ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾ ಕಲಿಕೆಯ ಸೂಕ್ಷ್ಮಗಳು

ಶೈಕ್ಷಣಿಕ ಗುಣಮಟ್ಟದ ಕುಸಿತದಲ್ಲಿ ಇತರ ಕೆಲವು ಅಂಶಗಳ ಜೊತೆ ಭಾಷಾ ಕಲಿಕೆ ವಹಿಸುವ ಪಾತ್ರದ ಕುರಿತಂತೆ ಹೆಚ್ಚಿನ ಸಂಶೋಧನೆಗಳ ಅಗತ್ಯವಿದೆ
Last Updated 14 ಜನವರಿ 2019, 20:19 IST
ಅಕ್ಷರ ಗಾತ್ರ

ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಅಳವಡಿಕೆ ಕುರಿತ ಚರ್ಚೆ ಕಾವು ಪಡೆದುಕೊಂಡಿರುವ ಈ ಹೊತ್ತಿನಲ್ಲಿ ಭಾಷಾ ಕಲಿಕೆಯ ಸ್ಥಿತಿಗತಿ, ಅದರ ಶೈಕ್ಷಣಿಕ ಪರಿಣಾಮಗಳು ಮತ್ತು ಮಕ್ಕಳ ಎಷ್ಟನೇ ವಯಸ್ಸಿನಲ್ಲಿ ಎರಡನೇ ಭಾಷೆಯನ್ನು ಅಳವಡಿಸುವುದು ಸೂಕ್ತ ಎಂಬ ಕುರಿತಂತೆ ಒಂದಷ್ಟು ಚಿಂತನೆ ಅಗತ್ಯವೆನಿಸುತ್ತದೆ.

ಬಹುಭಾಷೆ, ಬಹುಸಂಸ್ಕೃತಿ, ವಿವಿಧ ಸಾಮಾಜಿಕ, ಆರ್ಥಿಕ ಹಿನ್ನೆಲೆಯ ಮಕ್ಕಳ ತರಗತಿಗಳಿರುವ ದೇಶ–ರಾಜ್ಯದಲ್ಲಿ ಸಹಜವಾಗಿ ಮಕ್ಕಳ ಮಾತೃಭಾಷೆ ಹಾಗೂ ತರಗತಿಯಲ್ಲಿ ಕಲಿಸುವ ಭಾಷೆಗಳಲ್ಲಿ ವ್ಯತ್ಯಾಸಗಳಿರುತ್ತವೆ. ಇಂತಹ ಸನ್ನಿವೇಶದಲ್ಲಿ ಪಠ್ಯದ ಭಾಷೆ ಬಳಸಿ ಮಕ್ಕಳೊಂದಿಗೆ ಸಂವಹನ ಸಾಧಿಸಿ, ಭಾಷೆ ಹಾಗೂ ವಿವಿಧ ವಿಷಯಗಳನ್ನು ಕಲಿಸುವ ಶಿಕ್ಷಕರ ಪ್ರಯತ್ನಗಳಲ್ಲಿ ಪೂರ್ಣ ಯಶ ದೊರೆಯದೇ ಮಕ್ಕಳ ಕಲಿಕಾ ಮಟ್ಟದ ಕುಸಿತಕ್ಕೆ ಕಾರಣವಾಗುತ್ತದೆ. ಅನಕ್ಷರಸ್ಥ ಮತ್ತು ಅರೆ ಸಾಕ್ಷರ ಪೋಷಕರಿರುವ ಕುಟುಂಬಗಳಿಂದ ಬಂದ ಮಕ್ಕಳು ಭಾಷಾ ಕಲಿಕೆಗೆ ಅಗತ್ಯವಾದ ಬೆಂಬಲಾತ್ಮಕ ವಾತಾವರಣವಿಲ್ಲದ ಕಾರಣ, ಸಹಜವಾಗಿಯೇ ಕಲಿಕೆಗೆ ಅಗತ್ಯವಾದ ಆಸಕ್ತಿ, ಪ್ರೇರಣೆಗಳನ್ನು ಕಳೆದುಕೊಳ್ಳುತ್ತಾರೆ. ಈ ಕಾರಣದಿಂದ ಅವರು ಭಾಷೆಯ ಜೊತೆ ಇತರ ವಿಷಯಗಳ ಕಲಿಕೆಯಲ್ಲೂ ಹಿಂದೆ ಬೀಳುತ್ತಾರೆ.

ಶೈಕ್ಷಣಿಕ ಗುಣಮಟ್ಟದ ಕುಸಿತದಲ್ಲಿ, ಇತರ ಅಂಶಗಳ ಜೊತೆ ಭಾಷಾ ಕಲಿಕೆ ವಹಿಸುವ ಪಾತ್ರದ ಕುರಿತಂತೆ ಹೆಚ್ಚಿನ ಸಂಶೋಧನೆಗಳ ಅಗತ್ಯವಿದೆ. ಇಂತಹ ಸಂಶೋಧನೆಗಳಿಂದ ಕನ್ನಡ ಭಾಷಾ ಕಲಿಕೆಯನ್ನು ಯಾವ ರೀತಿ ಉತ್ತಮಪಡಿಸಬೇಕೆಂಬ ಬಗ್ಗೆ ಸೂಕ್ತ ಹೊಳಹುಗಳು ದೊರೆತು ಅಗತ್ಯ ಕ್ರಮ ಕೈಗೊಳ್ಳಲು ಸಹಾಯಕವಾಗುತ್ತದೆ. ಮರಾಠಿ, ಉರ್ದು ಭಾಷೆಗಳ ಪ್ರಭಾವದ ಜೊತೆ ತಾವು ಆಡುವ ಕನ್ನಡ ಭಾಷೆ, ಪಠ್ಯದ ಭಾಷೆ ಹಾಗೂ ಶಿಕ್ಷಕರು ತರಗತಿಯಲ್ಲಿ ಬಳಸುವ ಭಾಷೆಯಲ್ಲಿ ವ್ಯತ್ಯಾಸವಿರುವುದರ ಜೊತೆಗೆ ಕಡಿಮೆ ಸಾಮಾಜಿಕ, ಆರ್ಥಿಕ ಹಿನ್ನೆಲೆಯ ಕಾರಣಗಳಿಂದ ಬೀದರ್ ಜಿಲ್ಲೆಯು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಹಂತದ ಫಲಿತಾಂಶಗಳಲ್ಲಿ ನಿರಂತರವಾಗಿ ರಾಜ್ಯದಲ್ಲಿ ಕೊನೆಯ ಸ್ಥಾನಕ್ಕೆ ಕುಸಿಯುತ್ತಿರುವುದನ್ನು ಗಮನಿಸಬಹುದು. ಬೀದರ್‌ನಂತಹ ಇತರ ಜಿಲ್ಲೆಗಳಲ್ಲಿ ಭಾಷಾ ಕಲಿಕೆಯ ಸೂಕ್ಷ್ಮಗಳ ಹಿನ್ನೆಲೆಯನ್ನು ಗಮನಿಸದೇ ಫಲಿತಾಂಶ ಹೆಚ್ಚಳಕ್ಕೆ ಕೈಗೊಳ್ಳುವ ಪ್ರಯತ್ನಗಳು ಗರಿಷ್ಠ ಫಲ ನೀಡದಿರುವುದನ್ನು ಸಹ ಗಮನಿಸಬಹುದು.

ಲಂಬಾಣಿ ಭಾಷೆಯನ್ನಾಡುವ ತಾಂಡಾಗಳಲ್ಲಿ ಹಾಗೂ ಚಾಮರಾಜನಗರ ಜಿಲ್ಲೆಯ ಬುಡಕಟ್ಟು ಜನಾಂಗ ಮಾತನಾಡುವ ಸೋಲಿಗ ಭಾಷೆಯನ್ನಾಡುವ ಗ್ರಾಮಗಳ ಶಾಲೆಗಳಲ್ಲಿ ಲಂಬಾಣಿ/ ಸೋಲಿಗ ಭಾಷೆಯನ್ನು ಪ್ರಯತ್ನಪೂರ್ವಕವಾಗಿ ಕಲಿತು, ಕನ್ನಡ ಭಾಷಾ ಬೋಧನೆಯನ್ನು ಪರಿಣಾಮಕಾರಿಯಾಗಿ ಮಾಡುತ್ತಿರುವ ಶಿಕ್ಷಕರ ಪ್ರಯತ್ನಗಳು ಉತ್ತಮ ಫಲ ನೀಡಿ, ಮಕ್ಕಳು ಕಲಿಕೆಯಲ್ಲಿ ಉತ್ತಮಗೊಂಡಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಹೀಗೆ ಶಿಕ್ಷಕರು ಮಕ್ಕಳ ಮಾತೃಭಾಷೆಯನ್ನು ಕಲಿತು, ತರಗತಿಯಲ್ಲಿ ಮಕ್ಕಳ ಜೊತೆ ಸಂವಹನ ಸಾಧಿಸಿ, ಅದರ ಜೊತೆ ಕನ್ನಡದ ಭಾಷೆಯನ್ನು ಪರಿಚಯಿಸುತ್ತಾ, ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಮೂಲಕ ಕಲಿಸುವ ಕ್ರಿಯಾಶೀಲತೆ, ನಮ್ಯತೆ, ಸೃಜನಶೀಲತೆ ಕನ್ನಡ ಭಾಷಾ ಕಲಿಕೆಯನ್ನು ಗಟ್ಟಿಗೊಳಿಸುತ್ತವೆ.

ತರಗತಿ ಬೋಧನೆಯ ಔಪಚಾರಿಕ ಬೋಧನಾ ಕ್ರಮಗಳಿಗಿಂತಲೂ ನಾಟಕ, ಪಾತ್ರಾಭಿನಯದ ಮೂಲಕ ಭಾಷೆಯನ್ನು ಕಲಿಸುವ ಪ್ರಯತ್ನಗಳು ಪರಿಣಾಮಕಾರಿ ಎಂದು ಸಂಶೋಧನೆಗಳು ತಿಳಿಸುತ್ತವೆ. ನಾಟಕಗಳಲ್ಲಿನ ಪಾತ್ರಗಳ ಮೂಲಕ ಮಕ್ಕಳು ಭಾಷೆಯನ್ನು ಅನ್ವೇಷಣೆ ಮಾಡುವ ಕಾರಣ ಹೊಸ ಪದಗಳು ನೆನಪಿನಾಳಕ್ಕಿಳಿಯುತ್ತವೆ. ಭಾಷಾ ಕಲಿಕೆಯಲ್ಲಿ ಬಳಸುವ ಗದ್ಯ, ಪದ್ಯ, ನಾಟಕ, ವ್ಯಾಕರಣ ಕುರಿತಾದ ಪ್ರಶ್ನೆಗಳ ಮೂಲಕ ಭಾಷಾ ಕಲಿಕೆಯ ಮಟ್ಟವನ್ನು ಮೌಲ್ಯಮಾಪನ ಮಾಡುವ ಕ್ರಮದ ಜೊತೆ, ಮಕ್ಕಳ ಸಂವಹನ ಸಾಮರ್ಥ್ಯ, ಉಚ್ಚಾರಣೆ, ಅಭಿವ್ಯಕ್ತಿಯ ಶೈಲಿಯನ್ನು ಗಮನಿಸಿ, ತಿದ್ದುವ ತಂತ್ರಗಳನ್ನು ಹೆಚ್ಚು ಬಳಸುವುದನ್ನು ರೂಢಿಸಿಕೊಂಡಲ್ಲಿ ಭಾಷಾ ಕಲಿಕೆಗೆ ಯಶಸ್ಸು ಸಿಗುತ್ತದೆ. ಹಾರ್ವರ್ಡ್‌ ವಿಶ್ವವಿದ್ಯಾಲಯ ಇತ್ತೀಚೆಗೆ ನಡೆಸಿದ ಸಂಶೋಧನೆಯಂತೆ, 3ನೇ ವಯಸ್ಸಿನಿಂದಲೇ ಎರಡನೇ ಭಾಷೆಯನ್ನು ಸಂಭಾಷಣೆ, ಸಂವಾದ, ಆಟಗಳ ಮೂಲಕ ಪರಿಚಯಿಸಿದಲ್ಲಿ ಮಕ್ಕಳು ಪರಿಣಾಮಕಾರಿಯಾಗಿ ಕಲಿಯುತ್ತಾರೆ ಎಂದು ತಿಳಿದು ಬಂದಿದೆ.

ಈ ವಿಷಯದಲ್ಲಿ ಮಕ್ಕಳ ಆರೋಗ್ಯ ಹಾಗೂ ಪೌಷ್ಟಿಕ ಸ್ಥಿತಿ ಕುರಿತಂತೆ ಹೆಚ್ಚು ಗಮನ ನೀಡುವ ಅಂಗನವಾಡಿ ಕೇಂದ್ರಗಳಲ್ಲಿ ಕಲಿಯುವ ಮಕ್ಕಳು ಪ್ಲೇ ಹೋಮ್, ಎಲ್.ಕೆ.ಜಿ., ಯು.ಕೆ.ಜಿ.ಗಳಲ್ಲಿ ಕಲಿಯುವ ಮಕ್ಕಳಿಗಿಂತ ಅನನುಕೂಲ ಹೊಂದುವುದನ್ನು ಗಮನಿಸಬಹುದು. ಇಂಗ್ಲೆಂಡ್ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಮಕ್ಕಳನ್ನು ಪೂರ್ವ ಪ್ರಾಥಮಿಕ ಹಂತದಿಂದಲೇ ನಾಲ್ಕು ಭಾಷೆಗಳಿಗೆ ಪರಿಚಯಿಸಲಾಗುತ್ತದೆ ಎಂಬುದು ಆಶ್ಚರ್ಯವಾದರೂ ಸತ್ಯ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಕನ್ನಡ ಭಾಷೆಯ ಜೊತೆ ಇಂಗ್ಲಿಷ್ ಭಾಷೆಯನ್ನು ಪರಿಣಾಮಕಾರಿಯಾಗಿ ಪೂರ್ವ ಪ್ರಾಥಮಿಕ ಹಂತದಿಂದಲೇ ಪರಿಚಯಿಸುವ ಸಾಧ್ಯತೆಗಳನ್ನು ಪರಿಶೀಲಿಸಿ, ಕ್ರಮ ಕೈಗೊಳ್ಳುವತ್ತ ಮನಸ್ಸು ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT