ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲೋರೈಡ್‌ ಜತೆ ರಾಸಾಯನಿಕ; ಆತಂಕಕಾರಿ ಬೆಳವಣಿಗೆ

ಮರೀಚಿಕೆಯಾಗಿರುವ ಶುದ್ಧ ಕುಡಿಯುವ ನೀರು
Last Updated 29 ಜೂನ್ 2019, 20:04 IST
ಅಕ್ಷರ ಗಾತ್ರ

ತುಮಕೂರು: ‘ಪಾವಗಡ ತಾಲ್ಲೂಕಿನಲ್ಲಿ ಫ್ಲೋರೈಡ್‌ಯುಕ್ತ ನೀರಿನ ಸೇವನೆಯಿಂದ ಜನರು ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿ ಬಳಲುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಪೂರೈಕೆಗೆ ವ್ಯವಸ್ಥೆ ಮಾಡಿಸಿ, ನಮ್ಮನ್ನು ಬದುಕಿಸಿ’ ಎಂದು ಏಳೆಂಟು ವರ್ಷಗಳ ಹಿಂದೆ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್‌) ಪರಿಣಾಮವಾಗಿ ಪಾವಗಡದಲ್ಲಿ 120ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಾಪನೆಯಾಗಿವೆ. ಆದರೆ ಈಗಲೂ ಅಲ್ಲಿ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ಪೂರೈಕೆ ಎಂಬುದು ಮರೀಚಿಕೆಯಾಗಿಯೇ ಉಳಿದಿದೆ.

ಘಟಕಗಳು ಸ್ಥಾಪನೆಯಾದಷ್ಟೇ ಸುಲಭವಾಗಿ ಅವುಗಳ ನಿರ್ವಹಣೆ ಆಗದಿರುವುದೇ ಈ ಸಮಸ್ಯೆಗೆ ಕಾರಣ. ಪಿಐಎಲ್‌ ಸಲ್ಲಿಸಿದ್ದ ಕಿಸಾನ್‌ ಸಂಘದ ರಾಜ್ಯ ಘಟಕದ ಅಧ್ಯಕ್ಷ ವಿ.ನಾಗಭೂಷಣ ರೆಡ್ಡಿ ಅವರು ಶುದ್ಧ ಕುಡಿಯುವ ನೀರಿಗಾಗಿ ಈಗಲೂ ಹೋರಾಟ ಮುಂದುವರೆಸಿದ್ದಾರೆ. ಘಟಕಗಳಲ್ಲಿ ನೀರು ಶುದ್ಧೀಕರಣ ಕಾರ್ಯ ಸಮರ್ಪಕವಾಗಿ ಆಗುತ್ತಿಲ್ಲ, ಘಟಕಗಳಿಂದ ಹೊರ ಬರುವ ನೀರು ಫ್ಲೋರೈಡ್‌ ರಹಿತವಾಗಿಲ್ಲ, ಆ ನೀರಿನಲ್ಲಿ ಶುದ್ಧೀಕರಣದ ವೇಳೆ ಬೇರೆ ಬೇರೆ ವಿಷಕಾರಿ ರಾಸಾಯನಿಕಗಳೂ ಸೇರ್ಪಡೆಯಾಗುತ್ತಿವೆ ಎಂದು ರೆಡ್ಡಿ ಅವರು ದೂರುತ್ತಾರೆ.

‘ನಾನು ಆಧಾರರಹಿತವಾಗಿ ಈ ಆರೋಪಗಳನ್ನು ಮಾಡುತ್ತಿಲ್ಲ. ಘಟಕಗಳ ನೀರಿನ ಮಾದರಿಗಳನ್ನು ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷೆ ಮಾಡಿಸಿದ್ದೇನೆ. ಸರ್ಕಾರವೇ ನಿಗದಿಪಡಿಸಿದ ಮಾನದಂಡದ ಪ್ರಕಾರ ಎಲ್ಲಿಯೂ ಶುದ್ಧ ನೀರು ಪೂರೈಕೆಯಾಗುತ್ತಿಲ್ಲ. ಸಂಬಂಧಪಟ್ಟ ಎಲ್ಲರಿಗೂ ಈ ಸಂಬಂಧ ಮನವಿ ಸಲ್ಲಿಸಿದ್ದೇನೆ. ಆದರೆ ಸಮಸ್ಯೆ ಪರಿಹಾರಕ್ಕೆ ಯಾರೂ ಸ್ಪಂದಿಸುತ್ತಿಲ್ಲ’ ಎಂದು ಅವರು ಅಳಲು ತೋಡಿಕೊಳ್ಳುತ್ತಾರೆ.

ಪಾವಗಡದಲ್ಲಿ ಮಾತ್ರವಲ್ಲ; ಜಿಲ್ಲೆಯ ಹತ್ತು ತಾಲ್ಲೂಕುಗಳಲ್ಲೂ ಈ ಸಮಸ್ಯೆ ಇದೆ. ಫ್ಲೋರೈಡ್‌ ಅಂಶ ಜಾಸ್ತಿ ಇರುವ ಪ್ರದೇಶಗಳಲ್ಲಿನ ಘಟಕಗಳ ನೀರಿನ ಮಾದರಿಗಳನ್ನು ಹದಿನೈದು ದಿನಗಳಿಗೊಮ್ಮೆ, ಉಳಿದೆಡೆ ವರ್ಷದಲ್ಲಿ ನಾಲ್ಕು ಬಾರಿ ಕಡ್ಡಾಯವಾಗಿ ಪರೀಕ್ಷಿಸಬೇಕು ಎಂದು ಸರ್ಕಾರದ ಆದೇಶವೇನೋ ಇದೆ. ಆದರೆ ಅದು ಪಾಲನೆಯಾಗುತ್ತಿಲ್ಲ.

ಜಿಲ್ಲೆಯ ಕೆಲವೆಡೆ ಕಾರ್ಯಾರಂಭಕ್ಕೂ ಮುನ್ನವೇ ಘಟಕಗಳು ಕೆಟ್ಟು ನಿಂತಿವೆ. ಇನ್ನು ಹಲವೆಡೆ ಘಟಕಗಳು ಪದೇ ಪದೇ ಕೆಟ್ಟು ನಿಲ್ಲುವುದು ಸರ್ವೇ ಸಾಮಾನ್ಯವಾಗಿದೆ. ಘಟಕ ನೋಡಿಕೊಳ್ಳಲು ನೇಮಿಸಿಕೊಂಡಿರುವ ಸಿಬ್ಬಂದಿಗೆ ಯಾವುದೇ ತಾಂತ್ರಿಕ ಜ್ಞಾನ ಮತ್ತು ಸೂಕ್ತ ತರಬೇತಿ ಇಲ್ಲದೇ ಇರುವುದರಿಂದ ನಿರ್ವಹಣೆಯ ಕೆಲಸ ಸರಿಯಾಗಿ ಆಗುತ್ತಿಲ್ಲ.

‘ಘಟಕ ಸ್ಥಾಪಿಸುವ ಗುತ್ತಿಗೆ ಪಡೆದವರಿಗೇ ಎರಡು ಅಥವಾ ಐದು ವರ್ಷಗಳ ಅವಧಿಯ ನಿರ್ವಹಣೆಯ ಜವಾಬ್ದಾರಿ ವಹಿಸಲಾಗಿದೆ. ನಿರ್ವಹಣಾ ಅವಧಿ ಪೂರ್ಣಗೊಳ್ಳುವವರಿಗೆ ಘಟಕ ಸ್ಥಾಪನಾ ವೆಚ್ಚದ ಶೇಕಡಾ 20ರಷ್ಟು ಹಣವನ್ನು ಬಿಡುಗಡೆ ಮಾಡುವುದಿಲ್ಲ. ಜಿಲ್ಲೆಯಲ್ಲಿ ಇರುವ 1484 ನೀರಿನ ಘಟಕಗಳನ್ನು ಒಟ್ಟು 11 ಏಜೆನ್ಸಿಗಳು ನೋಡಿಕೊಳ್ಳುತ್ತಿವೆ. ಆದರೆ ಅವುಗಳ ಪೈಕಿ ಮೂರು ಏಜೆನ್ಸಿಗಳು ನಿರ್ವಹಣಾ ಕೆಲಸವನ್ನು ಮಾಡದೆ ನಾಪತ್ತೆಯಾಗಿವೆ. ಅವುಗಳನ್ನು ಕಪ್ಪು ಪಟ್ಟಿಗೆ ಸೇರಿಸಿ, ಟೆಂಡರ್‌ ರದ್ದುಗೊಳಿಸಲಾಗುವುದು. ಬಿಡುಗಡೆ ಮಾಡಬೇಕಿದ್ದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಯೊಬ್ಬರು ತಿಳಿಸಿದರು.

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT