ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ| ವೋಟೆಂಬ ಪರಮ ಅಹಿಂಸಾ ಅಸ್ತ್ರ

ಪ್ರಜಾಸತ್ತೆಯಲ್ಲಿ ಮತದಾನವು ಒಂದು ದಿವ್ಯಶಕ್ತಿ. ಈ ಅನನ್ಯ ಅವಕಾಶವನ್ನು ಪ್ರಜೆಗಳು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು
Last Updated 24 ಜನವರಿ 2023, 23:17 IST
ಅಕ್ಷರ ಗಾತ್ರ

ಪ್ರತಿವರ್ಷ ಜನವರಿ 25, ‘ಮತದಾರರ ದಿನ’. ಈ ದಿನವನ್ನು ಭಾರತದ ಚುನಾವಣಾ ಆಯೋಗವು ಮತದಾರರಿಗೇ ಸಮರ್ಪಿಸಿದೆ. ದೇಶದಾದ್ಯಂತ ಮತದಾರರಲ್ಲಿ ಜಾಗೃತಿ ಮೂಡಿಸಿ, ಚುನಾವಣೆಯಲ್ಲಿ ಮತದಾನದ ಹಕ್ಕನ್ನು ತಪ್ಪದೇ ಚಲಾಯಿಸಲು ಪ್ರೇರೇಪಿಸುವುದೇ ಆಯೋಗದ ಧ್ಯೇಯ. ‘ಚುನಾವಣೆ ಜನರಿಗೆ ಸೇರಿದ್ದು’, ‘ಒಳ್ಳೆಯ ಮಂದಿ ವೋಟು ಚಲಾಯಿಸದಿರುವ ಮೂಲಕ ಕೆಟ್ಟ ಸರ್ಕಾರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ’ ಎಂಬಂಥ ಘೋಷಣೆಗಳು ನಮ್ಮನ್ನು ಎಚ್ಚರಿಸುತ್ತವೆ.

2011ರ ಜನವರಿ 25ರಿಂದ ಇದರ ಆಚರಣೆ ಶುರುವಾಗಿದೆ. ಮತದಾನವು ಪ್ರಜಾಪ್ರಭುತ್ವದ ಮೂಲ ಸ್ತಂಭ. ಮತದಾನದ ಹಕ್ಕಿನ ಅರಿವು ಜನರಿಗೆ ಸಮರ್ಥ ಪ್ರಭುತ್ವವನ್ನು ಆರಿಸಿಕೊಳ್ಳಲು ಕೀಲಿ ಕೈ. ವಯಸ್ಸು ಹದಿನೆಂಟು ವರ್ಷಗಳು ತುಂಬಿ ಮತದಾನಕ್ಕೆ ಅರ್ಹತೆ ಗಳಿಸಿದ ಹೊಸ ಮತದಾರರಲ್ಲಿ ಹುರುಪಿನಷ್ಟೆ ಹೊಣೆಗಾರಿಕೆಯೂ ಪುಟಿಯಬೇಕಿದೆ.

ನಾಗರಿಕರು ತಮ್ಮ ಸ್ಥಾಪಿತ ಆಯ್ಕೆಯ ಹಕ್ಕನ್ನು ನಿರ್ಲಕ್ಷಿಸಿದರೆ ಪ್ರಜೆತನವನ್ನು ಅಪಮಾನಿಸಿದಂತೆ. ಒಂದೊಂದು ಮತವೂ ಅಮೂಲ್ಯ ಸ್ವತ್ತು. ಆಡಳಿತ ಕ್ರಮ ಸದ್ಯ ಇರಬಹುದಾದ ಓರೆಕೋರೆಗಳನ್ನು ದಾಟಿ ಸುಧಾರಣೆಗಳತ್ತ ಹೊರಳಬಹುದೆಂಬ ಕನಸುಗಳು ಅದರಲ್ಲಿ ಸಾಂದ್ರಗೊಂಡಿರುತ್ತವೆ. ಯಾವುದೇ ದೇಶದಲ್ಲಿ ನಾಗರಿಕ ಅಶಾಂತಿಯಿರಬಹುದು, ಕೊರೊನಾದಂಥ ಖಂಡಾಂತರ ವ್ಯಾಧಿ ಬಾಧಿಸಿರಬಹುದು, ನೈಸರ್ಗಿಕ ವಿಕೋಪಗಳು ಎಡೆಬಿಡದೆ ಕಾಡಿರಬಹುದು ಅಥವಾ ಅತಿವೃಷ್ಟಿ, ಅನಾವೃಷ್ಟಿಯಿಂದ ಕ್ಷಾಮ ತಲೆದೋರಿರ
ಬಹುದು. ಆದರೆ ಚುನಾವಣಾ ಪ್ರಕ್ರಿಯೆ ಸಾಗಲೇಬೇಕು. ಹಾಗೆ ನೋಡಿದರೆ ಅಂತಹ ಸಂದಿಗ್ಧಗಳೇ ಜರೂರಾಗಿ ದಕ್ಷ ನಾಯಕತ್ವ ಬಯಸುತ್ತವೆ. ಜನಧ್ವನಿಯು ಅಭಿವೃದ್ಧಿ, ವಿಕಾಸ ತರಬಲ್ಲದು. ಮತದಾನದಲ್ಲಿ ಭಾಗಿಯಾಗುವುದೆಂದರೆ ನಮ್ಮ ಅಭಿಪ್ರಾಯವನ್ನೂ ದಾಖಲಿಸುವುದು. ಆಡಳಿತವನ್ನು ನಿಕಷಕ್ಕೆ ಒಡ್ಡುವ ಕೆಲಸವನ್ನು ಚುನಾವಣೆಗಳು ಮಾಡುತ್ತವೆ. ಮತ ಹಾಕದೆ ಸುಧಾರಣೆಯನ್ನು ಬಯಸುವುದು ಹೇಗೆ?

ಯಾರೇ ಬಂದರೂ ರಾಗಿ ಬೀಸುವುದು ತಪ್ಪುವುದಿಲ್ಲ ಎಂದೋ, ಬರೋರೆ ಬರೋದು ಎಂದೋ ವೋಟು ಹಾಕದೆ ನಿರ್ಲಿಪ್ತರಾದರೆ ಬಹುಜನರ ಆಶೋತ್ತರಗಳಿಗೂ ಭಂಗವಾಗುತ್ತದೆ. ಈ ನ್ಯೂನತೆಯ ಬಿಸಿ ಗ್ರಾಮ ಪಂಚಾಯಿತಿ ಮಟ್ಟದಿಂದ ಅಂತರರಾಷ್ಟ್ರೀಯ ಮಟ್ಟದವರೆಗೂ ತಟ್ಟುತ್ತದೆ. ಜಾತಿ, ಧರ್ಮ, ಬಡತನ, ಸಿರಿತನ, ಪಂಗಡ, ಹೆಣ್ಣು, ಗಂಡೆಂಬ ಭೇದವೆಣಿಸದೆ ನಮ್ಮ ಸಂವಿಧಾನವು ಮತದಾನದ ಹಕ್ಕು ನೀಡಿದೆ. ಈ ಅನನ್ಯ ಅವಕಾಶವನ್ನು ಪ್ರಜೆಗಳು ಕಳೆದುಕೊಳ್ಳಬಾರದು.

ನಮ್ಮ ಆಯ್ಕೆಗಳು ಸರ್ವರಿಗೂ ನ್ಯಾಯ ಮತ್ತು ಸಮಾನತೆಯನ್ನು ತರುತ್ತವೆ ಎಂಬ ವಿಶ್ವಾಸದಿಂದ ಮತ ಚಲಾಯಿಸಬೇಕು. ಪ್ರಜಾಸತ್ತೆಯಲ್ಲಿ ಮತದಾನವು ಒಂದು ದಿವ್ಯಶಕ್ತಿ. ಅಮೆರಿಕದ ರಾಜನೀತಿಜ್ಞ ಥಾಮಸ್ ಜಫರಸನ್ ಅವರು ಹೇಳುವಂತೆ, ಸರ್ಕಾರ ರಚನೆಯಾಗುವುದು ಜನರ ಬಹುಮತದಿಂದಲ್ಲ, ಭಾಗಿಯಾಗುವವರ ಬಹುಮತದಿಂದ. ಸಾಮಾನ್ಯ ಜನರಲ್ಲಿ ಅಸಾಮಾನ್ಯ ಸಾಧ್ಯತೆಗಳಿವೆ ಎಂಬ ದೃಢನಿಶ್ಚಯವೇ ಪ್ರಜಾಪ್ರಭುತ್ವ ಪ್ರಕ್ರಿಯೆಯ ಅಸ್ತಿಭಾರ. ತಮ್ಮ ಗ್ರಾಮಕ್ಕೆ ರಸ್ತೆ ಆಗಿಲ್ಲ, ಸೇತುವೆ ಕಟ್ಟಿಲ್ಲ ಅಥವಾ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂಬ ಕಾರಣಕ್ಕೆ ಚುನಾವಣೆಯನ್ನು ವಿರೋಧಿಸಿದರೆ ಅದು ಬಹಿಷ್ಕಾರವಲ್ಲ, ನಿಶ್ಚಿತವಾಗಿ ಅದು ನಾವೇ ಹೇರಿಕೊಂಡ ಶರಣಾಗತಿ.

ಚುನಾವಣೆಯು ನಾಗರಿಕರಿಗೆ ಒಂದು ನಿರ್ದಿಷ್ಟ ಅವಧಿಗೆ ತಮ್ಮ ಪ್ರತಿನಿಧಿಯನ್ನು ಆರಿಸುವ ಹಕ್ಕನ್ನು ನೀಡುತ್ತದೆ. ವೋಟಿಗಿಂತ ಉಚಿತ ಹಾಗೂ ಶಕ್ತಿಯುತ ಪರಮ ಅಹಿಂಸಾ ಅಸ್ತ್ರ ಇನ್ನೊಂದಿಲ್ಲ. ಮತದಾನ ನಮ್ಮ ಅಸ್ತಿತ್ವಕ್ಕಾಗಿ, ನಮ್ಮ ಪ್ರಗತಿಗಾಗಿ. ಸ್ಪರ್ಧಿಸುವವರ
ಪೈಕಿ ಯಾರೂ ಅರ್ಹರಲ್ಲ ಎನ್ನಿಸಿದರೆ ಅದನ್ನೂ ವೋಟಿನ ಮೂಲಕವೇ ಧ್ವನಿಯುತಗೊಳಿಸಬಹುದಲ್ಲ. ಇದಂತೂ ಒಂದು ವಿಶಿಷ್ಟವಾದ ಜನ ಇಂಗಿತ. ಉಮೇದು‌ ವಾರರಲ್ಲಿ ಆತ್ಮಾವಲೋಕನಕ್ಕೂ ದಾರಿಯಾಗುವ ಕಡೆಗಣಿಸಬಾರದ ವಿಶಿಷ್ಟ ಜನಾದೇಶವಿದು.

ಚುನಾವಣೆಗಳು ಮುಕ್ತವಾಗಿ, ನೀತಿಯುತವಾಗಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೂ ಇದೆ. ಏಕೆಂದರೆ ಮತ ಚಲಾಯಿಸದ ಒಂದೊಂದು ಪ್ರಸಂಗವೂ ಒಂದು ಕ್ರಮಬದ್ಧ ವೋಟನ್ನು ನಿಷ್ಕ್ರಿಯಗೊಳಿಸುತ್ತದೆ. ಆ ವೋಟು ನಮ್ಮದೇ ಆಗಿದ್ದರೆ ನಮಗೆ ಏನನ್ನಿಸುತ್ತದೆ? ಒಂದು ವೋಟಿನಿಂದ ಯಾವ ಒಳಿತು ತಾನೆ ಆದೀತು ಅಂತ ಮೂಗೆಳೆಯುವವರು ಕನಿಷ್ಠತಮ ಅದರಿಂದ ಹಾನಿಯೇನಿಲ್ಲವಲ್ಲ ಎಂದಾದರೂ ಮತಗಟ್ಟೆಗೆ ಧಾವಿಸಬೇಕು. ಮತಗಟ್ಟೆ ಅಧಿಕಾರಿಗಳು ಹಾಗೂ ಮತ ಎಣಿಕೆ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತದೆ. ಸಭೆಗಳ ಮೇಲೆ ಸಭೆಗಳಾಗುತ್ತವೆ. ಆದರೆ ತಿರಸ್ಕೃತವಾಗ ದಂತೆ ಹೇಗೆ ಮತ ಚಲಾಯಿಸಬೇಕು ಎನ್ನುವುದರ ಸಾಂಕೇತಿಕ ಪ್ರಾತ್ಯಕ್ಷಿಕೆ ಕೂಡ ಏರ್ಪಡುವುದಿಲ್ಲ. ಸಮೂಹ ಮಾಧ್ಯಮಗಳಿಗೂ ಈ ದಿಸೆಯಲ್ಲಿ ಅಷ್ಟಾಗಿ ಆಸ್ಥೆಯಿಲ್ಲ. ಹಾಗಾಗಿಯೆ ಈ ವಿದ್ಯುನ್ಮಾನ ಯುಗದಲ್ಲೂ ಚುನಾವಣೆಗಳಿಗೆ ಅಸಿಂಧುಗೊಳ್ಳುವ ಮತಗಳಿಂದ ಮುಕ್ತಿಯಿಲ್ಲ.

ವಿಪರ್ಯಾಸವೆಂದರೆ, ನಮ್ಮಿಂದ ಆಯ್ಕೆಗೊಂಡ ಜನಪ್ರತಿನಿಧಿಗಳೂ ವೋಟು ಚಲಾಯಿಸುವಲ್ಲಿ ಲೋಪವೆಸಗುವುದು. ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಣೆಗಳಲ್ಲಿ ಹಾಗೂ ರಾಜ್ಯಸಭೆ, ವಿಧಾನ ಪರಿಷತ್‍ಗೆ ಸದಸ್ಯರನ್ನು ಆಯ್ಕೆ ಮಾಡುವಲ್ಲಿ ತಿರಸ್ಕೃತ ಮತಗಳು! ಶಾಸನಸಭೆಗೆ ಸ್ಪರ್ಧಿಸುವ ಉಮೇದುವಾರರು ಪ್ರಚಾರಕ್ಕೆ ಬರುತ್ತಾರೆ ಅನ್ನಿ. ನೀವು ನಾಳೆ ಆಯ್ಕೆಗೊಂಡರೆ ನಿಮ್ಮ ಮತ ತಿರಸ್ಕೃತ
ವಾಗದೆಂದು ಭರವಸೆ ನೀಡುವಿರಾ ಎನ್ನೋಣವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT