ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ–ಬೆಳಗು | ಹಿರಿಯರನ್ನು ಸದಾ ಗೌರವಿಸೋಣ

ನವೀನ ಕುಮಾರ್‌ ಹೊಸದುರ್ಗ
Published 26 ನವೆಂಬರ್ 2023, 19:00 IST
Last Updated 26 ನವೆಂಬರ್ 2023, 19:00 IST
ಅಕ್ಷರ ಗಾತ್ರ

ರೈತನೊಬ್ಬ ತುಂಬಾ ಮುದುಕನಾಗಿದ್ದ. ಅವನಿಗೆ ಈಗ ಮೊದಲಿನಂತೆ ಹೊಲದಲ್ಲಿ ದುಡಿಯುವುದು ಸಾಧ್ಯವಾಗುತ್ತಿರಲಿಲ್ಲ. ಅವನ ಮಗ ಹೊಲದಲ್ಲಿ ಕೆಲಸ ಮಾಡುವಾಗ ಅಲ್ಲಿಯೇ ಸುಮ್ಮನೆ ನೋಡುತ್ತಾ ಕುಳಿತಿರುತ್ತಿದ್ದ. ಇದನ್ನು ನೋಡಿ ಮಗನಿಗೆ ತುಂಬಾ ಸಿಟ್ಟು ಬರುತ್ತಿತ್ತು ‘ಈ ಮುದುಕ ಅಪ್ರಯೋಜಕನಾಗಿಬಿಟ್ಟಿದ್ದಾನೆ’ ಎಂದು ದಿನವೂ ಬೈಯುತ್ತಿರುತ್ತಿದ್ದ. ಅವನಿಗೆ ದನಿಗೂಡಿಸುತ್ತಿದ್ದ ಅವನ ಹೆಂಡತಿ ಸಹ ದಿನವೂ ‘ಈ ಮುದುಕನಿಗೊಂದು ಗತಿ ಕಾಣಿಸಿ ಬಿಡಿ’ ಎಂದು ಹೇಳುತ್ತಿದ್ದಳು. 

ಒಂದು ದಿನ ಯುವಕನ ಸಹನೆಯ ಕಟ್ಟೆಯೊಡೆಯಿತು. ಅವನು ಒಂದು ಮರದ ಶವಪೆಟ್ಟಿಗೆಯನ್ನು ಸಿದ್ಧಪಡಿಸಿದ. ಅಪ್ಪನ ಬಳಿ ಹೋಗಿ ‘ಇದರೊಳಗೆ ಮಲಗಿಕೋ’ ಎಂದು ಆಜ್ಞಾಪಿಸಿದ. ಮರು ಮಾತಾಡದೆ ಮುದುಕ ಅದರೊಳಗೆ ಮಲಗಿಕೊಂಡ. ಮಗ ಶವಪೆಟ್ಟಿಗೆಯನ್ನು ದರದರನೆ ಎಳೆದುಕೊಂಡು ತನ್ನ ಹೊಲದ ಪಕ್ಕದಲ್ಲಿದ್ದ ಬೆಟ್ಟವನ್ನೇರಿದ. ಬೆಟ್ಟದ ನೆತ್ತಿಯಿಂದ ಪೆಟ್ಟಿಗೆ ಸಮೇತ ಅಪ್ಪನನ್ನು ಕೆಳಗೆ ಎಸೆಯುವುದು ಅವನ ಉದ್ದೇಶವಾಗಿತ್ತು. ಇನ್ನೇನು ಆ ಕೆಲಸವನ್ನು ಅವನು ಮಾಡಬೇಕು ಎನ್ನುವಷ್ಟರಲ್ಲಿ ಒಳಗಿದ್ದ ಅಪ್ಪ, ಶವ ಪಟ್ಟಿಗೆ ಮುಚ್ಚಳವನ್ನು ನಿಧಾನವಾಗಿ ಬಡಿಯಲಾರಂಭಿಸಿದ.

ಮುಚ್ಚಳ ತೆಗೆದು ಮಗ ಏನೆಂದು ಕೇಳಿದಾಗ, ಹಾಗೆಯೇ ಅಲ್ಲಿಯೇ ಮಲಗಿದ್ದ ಅಪ್ಪ, ಶಾಂತಚಿತ್ತತೆಯಿಂದಲೇ ಹೀಗೆಂದ ‘ಮಗಾ,ಈಗ ನೀನು ನನ್ನನ್ನು ಕೆಳಗೆ ಎಸಿಯುತ್ತಿ ಎಂಬುದು ನನಗೆ ಚೆನ್ನಾಗಿ ಗೊತ್ತು. ಆದರೆ ನನ್ನದೊಂದು ಸಲಹೆ ಇದೆ ಹೇಳಲೇ?’ ಎಂದು ಕೇಳಿದ. ಮಗ ಹೇಳು ಅಂದಾಗ ಅಪ್ಪ ಹೀಗೆಂದ ‘ಅಪ್ರಯೋಜಕನಾದ ನನ್ನನ್ನು ಮಾತ್ರ ಕೆಳಗೆ ಎಸೆ. ಚೆನ್ನಾಗಿರುವ ಈ ಮರದ ಶವಪೆಟ್ಟಿಗೆಯನ್ನು ಏಕೆ ಎಸೆಯುತ್ತೀ? ಅದು ಮುಂದೆ ನಿನ್ನ ಮಕ್ಕಳ ಉಪಯೋಗಕ್ಕೆ ಬರಬಹುದು’ ಎಂದು ಹೇಳಿದ.

ಖ್ಯಾತ ನಾಟಕಕಾರ ಮಾಸ್ಟರ್ ಹಿರಣ್ಣಯ್ಯನವರು ತಮ್ಮ ಜನಪ್ರಿಯ ನಾಟಕ ಒಂದರಲ್ಲಿ ಹೀಗೆನ್ನುತ್ತಿದ್ದರು ‘ನಾವು ನಮ್ಮ ಅಪ್ಪ ಅಮ್ಮಂದಿರಿಗೆ ಏನನ್ನು ಮಾಡುತ್ತೇವೋ ಮುಂದೆ ಅದನ್ನೇ ನಮ್ಮ ಮಕ್ಕಳು ನಮಗೆ ಮಾಡುತ್ತಾರೆ‘ ಎಂದು.  ಮನೆಯಲ್ಲಿರುವ ವಯಸ್ಸಾದ ವೃದ್ಧರನ್ನು ನಿಷ್ಪ್ರಯೋಜಕರಂತೆ ಕಾಣುವ ಮಕ್ಕಳು, ಮುಂದೊಂದು ದಿನ ತಮಗೂ ಈ ಸ್ಥಿತಿ ಒದಗಿ ಬರುವುದೆಂದು ಖಂಡಿತ ಆಲೋಚಿಸಬೇಕು. ಬದುಕಿನುದ್ದಕ್ಕೂ ತಮ್ಮ ಸುಖ ಸಂತೋಷಗಳನ್ನು ಬಲಿಕೊಟ್ಟು ಮಕ್ಕಳ ಭವಿಷ್ಯಕ್ಕಾಗಿಯೇ ಹಗಲಿರುಳು ದುಡಿದ ಮಂದಿಯನ್ನು ಅವರ ವೃದ್ಧಾಪ್ಯದಲ್ಲಿ, ಅಸಹಾಯಕರಾಗಿರುವ ಬಾಳಿನ ಸಂಧ್ಯಾ ಸಮಯದಲ್ಲಿ, ಮಕ್ಕಳು ಪ್ರೀತಿ ಗೌರವ, ಸಹಾನುಭೂತಿಗಳಿಂದ ಖಂಡಿತ ನೋಡಬೇಕು. ಜೀವನವೆಂಬ ಚಕ್ರದಲ್ಲಿ ನಮ್ಮ ಹಿರಿಯರಿಗೆ ಬಂದ ಸ್ಥಿತಿ ನಮಗೂ ಬಂದೇ ಬರುತ್ತದೆ ಎಂಬ ಅರಿವು ನಮ್ಮಲ್ಲಿ ಇರಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT