ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಅಜ್ಞಾತ ಯೋಧರಿಗೂ ಸಿಗಲಿ ಕಾಳಜಿ

ಜನಹಿತ ಕಾಯುವ ಆಪದ್ಬಾಂಧವರಿಗೆಲ್ಲ ನಮ್ಮದೊಂದು ಸಲಾಮು ಸಲ್ಲಬೇಕಿದೆ
Last Updated 7 ಜನವರಿ 2022, 19:31 IST
ಅಕ್ಷರ ಗಾತ್ರ

ಅದು ವಿಮಾನ ನಿಲ್ದಾಣದ ನಿತ್ಯ ನೋಟ. ಹೊರ ಊರಿನಿಂದ ಹಾರಿ ಬಂದ ವಿಮಾನ ಭೂಸ್ಪರ್ಶ ಮಾಡುತ್ತಲೇ ಅದರ ಷೋಡಶೋಪಚಾರಗಳಿಗೆ ವಾಹನಗಳು ಅತ್ತ ಧಾವಿಸಿರುತ್ತವೆ! ಪ್ರಯಾಣಿಕರಿಗೆ ಇಳಿಯಲು ಏಣಿ, ಅವರ ಲಗೇಜುಗಳ ವರ್ಗಾವಣೆ, ವಿಮಾನ ಶುದ್ಧೀಕರಣ ಮತ್ತು ಕ್ರಿಮಿನಾಶಕ ಸಿಂಚನ, ಇಂಧನ ಪೂರೈಕೆ... ಹೀಗೆ ಪರಿಚಾರಿಕೆ ಅದಕ್ಕೆ.

ನಾವು ವಾಸಿಸುವ ಮನೆಗೂ ಇದೇ ಬಗೆಯ ಸೇವೆ ದಿನನಿತ್ಯ ಸಲ್ಲುತ್ತಲೇ ಇರುತ್ತದೆ. ನಾವು ಗಮನಿಸಬೇಕಷ್ಟೆ. ಟಪಾಲು ತರುವವರಾದಿಯಾಗಿ ಅಜ್ಞಾತ ಯೋಧರನ್ನು, ಅವರ ಮೌಲಿಕ ಸೇವೆಯನ್ನು ಲಕ್ಷಿಸದಿರಬಾರದು. ಹಲವರ ಮನೆಯಲ್ಲಿ ಮನೆಗೆಲಸದ ಸಹಾಯಕರು ಗೈರಿರಲಿ, ತುಸು ಸಮಯ ತಡ ಬಂದರೂ ಮನೆ ಅಲ್ಲೋಲ ಕಲ್ಲೋಲ. ಭಾನುವಾರ ಎಂದಿಗಿಂತ ಅಷ್ಟು ಬೇಗನೆ ಬರಲು ಸೂಚನೆ ಬೇರೆ. ಅವರ ಮನೆಯಲ್ಲೂ ಕಿಂಚಿತ್ ಬಿಡುವು ಮೆರೆಯಲಿ, ಅಲ್ಲಿ ತಿಂಗಳಿಗೊಂದಾದರೂ ಭಾನುವಾರವಿರಲಿ ಎನ್ನುವ ಮನಸ್ಸಿದ್ದರೆ ಎಷ್ಟು ಚಲೋ!

ಬೆಳಿಗ್ಗೆ ಸುದ್ದಿ ಓದುತ್ತಾ ಕಾಫಿ ಹೀರುವುದೇ ಸ್ವರ್ಗ ಸರಿ. ಆದರೆ ಹಾಲು, ದಿನಪತ್ರಿಕೆ ವಿತರಣೆಯ ಹಿಂದೆ ಬದ್ಧತೆ, ಸಮಯಪ್ರಜ್ಞೆ ಮೈದಳೆದಿರುತ್ತದೆ. ಇದ ಮನಗಂಡರೆ ಸರಬರಾಜಿನಲ್ಲಿನ ಆಕಸ್ಮಿಕ ಲೋಪ ದೋಷಗಳು ನಗಣ್ಯವೆನ್ನಿಸುತ್ತವೆ. ಅವರಿಗದರಿಂದ ಕಾಸು, ಕಮಿಷನ್ ಮಾತಿರಲಿ. ಅತಿಪ್ರಿಯವಾದದ್ದು, ಅತ್ಯಗತ್ಯವಾದದ್ದನ್ನು ಚಳಿ, ಮಳೆ ಎನ್ನದೆ ಮನೆಗೆ ತಂದುಕೊಡುವ ಅವರ ಕಾಳಜಿಯೇ ಹಿರಿದಲ್ಲವೇ?

ಹಾಲು ನೀರಾಯ್ತು, ಪತ್ರಿಕೆ ಮಳೆಯಲ್ಲಿ ತೊಯ್ದಿತ್ತು ಎಂಬ ಮನೆಯೊಡೆಯರ ದೂರು ಇದ್ದದ್ದೇ. ಹಾಲಿಗೆ ಮಳೆ ನೀರೇ ಆಗಬೇಕೆ ಅಂತಲೋ ಅಥವಾ ಪತ್ರಿಕೆಗೆ ನೀರು ಅಗತ್ಯವಿಲ್ಲ ಎಂದೋ ಚಟಾಕಿ ಸಿಡಿಸಿ ಪರಿಣಾಮಕಾರಿಯಾಗಿ ಎಚ್ಚರಿಸಬಹುದಲ್ಲ! ಮನುಷ್ಯ ಎಷ್ಟೇ ಆದರೂ ಸಮಾಜಜೀವಿ. ಮುನಿಸಿಕೊಂಡರೆ ನಾಳೆ ಅದೇ ಮುಖ ಎದುರಿಸುವುದು ಕಠಿಣವೆಂಬ ಕಾರಣಕ್ಕಾದರೂ ಜಗಳಕ್ಕೆ ಕೆಂಪುಹಾಸು ಸಲ್ಲದು. ಬೀದಿಯ ಏರು, ತಗ್ಗುಗಳನ್ನು ಲೆಕ್ಕಿಸದೆ ತಳ್ಳುಗಾಡಿಯಲ್ಲಿ ಸೊಪ್ಪು ಸದೆ, ಹೂವು, ಹಣ್ಣು, ಕಾಯಿ, ತರಕಾರಿ ಪೇರಿಸಿಕೊಂಡಿರುತ್ತಾರೆ. ಅವರು ನಮಗಾಗಿ ಮನೆ ಬಾಗಿಲಿಗೆ ಬಂದು, ನಾವು ಮಾರುಕಟ್ಟೆಗೆ ಹೋಗುವುದನ್ನು ನಿವಾರಿಸುತ್ತಾರೆ ಎನ್ನುವ ಕೃತಜ್ಞತಾ ಮನೋಭಾವ ನಮ್ಮಲ್ಲಿರಲಿ.

ಬೀದಿ ಕಸ ಗುಡಿಸುವವರ, ತ್ಯಾಜ್ಯ ವಿಲೇವಾರಿ ಮಾಡುವವರ ಕಾಯಕ ಅದೆಷ್ಟು ಮಹತ್ವದ್ದೆಂದು ನಮಗೆ ವಿಶೇಷವಾಗಿ ಅರಿವಾಗಿದ್ದು ಕೋವಿಡ್ ವ್ಯಾಧಿ ವಿರುದ್ಧದ ಸಮರದಲ್ಲೇ. ವೈದ್ಯರು, ಶುಶ್ರೂಷಕರು, ಆರಕ್ಷಕರು, ಗೃಹ ರಕ್ಷಕರು, ನೀರು, ಒಳಚರಂಡಿ ಹಾಗೂ ವಿದ್ಯುತ್ತಿನ ಸಂಪರ್ಕ ಕಲ್ಪಿಸುವವರು, ಪೌರ ಕಾರ್ಮಿಕರು... ಇವರೆಲ್ಲರೂ ಜನಹಿತ ಕಾಪಾಡುವ ಯೋಧರೆಂಬ ಭಾವ ಜನಮಾನಸದಲ್ಲಿ ಅಚ್ಚಳಿಯದಂತೆ ಮೂಡಿತು. ಅಂದಹಾಗೆ ಹೂ ಕುಂಡಗಳಿಗೆ ಹೊಸ ಮಣ್ಣು ತುಂಬಿಸುವ, ತೆಂಗಿನ ಕಾಯಿ ಕೀಳುವ, ತರಾವರಿ ಸಲಕರಣೆಗಳ ದುರಸ್ತಿಗೊಳಿಸುವ, ನೀರಿನ ಟ್ಯಾಂಕ್ ಶುಚಿಗೊಳಿಸುವ, ಮನೆ ಹೊಕ್ಕ ಹಾವು ಹಿಡಿಯುವವರ ಪಡೆಯೇ ಉಂಟೆನ್ನಿ. ಆ ಅಜ್ಞಾತ ಆಪದ್ಬಾಂಧವರಿಗೆಲ್ಲ ನಮ್ಮದೊಂದು ಸಲಾಮು ಸಲ್ಲಬೇಕಿದೆ. ಗೆಳೆಯರ ದಿನ, ಪ್ರೇಮಿಗಳ ದಿನ, ಪೋಷಕರ ದಿನ, ಮಹಿಳೆಯರ ದಿನ ಎನ್ನುವಂತೆ ‘ಮನೆ ಪರಿಚಾರಕರ ದಿನ’ ಆಚರಣೆ ಅರ್ಥಪೂರ್ಣ.

ಅರವತ್ತರ ದಶಕದ ಸುಮಾರಿನಲ್ಲಿ ಬಾವಿಗಳಿಲ್ಲದಿದ್ದ ಮನೆಗಳೇ ಅಪರೂಪ. ‘ಕೊಡ, ತಪ್ಪಲೆ, ಬಕೀಟು, ಚೊಂಬು ತೆಗೀಬ್ಯಾಕ್ರ?’ ಎಂದು ಕೂಗುತ್ತ ಬರುವವರಿದ್ದರು. ಹಗ್ಗದ ಜೊತೆಗೆ ಪಾತಾಳಗರಡಿ ಅವರ ಸಾಧನ. ಅದಕ್ಕೆ ಮೈತುಂಬ ಕೊಕ್ಕೆಗಳು! ಇಳಿಬಿಟ್ಟರೆ ಬಾವಿಯಲ್ಲಿ ಯಾವುದೇ ಮೂಲೆಯಲ್ಲಿ ಪಾತ್ರೆ, ಪಡಗ ಅವಿತಿದ್ದರೂ ಕೊಕ್ಕೆಗೆ ಲಗತ್ತಾಗುತ್ತಿತ್ತು. ಒಂದು ವೇಳೆ ತಂತ್ರ ಫಲಿಸದಿದ್ದರೆ ದಿಢೀರನೆ ಅವರೇ ಬಾವಿಗಿಳಿದು ತಡಕಾಡಿ ಅಂತೂ ಮುಳುಗಿದ್ದನ್ನು ಮೇಲೆ ತೇಲಿಸುತ್ತಿದ್ದರು, ಹಗ್ಗದಲ್ಲಿ ಬಂಧಿಸಿ ‘ಇಗೊಳ್ಳಿ ಎಳೆದುಕೊಳ್ಳಿ’ ಎನ್ನುತ್ತಿದ್ದರು. ಹಾಗೆ ಹೇಳಿದವರು ಬಾವಿಯ ತಳ ಜೋರಾಗಿ ಬಡಿದು ಮೇಲೆ ಬರುತ್ತಿದ್ದ ದೃಶ್ಯವೇ ಕಣ್ಣಿಗೆ ಹಬ್ಬ. ನ್ಯೂಟನ್ನನ ಮೂರನೇ ನಿಯಮ ‘ಕ್ರಿಯೆ, ಪ್ರತಿಕ್ರಿಯೆ ಸಮ ಸಮ ಮತ್ತು ವಿರುದ್ಧ’ ಪ್ರಾತ್ಯಕ್ಷಿಕೆ ಕಂಡು ನಾವು ಹುಡುಗರು ಬೆರಗಾಗುತ್ತಿದ್ದೆವು. ಮಾತ್ರವಲ್ಲ, ಅರ್ಕಿಮಿಡೀಸ್ ಕೂಡ ಅಲ್ಲಿರುತ್ತಿದ್ದ!

ಶ್ರೇಷ್ಠವಂತರ ಸಹಾಯಕರನ್ನು ಕೀಳರಿಮೆ ಕಾಡದು ಎನ್ನುವುದು ಜರ್ಮನ್ ಗಾದೆ. ಏಕೆಂದರೆ ಅವರು ತಮಗೆ ನೆರವಾಗುವವರನ್ನು ತಮ್ಮಂತೆಯೇ ಪರಿಭಾವಿಸುತ್ತಾರೆ. ತಮ್ಮ ಕಾರಿನ ಚಾಲಕರು ಸರ್ಕಾರಿ ಸೇವೆಯಿಂದ ನಿವೃತ್ತರಾದಾಗ ಉನ್ನತಾಧಿಕಾರಿಗಳು ಮಾದರಿಯಾದ ನಿದರ್ಶನಗಳಿವೆ. ಚಾಲಕರಾಗಿ ದುಡಿದವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ನಂತರ ಅಧಿಕಾರಿಯೇ ಕಾರಿನ ಸಾರಥಿಯಾಗಿ ಅವರ ಮನೆ ಮುಟ್ಟಿಸಿದ ಪ್ರಸಂಗಗಳು ಮನಮಿಡಿಯುತ್ತವೆ.

‘ನೀವೇ ಅಟ್ಟ ಹತ್ತಿ ಸ್ವಚ್ಛಗೊಳಿಸುತ್ತಿದ್ದೀರಲ್ಲ ಸಾರ್, ಒಂದು ವೇಳೆ ಬಿದ್ದರೇನು ಗತಿ? ನಿಮ್ಮ ಆಳಿಗೆ ಹೇಳಬಹುದಿತ್ತಲ್ಲ’ ಅಂತ ಆ ಅತಿ ಗಣ್ಯ ವ್ಯಕ್ತಿಯ ಮನೆಗೆ ಬಂದವರೊಬ್ಬರು ಪ್ರಶ್ನಿಸಿದ್ದರು. ಥಟ್ಟನೆ ‘ನಿಜವೆ, ಆದರೆ ಆ ಆಳೇ ಅಟ್ಟದಿಂದ ಬೀಳಬಹುದಲ್ಲ?’ ಎಂದು ಪ್ರತಿಕ್ರಿಯಿಸುವ ಧೀಮಂತಿಕೆ ಆದರಣೀಯ ರಾಜಾಜಿಯವರಿಗಲ್ಲದೆ ಮತ್ತ್ಯಾರಿಗೆ ಹೇಳಿ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT