ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ–ಬೆಳಗು | ದೇವರು

Published 27 ನವೆಂಬರ್ 2023, 19:30 IST
Last Updated 27 ನವೆಂಬರ್ 2023, 19:30 IST
ಅಕ್ಷರ ಗಾತ್ರ

ಸಂತ ಪರಮಹಂಸರನ್ನು ಇಳಿಗಾಲದಲ್ಲಿ ಯಾರೋ ಒಬ್ಬರು ಒಂದು ಪ್ರಶ್ನೆಯನ್ನು ಕೇಳುತ್ತಾರೆ: ‘ದೇವರು ಎಂದರೆ ಏನು?’ ಪರಮಹಂಸರು ನಕ್ಕರು. ಜೀವಮಾನವಿಡೀ ಧ್ಯಾನ, ತಪಸ್ಸುಗಳಲ್ಲಿ ಕಾಲ ಕಳೆದ ಪರಮಹಂಸರನ್ನು ಕೇಳುವ ಪ್ರಶ್ನೆಯಾ ಇದು ಎಂದು ಅವರ ಶಿಷ್ಯರೆಲ್ಲರೂ ಭಾವಿಸಿದರು. ಪರಮಹಂಸರು ನಕ್ಕರು. ಅವರು ಏನು ಹೇಳುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ.

ಪ್ರಶ್ನೆ ಕೇಳಿದ ವ್ಯಕ್ತಿಗೆ ಪರಮಹಂಸರು, ‘ಹೇಳು ನಿನ್ನ ಕಲ್ಪನೆಯಲ್ಲಿ ದೇವರು ಎಂದರೆ ಏನು?’ ಎಂದು ಕೇಳಿದರು. ಉತ್ತರ ನಿರೀಕ್ಷಿಸುತ್ತಿದ್ದ ಆ ವ್ಯಕ್ತಿ ಪರಮಹಂಸರು ತನ್ನನ್ನು ಹೀಗೆ ಪ್ರತಿಪ್ರಶ್ನೆ ಕೇಳಬಹುದೆಂದು ಊಹಿಸಿರಲಿಲ್ಲ. ಅವನು ತಕ್ಷಣಕ್ಕೆ ಹೊಳೆದಂತೆ, ‘ದೇವರು ಎಂದರೆ ಅತೀಂದ್ರಿಯನಾದವನು, ನಮ್ಮ ಇರುವಿಕೆಗೆ ಕಾರಣನಾದವನು. ನಮ್ಮನ್ನೆಲ್ಲಾ ನಿರ್ದೇಶಿಸುವವನು’ ಎಂದ.

ಪರಮಹಂಸರು ನಕ್ಕರು. ವ್ಯಕ್ತಿಗೆ ತನ್ನ ಉತ್ತರ ಸರಿಯಿಲ್ಲ ಎನ್ನುತ್ತಿದ್ದಾರೆ ಎಂದು ಖೇದವೆನ್ನಿಸಿತು. ಆಗ ಪರಮಹಂಸರು, ‘ತಾಯಿ ತನ್ನ ಮಗುವನ್ನು ಮಲಗಿಸುತ್ತಾಳೆ. ಮಗುವಿಗೆ ಅಮ್ಮ ಪಕ್ಕದಲ್ಲೇ ಇದ್ದಾಳೆ ಎನ್ನುವ ನಂಬಿಕೆ. ಅವಳ ಸೆರಗನ್ನು ಹಿಡಿದು ಮಲಗುತ್ತದೆ. ತಾಯಿಗೋ ಕೆಲಸ. ಮಗು ಮಲಗುವುದನ್ನೇ ಕಾದ ಅವಳು ಎದ್ದು ನಿಧಾನಕ್ಕೆ ಸೆರಗನ್ನು ಬಿಡಿಸಿಕೊಂಡು ತನ್ನ ಕೆಲಸಗಳಲ್ಲಿ ತೊಡಗಲು ಹೊರಡುತ್ತಾಳೆ. ಮಗು ತನ್ನ ತಾಯಿ ಪಕ್ಕದಲ್ಲಿದ್ದಾಳೆ, ತಾನು ಅವಳ ಸೆರಗನ್ನು ಹಿಡಿದಿದ್ದೇನೆ ಎನ್ನುವ ಬೆಚ್ಚನೆಯ ಭಾವದಲ್ಲಿ ಮುಷ್ಟಿಗಟ್ಟಿ ಮಲಗಿರುತ್ತದೆ. ಮತ್ತೆ ಎಚ್ಚರವಾದಾಗ ಪಕ್ಕದಲ್ಲಿ ಅಮ್ಮಇಲ್ಲ ಎನ್ನುವುದು ಅರಿವಾಗಿ ಅಳಲಿಕ್ಕೆ ಆರಂಭಿಸುತ್ತದೆ. ಮತ್ತೆ ತಾಯಿಯ ಹುಡುಕಾಟ ಆರಂಭಿಸುತ್ತದೆ. ಅತ್ತರೆ ಅಮ್ಮ ಓಡಿಬರುತ್ತಾಳೆ ಎಂದು ಅಳುತ್ತದೆ. ತಾಯಿ ಬಂದು ತಬ್ಬುತ್ತಾಳೆ. ಆ ಬೆಚ್ಚನೆಯ ಸ್ಪರ್ಶ ಮಗುವಿಗೆ ಹರ್ಷದಾಯಕವಾಗಿರುತ್ತದೆ. ದೇವರು ಎಂದರೆ ಹೀಗೆ ಬೆಚ್ಚಗಿನ ಭಾವ’ ಎಂದರು. ಎಲ್ಲರಿಗೂ ಅಚ್ಚರಿಯಾಗುತ್ತದೆ.

‘ದೇವರು ನಂಬಿಕೆಯಾದರೆ ನಂಬಿ ಸುಮ್ಮನಿರಬಹುದಲ್ಲವೇ? ಅದು ಇದೆಯಾ ಇಲ್ಲವಾ ಎನ್ನುವ ಹುಡುಕಾಟ ಯಾಕೆ?’ಎನ್ನುವ ಪ್ರಶ್ನೆಯನ್ನು ಆ ವ್ಯಕ್ತಿ ಮತ್ತೆ ಕೇಳುತ್ತಾನೆ. ನಕ್ಕ ಪರಮಹಂಸರು, ‘ದೇವರು ಎನ್ನುವುದು ಒಂದು ಭಾವ. ಅದು ಇದೆ ಇಲ್ಲ ಎನ್ನುವುದು ನಮ್ಮ ಕುತೂಹಲ. ಅದನ್ನು ನಾನೂ ಹೇಳಲಾರೆ. ನೀವೂ ವಿವರಿಸಲಾರಿರಿ. ಅನುಭವಕ್ಕೆ ಮಾತು ಕಷ್ಟ. ಆದರೆ ಒಂದು ಅತ್ಯುನ್ನತ ಶಕ್ತಿಯ ಜೊತೆ ಒಡನಾಡುತ್ತೇವೆ ಎನ್ನುವುದು ನಮ್ಮ ಮನಸ್ಸಿನ ಚೈತನ್ಯವನ್ನು ವೃದ್ಧಿಸುತ್ತದೆ. ಅದಕ್ಕಾಗಿ ಎಲ್ಲವೂ ಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT