ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು | ದುಡ್ಡಿನ ಅಹಂಕಾರ

Published 5 ಮಾರ್ಚ್ 2024, 0:54 IST
Last Updated 5 ಮಾರ್ಚ್ 2024, 0:54 IST
ಅಕ್ಷರ ಗಾತ್ರ

ಬಡ ಹುಡುಗಿಯೊಬ್ಬಳು ದೊಡ್ದ ಸಾಹುಕಾರನ ಮನೆಗೆ ಮದುವೆಯಾಗಿ ಹೋಗುತ್ತಾಳೆ. ಅವಳು ಮನೆಗೆ ಬಂದ ಮೇಲೆ ಆ ಮನೆಯ ಸಂಪತ್ತು ಇನ್ನಷ್ಟು ವೃದ್ಧಿಸುತ್ತದೆ. ಎಲ್ಲರೂ ಆಕೆಯ ಅದೃಷ್ಟವನ್ನು ಹೊಗಳುತ್ತಲಿರುತ್ತಾರೆ. ಅವಳು ಅದೃಷ್ಟ ದೇವತೆ ಎಂದು ಅವಳ ಗಂಡನ ಮನೆಯವರು ಕೂಡಾ ಭಾವಿಸುತ್ತಾರೆ. ಅವಳೂ ಬರಿಯ ವಜ್ರಾಭರಣವನ್ನಲ್ಲದೆ ಬೇರೆ ಆಭರಣವನ್ನು ಧರಿಸುತ್ತಿರಲಿಲ್ಲ. ರೇಷ್ಮೆ ಸೀರೆಯನ್ನಲ್ಲದೆ ಬೇರೆಯದನ್ನು ಉಡುತ್ತಿರಲಿಲ್ಲ. ಇದರಿಂದಾಗಿ ಅವಳ ಮನಸ್ಸಿನಲ್ಲಿ ಒಂದು ಅಹಂಭಾವ ಹುಟ್ಟಿಕೊಳ್ಳುತ್ತದೆ, ಈ ಜಗತ್ತಿನಲ್ಲಿ ನನಗಿಂತ ಅಪೂರ್ವವಾದ ಜೀವ ಇನ್ನೊಂದಿಲ್ಲ ಎಂದು. ಅವಳ ನಡೆ ನುಡಿಗಳೆಲ್ಲವೂ ಬದಲಾಗುತ್ತಾ ಬಂದವು. 

ಅವಳ ಸ್ನೇಹಿತೆಯೊಬ್ಬಳು ಒಂದು ದಿನ ಅಚಾನಕ್ ಆಗಿ ಭೇಟಿಯಾದಳು. ತನ್ನ ಜೊತೆಯವಳು ಇಷ್ಟು ಎತ್ತರಕ್ಕೆ ಬೆಳೆದದ್ದು ಅವಳಿಗೆ ತುಂಬಾ ಸಂತಸ ತಂದಿತ್ತು. ಆದರೆ ಶ್ರೀಮಂತೆಯಾಗಿದ್ದ ಹುಡುಗಿಗೆ ಬಡವಳಾದ ತನ್ನ ಸ್ನೇಹಿತೆಯ ಮೇಲೆ ತಾತ್ಸಾರ. ತನ್ನ ಮಟ್ಟ ಎಂಥಾದ್ದು ಎಂದು ಜಂಭದಿಂದ ಹೇಳಿಕೊಳ್ಳತೊಡಗಿದ್ದಳು. ತನ್ನ ಅದೃಷ್ಟವನ್ನು ತಾನೇ ಹೊಗಳಿಕೊಳ್ಳುತ್ತಿದ್ದಳು. ಬಡ ಸ್ನೇಹಿತೆ ಇದನ್ನು ನಿರೀಕ್ಷಿಸಿರಲಿಲ್ಲ. ಈ ಅಹಮ್ಮಿನ ಮಾತುಗಳನ್ನು ಕೇಳಿ ಕೇಳಿ ಸಾಕಾಗಿಹೋಯಿತು ಅವಳಿಗೆ. ‘ನೀನು ಮುಂಚಿನ ಹಾಗೆ ಇಲ್ಲ. ಹಿಂದಿನದನ್ನೆಲ್ಲಾ ಮರೆತು ಬಿಟ್ಟಿದ್ದೀಯ. ನಾವೆಲ್ಲಾ ಸಾಧಾರಣ ಬಾಲ್ಯವನ್ನು ಅನುಭವಿಸಿದರೂ ಎಂಥಾ ಅದ್ಭುತವಾದ ಅನುಭವಗಳನ್ನು ಪಡೆದಿದ್ದೆವು. ಅವೆಲ್ಲಾ ನಿನಗೆ ನೆನಪೇಕೆ ಆಗುತ್ತಿಲ್ಲ’ ಎಂದು ತನ್ನ ಶ್ರೀಮಂತ ಗೆಳತಿಯನ್ನು ಕೇಳುತ್ತಾಳೆ. ಅದಕ್ಕೆ ಶ್ರೀಮಂತೆ ನಗುತ್ತಾ, ‘ನನಗದರ ಅಗತ್ಯ ಇಲ್ಲ. ಈಗ ನನ್ನ ಬಳಿ ಇರುವ ಎಲ್ಲವೂ ಅಸಾಧಾರಣವಾದದ್ದು’ ಎಂದು ನಗುತ್ತಾ ‘ನೋಡು ಈ ಹಾರದ ಬೆಲೆ ಕೋಟಿಗಳಲ್ಲಿದೆ ನೀನು ಊಹೆ ಮಾಡಲಾರೆ’ ಎನ್ನುತ್ತಾಳೆ.

ಶ್ರೀಮಂತೆಗೆ ಬುದ್ಧಿ ಕಲಿಸುವ  ತಿರ್ಮಾನಕ್ಕೆ ಬಂದ ಗೆಳತಿ, ‘ಹೌದಾ ಈ ಹಾರ ನಿನಗೆ ಚೆನ್ನಾಗಿ ಕಾಣುತ್ತಿದೆಯೋ ಇಲ್ಲವೋ ಎಂದು ನೋಡಿಕೋ’ ಎಂದು ತನ್ನ ಬಳಿಯಿರುವ ಕನ್ನಡಿಯನ್ನು ಕೊಡುತ್ತಾಳೆ. ಜಂಭದಿಂದ, ‘ಅಷ್ಟು ಹಣ ಕೊಟ್ಟ ಹಾರ ಚೆನ್ನಾಗಿಲ್ಲದೆ ಏನಾಗಿರುತ್ತದೆ?’ ಎನ್ನುತ್ತಾ ಕನ್ನಡಿಯಲ್ಲಿ ನೋಡಿಕೊಳ್ಳುವ ಶ್ರೀಮಂತೆಯನ್ನು ಕೇಳುತ್ತಾಳೆ, ‘ಈ ಕನ್ನಡಿಯ ಬೆಲೆ ಎಷ್ಟು ಗೊತ್ತಾ?’. ಅದಕ್ಕೆ ಶ್ರೀಮಂತೆ ‘ಹಾ ಮಹಾ ಎಷ್ಟಿದ್ದೀತು ಅಬ್ಬಬ್ಬಾ ಎಂದರೆ ನೂರು ರೂಪಾಯಿ’ ಎನ್ನುತ್ತಾಳೆ. ಅದಕ್ಕೆ ಬಡಸ್ನೇಹಿತೆ ನಗುತ್ತಾ ‘ಇಲ್ಲ, ಬರಿಯ ಇಪ್ಪತ್ತು ರೂಪಾಯಿ, ಜಾತ್ರೆಯಲ್ಲಿ ಕೊಂಡಿದ್ದು’ ಎನ್ನುತ್ತಾಳೆ. ಆ ಮಾತನ್ನು ಕೇಳುತ್ತಾ ತಾತ್ಸಾರದಿಂದ ಓಹ್ ಎನ್ನುತ್ತಾಳೆ ಶ್ರೀಮಂತೆ. ಆಗ ಬಡಸ್ನೇಹಿತೆ ನಿನ್ನ ಕೋಟಿಯ ಹಾರವನ್ನು ಕಾಣಿಸಲಿಕ್ಕೆ ಸಾಧಾರಣವಾದ ಕನ್ನಡಿಯೇ ಬೇಕೆನ್ನುವುದನ್ನು ನೆನಪಿಟ್ಟುಕೋ. ಇಲ್ಲದಿದ್ದರೆ ನಿನ್ನನ್ನೂ ನಿನ್ನ ಹಾರವನ್ನೂ ಯಾವುದೂ ಕಾಣಿಸುವುದಿಲ್ಲ. ಮತ್ತು ಕನ್ನಡಿಗೆ ನಾನು ನೀನು ಎನ್ನುವ ಭೇದವೂ ಇರುವುದಿಲ್ಲ. ಕನ್ನಡಿಯ ಹಾಗೆ ಎಲ್ಲವನ್ನೂ ತಾಳಿಕೊಳ್ಳುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು’ ಎನ್ನುತ್ತಾಳೆ. ಈ ಮಾತುಗಳು ಶ್ರೀಮಂತೆಯ ಅಹಂ ಮುರಿದು ಸ್ನೇಹದ ಮುಂದೆ ದುಡ್ಡಿನ ದುರಹಂಕಾರ ಸಲ್ಲದು ಎಂದು ತಿಳಿಯುತ್ತಾಳೆ.      

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT