ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು: ಇರಬೇಕಾದವರು ಇಲ್ಲದಂತಾದರೆ..

ನುಡಿ ಬೆಳಗು
Published 22 ಫೆಬ್ರುವರಿ 2024, 19:10 IST
Last Updated 22 ಫೆಬ್ರುವರಿ 2024, 19:10 IST
ಅಕ್ಷರ ಗಾತ್ರ

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಒಂದು ಸಣ್ಣ ಹಳ್ಳಿಯ ಸಾಧಾರಣ ಕುಟುಂಬದ ಸಣ್ಣ ಹುಡುಗ ಆತ. ಒಂಬತ್ತನೇ ತರಗತಿ ಓದುತ್ತಿದ್ದ. ಶಾಲೆಗೆ ಹೋಗುವ ಮೊದಲು ಅವನು ಕೊಟ್ಟಿಗೆಯ ಕಸ ಗುಡಿಸಿ ತೋಟಕ್ಕೆ ಹಾಕಬೇಕಿತ್ತು. ಅದೊಂದು ದಿನ ಕಸದ ಕುಕ್ಕೆ ತಲೆಯ ಮೇಲೆ ಹೊತ್ತು ಹೋಗುತ್ತಿದ್ದಾಗ ಕತ್ತರಿಸಿ ಬಿದ್ದಿದ್ದ ಕರೆಂಟಿನ ತಂತಿ ಅವನ ಕೈಗಳಿಗೆ ತಾಕಿ ರಪ್ಪನೆ ಕೆಳಕ್ಕೆ ಬಿದ್ದ. ಎರಡೂ ಕೈ ಸುಟ್ಟು ಇದ್ದಿಲಿನಷ್ಟು ಕರಕಾಗಿದ್ದವು. ಸಮೀಪದಲ್ಲಿದ್ದ ಜನ ಓಡಿ ಬಂದರು. ಹುಡುಗನನ್ನು ಆಸ್ಪತ್ರೆಗೆ ಸಾಗಿಸಿದರು. ಡಾಕ್ಟರು, ಬಲಗೈಯನ್ನು ಈಗಲೇ ಕತ್ತರಿಸಬೇಕು, ಇಲ್ಲದಿದ್ದರೆ ಹುಡುಗನ ಪ್ರಾಣಕ್ಕೇ ಅಪಾಯ ಅಂದರು. ಹಾಗೇ ಮಾಡಿದರು. ಅದೃಷ್ಟವಶಾತ್ ಎಡಗೈ ಉಳಿದುಕೊಂಡಿತು.

ಹುಡುಗ ಬಹಳ ಬುದ್ಧಿವಂತ. ಶ್ರದ್ಧಾವಂತ. ಛಲಗಾರ. ಅದಾದ ಮೇಲೆಯೂ ಕಷ್ಟಪಟ್ಟು ಓದಿದ. ಎಡಗೈಯಲ್ಲಿ ಬರೆಯುವುದನ್ನು ಹೊಸದಾಗಿ ಅಭ್ಯಾಸ ಮಾಡಿದ. ಕೃಷಿ ವಿಜ್ಞಾನದಲ್ಲಿ ಎಂ.ಎಸ್ ಸಿ ವರೆಗೂ ಓದಿದ. ಈ ಹಾದಿಯಲ್ಲಿ ಅನುಭವಿಸಿದ ನೋವೆಷ್ಟು, ಹರಿಸಿದ ಕಣ್ಣೀರೆಷ್ಟು, ಎಂಬುದನ್ನು ನೀವೇ ಕಲ್ಪಿಸಿಕೊಳ್ಳಿ. ಇಲ್ಲಿ ಬರೆಯುವುದು ಬೇಡ. 

ಆ ಸಾಹಸಿಯ ಸಾಧನೆ ಅಲ್ಲಿಗೂ ಮುಗಿಯಲಿಲ್ಲ. ಈಗ ಆತ ಆಂಧ್ರಪ್ರದೇಶದಲ್ಲಿ ಐ.ಎ.ಎಸ್ ಅಧಿಕಾರಿ. ಆ ಅದ್ಭುತ ವ್ಯಕ್ತಿಯ ಹೆಸರು, ಗಿರೀಶ್. ಅವರನ್ನೊಮ್ಮೆ ಭೇಟಿಯಾದಾಗ ಅವರ ನೋವಿನ ಕತೆಯನ್ನು ವಿವರವಾಗಿ ಹೇಳಿದರು. ಕೇಳಿ ತತ್ತರಿಸಿಹೋಗಿದ್ದೆ.

ಮಾತಿನ ಮಧ್ಯೆ ಅವರು ಇನ್ನೊಂದು ರೀತಿಯ ನೋವಿನ ಬಗ್ಗೆ ಹೇಳಿದರು.

ಅದನ್ನು ಇಂಗ್ಲಿಷ್‌ನಲ್ಲಿ ಫ್ಯಾಂಟಮ್ ಪೆಯ್ನ್ ( Phantom Pain) ಅನ್ನುತ್ತಾರಂತೆ. ಕನ್ನಡದಲ್ಲಿ ಅದನ್ನು ಮಾಯಾ ನೋವು ಅಂತಲೋ ಭ್ರಾಂತಿಯ ನೋವು ಅಂತಲೋ ಅನ್ನೋಣ. ಹಾಗೆಂದರೆ, ದೇಹದ ಒಂದು ಅಂಗವನ್ನು ಕತ್ತರಿಸಿ ಹಾಕಿದನಂತರ ಆ ಗಾಯ ಸಂಪೂರ್ಣ ವಾಸಿಯಾದ ಮೇಲೂ ಈ ನೋವು ಇರುತ್ತದೆ. ಗಾಯದ ನೋವಿನಷ್ಟೇ ಅಸಾಧ್ಯ ನೋವು ಅದು. ಅದನ್ನು ಹೀಗೆ ಹೇಳುತ್ತೇನೆ. ರಾತ್ರಿ ಮಲಗಿದ್ದಾಗ ಒಂದಿಷ್ಟು ಚಳಿ ಆಯಿತು ಅನ್ನಿ. ಆಗ ಕಂಬಳಿಯನ್ನು ಮೈಮೇಲೆ ಎಳೆದುಕೊಳ್ಳುತ್ತೇವಲ್ಲ, ಆದರೆ ಹೀಗೆ ಕೈ ಕಳೆದುಕೊಂಡವರಿಗೆ ಏನಾಗುತ್ತದೆಯೆಂದರೆ- ಕಂಬಳಿ ಎಳೆದುಕೊಳ್ಳಲು ಬಲಗೈಯನ್ನು ಚಾಚಬೇಕೆಂದು ಮಿದುಳು ಆದೇಶ ಹೊರಡಿಸುತ್ತದೆ, ಆದರೆ ಬಲಗೈ ಇಲ್ಲ. ಆಗ ಭುಜದ ಮೂಲದಲ್ಲಿ ಗಾಯವಿಲ್ಲದಿದ್ದರೂ ಅಸಾಧ್ಯ ನೋವಾಗುತ್ತದೆಯಂತೆ. ಅದೇ ಈ ಮಾಯಾ ನೋವು.

ಇದು ಶರೀರದಲ್ಲಿ ಮಾತ್ರವಲ್ಲ, ಸಮಾಜದಲ್ಲೂ ಆಗುತ್ತದೆ. ಯಾರೋ ಇದ್ದಾರೆಂದು ನಾವು ಕ್ರಿಯೆಗೆ ತೊಡಗುತ್ತೇವೆ, ಆದರೆ ಅವರು ಆಗಲೇ ಮಾಯವಾಗಿರುತ್ತಾರೆ. ಇರುವವರು ಇಲ್ಲದಿರುವಾಗ, ಅಥವಾ ಇಲ್ಲದಂತಾದಾಗ ಸಮಾಜದಲ್ಲೂ ಈ ಮಾಯಾ ನೋವು ಕಾಣಿಸಿಕೊಳ್ಳುತ್ತದೆ. ನಮ್ಮ ಸಮಾಜದ ಹಲವರು ಹಲವು ಬಗೆಗಳಲ್ಲಿ ಈ ಮಾಯಾ ನೋವನ್ನು ಅನುಭವಿಸಿದವರೇ. ಆದ್ದರಿಂದ ಇರಬೇಕಾದವರು ನಾವಿದ್ದೇವೆ ಎಂದು ಇರಬೇಕು. ಅಗತ್ಯವಿದ್ದಾಗ ‘ಕೈ ಕೊಡಬಾರದು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT