ಬುಧವಾರ, ಜನವರಿ 29, 2020
30 °C
ನಂಬಲರ್ಹ ಅಂಕಿ–ಅಂಶ ಇಲ್ಲದಿರುವುದೇ ಈ ವಲಯದ ಅಭಿವೃದ್ಧಿಗೆ ಇರುವ ತೊಡಕು

ಅಸಂಘಟಿತ ವಲಯ: ದಾಖಲೆ ಎಲ್ಲಿ?

ಡಾ.ಜಿ.ವಿ.ಜೋಶಿ Updated:

ಅಕ್ಷರ ಗಾತ್ರ : | |

ಭಾರತದ ಸಂಘಟಿತ ವಲಯದ ವ್ಯಾಪ್ತಿ ತೀರಾ ಸೀಮಿತ. ಇದರ ಬೆಳವಣಿಗೆಯು ಬಹುದೊಡ್ಡದಾದ ಅಸಂಘಟಿತ ವಲಯದಲ್ಲಿ ಉತ್ಪಾದನೆಯಾಗುವ ಸರಕು- ಸೇವೆಗಳನ್ನು ಅವಲಂಬಿಸಿದೆ. ಆದರೂ ಉದ್ಯೋಗ ಸೃಷ್ಟಿ ಮತ್ತು ಜಿಡಿಪಿ ಅಂದಾಜಿನ ಪ್ರಶ್ನೆ ಬಂದಾಗ ವಿವಾದಗಳು ಹುಟ್ಟಿಕೊಳ್ಳಲು ಕಾರಣ, ಅಸಂಘಟಿತ ವಲಯದ ವಾಸ್ತವಗಳನ್ನು ತೋರಿಸಬಲ್ಲ ಅಂಕಿ-ಅಂಶಗಳು ಇಲ್ಲದಿರುವುದು.

ಕೇಂದ್ರ ಹಣಕಾಸು ಸಚಿವಾಲಯದ 2007-08ನೇಸಾಲಿನ ಆರ್ಥಿಕ ಸಮೀಕ್ಷೆಯು ಅಸಂಘಟಿತ ವಲಯದ ಬಗೆಗೆ ನೀಡಿದ ವಿವರಣೆ ಈಗಲೂ ಪ್ರಸ್ತುತ. ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಸಣ್ಣ ಮತ್ತು ಅತಿಸಣ್ಣ ರೈತರು, ಅನಿಶ್ಚಿತ ಬದುಕು ನಡೆಸುತ್ತಿರುವ ಅನೌಪಚಾರಿಕ ಗೇಣಿದಾರರು, ಭೂರಹಿತ ಕಾರ್ಮಿಕರು, ಬಡ ಮೀನುಗಾರರು, ಸಣ್ಣ ಪ್ರಮಾಣದ ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡವರು, ಕಷ್ಟದಲ್ಲಿ ಕಿರು, ಸಣ್ಣ ಕೈಗಾರಿಕೆಗಳನ್ನು ನಡೆಸುತ್ತಿರುವವರು, ಪ್ರಚ್ಛನ್ನ ನಿರುದ್ಯೋಗ ಸಮಸ್ಯೆಯ ಅನುಭವವುಳ್ಳ ಚಿಲ್ಲರೆ ವ್ಯಾಪಾರ-ವಹಿವಾಟುದಾರರು, ಸಾರಿಗೆ- ಸಾಗಾಟ ರಂಗದಲ್ಲಿ ದುಡಿಯುತ್ತಿರುವ ಚಾಲಕರು, ಚಿಕ್ಕ ಹೋಟೆಲ್‌ಗಳ ಮಾಲೀಕರು, ಶ್ರಮಕ್ಕೆ ತಕ್ಕ ಪ್ರತಿಫಲವಿಲ್ಲದೆ ಸೇವಾ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರು, ನಿರ್ಮಾಣ ವಲಯದಲ್ಲಿರುವ ಕೆಲಸಗಾರರು ‘ಅಸಂಘಟಿತ ವಲಯದ ಕಾರ್ಮಿಕ’ರೆಂದು ಆಡಳಿತ ವ್ಯವಸ್ಥೆಯಲ್ಲಿ ಪರಿಗಣಿತವಾಗಿದ್ದಾರೆ. ನಗರ ಪ್ರದೇಶಗಳಲ್ಲಿ ಇವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ನಗರೀಕರಣ ಹೆಚ್ಚಿದಂತೆ ಪೇಟೆ- ಪಟ್ಟಣಗಳಲ್ಲಿ ಅಸಂಘಟಿತ ವಲಯದ ಗಾತ್ರ ಹಿಗ್ಗಿದೆ. ಇದು ಎಲ್ಲಾ ರಾಜ್ಯಗಳ ಅನುಭವ.

‘ಪಕೋಡ ಮಾರುವುದು ಕೂಡ ಒಂದು ಉದ್ಯೋಗ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಾಗ ವಿವಾದ ಸೃಷ್ಟಿಯಾಯಿತು. ಪಕೋಡ ಮಾರುವವರು ಹೆಚ್ಚಾಗಿ ಕಾಣುವುದು ಅಸಂಘಟಿತ ವಲಯದಲ್ಲಿ. ಈ ವಲಯದಲ್ಲಿ ಇರುವವರಿಗೆ ಕಾರ್ಮಿಕರ ಹಿತ ಕಾಯಲು ಜಾರಿಯಾದ ಕಾನೂನುಗಳ ಅಡಿ ರಕ್ಷಣೆ (ಕೆಲಸದ ಭದ್ರತೆ, ಕನಿಷ್ಠ ವೇತನ ಇತ್ಯಾದಿ) ಸಾಮಾನ್ಯವಾಗಿ ಇರುವುದಿಲ್ಲ. ನವಭಾರತ ನಿರ್ಮಾಣಕ್ಕೆ ಸಂಬಂಧಿಸಿದಂತೆ ನೀತಿ ಆಯೋಗವು 2018ರ ನವೆಂಬರ್‌ನಲ್ಲಿ ಬಿಡುಗಡೆ ಮಾಡಿದ ನೀಲನಕ್ಷೆಯ ಪ್ರಕಾರ, ಅವರ ಉತ್ಪಾದನಾ ಸಾಮರ್ಥ್ಯವೂ ಕಡಿಮೆ, ಅವರಿಗೆ ದೊರೆಯುವ ವೇತನವೂ ಕಡಿಮೆ.

ಅಸಂಘಟಿತ ವಲಯದ ಕಾರ್ಮಿಕರು ನಗರದಲ್ಲಿರಲಿ, ಹಳ್ಳಿಯಲ್ಲಿರಲಿ ಅವರು ಅಭಿವೃದ್ಧಿ ಪ್ರಕ್ರಿಯೆಯ ಲಾಭಗಳಿಂದ ವಂಚಿತರಾದವರು. ಒಳಗೊಳ್ಳುವಿಕೆಯ ಅಭಿವೃದ್ಧಿ ಯೋಜನೆಗಳ ಲಾಭ ಇನ್ನು ಮುಂದಾದರೂ ಅವರಿಗೆ ಲಭ್ಯವಾಗಬೇಕು. ಈ ಅಗತ್ಯವನ್ನು ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷರಾದ ವಿವೇಕ್‌ ದೇಬರಾಯ್‌ ಗುರುತಿಸಿದ್ದಾರೆ. ಈ ವರ್ಷದ ಫೆಬ್ರುವರಿ 26ರಂದು ನವದೆಹಲಿಯಲ್ಲಿ ನಡೆದ ಶೃಂಗಸಭೆಯೊಂದರಲ್ಲಿ ಅವರು, ‘ಅಸಂಘಟಿತ ವಲಯದ ಕ್ಷೇಮಾಭಿವೃದ್ಧಿಗಾಗಿ ಮೂಲ ಸೌಕರ್ಯಗಳನ್ನು ಒದಗಿಸಲು ಸರ್ಕಾರವು ವಿಶೇಷ ಯೋಜನೆಗಳನ್ನು ರೂಪಿಸಬೇಕು’ ಎಂದರು. ಅಲ್ಲದೆ ಈ ವಲಯದಲ್ಲಿ ಸೃಷ್ಟಿಯಾದ, ಸೃಷ್ಟಿಯಾಗಬಲ್ಲ ಉದ್ಯೋಗಾವಕಾಶಗಳ ಬಗ್ಗೆ ನಂಬಲರ್ಹ ಅಂಕಿ-ಅಂಶಗಳನ್ನು ಸಂಗ್ರಹಿಸುವ ತುರ್ತು ಇದೆಯೆಂದು ದೇಬರಾಯ್‌ ಹೇಳಿದ್ದು ಸ್ವಾಗತಾರ್ಹ. ಮೋದಿ ನೇತೃತ್ವದ ಸರ್ಕಾರ ಪ್ರಾರಂಭಿಸಿದ, ಅಸಂಘಟಿತ ವಲಯದ ವೃದ್ಧ ಕಾರ್ಮಿಕರಿಗೆ ತುಸು ನೆರವಾಗುವ ಪಿಂಚಣಿ ಯೋಜನೆ ಇನ್ನಷ್ಟು ಪ್ರಯೋಜನಕಾರಿಯಾಗಬೇಕು. ಅದಕ್ಕೂ ಸ್ಪಷ್ಟ ಚಿತ್ರಣ ನೀಡಬಲ್ಲ ಅಂಕಿ-ಅಂಶಗಳ ಆಧಾರ ಅವಶ್ಯ.

2017-18ರ ಆರ್ಥಿಕ ಸಮೀಕ್ಷೆಯು ಅಸಂಘಟಿತ ವಲಯದ ಪಾಡನ್ನು ವಿವರಿಸಿದೆ. ‘ಮೊದಲೇ ಸಂಕಷ್ಟ ದಲ್ಲಿದ್ದ ಈ ವಲಯದ ಮೇಲೆ ನೋಟು ರದ್ದತಿಯು ಪ್ರಹಾರ ಮಾಡಿತು. ಅದರಿಂದ ಚೇತರಿಸಿಕೊಳ್ಳುವ ಮೊದಲೇ ಕಿರು, ಸಣ್ಣ ಕೈಗಾರಿಕೆಗಳ ಮೇಲೆ ಜಿಎಸ್‌ಟಿ ಇನ್ನೊಂದು ಬಲವಾದ ಏಟು ನೀಡಿತು’ ಎಂದು ಸಮೀಕ್ಷೆ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ಅಸಂಘಟಿತ ವಲಯದಲ್ಲೂ ಉದ್ಯೋಗ ನಷ್ಟವಾಗಿದ್ದು ಹೌದು. ಅದರ ಕುರಿತು ಮಾಹಿತಿ ಸಂಗ್ರಹಿಸುವ ಗೋಜಿಗೆ ಕೇಂದ್ರ ಸರ್ಕಾರವೂ ಹೋಗಿಲ್ಲ, ರಾಜ್ಯ ಸರ್ಕಾರಗಳೂ ಹೋಗಿಲ್ಲ. ನೋಟು ರದ್ದತಿಯ ಪರಿಣಾಮವನ್ನು ತಿಳಿಯಲು ಸರ್ಕಾರ ಯಾವುದೇ ಅಧ್ಯಯನ ಕೈಗೊಂಡಿಲ್ಲವೆಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಪ್ಪಿಕೊಂಡಿದ್ದಾರೆ. ಆದರೂ ಅದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ! ಅಸಂಘಟಿತ ವಲಯದಲ್ಲಿ ಸರ್ಕಾರ ಧಾರಾಳವಾಗಿ ಉದ್ಯೋಗ ಸೃಷ್ಟಿ ಮಾಡಿದೆ ಎಂದು ಹೇಳಿದ್ದಾರೆ. ಅದನ್ನು ಸಮರ್ಥಿಸಿಕೊಳ್ಳಲು ದಾಖಲೆಗಳ ಆಧಾರ ಇಲ್ಲ ಎಂದು ಅವರೇ ಒಪ್ಪಿಕೊಂಡಿದ್ದಾರೆ!

ಕೇಂದ್ರ ಸರ್ಕಾರವು ಉದ್ಯೋಗ ಸೃಷ್ಟಿ ಮಾಡುವಲ್ಲಿ ವಿಫಲವಾಗಿದೆ ಎಂದು ವಿರೋಧ ಪಕ್ಷಗಳು ವಾಗ್ದಾಳಿ ನಡೆಸುತ್ತಿರುವಾಗ ಪ್ರಧಾನಿ ‘ಕೇಂದ್ರ ಸರ್ಕಾರ ಸ್ವಯಂ ಉದ್ಯೋಗದ ರೂಪದಲ್ಲೂ ಅಸಂಘಟಿತ ವಲಯದಲ್ಲಿ ಸಹ ಕೋಟ್ಯಂತರ ಉದ್ಯೋಗ ಸೃಷ್ಟಿಸಿದೆ’ ಎಂದು ಸಂಸತ್ತಿನಲ್ಲಿ ಹೇಳಿದ್ದರು. ತಮ್ಮ ರಾಜಕೀಯ ತಂತ್ರಗಾರಿಕೆ ಪ್ರದರ್ಶಿಸುತ್ತ ‘ನಮ್ಮ ರಾಷ್ಟ್ರದಲ್ಲಿರುವುದು ಉದ್ಯೋಗದ ಕೊರತೆಯಲ್ಲ. ಬದಲಾಗಿ ಉದ್ಯೋಗಕ್ಕೆ ಸಂಬಂಧಿಸಿದ ಅಂಕಿ-ಅಂಶಗಳ ಕೊರತೆ’ ಎಂದು ವಾದಿಸಿದ್ದರು. ಈ ಕೊರತೆಯನ್ನು ಹೋಗಲಾಡಿಸಲು ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆಯೆಂಬ ಆಶ್ವಾಸನೆ ಅವರಿಂದ ಬಂದಿದೆ.

ಈಗಿರುವ ವಿವಾದಗಳ ತೀವ್ರತೆ ಹಾಗೂ ನೀತಿ ಆಯೋಗದ ನೀಲನಕ್ಷೆಯು ಅಸಂಘಟಿತ ವಲಯದ ಸಮಸ್ಯೆಗಳ ಕುರಿತು ನೀಡಿದ ಮಾಹಿತಿ ಗಮನಿಸಿ ಹೇಳುವುದಾದರೆ, ಪ್ರಧಾನಿಯ ಆಶ್ವಾಸನೆ ಈಡೇರಬೇಕಾದ ಕಾಲ ಸನ್ನಿಹಿತವಾಗಿದೆ. ರಾಷ್ಟ್ರ ಮಟ್ಟದ ವರದಿಗಳಲ್ಲೇ ಗೊಂದಲ ಹುಟ್ಟಿಸುವ, ಸೂಕ್ತ ಆಧಾರಗಳಿಲ್ಲದ ವಿವರಣೆಗಳಿವೆ. ನೀತಿ ಆಯೋಗದ ನೀಲನಕ್ಷೆ ತಿಳಿಸಿದಂತೆ, ಕೆಲವು ಅಂದಾಜುಗಳ ಪ್ರಕಾರ, ದೇಶದ ಶೇ 85ರಷ್ಟು ಕಾರ್ಮಿಕರು ಅಸಂಘಟಿತ ವಲಯದಲ್ಲಿದ್ದರು. 2018-19ರ ಆರ್ಥಿಕ ಸಮೀಕ್ಷೆಯ ಪ್ರಕಾರ, ಸರಿಸುಮಾರು ಶೇ 93ರಷ್ಟು ಕಾರ್ಮಿಕರಿಗೆ ಅಸಂಘಟಿತ ವಲಯ ಆಶ್ರಯ ನೀಡಿತ್ತು. ಕೇವಲ 7 ತಿಂಗಳ ಅವಧಿಯಲ್ಲಿ ಪ್ರತಿಶತಕ್ಕೆ ಸಂಬಂಧಿಸಿದಂತೆ ಇಷ್ಟೊಂದು ವ್ಯತ್ಯಾಸ! ಎರಡೂ ಅಂದಾಜುಗಳಿಗೆ ವಿಶ್ವಾಸಾರ್ಹ ಸಾಂಖ್ಯಿಕ ಆಧಾರವಿಲ್ಲದಿರುವುದು ದೊಡ್ಡ ನ್ಯೂನತೆ.

2015-16ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ 7.6ಕ್ಕೆ ಜಿಗಿಯಲು ಮೂಲ ವರ್ಷದ ಬದಲಾವಣೆ ಪ್ರಧಾನ ಕಾರಣವಾಗಿದ್ದರೆ, ಅಸಂಘಟಿತ ವಲಯದ ಕೊಡುಗೆಯನ್ನು ಪರಿಗಣಿಸಲು ಮಾಡಿದ ಪ್ರಯತ್ನ ಇನ್ನೊಂದು ಕಾರಣವಾಗಿತ್ತು. ಬೆಳವಣಿಗೆ ದರ ಉತ್ಪ್ರೇಕ್ಷಿತ ಎನ್ನುವ ವಾದ ಜೋರಾಗಿದ್ದು ಆಗಲೇ. ರಾಷ್ಟ್ರೀಯ ಸಾಂಖ್ಯಿಕ ಆಯೋಗದ 2012ರ ವಿಶೇಷ ವರದಿಯ ಪ್ರಕಾರ, ಜಿಡಿಪಿಯ ಸುಮಾರು ಶೇ 50ರಷ್ಟು ಭಾಗ ಅಸಂಘಟಿತ ವಲಯದಿಂದಲೇ ಬರುತ್ತದೆ. ಆದರೆ ಇದು ಭದ್ರವಾದ ಆಧಾರವೇ ಇಲ್ಲದ ಅಂದಾಜು ಅಷ್ಟೆ. ಈ ವರದಿಯೇ ವಿಶದಪಡಿಸಿದಂತೆ, ಅಸಂಘಟಿತ ವಲಯದ ಗಾತ್ರ ಮತ್ತು ಕೊಡುಗೆಯ ಕುರಿತು ನಂಬಲರ್ಹವಾದ ಅಂಕಿ–ಅಂಶ ಇಲ್ಲದಿರುವುದರಿಂದಲೇ ಇದರ ಅಭಿವೃದ್ಧಿಗೆ ಯೋಜನೆಯನ್ನು ರೂಪಿಸುವುದು ಸಾಧ್ಯವಾಗುತ್ತಿಲ್ಲ.

ಅಸಂಘಟಿತ ವಲಯದ ಎಲ್ಲ ಆಯಾಮಗಳನ್ನು ಸಮಗ್ರವಾಗಿ ಪರಿಚಯಿಸಬಲ್ಲ ಅಂಕಿ-ಅಂಶಗಳನ್ನು ಸಂಗ್ರಹಿಸುವ ಅಭಿಯಾನ ರಾಷ್ಟ್ರ ಮಟ್ಟದಲ್ಲೂ, ರಾಜ್ಯಗಳ ಮಟ್ಟದಲ್ಲೂ ಈಗ ಪ್ರಾರಂಭವಾಗಬೇಕಾಗಿದೆ. 2020-21ನೇ ಹಣಕಾಸು ವರ್ಷದ ಬಜೆಟ್‌ಗಳಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಇದಕ್ಕಾಗಿ ಅನುದಾನ ನೀಡುವ ಅಗತ್ಯವಿದ್ದು, ಈ ಅಭಿಯಾನದಲ್ಲಿ ಸ್ಥಾನಿಕ ಸರ್ಕಾರಗಳ ಸಂಸ್ಥೆಗಳನ್ನು ತೊಡಗಿಸುವ ಬಗೆಗೂ ಚಿಂತನೆ ನಡೆಯಲಿ. ವಿಶ್ವವಿದ್ಯಾಲಯ, ಕಾಲೇಜು ವಿದ್ಯಾರ್ಥಿಗಳು ಮತ್ತು ಆಸಕ್ತ ಅಧ್ಯಾಪಕರು ತಳಮಟ್ಟದಲ್ಲಿ ಅಂಕಿ-ಅಂಶ ಗಳನ್ನು ಸಂಗ್ರಹಿಸುವ ಕೈಂಕರ್ಯದಲ್ಲಿ ಪಾಲ್ಗೊಳ್ಳುವಂತಾದರೆ, ಅವರಿಗೆ ಶೈಕ್ಷಣಿಕ ಮಹತ್ವವುಳ್ಳ ಲೋಕಾನುಭವ ಸಿಗಲಿದೆ. ಸಂಶೋಧನೆಯ ಅವಕಾಶಗಳು ಅವರಿಗೆ ತೆರೆದುಕೊಳ್ಳುವ ಸಾಧ್ಯತೆಯೂ ಇದೆ.

ಲೇಖಕ: ಪ್ರಾಧ್ಯಾಪಕ, ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ ವಿಭಾಗ, ಆಳ್ವಾಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ, ಮೂಡುಬಿದಿರೆ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು