ಭಾನುವಾರ, ಮಾರ್ಚ್ 7, 2021
32 °C
ಅಸ್ಸಾಂಜೆ ಪ್ರಕರಣದಲ್ಲಿ ಪ್ರಬಲ ಪ್ರಜಾಪ್ರಭುತ್ವ ವ್ಯವಸ್ಥೆಯ ಅಸಲಿ ಬಂಡವಾಳ ಬಯಲಾಗಿದೆ

‘ಶಿಳ್ಳೆ’ ಸದ್ದಡಗಿಸುವ ವ್ಯವಸ್ಥೆ

ಡಾ. ಜ್ಯೋತಿ Updated:

ಅಕ್ಷರ ಗಾತ್ರ : | |

Prajavani

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವವರು ತಮ್ಮ ಹೆಚ್ಚಿನ ಸಾರ್ವಜನಿಕ ವ್ಯವಹಾರಗಳಲ್ಲಿ ಗೋಪ್ಯತೆ ಕಾಯ್ದುಕೊಳ್ಳುತ್ತಾರೆ. ಈ ಬಗೆಯ ಕೆಲವು ಗುಟ್ಟುಗಳನ್ನು ಚಾಣಾಕ್ಷತನದಿಂದ ಬಯಲು ಮಾಡುವ ತನಿಖಾ ಪತ್ರಕರ್ತರನ್ನು ಹೇಗೆಲ್ಲಾ ಸಿಕ್ಕಿಹಾಕಿಸಿ, ಮತ್ತೆಂದೂ ಉಸಿರೆತ್ತದಂತೆ ಮಾಡಲಾಗುತ್ತದೆ ಎನ್ನುವುದಕ್ಕೆ ನಿದರ್ಶನ ಜೂಲಿಯನ್ ಅಸ್ಸಾಂಜೆ ಪ್ರಕರಣ.

2012ರಿಂದ ಇಂಗ್ಲೆಂಡಿನಲ್ಲಿ ಬಂಧನದಲ್ಲಿರುವ ವಿಕಿಲೀಕ್ಸ್ ಸಂಸ್ಥಾಪಕ ಸಂಪಾದಕ ಜೂಲಿಯನ್ ಅಸ್ಸಾಂಜೆ ಪುನಃ ಸುದ್ದಿಯಲ್ಲಿದ್ದಾರೆ. ಇದೇ 4ರಂದು ಲಂಡನ್ನಿನ ನ್ಯಾಯಾಲಯವು ಅಸ್ಸಾಂಜೆಯನ್ನು ಅಮೆರಿಕಕ್ಕೆ ಹಸ್ತಾಂತರಿಸುವುದಿಲ್ಲ ಎಂದೇನೋ ಹೇಳಿತು. ಆದರೆ, ಅವರಿಗೆ ಜಾಮೀನು ನೀಡಲಿಲ್ಲ. ಈ ಹಿನ್ನೆಲೆಯಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಕರ್ತನ ಮತ್ತು ಸಾರ್ವಜನಿಕ ಹಿತಾಸಕ್ತಿಯ ಮಾಹಿತಿ ಹಂಚಿಕೆಯ ಇತಿಮಿತಿಗಳನ್ನು ಪುನರ್ ಪರಿಶೀಲಿಸುವ ಅಗತ್ಯವಿದೆ.

ಇಷ್ಟಕ್ಕೂ, 2010ರಲ್ಲಿ ಇಡೀ ವಿಶ್ವದ ಗಮನ ಸೆಳೆದು ಹೀರೊ ಅನ್ನಿಸಿಕೊಂಡಿದ್ದ ಅಸ್ಸಾಂಜೆ ಮಾಡಿರುವ ತಪ್ಪಾದರೂ ಏನು? ಹಲವಾರು ದೇಶಗಳ ಗುಪ್ತ ಕಾರ್ಯವೈಖರಿಯನ್ನು ಬಯಲಿಗೆಳೆದರೂ ಬಚಾವಾಗಿದ್ದ ಅಸ್ಸಾಂಜೆ ಮಾಡಿದ ತಪ್ಪೆಂದರೆ, ಜಗತ್ತಿಗೆ ಪ್ರಜಾಪ್ರಭುತ್ವದ ಉಪದೇಶ ಮಾಡುವ ಅಮೆರಿಕದ ಸೈನ್ಯವು, ಇರಾಕ್ ಮತ್ತು ಅಫ್ಗಾನಿಸ್ತಾನದಲ್ಲಿ ಮಾಡಿದ ಮಾನವ ಹಕ್ಕುಗಳ ಉಲ್ಲಂಘನೆಯ ದಾಖಲೆ ಬಿಡುಗಡೆ ಮಾಡಿದ್ದು. ಮುಖ್ಯವಾಗಿ, ಅಮೆರಿಕದ ಸೈನಿಕರು ಇರಾಕಿನ 18 ನಾಗರಿಕರನ್ನು ಹೆಲಿಕಾಪ್ಟರಿನಿಂದ ವಿಡಿಯೊ ಗೇಮ್ ಮಾದರಿಯಲ್ಲಿ ಶೂಟ್ ಮಾಡಿ ಕೊಂದ ವಿಡಿಯೊವನ್ನು ವಿಕಿಲೀಕ್ಸ್ ಬಿಡುಗಡೆ ಮಾಡಿದ ನಂತರ, ಜಾಗತಿಕ ಮಟ್ಟದಲ್ಲಿ ಅಮೆರಿಕದ ವಿರುದ್ಧ ಆಕ್ರೋಶ ಭುಗಿಲೆದ್ದಿತು. ತಕ್ಷಣ, ಅಮೆರಿಕವು ಅಸ್ಸಾಂಜೆ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿತು.

ಅಸ್ಸಾಂಜೆ ತನ್ನ ದೇಶವಾಸಿಯಲ್ಲದಿದ್ದರೂ ಅಮೆರಿಕವು ವಿದೇಶಿ ನೆಲಗಳಲ್ಲಿ ತನ್ನ ಪ್ರಾಬಲ್ಯ ಉಪಯೋಗಿಸಿ, ನಾನಾ ಕೇಸುಗಳಲ್ಲಿ ಸಿಕ್ಕಿಹಾಕಿಸಿರುವುದಲ್ಲದೆ, ಅವರನ್ನು ತನಗೆ ಒಪ್ಪಿಸುವಂತೆ ಒತ್ತಡ ಹೇರುತ್ತಲೇ ಬಂದಿದೆ. ಮೊದಲಿಗೆ, ಸ್ವೀಡನ್ ಸರ್ಕಾರವು ಅಸ್ಸಾಂಜೆ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ಬಂಧನಕ್ಕಾಗಿ ಅಂತರರಾಷ್ಟ್ರೀಯ ವಾರಂಟ್ ಹೊರಡಿಸಿತು. ಆಗ ಲಂಡನ್ನಿನಲ್ಲಿದ್ದ ಅಸ್ಸಾಂಜೆ, ಅದೊಂದು ಸಹಮತದ ಸೆಕ್ಸ್ ಮತ್ತು ಈ ಆರೋಪವು ಅಮೆರಿಕಕ್ಕೆ ತಮ್ಮನ್ನು ಹಸ್ತಾಂತರಿಸುವ ಪ್ರಯತ್ನವೆಂದು ಹೇಳಿದರು. ಲಂಡನ್ನಿನ ನ್ಯಾಯಾಲಯ ಕೂಡ ಸ್ವೀಡನ್ನಿಗೆ ಹಸ್ತಾಂತರಿಸಲು ಸಹಮತಿ ಸೂಚಿಸಿತು. ಇದರಿಂದ ತಪ್ಪಿಸಿಕೊಳ್ಳಲು ಅಸ್ಸಾಂಜೆ ಲಂಡನ್ನಿನ ಈಕ್ವೆಡೋರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದರು. ಆಗಿನ ಈಕ್ವೆಡೋರ್ ಅಧ್ಯಕ್ಷ ರಾಫೆಲ್ ಕೊರಿಯಾ ಅವರು ಅಸ್ಸಾಂಜೆ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.

2016ರಲ್ಲಿ ಲೈಂಗಿಕ ಕಿರುಕುಳದ ಆರೋಪವನ್ನು ಸ್ವೀಡನ್ ಕೈಬಿಟ್ಟಿತು. ಆದರೆ, ಅಮೆರಿಕದ ಒತ್ತಡದಿಂದಾಗಿ ಈಕ್ವೆಡೋರ್ ರಾಯಭಾರ ಕಚೇರಿಯಲ್ಲಿ ಅಸ್ಸಾಂಜೆ ಮೂಲಭೂತ ವ್ಯವಸ್ಥೆಯಿಂದ ವಂಚಿತರಾಗಿ ಕೈದಿಯಂತೆ ಕಾಲ ಕಳೆಯಲಾರಂಭಿಸಿದರು. ಬಳಿಕ ಈಕ್ವೆಡೋರ್‌ನ ಅಧ್ಯಕ್ಷರು ಬದಲಾದ ನಂತರ ಅಮೆರಿಕವು ರಾಯಭಾರ ಕಚೇರಿಯಿಂದ ಅಸ್ಸಾಂಜೆಯವರನ್ನು ಹೊರಗೆ ಹಾಕುವಂತೆ ಮಾಡಿತು. ಅಸ್ಸಾಂಜೆ ಹೊರಬರುವುದನ್ನೇ ಕಾಯುತ್ತಿದ್ದ ಲಂಡನ್ ಪೊಲೀಸರು ಅವರನ್ನು ಬಂಧಿಸಿದರು.

ರಾಜಕಾರಣಿಗಳು ಎದುರಾಳಿಗಳ ವಿರುದ್ಧದ ಮಾಹಿತಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸಿಕೊಂಡು, ಬಳಿಕ ಮಾಹಿತಿದಾರರನ್ನು ಹೇಗೆ ನಿರ್ದಾಕ್ಷಿಣ್ಯವಾಗಿ ಮರೆತುಬಿಡುತ್ತಾರೆ ಎನ್ನುವುದಕ್ಕೆ ಅಸ್ಸಾಂಜೆ ನಿದರ್ಶನ. ಹಿಲರಿ ಕ್ಲಿಂಟನ್‌ ಅವರ ಗುಪ್ತ ರಾಜತಾಂತ್ರಿಕ ಇ– ಮೇಲ್‌ ಅನ್ನು ಪ್ರಕಟಿಸಿದ್ದಕ್ಕಾಗಿ, 2016ರ ಅಧ್ಯಕ್ಷೀಯ ಚುನಾವಣಾ ಪ್ರಚಾರದಲ್ಲಿ ‘ಅಸ್ಸಾಂಜೆ ನನ್ನ ಹೀರೊ’ ಎಂದು ಬಣ್ಣಿಸಿದ್ದ ಡೊನಾಲ್ಡ್‌ ಟ್ರಂಪ್, ಗೆದ್ದ ನಂತರ, ಅಸ್ಸಾಂಜೆ ಕಡೆಯವರು ಕ್ಷಮಾಯಾಚನೆ ಕೋರಿಕೆ ಸಲ್ಲಿಸಿದ ನಂತರವೂ ಸಹಾಯಹಸ್ತ ನೀಡಲಿಲ್ಲ.

ಆಸ್ಟ್ರೇಲಿಯದಲ್ಲಿ ಅಸ್ಸಾಂಜೆ ಸಹಪಾಠಿಯಾಗಿದ್ದ ಎಂ.ಎಸ್.ಡ್ರೇಫಸ್ ಅವರ ಪ್ರಕಾರ, ‘ಅಸ್ಸಾಂಜೆ ಅವರಿಗೆ ಅಂತರ್ಜಾಲ ಬಳಕೆಯ ನೈತಿಕತೆಯ ಕುರಿತು ವಿಭಿನ್ನ ಪರಿಕಲ್ಪನೆಗಳಿದ್ದವು. ಸರ್ಕಾರಗಳು ವ್ಯವಸ್ಥಿತವಾಗಿ ಮಾಡುವ ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಕಳವಳ ವ್ಯಕ್ತಪಡಿಸುತ್ತಿದ್ದರು’.

ಪ್ರಸ್ತುತ, ಜಗತ್ತಿನ ಹಲವಾರು ಮಾನವ ಹಕ್ಕುಗಳ ಪ್ರತಿಪಾದಕರು ಅಸ್ಸಾಂಜೆ ಬೆಂಬಲಕ್ಕೆ ನಿಂತಿದ್ದಾರೆ. ಅಸ್ಸಾಂಜೆಯವರನ್ನು ಪರೀಕ್ಷಿಸಿರುವ ಮನೋವೈದ್ಯರು, ‘ಅಸ್ಸಾಂಜೆ ಮಾನಸಿಕವಾಗಿ ಅತ್ಯಂತ ದುರ್ಬಲರಾಗಿದ್ದಾರೆ. ಒಂದು ವೇಳೆ ಅಮೆರಿಕಕ್ಕೆ ಹಸ್ತಾಂತರಿಸಿದರೆ ಆತ್ಮಹತ್ಯೆಯ ಅಪಾಯ ಹೆಚ್ಚಾಗಿದೆ’ ಎಂದಿದ್ದಾರೆ.

ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಅವರು ಅಸ್ಸಾಂಜೆ ಅವರನ್ನು ‘ಭಯೋತ್ಪಾದಕ’ ಎಂದಿದ್ದಾರೆ. ಹೀಗಿರುವಾಗ, ಅಸ್ಸಾಂಜೆ ಭವಿಷ್ಯದ ಹಾದಿ ಇನ್ನೂ ದುರ್ಗಮವಾಗಿದೆ. ಒಂದು ವಿನೂತನ, ಸಾಹಸಮಯ ಮಾಧ್ಯಮ ವರದಿಯ ಶಕೆಯನ್ನು ಆರಂಭಿಸಿದ್ದ ಅಸ್ಸಾಂಜೆಗೆ, ಪ್ರಬಲ ಪ್ರಜಾಪ್ರಭುತ್ವ ವ್ಯವಸ್ಥೆ ತನ್ನ ಅಸಲಿ ಬಂಡವಾಳವನ್ನು ಜಗತ್ತಿಗೆ ಪ್ರದರ್ಶಿಸಿದ್ದಕ್ಕಾಗಿ ಶಿಕ್ಷಿಸುವ ಮೂಲಕ, ಭವಿಷ್ಯದಲ್ಲಿ ಇನ್ಯಾರೂ ಇಂತಹ ಸಾಹಸ ಮಾಡಬಾರದು ಎನ್ನುವ ಎಚ್ಚರಿಕೆ ಕೊಟ್ಟಂತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.