೆಯಾಗುತ್ತಾ ಹೋಗಿದೆ.

ಶಾಲಾ ಸನ್ನಿವೇಶ ಸ್ಪರ್ಧಾತ್ಮಕವಾಗುತ್ತಾ ಆಗುತ್ತಾ, ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದಾಗ ಪ್ರತಿ ಜಿಲ್ಲೆಯೂ ಇನ್ನೊಂದು ಜಿಲ್ಲೆಯನ್ನು ಶತ್ರು ರಾಷ್ಟ್ರದಂತೆ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಈ ಜಿದ್ದಾಜಿದ್ದು ಶಿಕ್ಷಕರನ್ನು ಫಲಿತಾಂಶ ಕೊಡಿಸುವ ಯಂತ್ರಗಳನ್ನಾಗಿಯೂ, ವಿದ್ಯಾರ್ಥಿಗಳನ್ನು ಫಲಿತಾಂಶ ತರುವ ಯಂತ್ರಗಳನ್ನಾಗಿಯೂ ಮಾಡಿದೆ. ಕಲಿಕಾ ಪ್ರಕ್ರಿಯೆಯ ಮಹತ್ವ ಹೊರಟು ಹೋಗಿ ಪ್ರಶ್ನೋತ್ತರಗಳ ಅಭ್ಯಾಸವೇ ಶಿಕ್ಷಣ ಎಂದಾಗಿದೆ. ಕಲಿಕೆಯ ಪರಿಣಾಮವಾಗಿ ಒಳ್ಳೆಯ ಅಂಕಗಳು ಬಂದರೆ, ಅದರ ಹಿಂದೆ ಜ್ಞಾನದ ಶಕ್ತಿ ಇರುತ್ತದೆ. ಕೇವಲ ಅಭ್ಯಾಸದ ಪರಿಣಾಮವಾಗಿ ಅಂಕಗಳು ಬಂದರೆ, ಅದರ ಹಿಂದೆ ಜ್ಞಾನದ ಶಕ್ತಿ ಇರುವುದಿಲ್ಲ. ಆಂತರಿಕವಾಗಿ ವಿದ್ಯಾರ್ಥಿಗಳು ಟೊಳ್ಳಾಗಿರುತ್ತಾರೆ.

ಕಲಿಕೆಯ ಪರಿಣಾಮವಾಗಿ ಫಲಿತಾಂಶ ಪಡೆಯುವ ಸ್ಥಿತಿಯೇ ಬೇರೆ ರೀತಿ ಇರಬೇಕಾಗುತ್ತದೆ. ಭಾಷಾ ಬೋಧನೆಯು ವಿಷಯವನ್ನು ಕಲಿಸುವುದಲ್ಲ. ಭಾಷಾ ಕೌಶಲವನ್ನೇ ಕಲಿಸಬೇಕು. ಗಣಿತವು ಲೆಕ್ಕವನ್ನು ಕಲಿಸುವಲ್ಲಿಗೆ ಮುಗಿಯುವುದಿಲ್ಲ. ಲೆಕ್ಕದ ಮೂಲಕ ಅಮೂರ್ತವಾದದ್ದನ್ನು ಗ್ರಹಿಸಿ ಅರ್ಥೈಸಬಲ್ಲ ಚಿಂತನೆಯಾಗಿಯೂ ವಿಸ್ತರಿಸಬೇಕು. ಸಮಾಜ ವಿಜ್ಞಾನವು ಹೃದಯ ವೈಶಾಲ್ಯದ ಬೃಹತ್ ಜೀವನ ದೃಷ್ಟಿಯನ್ನು ರೂಪಿಸಬೇಕು. ವಿಜ್ಞಾನವು ಶೋಧನಾ ಪ್ರವೃತ್ತಿಯನ್ನು ಬೆಳೆಸಬೇಕು. ಈ ರೀತಿ ಶಿಕ್ಷಣವನ್ನು ನಿರ್ವಹಿಸಬೇಕಾದರೆ ಅದಕ್ಕೆ ತಕ್ಕ ಶಾಲಾ ಪರಿಸರವನ್ನು ನಿರ್ಮಿಸಬೇಕು. ಆ ಶಕ್ತಿ ಇರುವ ಶಿಕ್ಷಕರನ್ನು ನೇಮಿಸಬೇಕು. ಕನಿಷ್ಠಪಕ್ಷ ಶಿಕ್ಷಕನಾಗಿ ಹೋಗುವವನ ಮನೋಭಾವ ಏನಿದೆ ಎಂದಾದರೂ ತಿಳಿ ಯಲು ಸಾಧ್ಯವಾಗುವ ಪ್ರಬಂಧ ಮಾದರಿಯ ಪರೀಕ್ಷೆಯ ಮೂಲಕ ಅವರ ನೇಮಕ ಆಗಬೇಕಾಗುತ್ತದೆ. ಶಿಕ್ಷಕರನ್ನು ರೂಪಿಸುವ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯಗಳಲ್ಲಿ ಸುಧಾ ರಣೆಗಳು ಆಗಬೇಕಾಗುತ್ತದೆ.

ಆಧುನಿಕ ಒತ್ತಡಗಳು ಮತ್ತು ಆಕರ್ಷಣೆಯ ಪರಿಣಾಮವಾಗಿ ತರಗತಿಯಲ್ಲಿ ಪಾಠ ಕೇಳಿಸಿಕೊಳ್ಳುವ ವಿದ್ಯಾರ್ಥಿಗಳ ಪ್ರಮಾಣ ಇಳಿಕೆಯಾಗುತ್ತಿದೆ. ಇವರನ್ನು ಕಲಿಕೆಗೆ ತೊಡಗಿಸಬೇಕಾದರೆ ಸಂವಾದ ಪದ್ಧತಿಗೆ ಮಹತ್ವ ಕೊಡಬೇಕು. ಶಿಕ್ಷಕರಲ್ಲಿ ಜಾಸ್ತಿ ಬದ್ಧತೆ ಬೇಕು ಎನ್ನುವುದಾದರೆ ಆಯಾ ತಾಲ್ಲೂಕಿನವರೇ ಶಿಕ್ಷಕರಾಗುವಂತೆ ಮಾಡಬೇಕು. ನಿವೃತ್ತರಾದ ನಂತರವೂ ಅಲ್ಲೇ ಇರುವುದರಿಂದ, ಸಮುದಾಯಕ್ಕೆ ಬದ್ಧರಾಗಿಯೇ ಇರುವುದು ಅವರಿಗೂ ಅನಿವಾರ್ಯವಾಗಿರುತ್ತದೆ. ಹಾಗೆಯೇ ಸಮುದಾಯಕ್ಕೆ ಕೂಡ. ತನ್ನದೇ ಊರಿನ ಒಬ್ಬ ವ್ಯಕ್ತಿಯನ್ನು ಎಲ್ಲಿಂದಲೋ ಬಂದ ಕೆಲಸದವನನ್ನು ನಿರ್ವಹಿಸಿದ ರೀತಿಯಲ್ಲಿ ನಿರ್ವಹಿಸಲು ಆಗುವುದಿಲ್ಲ.

ಈಗಲೂ ತಮ್ಮ ಶಕ್ತಿ ಮೀರಿ ಕೆಲಸ ಮಾಡುತ್ತಿರುವ ಅನೇಕ ಶಿಕ್ಷಕರಿದ್ದಾರೆ. ಅವರನ್ನು ಗುರುತಿಸಿ, ಗೌರವಿಸಿ, ಪ್ರೋತ್ಸಾಹಿಸುವ ಮೂಲಕ ಒಳ್ಳೆಯದನ್ನು ಸಮುದಾಯ ಎತ್ತಿ ಹಿಡಿಯಬೇಕು. ಇಂಥ ಶಕ್ತಿ ತನಗಿದೆಯೆಂಬ ಆತ್ಮವಿಶ್ವಾಸವನ್ನು ಪಡೆಯಲು ಶಿಕ್ಷಕರ ದಿನಾಚರಣೆ ಶಿಕ್ಷಕರಿಗೆ ಉತ್ತಮ ಅವಕಾಶ ಒದಗಿಸುತ್ತದೆ.ಇದು ಸರ್ಕಾರಕ್ಕಿಂತ ಮುಖ್ಯವಾಗಿ ಸ್ಥಳೀಯ ಸಮುದಾಯ, ಹಿರಿಯ ವಿದ್ಯಾರ್ಥಿಗಳ ಜವಾಬ್ದಾರಿ ಯಾಗಿದೆ. ಇಡೀ ವ್ಯವಸ್ಥೆಯ, ಎಲ್ಲ ಜ್ಞಾನಕ್ಷೇತ್ರಗಳ ತಾಯಿ ಶಿಕ್ಷಣ. ಅದು ದುರ್ಬಲವಾದರೆ ಉಳಿದ ಎಲ್ಲವೂ ತಾವಾಗಿಯೇ ಕುಸಿದು ಬೀಳುತ್ತವೆ.

ಲೇಖಕ: ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT