ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು: ನಕ್ಷತ್ರಲೋಕದಲ್ಲಿ ತಾಯಿಯ ಹುಡುಕಾಟ

ನುಡಿ ಬೆಳಗು
Published 13 ನವೆಂಬರ್ 2023, 18:55 IST
Last Updated 13 ನವೆಂಬರ್ 2023, 18:55 IST
ಅಕ್ಷರ ಗಾತ್ರ

ಕಣ್ಣರಳಿಸಿ ಜಗತ್ತನ್ನು ನೋಡಬೇಕಿರುವ ಪುಟ್ಟ ವಯಸ್ಸು ಆ ಬಾಲಕನದ್ದು. ತನ್ನ ಸುತ್ತ ನಡೆಯುತ್ತಿದ್ದುದರ ಬಗ್ಗೆ ಕುತೂಹಲಿಯಾಗಿ ಏನು? ಏನು? ಎಂದು ತಿಳಿಯುವ ಹಂಬಲದಲ್ಲಿದ್ದವ. ದುರಂತವೆಂದರೆ ಅವನು ಆ ವಯಸ್ಸಿನಲ್ಲಿ ತನ್ನ ತಾಯಿಯನ್ನು ಕಳೆದುಕೊಂಡುಬಿಟ್ಟ. ಆ ಮಗುವಿನ ಬಗ್ಗೆ ಎಲ್ಲರಿಗೂ ಕರುಣೆ, ತಾಯಿಲ್ಲದವನೆಂಬ ಅನುಕಂಪ. ಆದರೆ ಹುಡುಗನಿಗೆ ಮಾತ್ರ ತನ್ನ ತಾಯಿ ಏನಾದಳು ಎನ್ನುವ ಆತಂಕ, ಅವಳನ್ನು ಮತ್ತೆ ಕಾಣುವ ತವಕ.

ಅಜ್ಜಿಯನ್ನು ಕೇಳಿದ: ‘ನನ್ನ ತಾಯಿ ಎಲ್ಲಿ?’ ಅಜ್ಜಿ ಅವನಿಗೆ ಎಲ್ಲಾ ರೀತಿಯಲ್ಲೂ ವಿವರಿಸಿದಳು, ‘ನಿನ್ನತಾಯಿ ಸತ್ತು ಹೋಗಿದ್ದಾಳೆ. ಅವಳು ಮತ್ತೆ ಬಾರದ ಲೋಕಕ್ಕೆ ಹೋಗಿದ್ದಾಳೆ’ ಮುಂತಾಗಿ. ಸಣ್ಣ ಹುಡುಗನಿಗೆ ಇದೆಲ್ಲಾ ಅರ್ಥ ಮಾಡಿಕೊಳ್ಳುವ ಶಕ್ತಿ ಇಲ್ಲ. ಮತ್ತೆ ಮತ್ತೆ ಕೇಳಿದ, ‘ನನ್ನ ತಾಯಿ ಎಲ್ಲಿ?’. ಅಜ್ಜಿಗೆ ಬೇಸರ ದುಃಖ, ಜೊತೆಗೆ ಪುಟ್ಟ ಹುಡುಗನಿಗೆ ತಿಳಿಸಿ ಹೇಳಲಾಗದ ಅಸಹಾಯಕತೆ.

ಒಂದು ರಾತ್ರಿ ಮಾಳಿಗೆಯ ಮೇಲೆ ಮಲಗಿ ಆಕಾಶ ನೋಡುವಾಗ ಹುಡುಗ ಅಜ್ಜಿಯನ್ನು  ಮತ್ತೆ ಅದೇ ಪ್ರಶ್ನೆ ಕೇಳಿದ. ಅವನ ಪ್ರಶ್ನೆಯಿಂದ ತಪ್ಪಿಸಿಕೊಳ್ಳುವುದೇ ಅವಳಿಗೆ ಸಾಹಸವಾಗಿತ್ತು. ತಕ್ಷಣಕ್ಕೆ ಅವನಿಂದ ಬಿಡಿಸಿಕೊಳ್ಳಲು ಆಕಾಶ ತೋರಿಸಿ, ‘ನಿನ್ನ ತಾಯಿ ಅಲ್ಲಿ ನಕ್ಷತ್ರವಾಗಿದ್ದಾಳೆ’ ಎನ್ನುತ್ತಾಳೆ. ಹುಡುಗ ನಂಬಿದ; ಹಸಿ ಗೋಡೆಯಂಥಾ ಅವನ ಮನಸ್ಸಿಗೆ ಅಜ್ಜಿಯ ಮಾತು ಹರಳಾಗಿ ಅಂಟಿಬಿಟ್ಟಿತ್ತು. ಹುಡುಕಾಟ ಶುರುವಾಯಿತು.

ದಿನ ರಾತ್ರಿ ಮನೆಯ ಮಹಡಿಯ ಮೇಲೆ ಮಲಗುವುದು ನಕ್ಷತ್ರಗಳಲ್ಲಿ ತನ್ನ ತಾಯಿಯನ್ನು ಹುಡುಕುವುದು ಇದೇ ನಡೆದಿತ್ತು. ಮಧ್ಯ ಮಧ್ಯದಲ್ಲಿ ಅಜ್ಜಿಗೆ ‘ನನ್ನ ತಾಯಿ ಆ ನಕ್ಷತ್ರಗಳಲ್ಲಿ ಎಲ್ಲಿದ್ದಾಳೆ’ ಎಂದು ಕೇಳುತ್ತಿದ್ದ. ಅಜ್ಜಿ ಯಾವುದೋ ತೇಜೋ ಪುಂಜವಾದ ನಕ್ಷತ್ರವನ್ನು ತೋರಿಸಿ, ‘ನೋಡಲ್ಲಿ’ ಎಂದಿದ್ದಳು. ಹುಡುಗ ಅಜ್ಜಿ ತೋರಿಸಿದ ನಕ್ಷತ್ರವನ್ನು ಗಮನಿಸತೊಡಗಿದ. ಆ ನಕ್ಷತ್ರ ಚಲಿಸುತ್ತಿತ್ತು. ಅರೆ ತನ್ನ ತಾಯಿ ಏಕೆ ಓಡಾಡುತ್ತಿದ್ದಾಳೆ’ ಎನಿಸಿ ಅವನಿಗೆ ಕುತೂಹಲ ಮೂಡಿತು. ಬರೀ ತನ್ನ ತಾಯಿ ಮಾತ್ರವಲ್ಲ ಆಕಾಶದಲ್ಲಿರುವ ಎಲ್ಲವೂ ಚಲಿಸುತ್ತಿವೆ ಎಂದು ಕಂಡುಕೊಂಡ.

ದಿನಾ ಶ್ರದ್ಧೆಯಿಂದ ತಾಯಿಯನ್ನು ಹುಡುಕುತ್ತಿದ್ದವ ಸ್ವಲ್ಪ ದಿನಗಳ ನಂತರ ತನ್ನ ತಾಯಿ ಮರಳಿಬರಲಾರಳು ಎನ್ನುವ ಸತ್ಯವನ್ನುಅರ್ಥ ಮಾಡಿಕೊಂಡ. ತಾಯಿಯ ನೆಪದಲ್ಲಿ ದಿನಾ ನೋಡುತ್ತಿದ್ದ ನಕ್ಷತ್ರಗಳ ಲೋಕ ಅವನನ್ನು ಸೆಳೆಯಿತು. ನಕ್ಷತ್ರಕಾಯಗಳ ಚಲನೆಯಲ್ಲಿ ಮನ ನೆಟ್ಟಿತು. ಅವುಗಳ ನಿಖರವಾದ ಚಲನೆಯು ಆ ಹುಡುಗನಿಗೆ ಅರ್ಥವಾಗತೊಡಗಿತು. ಮುಂದೆ ಅವನು ಅತ್ಯಂತದೊಡ್ಡ ಖಗೋಳಶಾಸ್ತ್ರಜ್ಞ, ಗಣಿತಶಾಸ್ತ್ರಜ್ಞನಾದ. ಅದುವರೆಗೆ ನಂಬಿದ್ದ ಭೂಮಿಯ ಸುತ್ತ ಸೂರ್ಯ ಸುತ್ತುವುದಿಲ್ಲ ಸೂರ್ಯನ ಸುತ್ತ ಭೂಮಿ ಸುತ್ತಿತ್ತಿದೆ ಎಂದು ನಿರೂಪಿಸಿದ. ಅವನೇ ಗೆಲಿಲಿಯೋ.

ತೀವ್ರವಾದ ಹುಡುಕಾಟಗಳು ಮನುಷ್ಯನನ್ನು ಬಹು ಎತ್ತರಕ್ಕೆ ಒಯ್ಯುತ್ತವೆ ಮತ್ತು ಜಗತ್ತಿಗೆ ಮಹತ್ವದ ಕೊಡುಗೆಯನ್ನು ನೀಡುತ್ತವೆ ಎನ್ನುವುದಕ್ಕೆ ಗೆಲಿಲಿಯೋ ಉದಾಹರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT