ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು | ಮಾನವೀಯತೆಯ ಗೆಲುವು

Published 24 ಏಪ್ರಿಲ್ 2024, 19:30 IST
Last Updated 24 ಏಪ್ರಿಲ್ 2024, 19:30 IST
ಅಕ್ಷರ ಗಾತ್ರ

ದಕ್ಷಿಣ ಆಫ್ರಿಕಾದ ಹೆಕ್ಟರ್‌ ಮೆಕಾನ್ಸಿ ಎನ್ನುವ ಯುವಕ ತನ್ನ ಗೆಳತಿಗೆ ಪ್ರಪೋಸ್‌ ಮಾಡಬೇಕೆಂದಿದ್ದ. ಚಲನಚಿತ್ರಗಳಲ್ಲಿ ತೋರಿಸುವ ಅದ್ದೂರಿ ಮದುವೆಯ ಪ್ರಸ್ತಾಪ ಮಾಡಲು ಆತನ ಬಳಿ ಹಣವಿರಲಿಲ್ಲ. ಹಾಗಾಗಿ ಆತ ಕೆಎಫ್‌ಸಿಯಲ್ಲಿ ಊಟದ ನಡುವೆಯೇ ತನ್ನನ್ನು ಮದುವೆಯಾಗುವಂತೆ ಕೋರಿದ, ಅವಳೂ ಒಪ್ಪಿದಳು. ಸುತ್ತಮುತ್ತಲಿನವರೆಲ್ಲ ಚಪ್ಪಾಳೆ ತಟ್ಟಿ ಅವರ ಖುಷಿಯಲ್ಲಿ ಭಾಗಿಯಾದರು. ಆತ ಆಕೆಗೆ ಉಂಗುರವನ್ನೂ ತೊಡಿಸಿದ. ಆದರೆ ಅಲ್ಲೇ ಇದ್ದ ಒಬ್ಬಾಕೆ ಈ ಘಟನೆಯನ್ನು ವಿಡಿಯೊ ಮಾಡಿ ‘ಎಂಥ ಗತಿಗೆಟ್ಟವರು ಇವರು, ಕೆಎಫ್‌ಸಿಯಲ್ಲಿ ಪ್ರಪೋಸ್‌ ಮಾಡುತ್ತಾರೆ’ ಎಂದೆಲ್ಲ ಕೆಟ್ಟದಾಗಿ ಟ್ವಿಟರ್‌ನಲ್ಲಿ ಬರೆದುಕೊಂಡಳು.

ಈ ಪೋಸ್ಟ್‌ ಓದಿದ ಕೆಎಫ್‌ಸಿ ಅದಕ್ಕೆ ಉತ್ತರ ನೀಡಿ ಆ ಜೋಡಿಗೆ ತಾನು ಬಹುಮಾನ ಕೊಡಬೇಕೆಂದಿದ್ದೇನೆಂದೂ ಅವರನ್ನು ಹುಡುಕಲು ಸಹಾಯ ಮಾಡುವಂತೆಯೂ ಜನರಲ್ಲಿ ಮನವಿ ಮಾಡಿ ಮರು ಟ್ವೀಟ್‌ ಮಾಡಿತು. ಬಡತನವನ್ನು ಹಂಗಿಸಿದ ಆ ಮಹಿಳೆಯ ಉದ್ಧಟತನ ಜನರ ಸಿಟ್ಟಿಗೆ ಕಾರಣವಾಗಿ ಈ ಟ್ವೀಟ್‌ ಸುಮಾರು ಮೂವತ್ತು ಸಾವಿರ ಸಲ ಹಂಚಲ್ಪಟ್ಟಿತು. ಎಲ್ಲೆಡೆ ಈ ಜೋಡಿಯದ್ದೇ ಚರ್ಚೆ.

ಮುಂದೆ ನಡೆದಿದ್ದು ಅಚ್ಚರಿ... ಬ್ಯಾಂಕೊಂದು ಈ ಜೋಡಿಯ ಎಲ್ಲ ವೈಯಕ್ತಿಕ ಸಾಲ ತೀರಿಸುವುದಾಗಿ ಘೋಷಿಸಿತು. ಆಭರಣದ ಕಂಪನಿಯೊಂದು ಎರಡು ಉಂಗುರಗಳನ್ನು ಉಡುಗೊರೆ ಕೊಡುತ್ತೇನೆಂದು ಹೇಳಿತು. ಅದರಲ್ಲಿ ಹುಡುಗಿಯದ್ದು ದುಬಾರಿಯಾದ ವಜ್ರದುಂಗುರ. ಶೆಫ್‌ ಒಬ್ಬ ತಾನು ಮದುವೆಯ ಊಟ ತಯಾರು ಮಾಡುವ ಜವಾಬ್ದಾರಿ ವಹಿಸಿಕೊಂಡ. ಔಡಿ ಕಂಪನಿ ಹೊಚ್ಚಹೊಸ ಕಾರನ್ನು ಉಡುಗೊರೆಯಾಗಿ ನೀಡಿತು. ಮೊಬೈಲ್‌ ಕಂಪನಿಯೊಂದು ಹೊಸ ಮೊಬೈಲ್‌ಗಳನ್ನು ಇಬ್ಬರಿಗೂ ನೀಡಿತು. ಫರ್ನಿಚರ್‌ ಕಂಪನಿ ಹೊಸ ಜೋಡಿಯ ಮನೆಗೆ ಹೊಚ್ಚಹೊಸ ಅಡುಗೆ ಮನೆ ನಿರ್ಮಿಸಿತು. ಉಬರ್‌ ಉಚಿತ ಸವಾರಿ ಒದಗಿಸಿತು. ಮೆಕ್‌ಡೊನಾಲ್ಡ್‌ ಕಂಪನಿ ವಿಐಪಿ ವಸತಿ ವ್ಯವಸ್ಥೆಯ ಜತೆಗೆ ಉಚಿತ ಕೇಪ್‌ಟೌನ್‌ ಪ್ರವಾಸವನ್ನೂ ಏರ್ಪಡಿಸಿತು. ಇವಲ್ಲದೇ ಹಲವಾರು ಜನ ಇತರ ಸಣ್ಣ ಪುಟ್ಟ ಸಹಾಯ ಮಾಡಲು ಮುಗಿಬಿದ್ದರು.

ಜಗತ್ತಿನಲ್ಲಿ ದ್ವೇಷಕ್ಕಿಂತ ಪ್ರೇಮದ ಪ್ರಮಾಣವೇ ಹೆಚ್ಚಿದೆ. ಜನರು ಮನಸ್ಸು ಮಾಡಿದರೆ ದ್ವೇಷ ಹರಡಬಯಸುವ ನೀಚರಿಗೆ ಪ್ರೀತಿ ಮಾನವೀಯತೆಯಿಂದಲೇ ಪಾಠ ಕಲಿಸಬಲ್ಲರು. ಬೇರೆಯವರ ಸಂತೋಷವನ್ನು ಸಹಿಸಲಾರದ ಕ್ಷುದ್ರ ವ್ಯಕ್ತಿಗಳು ಅಹಂಕಾರದಿಂದ ತಮ್ಮೊಳಗಿನ ಅಸಹನೆಯನ್ನು ಕಾರಿಕೊಂಡಾಗ ತಕ್ಕ ಉತ್ತರ ಕೊಟ್ಟ ದಕ್ಷಿಣ ಆಫ್ರಿಕಾದ ಈ ಕಂಪನಿಗಳು ಮತ್ತು ಜನರು ಪ್ರಶಂಸೆಗೆ ಅರ್ಹರು. ದ್ವೇಷದ ಆಯಸ್ಸು ಕ್ಷಣಿಕ, ಕೊನೆಗೂ ಮುಖ್ಯವಾಗುವುದು ಮನುಷ್ಯತ್ವ ಮಾತ್ರ. ಇದು ಎಲ್ಲ ದೇಶಕಾಲಗಳಲ್ಲಿಯೂ ಸಾಬೀತಾಗುತ್ತಲೇ ಬಂದಿರುವ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT