ಸೂಫಿಯೊಬ್ಬನ ಬಳಿಬಂದ ಒಬ್ಬ ಆವೇಶದಿಂದ ಕೂಗಿದ, ‘ನಿನ್ನ ದೇವರೂ ಈ ಜನರ ಹಾಗೇ ದುರಹಂಕಾರಿ, ಅವನಿಗೆ ಹೇಳು ನನ್ನನ್ನು ಏನೂ ಮಾಡಲಿಕ್ಕಾಗುವುದಿಲ್ಲ’ ಎಂದು. ಅವನ ಮೊಂಡುತನದ ಬಗ್ಗೆ ಸೂಫಿಗೆ ಗೊತ್ತಾಯಿತು. ಇವನಿಗೆ ಹೇಗೆ ಹೇಳಿದರೆ ಪರಿಣಾಮಕಾರಿಯೆಂದು ಯೋಚಿಸತೊಡಗಿದ. ಬಂದವನ ಆವೇಶ ಮಿತಿ ಮೀರುತ್ತಿತ್ತು. ಆಗ ಸೂಫಿ, ‘ಆಯಿತು, ನನ್ನ ದೇವರಿಗೆ ಹೇಳುವೆ. ನಿನ್ನ ಸಮಸ್ಯೆ ಏನು ಎನ್ನುವುದಾದರೂ ಹೇಳು’ ಎಂದು ಸಮಾಧಾನಪಡಿಸಿದ. ‘ನಾನು ಹಲವು ಒಳ್ಳೆಯ ಕೆಲಸವನ್ನು ಮಾಡಿದ್ದೇನೆ, ಕಷ್ಟಪಟ್ಟು ದುಡಿದ ಹಣವನ್ನು ದಾನ ಕೊಟ್ಟಾಗ ಸ್ವೀಕಾರ ಮಾಡಿದ ಜನ ಹರಸಿದ್ದಾರೆ. ನನ್ನ ಬಗ್ಗೆ ಇವರಿಗಲ್ಲದೆ ಬೇರೆ ಯಾರಿಗೆ ಕಾಳಜಿ ಎಂದು ನಾನೇ ಕೇಳಿಕೊಂಡಿದ್ದೇನೆ. ಆದರೆ ಬೆನ್ನ ಹಿಂದೆ ಇವನೆಂಥಾ ಮನುಷ್ಯ ಎಂದು ಆಡಿಕೊಳ್ಳುತ್ತಾರಲ್ಲಾ’ ಎಂದ. ಸೂಫಿ ಕುತೂಹಲದಿಂದ ಕೇಳಿದ: ‘ಹೌದಪ್ಪ, ಅವರು ನಿನ್ನ ಬೈದರು ಆಡಿಕೊಂಡರು. ಆದರೆ ಅದಕ್ಕೆ ಒಂದು ಕಾರಣ ಬೇಕಲ್ಲಾ! ಅದೇನೆಂದು ಹೇಳದಿದ್ದರೆ ಅರ್ಥವಾದರೂ ಹೇಗಾಗಬೇಕು’.

ಸೂಫಿಯ ಮಾತಲ್ಲಿದ್ದ ಸಾಂತ್ವನದಿಂದ ಆವೇಶ ತಗ್ಗಿಸಿಕೊಂಡ ವ್ಯಕ್ತಿ, ‘ನಾನು ಎಷ್ಟು ಒಳ್ಳೆಯವನು ಎಂದರೆ ಯಾರ ಮನಸ್ಸನ್ನೂ ನೋಯಿಸಬಾರದು ಎಂದು ನನ್ನ ಹತ್ತಿರ ಇದ್ದದ್ದನ್ನು ನನಗೆಂದು ಉಳಿಸಿಕೊಳ್ಳಲಿಲ್ಲ. ಕೇಳಿದವರಿಗೆ ಕೇಳಿದ್ದನ್ನು ಕೊಡುತ್ತಾ ಬಂದೆ. ಹಣದ ಕೊರತೆ ಎದುರಾಯಿತು. ಸರಿದೂಗಿಸಿಕೊಳ್ಳಲು ದಾರಿಗಳಿಲ್ಲದೆ ಸ್ವಲ್ಪ ಜೂಜಿಗೆ ಬಿದ್ದೆ. ಒಳ್ಳೆಯತನಕ್ಕೆ ಸ್ವಲ್ಪವೂ ಬೆಲೆಯಿಲ್ಲ. ದೇವರು ನನ್ನನ್ನು ಅಲ್ಲಿ ಸೋಲಿಸಿದ. ನಾನೀಗ ನಿರ್ಗತಿಕನಾಗಿರುವೆ. ಜನ, ‘ಇದ್ದಾಗ ಮೆರೆದ ಈಗ ನೋಡು ಹೇಗಾದ’ ಎನ್ನುತ್ತಿದ್ದಾರೆ. ನಾನೇನು ಮಾಡಲಿ, ಇದಕ್ಕೆಲ್ಲಾ ಕಾರಣ ದೇವರೇ ಅಲ್ಲವೇ? ಅವನಿಗೆ ಕರುಣೆಯೇ ಇಲ್ಲ, ನನ್ನೆಲ್ಲಾ ಸಂತೋಷ ನೆಮ್ಮದಿಯನ್ನು ಕಸಿದುಕೊಂಡುಬಿಟ್ಟ’ ಎಂದು ಅಳಲಿಕ್ಕೆ ಶುರು ಮಾಡಿದ.

ಸೂಫಿಗೆ ಎಲ್ಲವೂ ಅರ್ಥವಾಯಿತು. ಏರುಧ್ವನಿಯಲ್ಲಿ, ‘ಮೊದಲು ಹಡಗಿನಲ್ಲಾದ ರಂಧ್ರವನ್ನು ಮುಚ್ಚು’ ಎಂದ. ಅಳುತ್ತಿದ್ದ ವ್ಯಕ್ತಿಗೆ ಅಚ್ಚರಿಯಾಯಿತು. ಸೂಫಿ ಹೇಳಿದ, ‘ಸಮುದ್ರದ ಅಗಾಧವಾದ ನೀರು ಹಡಗನ್ನು ಮುಳುಗಿಸಲಾರದು. ಆದರೆ ಸಣ್ಣ ಸಣ್ಣ ರಂಧ್ರಗಳು ಮಾತ್ರವೇ ಮುಳುಗಿಸಿ ತಳಸೇರಿಸಿಬಿಡುತ್ತವೆ. ನೀನು ದೇವರನ್ನು, ಜನಗಳನ್ನೂ ಬಯ್ಯುತ್ತಿರುವೆ. ದೇವರು ನಿನಗೆ ಎಲ್ಲವನ್ನೂ ಕೊಟ್ಟ. ನಿನಗಾಗಿ ಏನನ್ನೂ ಉಳಿಸಿಕೊಳ್ಳದೆ ಎಲ್ಲವನ್ನೂ ಹಂಚಿದೆ. ಒಳ್ಳೆಯದೆ, ಆದರೆ ಅದಕ್ಕಾಗಿ ಹಿಡಿದ ಜೂಜಿನ ದಾರಿ ಕೆಟ್ಟದ್ದು. ನಿನ್ನ ಸುತ್ತಲಿನ ಜನ ಆಡಿಕೊಳ್ಳುತ್ತಾರೆ ಅಂದರೆ, ಅದು ನಿನ್ನ ಮೇಲಿನ ದ್ವೇಷದಿಂದ ಮಾತ್ರ ಅಲ್ಲ. ಸಂಕಟದಿಂದ ಕೂಡ. ದೇವರು ತಾನೇ ಮಾತಾಡಲಾರ ಆದ್ದರಿಂದ ಜನರಿಂದ ಆಡಿಸುತ್ತಾನೆ. ಅದು ದೇವರ ಮಾತು. ಗಮನ ಇಟ್ಟು ಕೇಳು ನಿನ್ನ ತಪ್ಪು ಅರ್ಥವಾಗುತ್ತದೆ. ಅದನ್ನು ಸರಿಪಡಿಸಿಕೋ. ನೀನು ಮುಳುಗಲು ಕಾರಣವಾದ ಜೂಜನ್ನು ಮೊದಲು ಬಿಡು. ನಮ್ಮ ಸುತ್ತಲಿನ ಯಾವುದೇ ಸಂಗತಿಗಳು ನಮ್ಮ ಸಂತೋಷ ನೆಮ್ಮದಿ ನಗುವನ್ನು ಕಸಿದುಕೊಳ್ಳಲಾರವು. ನಮ್ಮ ಬಗ್ಗೆ ನಮಗಿರುವ ಸಂದೇಹ, ಸಣ್ಣ ಪುಟ್ಟ ದುರಭ್ಯಾಸಗಳು ಇವು ರಂಧ್ರಗಳಾಗಿ ನಮ್ಮನ್ನು ಮುಳುಗಿಸುತ್ತವೆ’ ಎಂದ.

ಬಂದವನಿಗೆ ತಪ್ಪಿನ ಅರಿವಾಗಿತ್ತು. ತಲೆ ತಗ್ಗಿಸಿ ಸೂಫಿಗೆ ನಮಸ್ಕರಿಸಿದ. ಸೂಫಿ ಹೇಳಿದ: ‘ಅರ್ಥ ಮಾಡಿಕೋ ಜೀವನದ ಬೆಲೆ ಎಲ್ಲಕ್ಕಿಂತ ದೊಡ್ಡದು. ಅದರಲ್ಲೂ ಪರಿಶ್ರಮದ ಹಾದಿ ಫಲಿತದಷ್ಟೇ ಮುಖ್ಯ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.