ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಕೃತಕತೆಯ ಗೂಡಲ್ಲಿ ವಾಸ್ತವದ ಹುಡುಕಾಟ

ಹಳ್ಳಿಗಳೆಂದರೆ ಮಾರುದೂರ ಸರಿಯುವವರು ಕೃತಕವಾಗಿ ನಿರ್ಮಿಸಿದ ಹಳ್ಳಿಮನೆಗಳಲ್ಲಿ ವಾರಾಂತ್ಯದ ರಜೆಯ ಮೋಜು ಅನುಭವಿ
Last Updated 26 ಮಾರ್ಚ್ 2023, 20:27 IST
ಅಕ್ಷರ ಗಾತ್ರ

ಪಕ್ಕದ ಮನೆಯ ಹುಡುಗ ತನ್ನ ಸ್ನೇಹಿತನೆದುರು ತಾನು ನೋಡಿದ ಸ್ಥಳಗಳನ್ನು ಬಣ್ಣಿಸುತ್ತಿದ್ದ. ಅವನ ಮಾತಿನಲ್ಲಿ ಜಲಪಾತಗಳು, ಹೊಳೆ, ಬೆಟ್ಟ, ಕಾಡು, ಹಳ್ಳಿಮನೆಗಳೆಲ್ಲಸುಳಿದುಹೋದವು. ‘ಏನೋ... ಅಜ್ಜನ ಊರಿಗೆ ಯಾವಾಗ ಹೋಗಿದ್ದೆ’ ಎಂದು ಕೇಳಿದೆ. ‘ನೋ ಅಂಕಲ್, ಪಿಕ್‍ನಿಕ್ ಹೋಗಿದ್ವಿ. ರೆಡಿಮೇಡ್ ವಿಲೇಜ್ ಅಂತ ಪಿಕ್‍ನಿಕ್ ಸ್ಪಾಟ್ ಇತ್ತು. ಅಲ್ಲೇ ಇವನ್ನೆಲ್ಲಾ ನೋಡಿದ್ದು’ ಎಂದು ಉತ್ತರಿಸಿದ. ನಾನು ಊಹಿಸಿದ ಆ ಎಲ್ಲ ವಾಸ್ತವಗಳನ್ನು ಅವನು, ಕೃತಕವಾಗಿ ನಿರ್ಮಿಸಿರುವ ಪ್ರೇಕ್ಷಣೀಯ ತಾಣದಲ್ಲಿ ವೀಕ್ಷಿಸಿದ್ದೆಂದು ಅರಿವಾಗಲು ಕೆಲವು ಕ್ಷಣಗಳೇ ಬೇಕಾದವು. ಇತ್ತೀಚಿನ ದಿನಗಳಲ್ಲಿ ಭೌತಿಕ ಮತ್ತು ಭಾವನಾತ್ಮಕ ಸಂಗತಿಗಳೆರಡನ್ನೂ ಕೃತಕ ವಾತಾವರಣದಲ್ಲಿ ಅರಸುವ ಪ್ರವೃತ್ತಿ ಜನರಲ್ಲಿ ಹೆಚ್ಚುತ್ತಿದೆ.

ಮನುಷ್ಯ ತನ್ನ ದಿನನಿತ್ಯದ ಧಾವಂತದ ಬದುಕಿನಲ್ಲಿ ಸಹಜ ಬದುಕಿಗೆ ವಿಮುಖನಾಗಿ ಬಾಳುತ್ತಿದ್ದಾನೆ. ವಿಶೇಷವಾಗಿ ನಗರಪ್ರದೇಶಗಳಲ್ಲಿ ಉದ್ಯೋಗವೇ ಕೇಂದ್ರಿತವಾದ ಬದುಕಿನಲ್ಲಿ ಬಿಡುವು ಪಡೆಯಲು ಒಂದಿಷ್ಟೂ ಪುರಸತ್ತಿಲ್ಲದಂತಾಗಿದೆ. ಉದ್ಯೋಗದ ಅಭದ್ರತೆ, ಸ್ಪರ್ಧೆಯ ವಾತಾವರಣ, ಮಕ್ಕಳ ಪಾಲನೆ, ಉಳಿತಾಯದ ಯೋಜನೆಗಳು, ಭವಿಷ್ಯದ ಚಿಂತೆಯಿಂದ ಕಂಗಾಲಾಗಿರುವ ಮನುಷ್ಯ ದಣಿವರಿಯದ ದುಡಿಮೆಗೆ ತನ್ನನ್ನು ಒಳಗಾಗಿಸಿಕೊಂಡಿದ್ದಾನೆ. ಈ ಆಧುನಿಕ ಬದುಕಿನ ಒತ್ತಡಗಳು ಅವನನ್ನು ಯಂತ್ರವಾಗಿ ಪರಿವರ್ತಿಸಿವೆ. ಭಾವನೆಗಳು ಮತ್ತು ಮನುಷ್ಯ ಸಂಬಂಧಗಳು ಅರ್ಥ ಕಳೆದುಕೊಂಡು ಸವಕಲಾಗಿವೆ.

ಇನ್ನೊಂದೆಡೆ, ಮನುಷ್ಯನ ದುರಾಸೆಗೆ ಒಳಗಾಗಿ ಪ್ರಕೃತಿ ಬರಡಾಗುತ್ತಿದೆ. ಒಂದರ್ಥದಲ್ಲಿ ಮನುಷ್ಯನ ಯಾಂತ್ರಿಕ ಬದುಕಿನ ಚೇತರಿಕೆಗೆ ಪ್ರಕೃತಿಯೇ ಮುಲಾಮು. ಆದರೆ ಪ್ರಕೃತಿಯ ಮೇಲೆ ಮನುಷ್ಯ ಅಟ್ಟಹಾಸಗೈಯುತ್ತ ನಿಸರ್ಗವನ್ನು ಅವಸಾನದ ಅಂಚಿಗೆ ತಂದು ನಿಲ್ಲಿಸಿದ್ದಾನೆ. ತಾನು ಕಳೆದುಕೊಂಡ ಪ್ರಕೃತಿಯ ಚೆಲುವು ಮತ್ತು ಮನದ ಭಾವನೆಗಳನ್ನು ಕೃತಕ ನಿಸರ್ಗ ತಾಣಗಳಲ್ಲಿ, ಸಿನಿಮಾಗಳಲ್ಲಿ, ರಿಯಾಲಿಟಿ ಷೋಗಳಲ್ಲಿ ಹುಡುಕುತ್ತಿದ್ದಾನೆ. ಇಂದಿನ ನ್ಯೂಕ್ಲಿಯರ್ ಕುಟುಂಬಗಳಿಗೆ ಸಿನಿಮಾಗಳೇ ಕುಟುಂಬ ಸಂಬಂಧಗಳ ಪಾಠವನ್ನು ಬೋಧಿಸುವ ಶಾಲೆಗಳಾಗಿವೆ. ಅವಿಭಕ್ತ ಕುಟುಂಬ, ಮನೆಗೊಬ್ಬ ಹಿರಿಯ ಯಜಮಾನ, ಕಡಿದುಹೋದ ಸಂಬಂಧಗಳ ಬೆಸೆಯುವಿಕೆ, ಮದುವೆಕಾರ್ಯದ ವೈಭವೋಪೇತ ದೃಶ್ಯಗಳು, ಒಂದಿಷ್ಟು ನಗು, ಅಳು, ಖುಷಿ ಈ ರೀತಿಯ ಸಿನಿಮಾಗಳು ಸಂಬಂಧಗಳ ಕುರಿತಾದ ಮನುಷ್ಯನ ಭಾವನಾತ್ಮಕ ಹಸಿವನ್ನು ತಣಿಸುತ್ತಿವೆ. ಅವಿಭಕ್ತ ಕುಟುಂಬಗಳು ಒಡೆದು ಸಣ್ಣ ಘಟಕಗಳಾಗಿ ರೂಪಾಂತರ ಹೊಂದುತ್ತಿರುವ ಈ ಸಂದರ್ಭವು ಸಿನಿಮಾದ ಮೂಲಕ ನಮ್ಮ ಯುವಪೀಳಿಗೆಗೆ ಕುಟುಂಬದ ಸಂಬಂಧಗಳನ್ನು ಪರಿಚಯಿಸುವ ಸನ್ನಿವೇಶ ಎದುರಾಗಿದೆ.

ಇತ್ತೀಚಿನ ದಿನಗಳಲ್ಲಿ ಪ್ರಕೃತಿಯ ಸುಂದರ ಮತ್ತು ರಮಣೀಯ ತಾಣಗಳನ್ನು ಕೃತಕವಾಗಿ ನಿರ್ಮಿಸಿ ಸಾರ್ವಜನಿಕರನ್ನು ಆಕರ್ಷಿಸಲಾಗುತ್ತಿದೆ. ನಾಲ್ಕೈದು ಎಕರೆಯಷ್ಟು ವಿಶಾಲವಾದ ಜಾಗದಲ್ಲಿ ನಿರ್ಮಾಣಗೊಳ್ಳುವ ಕೃತಕ ನಿಸರ್ಗ ತಾಣಗಳು ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಸಾರ್ವಜನಿಕರು ಸಾವಿರಾರು ರೂಪಾಯಿ ಖರ್ಚು ಮಾಡಿ ಇಂಥ ಕೃತಕ ತಾಣಗಳಿಗೆ ಭೇಟಿ ನೀಡಿ, ನಿಜವಾದ ಪರಿಸರದಲ್ಲೇ ತಾವು ನಿಂತಿರುವೆವೇನೋ ಎಂದು ಪುಳಕಗೊಳ್ಳುತ್ತಾರೆ.

ಈ ಕೃತಕ ತಾಣಗಳಲ್ಲಿ ಜಲಪಾತಗಳು ಸೃಷ್ಟಿಯಾಗುತ್ತವೆ ನೀರು ನದಿಯಂತೆ ಹರಿಯುತ್ತದೆ, ಗಿಡ ಮರಗಳು ತೊನೆದಾಡುತ್ತವೆ, ಮಳೆ ಸುರಿಯುತ್ತದೆ, ಪಕ್ಷಿಗಳ ಕಲರವ ಕಿವಿಗಳನ್ನು ಇಂಪಾಗಿಸುತ್ತದೆ. ಹಳ್ಳಿಯ ಪರಿಸರದಲ್ಲೇ ಓಡಾಡುತ್ತಿರುವ ಭಾವ ಹುಟ್ಟಿಸುವ ಹಳ್ಳಿಮನೆಗಳು ನಿರ್ಮಾಣಗೊಳ್ಳುತ್ತವೆ. ಗೌಡರ ಮನೆ, ಜಗಲಿ, ಅಂಗಳ, ದನದ ಕೊಟ್ಟಿಗೆ, ಪಂಚಾಯಿತಿ ಕಟ್ಟೆ, ಹರಟೆಕಟ್ಟೆ, ನೀರು ಸೇದುವ ಬಾವಿ ಇರುವ ಹಳ್ಳಿಯ ಮರುಸೃಷ್ಟಿಯಾಗುತ್ತದೆ. ಹಳ್ಳಿಗಳೆಂದರೆ ಮಾರುದೂರ ಸರಿಯುವವರು ಸಾವಿರಾರು ರೂಪಾಯಿಗಳನ್ನು ಪಾವತಿಸಿ ಕೃತಕವಾಗಿ ನಿರ್ಮಿಸಲಾದ ಹಳ್ಳಿಮನೆಗಳಲ್ಲಿ ವಾರಾಂತ್ಯದ ರಜೆಯ ಮೋಜು ಅನುಭವಿಸುತ್ತಾರೆ!

ಸಿಟ್ಟು, ದ್ವೇಷ, ಪ್ರೀತಿ, ನಗು, ಅಳು, ಖುಷಿ ಇಂಥ ಮನುಷ್ಯ ಸಹಜವಾದ ಭಾವನೆಗಳನ್ನು ಕೂಡ ರಿಯಾಲಿಟಿ ಷೋ ಎನ್ನುವ ಹೆಸರಿನಲ್ಲಿ ಕೃತಕವಾಗಿ ಸೃಷ್ಟಿಸಿ ಪ್ರೇಕ್ಷಕರನ್ನು ಭಾವಾವೇಶಕ್ಕೆ ಒಳಗಾಗಿಸಲಾಗುತ್ತಿದೆ. ತನ್ನ ದೈನಂದಿನ ವಾಸ್ತವದ ಬದುಕಿನಲ್ಲಿ ಹುಡುಕಬೇಕಾದ ಈ ಎಲ್ಲ ಸಂಗತಿಗಳನ್ನು ಹೀಗೆ ಕೃತಕ ವಾತಾವರಣದಲ್ಲಿ ಕಂಡುಕೊಳ್ಳುತ್ತಿದ್ದಾನೆ. ಆ ಕೃತಕತೆಯನ್ನೇ ನಿಜವಾದ ಬದುಕು ಎಂದು ಭಾವಿಸಿ ತನ್ನ ವಾಸ್ತವದ ಬದುಕನ್ನು ಒಂದು ಯಂತ್ರದಂತೆ ಬಾಳುತ್ತಿದ್ದಾನೆ.

ಮನುಷ್ಯನ ಯಾಂತ್ರೀಕೃತ ಬದುಕಿಗೆ ಕಾರಣವಾದ ಸಂಗತಿಯನ್ನು ತತ್ವಜ್ಞಾನಿ ಕಾರ್ಲ್‌ಮಾರ್ಕ್ಸ್ ಅವರು ಗುರುತಿಸಿದ್ದು ಹೀಗೆ- ‘ಮನುಷ್ಯನ ದುಡಿಮೆ ಹಾಗೂ ಬಿಡುವು ಎರಡೂ ಒಂದಕ್ಕೊಂದು ತೆಕ್ಕೆಹಾಕಿಕೊಂಡಿರುವಂಥ, ಒಂದನ್ನೊಂದು ಪ್ರಭಾವಿಸು
ವಂಥ ಕ್ಷೇತ್ರಗಳಾಗಿವೆ. ಮಾನವನ ಅಂತಃಕರಣಕ್ಕೆ ಮತ್ತು ಮನಸ್ಸಿಗೆ ಸಂತೋಷ ಕೊಡುವಂಥ, ಅವನ ಸೃಜನ
ಶೀಲತೆಗೆ ಎಡೆಕೊಡಬಲ್ಲ ‘ಕೆಲಸ’ವನ್ನೇ ಅಸಾಧ್ಯ ಮಾಡಿರು ವಂಥ ದುಡಿಮೆಯ ಕ್ಷೇತ್ರ ಕ್ರಮೇಣ ಮನುಷ್ಯನ ಆತ್ಮ,
ಮನಸ್ಸುಗಳನ್ನು ಕೊಲ್ಲುವ ಬೇನೆಯ ತಾಣವಾಗುತ್ತಿದೆ’. ಮಾರ್ಕ್ಸ್ ವ್ಯಕ್ತಪಡಿಸಿದಈ ಅಭಿಪ್ರಾಯವನ್ನು ಆಧರಿಸಿ ಯಶವಂತ ಚಿತ್ತಾಲರು ಹೇಳುವುದು ಹೀಗೆ, ‘ದುಡಿಮೆಯಕ್ಷೇತ್ರದಿಂದ ಪ್ರಭಾವಿತಗೊಂಡ ಮನಸ್ಸನ್ನು ಅಲ್ಲೇ ಬಿಟ್ಟುಬರುವುದು ಸಾಧ್ಯವಿದ್ದಿದ್ದರೆ- ಬಿಟ್ಟುಬರುವುದುಳಿಯಲಿ, ನಮ್ಮೊಳಗಿನ ಅತ್ಯಂತ ಮಹತ್ವದ್ದೇನೋ ಅಲ್ಲಿನಾಶವಾಗುತ್ತಿದೆ ಎಂಬ ಅರಿವೂ ನಮಗೆ ಇಲ್ಲದಿರು
ವುದು ಇಂದಿನ ನಮ್ಮ ಬದುಕಿನ ದುರದೃಷ್ಟವಾಗಿದೆ’.

ಒಟ್ಟಾರೆ ಬದುಕು ಹೆಚ್ಚು ಹೆಚ್ಚು ಯಾಂತ್ರಿಕವಾಗುತ್ತಾ ಹೋದಂತೆ ಕೃತಕತೆಯೇ ವಾಸ್ತವವೆನಿಸುವ ಅಪಾಯದ ದಿನಗಳು ದೂರವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT