ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಪರಂಪರೆಯ ರಕ್ಷಣೆಗೆ ಅಮೆರಿಕದ ಬದ್ಧತೆ

ಕ್ರಿಸ್ ಹಾಜಸ್
Published 23 ಏಪ್ರಿಲ್ 2024, 22:09 IST
Last Updated 23 ಏಪ್ರಿಲ್ 2024, 22:09 IST
ಅಕ್ಷರ ಗಾತ್ರ

ವಿಶ್ವ ಪಾರಂಪರಿಕ ದಿನವನ್ನು ನಾವು ಈಚೆಗೆ ಆಚರಿಸಿದ್ದೇವೆ. ನಮ್ಮ ಇತಿಹಾಸದ ವೈವಿಧ್ಯ ಹಾಗೂ ಆಳವನ್ನು ಹೇಳುವ ಸ್ಮಾರಕಗಳನ್ನು ಗುರುತಿಸುವ ಕೆಲಸ ಮಾಡುವ ದಿನ ಇದು. ನಮ್ಮ ಪರಂಪರೆಗಳನ್ನು ಸಂಭ್ರಮದಿಂದ ಕಾಣುವ ಸಂದರ್ಭದಲ್ಲಿ ನಾವು ನಿರ್ದಿಷ್ಟ ಕಟ್ಟಡಗಳು ಅಥವಾ ಕಲಾತ್ಮಕ ವಸ್ತುಗಳನ್ನು ಅರ್ಥಮಾಡಿಕೊಳ್ಳುವುದರ ಆಚೆಯೂ ನೋಟ ಹರಿಸುತ್ತೇವೆ. ಅವು ಪ್ರತಿನಿಧಿಸುವ ಸಾಂಸ್ಕೃತಿಕ ಇತಿಹಾಸ, ಸಂಬಂಧಗಳನ್ನು, ಅವು ಹೇಳುವ ಕಥೆಗಳನ್ನು ನಾವು ಕಾಣಲು ಮುಂದಾಗುತ್ತೇವೆ. ಅಮೆರಿಕ ಮತ್ತು ಭಾರತವು ಒಟ್ಟಾಗಿ ಕೆಲಸ ಮಾಡುವ ಕ್ಷೇತ್ರಗಳಲ್ಲಿ, ನಮ್ಮ ಪರಂಪರೆಯ ಪಾಲಿನ ಆಭರಣಗಳನ್ನು ರಕ್ಷಿಸಲು ನಾವು ಮಾಡುತ್ತಿರುವ ಕೆಲಸವು ಬೇರೆ ಯಾವುದೇ ಕ್ಷೇತ್ರದಲ್ಲಿನ ಕೆಲಸಕ್ಕಿಂತ ಹೆಚ್ಚು ಚೈತನ್ಯಶಾಲಿಯಾಗಿದೆ, ಹೆಚ್ಚು ವಿಶಿಷ್ಟವಾಗಿದೆ.

ಎರಡು ದಶಕಗಳಿಗೂ ಹೆಚ್ಚಿನ ಅವಧಿಯಿಂದ ಅಮೆರಿಕವು ವಿಶ್ವದಾದ್ಯಂತ ಇರುವ ಸಾಂಸ್ಕೃತಿಕ ಸಂಪತ್ತನ್ನು ಸಂರಕ್ಷಿಸಲು ‘ಸಾಂಸ್ಕೃತಿಕ ಸಂರಕ್ಷಣೆಗಾಗಿ ರಾಯಭಾರಿಗಳ ನಿಧಿ’ (ಎಎಫ್‌ಸಿಪಿ) ಹೆಸರಿನ ಕಾರ್ಯಕ್ರಮ ಜಾರಿಗೆ ತಂದಿದೆ. ಭಾರತದಲ್ಲಿ ಅಮೆರಿಕವು ವಾಸ್ತುಶಿಲ್ಪದ ದೃಷ್ಟಿಯಿಂದ ಮಹತ್ವದ ಹಲವು ಸ್ಮಾರಕಗಳನ್ನು ಸಂರಕ್ಷಿಸಲು 2.5 ಮಿಲಿಯನ್ ಅಮೆರಿಕನ್ ಡಾಲರ್‌ಗಿಂತ (₹ 20.82 ಕೋಟಿ) ಹೆಚ್ಚು ಮೊತ್ತ ವಿನಿಯೋಗಿಸಿದೆ. ಸುಂದರ್‌ವಾಲಾ ಬುರ್ಜ್, ಬತಾಶೆವಾಲಾ ಮೊಘಲ್ ಗೋರಿ ಸಂಕೀರ್ಣ ಅವುಗಳಲ್ಲಿ ಸೇರಿವೆ. ಅಲ್ಲದೆ, ಭಾರತದ ಜೊತೆ ಪಾಲುದಾರಿಕೆಯಲ್ಲಿ ನಾವು ಸ್ಥಾಯಿಯಲ್ಲದ ಇನ್ನೂ ಹಲವು ಆಸ್ತಿಗಳ ಸಂರಕ್ಷಣೆಗೆ ಈ ನಿಧಿಯನ್ನು ವಿನಿಯೋಗಿಸಿದ್ದೇವೆ. ನಶಿಸಿಹೋಗುತ್ತಿರುವ ಕೆಲವು ಜಾನಪ‍ದ ಸಂಗೀತ ಪ್ರಕಾರಗಳು, ತಾಳೆಗರಿ ಹಸ್ತಪ್ರತಿಗಳು ಹಾಗೂ ಬೆಂಗಳೂರಿನ ಯುನೈಟೆಡ್ ಥಿಯೊಲಾಜಿಕಲ್ ಕಾಲೇಜಿನಲ್ಲಿನ ಕೆಲವು ಅಪರೂಪದ ಪುಸ್ತಕಗಳ ಸಂರಕ್ಷಣೆ ಇವುಗಳಲ್ಲಿ ಸೇರಿವೆ. ಈ ಯತ್ನಗಳು ನಿನ್ನೆ ಮತ್ತು ನಾಳೆಗಳ ನಡುವೆ ಸೇತುವೆಯನ್ನು ನಿರ್ಮಿಸುತ್ತವೆ, ಹಿಂದಿನ ತಲೆಮಾರಿನ ಹಿರಿಮೆಗಳಿಂದ ಸ್ಫೂರ್ತಿ ಪಡೆಯಲು ನಾಳಿನ ತಲೆಮಾರುಗಳಿಗೆ ನೆರವಾಗುತ್ತವೆ.

ಮೈಸೂರಿನ ಜಯಲಕ್ಷ್ಮಿ ವಿಲಾಸ ಅರಮನೆಯಲ್ಲಿನ ಸಂಪತ್ತಿನ ಸಂರಕ್ಷಣೆಗೆ 3 ಲಕ್ಷ ಡಾಲರ್ (₹ 2.49 ಕೋಟಿ) ಒದಗಿಸಲು ಮೈಸೂರು ವಿಶ್ವವಿದ್ಯಾಲಯ ಹಾಗೂ ಡೆಕ್ಕನ್ ಹೆರಿಟೇಜ್ ಫೌಂಡೇಷನ್ ಜೊತೆ ಅಮೆರಿಕ ಮಾಡಿಕೊಂಡಿರುವ ಪಾಲುದಾರಿಕೆಯು ಒಂದು ಉದಾಹರಣೆ. ಅಲ್ಲಿ ಸಂರಕ್ಷಿಸಿ ಈಗ ಜಾನಪದ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇರಿಸಿರುವ ಸಂಗೀತ ವಾದ್ಯಗಳು, ನೃತ್ಯಕಲಾವಿದರ ಉಡುಗೆಗಳು, ಪುರಾಣ ಪಾತ್ರಗಳ ಬೊಂಬೆಗಳು ಅವುಗಳನ್ನು ರೂಪಿಸಿರುವ ಬಟ್ಟೆ, ಮರ, ಲೋಹದ ಪರಿಧಿಯನ್ನು ಮೀರಿ ನಿಲ್ಲುತ್ತವೆ. ಅವು ಹಿಂದಿನ ಕಾಲವನ್ನು ಕಾಣಲು ಕಿಟಕಿಗಳಿದ್ದಂತೆ, ಅವುಗಳನ್ನು ಬಳಸಿದವರ ಜೀವನದ ಮೇಲೊಂದು ನೋಟ ಹರಿಸಲು ಅವಕಾಶ ಕಲ್ಪಿಸುತ್ತವೆ. ಜಗತ್ತಿನಲ್ಲಿ ನಮ್ಮ ಅಸ್ಮಿತೆ ಹಾಗೂ ನಮ್ಮ ಸ್ಥಾನದ ಬಗ್ಗೆ ಅವು ನೀಡುವ ಒಳನೋಟಗಳಿಗೆ ಬೆಲೆ ಕಟ್ಟಲು ಆಗದು.

ಈ ಎಲ್ಲ ಕಾರ್ಯಕ್ರಮಗಳ ಮೂಲ ದ್ರವ್ಯ ಪಾಲುದಾರಿಕೆ. ಇಂತಹ ಪ್ರತಿಯೊಂದು ಯೋಜನೆಯಲ್ಲಿ, ಈ ಸಂಪ್ರದಾಯಗಳನ್ನೇ ಉಸಿರಾಗಿಸಿಕೊಂಡವರ ಜೊತೆ ಅಮೆರಿಕವು ಬಹಳ ಹತ್ತಿರದಿಂದ ಕೆಲಸ ಮಾಡುತ್ತದೆ. ಇದರಿಂದಾಗಿ, ಈ ಪರಂಪರೆಯನ್ನು ನಮಗೆಲ್ಲರಿಗಾಗಿ – ಸಂರಕ್ಷಣೆಯಲ್ಲಿ ನಿರತರಾದ ವೃತ್ತಿಪರರಿಗಾಗಿ, ನಿಪುಣ ಕಲಾವಿದರಿಗಾಗಿ, ಸಮುದಾಯಗಳ ನಾಯಕರಿಗಾಗಿ – ಸಜೀವಗೊಳಿಸುವ ಕೆಲಸ ಆಗುತ್ತದೆ. ಎಎಫ್‌ಸಿಪಿ ಯೋಜನೆಯು ಯಶಸ್ಸು ಕಾಣುವುದು ಕಲ್ಲು, ಮಣ್ಣುಗಳಿಂದ ಅಲ್ಲ. ಬದಲಿಗೆ, ಪ್ರತಿಯೊಬ್ಬ ಪಾಲುದಾರ ಹೊಂದಿರುವ ಬದ್ಧತೆ, ಪ್ರೀತಿಯಿಂದ.

ಈ ಯೋಜನೆಗಳು ಅಲ್ಲಿಗೆ ಭೇಟಿ ನೀಡುವವರಿಗೆ ಸ್ಫೂರ್ತಿ ಒದಗಿಸುತ್ತವೆ, ಸ್ಥಳೀಯ ಕರಕುಶಲಕರ್ಮಿಗಳಿಗೆಉದ್ಯೋಗ ಸೃಷ್ಟಿಸಿಕೊಡುತ್ತವೆ, ಸಮುದಾಯಗಳಿಗೆ ತಮ್ಮದೇ ಪರಂಪರೆಯ ಮಾಲೀಕತ್ವ ಹೊಂದಲು ನೆರವಾಗುತ್ತವೆ. ಮೈಸೂರಿನಲ್ಲಿ ಪುನರ್‌ನಿರ್ಮಿಸಲಾಗಿರುವ ಜಯಲಕ್ಷ್ಮಿ ವಿಲಾಸ ಅರಮನೆಯು ಕಲಿಕೆಯ ಕೇಂದ್ರವಾಗಲಿದೆ. ಅದು ಹೊಸ ಪ್ರವಾಸಿಗರನ್ನು ಸೆಳೆಯಲಿದೆ, ಇಡೀ ಪ್ರದೇಶಕ್ಕೆ ಆರ್ಥಿಕವಾಗಿ ಅನುಕೂಲಗಳನ್ನು ಹೊತ್ತು ತರಲಿದೆ. ಅಮೆರಿಕ ಮತ್ತು ಭಾರತದ ನಡುವಿನ ಸಾಂಸ್ಕೃತಿಕ ಪಾಲುದಾರಿಕೆಯು ಇಡೀ ಸಂಕಥನದ ಕೇಂದ್ರಭಾಗದಲ್ಲಿ ಜನರನ್ನು ಹೊಂದಿರುತ್ತದೆಯಾದ ಕಾರಣ, ಆ ಜನರ ಅನುಭವದ ಬಹುತ್ವ ಮತ್ತು ಅನುಭವದ ಸೌಂದರ್ಯವನ್ನು ಸಂಭ್ರಮದಿಂದ ಕಾಣುತ್ತದೆಯಾದ ಕಾರಣ, ಆ ಪಾಲುದಾರಿಕೆಯು ಯಶಸ್ಸು ಕಾಣುತ್ತದೆ. ಭಿನ್ನ ಅಭಿಪ್ರಾಯಗಳ ಕಾರಣಕ್ಕಾಗಿ ಬಹಳಷ್ಟು ಒಡೆದುಹೋಗಿರುವ ಜಗತ್ತಿನಲ್ಲಿ, ನಮ್ಮೆಲ್ಲರನ್ನು ಒಂದುಗೂಡಿಸುವ ಮಾನವತ್ವವನ್ನು ಇಂಥ ಕಾರ್ಯಕ್ರಮಗಳು ಮುಂಚೂಣಿಯಲ್ಲಿ ಇರಿಸುತ್ತವೆ.

ಸಂರಕ್ಷಣೆಯ ಹಾಗೂ ಸಂಭ್ರಮದ ಈ ಪಯಣವನ್ನು ಅಮೆರಿಕ ಮತ್ತು ಭಾರತ ಮುಂದುವರಿಸಲಿವೆ. ನಮ್ಮ ಪರಂಪರೆಯ ಅತ್ಯಂತ ಅಮೂಲ್ಯವಾದ ಸಂಗತಿಗಳನ್ನು ಸಂರಕ್ಷಿಸಲು ಹೊಸ ಪಾಲುದಾರಿಕೆಗಳನ್ನು ರೂಪಿಸಿಕೊಳ್ಳಲಿವೆ. ಪ್ರತಿಯೊಂದು ಪರಂಪರೆ, ಸ್ಮಾರಕ ಹಾಗೂ ಕಲಾಕೃತಿಗಳ ಹಿಂದಿನ ಮಾನವ ಪ್ರಯತ್ನವನ್ನು ನಾವು ಯಾವತ್ತಿಗೂ ಬಹಳ ಜಾಗರೂಕವಾಗಿ ಗುರುತಿಸುತ್ತೇವೆ. ವಿಶ್ವ ಪಾರಂಪರಿಕ ದಿನಾಚರಣೆ ನಡೆದಿರುವ ಈ ಸಂದರ್ಭದಲ್ಲಿ ನಾವು ಮಾನವ ಪರಂಪರೆಯನ್ನು ರಕ್ಷಿಸುವ ಬದ್ಧತೆಯನ್ನು ಮತ್ತೊಮ್ಮೆ ಖಚಿತಪಡಿಸುತ್ತಿದ್ದೇವೆ. ಹೀಗೆ ಹೇಳುವಾಗ ನಾವು, ನಮ್ಮ ಪರಂಪರೆಯು ಇತಿಹಾಸದ ಅವಶೇಷ ಮಾತ್ರವೇ ಅಲ್ಲ; ಬದಲಿಗೆ, ಅದು ಉಜ್ವಲ ಭವಿಷ್ಯಕ್ಕೆ ಒಂದು ಕೀಲಿಕೈ ಕೂಡ ಹೌದು ಎಂಬುದನ್ನು ಖಾತರಿಪಡಿಸುತ್ತೇವೆ.

ಲೇಖಕ: ಅಮೆರಿಕದ ಕಾನ್ಸುಲ್‌ ಜನರಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT