ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ಅನ್ನ ಕಸಿದ ಕೊರೊನಾ

Last Updated 22 ಮಾರ್ಚ್ 2020, 20:30 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ –19 ಕೆಲವರನ್ನು ನೇರವಾಗಿ ಕಾಡುತ್ತಿದ್ದರೆ, ಹಲವರನ್ನು ಪರೋಕ್ಷವಾಗಿ ಕಾಡುತ್ತಿದೆ. ತುತ್ತಿನ ಚೀಲ ತುಂಬಿಸಿಕೊಳ್ಳಲು ಪ್ರತಿದಿನ ದುಡಿಯಲೇಬೇಕಿರುವ ಕೂಲಿ ಕಾರ್ಮಿಕರು, ಹಮಾಲರು, ಬೀದಿಬದಿ ವ್ಯಾಪಾರಿಗಳು, ಬೀಡಿ ಕಟ್ಟುವವರು, ಆ್ಯಪ್ ಆಧಾರಿತ ಆಟೋ, ಟ್ಯಾಕ್ಸಿ ಚಾಲಕರು, ತಳ್ಳುವ ಗಾಡಿಗಳ ವ್ಯಾಪಾರಿಗಳಿಗೆ ಜೀವನವೇ ಕಷ್ಟವಾಗಿದೆ.

‘ಕೂಡಿಟ್ಟಿದ್ದ ಪುಡಿಗಾಸು ಈಗ ಕರಗಿ ಹೋಗಿದೆ, ವ್ಯಾಪಾರ ನಡೆಸದ ನಮಗೆ ಸಾಲ ಕೊಡುವವರೂ ಇಲ್ಲವಾಗಿದ್ದಾರೆ. ವಿದೇಶದಿಂದ ಬಂದ ಕೊರೊನಾ ಸೋಂಕು ಸದ್ಯಕ್ಕೆ ಹಣ ಉಳ್ಳವರಿಗೆ ಕಾಣಿಸಿಕೊಂಡಿದ್ದರೆ, ಅದರ ಪರಿಣಾಮ ನಮ್ಮಂಥ ಬಡವರ ಬದುಕು ಕಸಿದುಕೊಂಡಿದೆ’ ಎಂದು ಕಣ್ಣೀರಿಡುತ್ತಾರೆ ರೇಸ್‌ಕೋರ್ಸ್‌ ರಸ್ತೆ ಬದಿಯಲ್ಲಿ ತಳ್ಳುವ ಗಾಡಿಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ಅನುರಾಧಾ.

ಕೊನೆಯಿಲ್ಲದ ಆತಂಕ

* ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ 6 ಸಾವಿರಕ್ಕೂ ಅಧಿಕ ಹಮಾಲರಿದ್ದಾರೆ, ಅವರಲ್ಲಿ ಸುಮಾರು 2 ಸಾವಿರದಷ್ಟು ಮಹಿಳೆಯರು. ಎಷ್ಟು ಚೀಲ ಹೊರುತ್ತಾರೆ ಎಂಬುದರ ಮೇಲೆ ಅವರ ಅಂದಿನ ಕೂಲಿ ನಿರ್ಧಾರವಾಗುತ್ತದೆ. ಚೀಲದಲ್ಲೋ, ಆಲೂಗಡ್ಡೆಯಲ್ಲೋ ಕೊರೊನಾ ಸೋಂಕು ಬರಬಹುದೆಂಬ ಭಯ ಇದೆ. ಜೀವಕ್ಕೆ ಹೆದರಿದರೆ ಜೀವನ ನಡೆಯುವುದು ಹೇಗೆ ಎನ್ನುತ್ತಾರೆ ಹಮಾಲರು

* ಇದೇ ಮಾರುಕಟ್ಟೆಯಲ್ಲಿಮಹಿಳೆಯರು ಈರುಳ್ಳಿ ಮತ್ತು ಆಲೂಗಡ್ಡೆಯನ್ನು ಚೀಲಕ್ಕೆ ತುಂಬುವುದು, ಕೊಳತೆವುಗಳನ್ನು ಬೇರ್ಪಡಿಸುವ ಕೆಲಸ ಮಾಡುತ್ತಾರೆ. ಇವರಲ್ಲಿ ಕೆಲವರಿಗೆ ‌ಕೂಲಿಯ ರೂಪದಲ್ಲಿ 5ರಿಂದ 10 ಕೆಜಿ ಈರುಳ್ಳಿ ಅಥವಾ ಆಲೂಗಡ್ಡೆ ಸಿಗುತ್ತದೆ. ಅದನ್ನು ಮಾರಾಟ ಮಾಡಿ ಅಂದಿನ ತುತ್ತು ಹುಟ್ಟಿಸಿಕೊಳ್ಳಬೇಕು

* ಕಲಬುರ್ಗಿ ಕಡೆಯಿಂದ ಬಂದಿರುವ 250ರಿಂದ 300 ಜನರ ಗುಂಪುಗಳು ಈ ಮಾರುಟಕ್ಟೆಯನ್ನು ನಂಬಿ ಹೊಟ್ಟೆಹೊರೆಯುತ್ತಿವೆ. ಕೊಳೆತಿವೆ ಎಂದು ಸುರಿಯುವ ಆಲೂಗಡ್ಡೆ ಅಥವಾ ಈರುಳ್ಳಿ ರಾಶಿಗಳಲ್ಲಿ ತಡಕಾಡಿ ಅಲ್ಲಿ ಸಿಕ್ಕಿದ್ದನ್ನು ಯಾವುದಾದರೂ ಅಂಗಡಿಗೆ ಕೊಟ್ಟು ಅಂದಿನ ಊಟಕ್ಕೆ ಅಕ್ಕಿ –ಧಾನ್ಯ ಪಡೆಯುತ್ತಾರೆ. ಕೊರೊನಾ ಸೋಂಕು ತಡೆಯುವ ಸಲುವಾಗಿ ಯುಗಾದಿ ನಂತರ 5 ದಿನ ಮಾರುಕಟ್ಟೆ ಬಂದ್ ಮಾಡಲಾಗುತ್ತಿದೆ. ಅವಧಿ ವಿಸ್ತರಣೆ ಕೂಡ ಆಗಬಹುದು. ‘ಒಂದು ಅಥವಾ ಎರಡು ದಿನ ಮಾರುಕಟ್ಟೆ ಬಂದ್ ಆದರೆ ಹೇಗೋ ಸಹಿಸಿಕೊಳ್ಳುತ್ತೇವೆ. ವಾರಗಟ್ಟೆಲೆ ಮಾರುಕಟ್ಟೆ ಬಂದ್ ಆದರೆ ನಮ್ಮ ಹೊಟ್ಟೆಗೆ ತಣ್ಣೀರುಬಟ್ಟೆಯೇ ಗತಿ’ ಎಂದು ಹೇಳುವಾಗ ಮಲ್ಲಮ್ಮನ ಕಣ್ಣಾಲಿಗಳು ಒದ್ದೆಯಾದವು.

ಕೇರಳ ಮಾದರಿಯಲ್ಲಿ ಪಡಿತರ

ಕೊರೊನಾ ಸೋಂಕಿನ ಕಾರಣದಿಂದ ಬೀದಿಗೆ ಬಿದ್ದಿರುವಅಸಂಘಟಿತ ಕಾರ್ಮಿಕರಿಗೆ, ಬಡವರಿಗೆ ಕೇರಳ ಮಾದರಿಯಲ್ಲಿ ಉಚಿತವಾಗಿ ದಿನಸಿ ನೀಡಬೇಕು, ಸಾಲದ ಕಂತು ಕಟ್ಟುವ ಅವಧಿ ಮುಂದೂಡಬೇಕು ಎಂದು ಸಿಐಟಿಯು ಕಾರ್ಯದರ್ಶಿ ಕೆ. ಮಹಾಂತೇಶ ಹೇಳುತ್ತಾರೆ.

ದುಡಿದರೆ ಮಕ್ಕಳಿಗೆ ಅನ್ನ ಇಲ್ಲ ಅಂದ್ರೆ ಇಲ್ಲ

ಇವತ್ತು ನಾನು ದುಡಿದರೆ ನನಗೆ ಮತ್ತು ನನ್ನ ಮಕ್ಕಳಿಗೆ ಊಟ. ಕೊರೊನಾ ಸೋಂಕಿಗೆ ಹೆದರಿ ಎಪಿಎಂಸಿ ಬಂದ್ ಮಾಡಿದರೆ ಹೊಟ್ಟೆಗೆ ಏನು ತಿನ್ನಬೇಕು? ಕೂಲಿಯಾಳು ವೀರ ಹೇಳುತ್ತಾರೆ.

1.32 ಕೋಟಿ

ರಾಜ್ಯದಲ್ಲಿರುವ ಸಂಘಟಿತ ಕಾರ್ಮಿಕರು

1 ಲಕ್ಷ

ಮಿಲ್, ವೇರ್ ಹೌಸ್‌ ಮತ್ತು ಗೋಡಾನ್‌ ಹಮಾಲರು

1.20 ಲಕ್ಷ

ಎಪಿಎಂಸಿ ಮಾರುಕಟ್ಟೆಯಲ್ಲಿನ ಹಮಾಲರು

60,000

ಮಾರುಕಟ್ಟೆಗಳಲ್ಲಿನ ಹಮಾಲರು

5,000

ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿನ ಹಮಾಲರು

4.80 ಲಕ್ಷ

ಬೀದಿ ಬದಿ ವ್ಯಾಪಾರಿಗಳು

60 ಲಕ್ಷ

ಕಟ್ಟಡ ಕಾರ್ಮಿಕರು

10 ಲಕ್ಷ

ವಲಸೆ ಕಾರ್ಮಿಕರು(ಹೊರ ರಾಜ್ಯ)

10 ಲಕ್ಷ

ರಾಜ್ಯದ ವಿವಿಧೆಡೆಯಿಂದ ಬೆಂಗಳೂರಿಗೆ ವಲಸೆ ಬಂದ ಕಾರ್ಮಿಕರು

5 ಲಕ್ಷ

ಆಟೋ ಮತ್ತು ಟ್ಯಾಕ್ಸಿ ಚಾಲಕರು

ಕೇರಳ, ಯುಪಿ ಮಾದರಿ

ಕೋವಿಡ್‌ ಭೀತಿಯಿಂದಾಗಿ ವ್ಯಾಪಾರ ವಹಿವಾಟು ಬಂದ್‌ ಮಾಡಿದ್ದರಿಂದ ನಷ್ಟ ಅನುಭವಿಸಿದ ದಿನಗೂಲಿ ನೌಕರರು ಹಾಗೂ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾದ ಇತರ ವರ್ಗದ ಜನರಿಗಾಗಿ ಕೇರಳ ಹಾಗೂ ಉತ್ತರಪ್ರದೇಶ ಸರ್ಕಾರಗಳು ಪರಿಹಾರವನ್ನು ಘೋಷಿಸಿವೆ.

ಕೇರಳ

ಕೇರಳ ಸರ್ಕಾರ ₹ 20,000ಕೋಟಿ ಪರಿಹಾರ ಯೋಜನೆಯನ್ನು ಘೋಷಿಸಿದೆ.

* ಬಡ ಕುಟುಂಬಗಳಿಗೆ ನೀಡುವ ಪಿಂಚಣಿ ಮುಂತಾದ ಸಾಮಾಜಿಕ ಭದ್ರತಾ ಯೋಜನೆಗಳ ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳ ಸೌಲಭ್ಯ ಪಾವತಿಗಾಗಿ ₹ 1,500 ಕೋಟಿ

* ಇಂಥ ಪಿಂಚಣಿ ಯೋಜನೆಗಳ ಫಲಾನುಭವಿಗಳಲ್ಲದ, ಬಡ ಕುಟುಂಬಗಳಿಗೆ ಪಿಂಚಣಿಯ ರೂಪದಲ್ಲಿ ನೀಡಲು ₹ 2000 ಕೋಟಿ

* ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರಿಗೆ ನೀಡಲು ₹ 2000 ಕೋಟಿ

* ₹ 20ರ ದರದಲ್ಲಿ ಊಟ–ತಿಂಡಿ ವಿತರಿಸುವ 1000 ಹೊಸ ಕೇಂದ್ರಗಳನ್ನು ಆರಂಭಿಸಲು ₹ 500 ಕೋಟಿ

* ಗುತ್ತಿಗೆದಾರರು ಹಾಗೂ ವ್ಯಾಪಾರಿಗಳ ಬಾಕಿ ಬಿಲ್‌ ಪಾವತಿಗಾಗಿ ₹14,000 ಕೋಟಿ

ಉತ್ತರಪ್ರದೇಶ

*ರಾಜ್ಯದ 35 ಲಕ್ಷ ಕಾರ್ಮಿಕರಿಗೆ ತಲಾ ₹ 1000 ಪರಿಹಾರವನ್ನು ನೀಡುವುದಾಗಿ ಉತ್ತರಪ್ರದೇಶ ಸರ್ಕಾರ ಶನಿವಾರ ಘೋಷಿಸಿದೆ.

* ನೇರವಾಗಿ ಕಾರ್ಮಿಕರ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು

* ಅಂತ್ಯೋದಯ ಯೋಜನೆಯಡಿ ನೋಂದಾಯಿತ 1.65 ಕೋಟಿ ಕಟ್ಟಡ ನಿರ್ಮಾಣ ಹಾಗೂ ದಿನಗೂಲಿ ಕಾರ್ಮಿಕರಿಗೆ ಒಂದು ತಿಂಗಳ ಪಡಿತರ ಉಚಿತ ವಿತರಣೆ

* ನಗರಪ್ರದೇಶದಲ್ಲಿ ವಾಸಿಸುವ, ರೇಷನ್‌ ಕಾರ್ಡ್‌ ಹೊಂದಿರದ ದಿನಗೂಲಿ ಕಾರ್ಮಿಕರಿಗೂ ಉಚಿತ ಪಡಿತರ

* ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರ ವೇತನ ಕೂಡಲೇ ಬಿಡುಗಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT