ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಜನತೆಯಾದ ನಾವು...

ರಾಜಕಾರಣದ ದುಃಸ್ಥಿತಿಯನ್ನು ನೋಡಿದರೆ, ದೇಶದ ಸಮಷ್ಟಿ ಮಾಲೀಕರಾದ ನಾಗರಿಕರು ತಮ್ಮ ಜವಾಬ್ದಾರಿಯನ್ನೇ ಅರಿಯದಿರುವುದು ಸ್ಪಷ್ಟವಾಗುತ್ತದೆ
Last Updated 26 ನವೆಂಬರ್ 2019, 19:32 IST
ಅಕ್ಷರ ಗಾತ್ರ

1947ರ ನಂತರ ನಮ್ಮ ದೇಶವನ್ನು ನಾವೇ ನಡೆಸಿಕೊಂಡು ಹೋಗುವ ಪಣ ತೊಟ್ಟಿದ್ದೇವೆ, ಹೊಣೆ ಹೊತ್ತಿದ್ದೇವೆ. ಇದೊಂದು ದೊಡ್ಡ ಆಟ. ಇದರಲ್ಲಿ ಭಾರತದ ನಾಗರಿಕರೆಲ್ಲರೂ ಸಕ್ರಿಯ ಆಟಗಾರರು. ಲಗೋರಿಯಿಂದ ಕ್ರಿಕೆಟ್‍ವರೆಗೆ ನಮಗೆ ಹಲವಾರು ಆಟಗಳ ನಿಯಮಗಳು ಗೊತ್ತಿವೆ, ಅದರ ಪ್ರಕಾರ ಆಡುತ್ತೇವೆ. ಆದರೆ ಸ್ವರಾಜ್ಯ, ಸ್ವಆಡಳಿತದ ನಿಯಮಗಳ ಅರಿವು ಮಾತ್ರ ಸೊನ್ನೆ!

ದೇಶವನ್ನು ನಡೆಸಿಕೊಂಡು ಹೋಗುವ ಕುರಿತು ಇರುವ ನೀತಿ, ನಿಯಮಗಳ ಸಂಗ್ರಹವೇ ಭಾರತದ ಸಂವಿಧಾನ. ಆದರೆ ನಮ್ಮಲ್ಲಿ ಶೇ 99ರಷ್ಟು ಜನರಿಗೆ ಅದರ ಮಹತ್ವವಾಗಲೀ ಅದರ ಮೂಲಕ ನಮಗೆ ನಾವೇ ಕೊಟ್ಟುಕೊಂಡಿರುವ ಹಕ್ಕುಗಳಾಗಲೀ ವಹಿಸಿ ಕೊಂಡಿರುವ ಜವಾಬ್ದಾರಿಗಳಾಗಲೀ ಅದರ ಪ್ರಕಾರ ನಾಗರಿಕರಾಗಿ ನಮ್ಮ ಪಾತ್ರವಾಗಲೀ ಗೊತ್ತಿಲ್ಲ. ಆಟದ ನಿಯಮಗಳೇ ಗೊತ್ತಿಲ್ಲದೆ ಇರುವುದರಿಂದ ನಾವು ದೇಶದಾಟದಲ್ಲಿ ಕೇವಲ ಅಸಕ್ರಿಯ ಪ್ರೇಕ್ಷಕರಾಗಿದ್ದೇವೆ. ಆದ್ದರಿಂದ ಇನ್ಯಾರೋ ನಮ್ಮನ್ನು ಆಳುತ್ತಿದ್ದಾರೆ, ಆಟ ಆಡಿಸುತ್ತಿದ್ದಾರೆ. ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ರಾಜಕಾರಣ ತಲುಪಿರುವ ಇಂದಿನ ದುಃಸ್ಥಿತಿಯನ್ನು ನೋಡಿದರೆ, ದೇಶದ ಸಮಷ್ಟಿ ಮಾಲೀಕರಾದ ನಾಗರಿಕರು ತಮ್ಮ ಜವಾಬ್ದಾರಿಯನ್ನು ಅರಿತೇ ಇಲ್ಲದಿರುವುದು ಸ್ಪಷ್ಟವಾಗುತ್ತದೆ.

ಸಾಮಂತಶಾಹಿ, ರಾಜಶಾಹಿ, ಸಾಮ್ರಾಜ್ಯಶಾಹಿ, ವಸಾಹತುಶಾಹಿ ಹೀಗೆ ಶತಶತಮಾನಗಳ ಕಾಲ ವಿವಿಧ ಆಳ್ವಿಕೆಗಳ ಮೂಲಕ ಹಾದು ‘ಭಾರತದ ಜನತೆಯಾದ ನಾವು’ ಈ ಎಲ್ಲ ಸಂಕೋಲೆಗಳನ್ನು ಕಿತ್ತು ಹಾಕಿ 1947ರಲ್ಲಿ ಮೊದಲ ಬಾರಿಗೆ ಸಾರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ, ಜನಸತ್ತಾತ್ಮಕ ಗಣರಾಜ್ಯವನ್ನು ಕಟ್ಟಿಕೊಂಡೆವು. 389 ಜನಪ್ರತಿನಿಧಿ ಗಳು, 22 ಸಮಿತಿಗಳಲ್ಲಿ ಬೃಹತ್ ಕೆಲಸವನ್ನು ಹಂಚಿಕೊಂಡು, 1946ರ ಡಿ. 9ರಿಂದ 1949ರ ನ. 25ರವರೆಗೆ ಕಠಿಣ ಪರಿಶ್ರಮದಿಂದ ನಮ್ಮ ಸಂವಿಧಾನದ ರಚನೆಯ ಹೂರಣವನ್ನು ಸಿದ್ಧಪಡಿಸಿದರು. ಈ ನಡುವೆ 1947ರ ಆ. 29ರಂದು (ಸ್ವಾತಂತ್ರ್ಯ ಬಂದ 14 ದಿನಗಳಲ್ಲಿ) ಡಾ. ಬಾಬಾ ಸಾಹೇಬ್ ಅಂಬೇಡ್ಕರರನ್ನು ಈ ಬೆಟ್ಟದಷ್ಟು ಮಾಹಿತಿಯನ್ನು ಸಂಕಲಿಸಿ ಅದಕ್ಕೆ ಒಂದು ಅಚ್ಚುಕಟ್ಟಾದ ಗ್ರಂಥದ ರೂಪವನ್ನು ಕೊಡುವುದಕ್ಕಾಗಿ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಯಿತು. ದಿನಕ್ಕೆ 18 ಗಂಟೆಗೂ ಮೀರಿ ದುಡಿದು ಅಂಬೇಡ್ಕರರು ಆವರೆಗೆ ನಡೆದ ಸರ್ವ ಸದಸ್ಯರ 11 ಗೋಷ್ಠಿಗಳಲ್ಲಿ ನಡೆದ ಚಿಂತನ ಮಂಥನಕ್ಕೆ ಅಂತಿಮ ರೂಪವನ್ನು ಕೊಟ್ಟು ಭಾರತ ಸಂವಿಧಾನದ ಕರಡನ್ನು ಪರಿಪೂರ್ಣಗೊಳಿಸಿ ದರು. 1949ರ ನ. 25ರಂದು, ರಾಷ್ಟ್ರಪತಿಯಾಗಿದ್ದ ಡಾ.ಬಾಬು ರಾಜೇಂದ್ರ ಪ್ರಸಾದರಿಗೆ ಒಪ್ಪಿಸಿದರು. ಈ ಸಂವಿಧಾನವು ಜನಪ್ರತಿನಿಧಿಗಳ ಮೂಲಕ ಭಾರತದ ಜನರ ಅನುಮೋದನೆಯನ್ನು ಪಡೆದದ್ದು 1949ರ ನ. 26ರಂದು. ಆ ದಿನವನ್ನೇ ನಾವೀಗ ‘ಸಂವಿಧಾನ ದಿನ’ವನ್ನಾಗಿ ಆಚರಿಸುತ್ತಿದ್ದೇವೆ.

ಭಾರತ ಸಂವಿಧಾನವು ಹಿಂದಿನ ಸ್ಮೃತಿ, ಸಂಹಿತೆ, ಧರ್ಮಗ್ರಂಥಗಳ ತರಹ ಪವಿತ್ರ, ಏಕಪುರುಷರಚಿತ, ದೈವಿಕ, ಶಾಶ್ವತ, ಪ್ರಶ್ನಾತೀತ, ಯಾವುದೇ ಒಂದು ಧರ್ಮ ಅಥವಾ ಜಾತಿಗೆ ಸಂಬಂಧಿಸಿದ ಗ್ರಂಥವಲ್ಲ. ಇದು ಜನರೇ ತಮ್ಮ ಪುರುಷ, ಮಹಿಳಾ ಪ್ರತಿನಿಧಿಗಳ ಮೂಲಕ ಜನಸತ್ತಾತ್ಮಕವಾಗಿ ಚಿಂತನ ಮಂಥನ ನಡೆಸಿ ಸಾಕಾರಗೊಳಿಸಿದ, ಶಾಶ್ವತವಲ್ಲದ, ಪ್ರಶ್ನಾತೀತ ವಲ್ಲದ, ಯಾವುದೇ ಧರ್ಮ ಅಥವಾ ಮತಕ್ಕೆ ಸಂಬಂಧವಿಲ್ಲದ ಲೌಕಿಕ ಗ್ರಂಥ. ಈ ಸಂವಿಧಾನದ ಮೊದಲ ಪುಟದಲ್ಲಿಯೇ ಇರುವ ಪ್ರಸ್ತಾವನೆಯು ‘ಭಾರತದ ಜನತೆಯಾದ ನಾವು...’ ಎಂದು ಆರಂಭ ವಾಗುತ್ತದೆ, ‘ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು, ಅಂಗೀಕರಿಸಿ, ಶಾಸನವನ್ನಾಗಿ ವಿಧಿಸಿ ಕೊಂಡಿದ್ದೇವೆ’ ಎಂದು ಮುಕ್ತಾಯವಾಗುತ್ತದೆ.

ದಶಕಗಳ ಕಾಲ ಹೋರಾಡಿ ಕೊನೆಗೂ ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಂಡು, ದೇಶವನ್ನು ನಡೆಸಲು ಉತ್ಕೃಷ್ಟವಾದ ಸಂವಿಧಾನವನ್ನೂ ರಚಿಸಿಕೊಂಡ ನಮ್ಮ ಹಿರಿಯರು ಒಂದು ತಪ್ಪನ್ನು ಮಾಡಿದ್ದಾರೆ. ದೇಶದ ಅಭಿವೃದ್ಧಿಗಾಗಿ ಪಂಚವಾರ್ಷಿಕ ಯೋಜನೆಗಳನ್ನು ಹಾಕಿಕೊಂಡವರು, ಮೊದಲ ಪಂಚವಾರ್ಷಿಕ ಯೋಜನೆಯಲ್ಲಿಯೇ ಹಾಕಿಕೊಳ್ಳಬೇಕಾಗಿದ್ದ ಒಂದು ಬೃಹತ್ ಯೋಜನೆಯೆಂದರೆ ‘ಭಾರತ ಸಂವಿಧಾನ ಸಾಕ್ಷರತಾ ಆಂದೋಲನ’. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಆತನ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಯ ಹೊರತಾಗಿಯೂ ಸಂವಿಧಾನ ಎಂದರೇನು, ಅದರಲ್ಲಿ ನಾಗರಿಕರ ಮಹತ್ವವೇನು ಎಂಬ ಅರಿವು ಮೂಡಿಸುವುದಕ್ಕೆ ಮೊದಲ ಆದ್ಯತೆ ನೀಡಬೇಕಾಗಿತ್ತು. ಹಾಗೆ ಮಾಡದೇ ಇರುವುದರ ಫಲವನ್ನು ನಾವೀಗ ಉಣ್ಣುತ್ತಿದ್ದೇವೆ. ಎಲ್ಲಾ ಸಾರ್ವಜನಿಕ ಸಂಸ್ಥೆ, ಕಚೇರಿ, ಸಚಿವಾಲಯಗಳ ಗೋಡೆಗಳ ಮೇಲೆ ರಾರಾಜಿಸಬೇಕಾಗಿದ್ದ ಒಂದೇ ಒಂದು ಫಲಕವೆಂದರೆ ಭಾರತ ಸಂವಿಧಾನದ ಪ್ರಸ್ತಾವನೆಯ ಫೋಟೊ. ಇಂದು ಸರ್ಕಾರಿ ಕಚೇರಿಗಳಲ್ಲಿ ಅವರವರಿಗೆ ಇಷ್ಟಬಂದ ದೇವಾನುದೇವತೆಗಳ ಫೋಟೊಗಳು ಮೆರೆಯುತ್ತವೆ. ವಿಧಾನಸೌಧವೂ ಸೇರಿದಂತೆ ಎಲ್ಲಾದರೂ ಸಂವಿಧಾನದ ಪ್ರತೀಕವಾದ ಪ್ರಸ್ತಾವನೆಯ ಫೋಟೊ ಇದೆಯೇ?

ಹಳೆಯ ಹರಿಕತೆಗಳನ್ನೇ ಹೇಳಿಕೊಂಡು ‘ಸಂವಿಧಾನ ದಿನ’ವನ್ನು ಶುಷ್ಕ ಆಚರಣೆಯನ್ನಾಗಿ ಮಾಡುವುದಕ್ಕಿಂತ ವಿಧಾನಸೌಧ ಮತ್ತು ಎಲ್ಲಾ ಸಾರ್ವಜನಿಕ ಕಚೇರಿಗಳಲ್ಲಿ, ಸಂಸ್ಥೆಗಳಲ್ಲಿ ಸಂವಿಧಾನದ ಫೋಟೊವನ್ನು ಹಾಕುವ ಆದೇಶವನ್ನು ಸರ್ಕಾರ ಹೊರಡಿಸುತ್ತದೆ ಎಂದು ಆಶಿಸೋಣವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT