ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ನೊಯಿಡಾ ಕಟ್ಟಡ: ಸ್ಫೋಟದ ಹಿಂದೆ...

ಈ ಕಟ್ಟಡಗಳ ಸ್ಫೋಟಕ್ಕೆ ಬಳಸಿದ ಅತ್ಯಾಧುನಿಕ ತಂತ್ರಜ್ಞಾನದ ಹಿಂದೆ ಹಾನಿಕಾರಕ ಅಮೋನಿಯಂ ನೈಟ್ರೇಟ್‌ ಬಳಕೆ ಇದೆ
Last Updated 29 ಆಗಸ್ಟ್ 2022, 19:31 IST
ಅಕ್ಷರ ಗಾತ್ರ

ನೊಯಿಡಾದ ‘ಸೂಪರ್‌ಟೆಕ್‌’ ಅವಳಿ ಕಟ್ಟಡಗಳು ನೆಲಕ್ಕುರುಳಿವೆ. ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಅವಳಿ ಕಟ್ಟಡಗಳು ಎಂಟೂವರೆ ಸೆಕೆಂಡುಗಳಲ್ಲಿ ಎಪ್ಪತ್ತು ಸಾವಿರ ಟನ್ ತ್ಯಾಜ್ಯದ ರಾಶಿಯಾಗಿ ಬಿದ್ದವು. ಕಿಲೊಮೀಟರುಗಳವರೆಗೆ ದೂಳು ತುಂಬಿಸಿದ ಸ್ಫೋಟದ ಈ ದೃಶ್ಯವನ್ನು ನಯಾಗರಾ ಜಲಪಾತವನ್ನು ನೋಡುತ್ತಿದ್ದೇವೇನೋ ಎಂಬಂತೆ ಜನರು ವೀಕ್ಷಿಸಿದರು.

ನೊಯಿಡಾದ ಸೂಪರ್‌ಟೆಕ್‌ ಎಮರಾಲ್ಡ್‌ ಕೋರ್ಟ್‌ ಎಂಬ ವಸತಿ ಸಂಕೀರ್ಣದಲ್ಲಿ 14 ಅಪಾರ್ಟು ಮೆಂಟುಗಳಿವೆ. ಇಲ್ಲಿನ ನಿವಾಸಿಗಳ ಬಳಕೆಗಾಗಿ ಮೀಸಲಿಡಬೇಕಿದ್ದ ಉದ್ಯಾನದ ಜಾಗದಲ್ಲಿ ಕಂಪನಿಯು ಅವಳಿ ಕಟ್ಟಡಗಳನ್ನು ಸೂಕ್ತ ಪ್ರಾಧಿಕಾರದ ಅನು ಮತಿಯೊಂದಿಗೆ ನಿರ್ಮಿಸಿತ್ತು. ಕಟ್ಟಡಗಳ ನಡುವಿನ ಕನಿಷ್ಠ ಅಂತರದ ಕುರಿತಾದ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು.

ಈ ಕಟ್ಟಡಗಳನ್ನು ನೆಲಕ್ಕುರುಳಿಸುವ ಹೊಣೆ ಹೊತ್ತ ಎಡಿಪೈಸ್‌ ಎಂಜಿನಿಯರಿಂಗ್‌ ಕಂಪನಿ ‘ಜಲ ಪಾತ ಒಳಸ್ಫೋಟ’ ತಂತ್ರವನ್ನು ಈ ಕಾರ್ಯಕ್ಕೆ ಆಯ್ದು ಕೊಂಡಿತು. ಈ ತಂತ್ರದ ಮೂಲಕ ಅಕ್ಕಪಕ್ಕದ ಕಟ್ಟಡ ಗಳಿಗೆ ಧಕ್ಕೆಯಾಗದ ಹಾಗೆ ಕಟ್ಟಡವನ್ನು ನೆಲಕ್ಕುರುಳಿ
ಸಲು ಸಾಧ್ಯ. ಕಟ್ಟಡವು ಜಲಪಾತದಂತೆ ತನ್ನ ಬುಡ ದಲ್ಲೇ ರಾಶಿಯಾಗಿ ಬೀಳುವಂತೆ ಈ ಕಾರ್ಯಾಚರಣೆ ನಡೆಸಲಾಗುತ್ತದೆ. ಈ ‘ವಾಟರ್‌ಫಾಲ್‌ ಇಂಪ್ಲೋಷನ್‌’ ಕಾರ್ಯಾಚರಣೆಗಾಗಿ 3,700 ಟನ್‌ ಸ್ಫೋಟಕಬಳಸಲಾಗಿದೆ. ಮದ್ದು, ಬತ್ತಿಗಳಾಗಿ ಬಳಸಿದ ಈ ನೈಟ್ರೋ ರಾಸಾಯನಿಕಗಳ ಕತೆ ಆಸಕ್ತಿದಾಯಕವಾಗಿದೆ.

ಸ್ಫೋಟಕವಾಗಿ ಬಳಸಿದ ಅನೇಕ ನೈಟ್ರೋ ರಾಸಾಯನಿಕಗಳಲ್ಲಿ ಅಮೋನಿಯಂ ನೈಟ್ರೇಟು ಕೂಡಾ ಒಂದು. ಹರಳಿನ ರೂಪದಲ್ಲಿರುವ ಈ ರಾಸಾಯನಿಕವು ಕೃಷಿಯ ದಿಕ್ಕು-ದೆಸೆಗಳನ್ನು ಬದಲಾಯಿಸಿದ ರಸ ಗೊಬ್ಬರ. ಸಸ್ಯಗಳ ಬೆಳವಣಿಗೆಗೆ, ಹಣ್ಣು ಬೆಳೆಗಳ ಉತ್ತಮ ಇಳುವರಿಗೆ ನೈಟ್ರೋಜನ್ ಬೇಕು. ಸಸ್ಯಗಳು ಪೋಷಕಾಂಶಗಳನ್ನು ಪಡೆಯಬೇಕಾದರೆ ಅವು ನೀರಿನಲ್ಲಿ ಕರಗಬೇಕಾಗುತ್ತದೆ. ಅಮೋನಿಯಂ ನೈಟ್ರೇಟಿನಲ್ಲಿ ಹತ್ತಿರ ಹತ್ತಿರ ಮೂವತ್ತು ಶೇಕಡದಷ್ಟು ನೈಟ್ರೋಜನ್ ಇರುತ್ತದೆ. ಇದು ನೀರಿನಲ್ಲಿ ಕರಗುತ್ತದೆ. ಜೊತೆಗೆ, ಬಹಳ ಅಗ್ಗ ಕೂಡಾ.

ಅಮೋನಿಯಂ ನೈಟ್ರೇಟು ಒಂದು ಶಕ್ತಿಶಾಲಿಯಾದ ಆಕ್ಸಿಡೀಕರಣ ದಲ್ಲಾಳಿ. ಹಾಗೆಯೇ, ಸಾವಿನ ದಲ್ಲಾಳಿ ಕೂಡಾ. ಶಾಖಕ್ಕೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸುವ ಅಮೋ ನಿಯಂ ನೈಟ್ರೇಟು, ಇಂತಹ ಬಾಹ್ಯಪ್ರೇರಣೆಗೆ ಕೂಡಲೇ ಪ್ರತಿಕ್ರಿಯಿಸುವ ಮೂಲಕ ರಸಗೊಬ್ಬರದಿಂದ ಸ್ಫೋಟಕ ಸಾಮಗ್ರಿಯಾಗಿ ಬದಲಾಗಬಲ್ಲದು!

ಅಮೋನಿಯಂ ನೈಟ್ರೇಟನ್ನು ಟ್ರೈ ನೈಟ್ರೋ ಟೋಲಿನ್ ಎಂಬ ಸ್ಫೋಟಕದೊಂದಿಗೋ ಡೀಸೆಲ್‌ ನಂತಹ ಇಂಧನ ತೈಲದೊಂದಿಗೋ ಬೆರಕೆ ಮಾಡಿ ಬಾಂಬು ತಯಾರಿಸುತ್ತಾರೆ. ಬಾಂಬುಗಳು ಮೂಲತಃ ಗಣಿಗಾರಿಕೆಗಾಗಿಯೇ ಕಂಡುಹಿಡಿಯಲಾದ ಸ್ಫೋಟಕ ಕಾಂಬಿನೇಷನ್‌ಗಳು. ಆನಂತರ, ರಕ್ಷಣಾಪಡೆಗಳು ಇವುಗಳನ್ನು ಬಳಸಿಕೊಂಡವು. 1996ರಲ್ಲಿ ಅಮೆರಿಕದ ಒಕ್ಲಾಮಾ ನಗರದಲ್ಲಿ ನಡೆಸಿದ ಬಾಂಬ್‌ ಸ್ಫೋಟದ ಕಾಲದಿಂದಲೂ ಅಮೋನಿಯಂ ನೈಟ್ರೇಟನ್ನು ಉಗ್ರಗಾಮಿಗಳು ಬಳಸುತ್ತಿದ್ದಾರೆ!

ಸೆಲ್ಯುಲೋಸ್ ನೈಟ್ರೇಟ್ ಮತ್ತು ನೈಟ್ರೋ ಗ್ಲಿಸರಿನ್ ಮೂಲದ ಸ್ಫೋಟಕಗಳ ಬಳಕೆ ಪ್ರಾರಂಭವಾದದ್ದು ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ. ಸರ್ ಅಲ್ಫ್ರೆಡ್ ನೊಬೆಲ್‌ ಅವರ ತಂದೆ ನಡೆಸುತ್ತಿದ್ದ ಸ್ಫೋಟಕಗಳ ಕಾರ್ಖಾನೆಯಲ್ಲಿ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿ ನೊಬೆಲ್‌ ಅವರ ಇಬ್ಬರು ತಮ್ಮಂದಿರು ಅಸುನೀಗಿದ್ದರು. ಆನಂತರ, ಅಲ್ಫ್ರೆಡ್ ನೊಬೆಲ್ ಅವರು ನಿಯಂತ್ರಿತ ರೀತಿಯಲ್ಲಿ ಬಳಸಬಹುದಾದ ಡೈನಮೈಟ್ ಎಂಬ ಸ್ಫೋಟಕ ಸಂಯೋಜನೆಯನ್ನು ತಯಾರಿಸಿದರು. ಡೈನಮೈಟ್ ತಯಾರಿಸಿದ ಕುಖ್ಯಾತಿಯಿಂದ ತಪ್ಪಿಸಿಕೊಳ್ಳಲೋಸುಗವೋ ಎಂಬಂತೆ ಅವರು ತಮ್ಮ ಆಸ್ತಿಯನ್ನೆಲ್ಲ ನೊಬೆಲ್ ಪ್ರಶಸ್ತಿ ಟ್ರಸ್ಟಿಗೆ ನೀಡಿದರು.

ಅಮೋನಿಯಂ ನೈಟ್ರೇಟು ಮತ್ತಿತರ ರಸಗೊಬ್ಬರ ಗಳನ್ನು ತಯಾರಿಸಿದ ಸಾಧನೆಗಾಗಿ ವಿಜ್ಞಾನಿ ಫ್ರಿಟ್ಜ್ ಹೇಬರ್‌ ಅವರಿಗೆ 1918ರಲ್ಲಿ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ದೊರೆಯಿತು. ಇದೇ ಹೇಬರ್ ಮಹಾ ಶಯನನ್ನು ಮೊದಲ ಮಹಾಯುದ್ಧದ ಕಾಲದಲ್ಲಿ ಜರ್ಮನಿಯ ರಾಸಾಯನಿಕ ಸಮರಪಡೆಯ ಮುಖ್ಯಸ್ಥ ರನ್ನಾಗಿಯೂ ಮಾಡಲಾಗಿತ್ತು. ಇದೇ ಹೇಬರ್ ಕದನವೊಂದರಲ್ಲಿ ಕ್ಲೋರಿನ್ ಗ್ಯಾಸ್ ದಾಳಿಯನ್ನು ನಿರ್ದೇಶಿಸಿ ಮಿತ್ರಪಡೆಯ ಸಾವಿರಾರು ಯೋಧರ ಸಾವಿಗೆ ಕಾರಣರಾಗಿದ್ದರು. ಅಮೋನಿಯಂ ನೈಟ್ರೇಟ್‌ ಎಂಬ ರಸಗೊಬ್ಬರವು ರಕ್ತವನ್ನು ಲೇಪಿಸಿ ಕೊಂಡೇ ಹುಟ್ಟಿರುವುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕೆ?

ಹದಿಮೂರನೇ ಶತಮಾನದ ಹೊತ್ತಿಗೆ ಕೋವಿ ಮದ್ದಲ್ಲದೆ ಬೇರೆ ಸ್ಫೋಟಕಗಳೇ ಗೊತ್ತಿರಲಿಲ್ಲ. ಸೆಲ್ಯುಲೋಸ್ ನೈಟ್ರೇಟ್ ಮತ್ತು ನೈಟ್ರೋ ಗ್ಲಿಸರಿನ್ ಮೂಲದ ಸ್ಫೋಟಕಗಳ ಬಳಕೆ ಪ್ರಾರಂಭವಾದದ್ದು ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ. ಟಿ.ಎನ್.ಟಿ ರಂಗಪ್ರವೇಶ ಮಾಡಿದ್ದು ಮೊದಲ ವಿಶ್ವಸಮರದ ಸಂದ ರ್ಭದಲ್ಲಿ. 1991ರಲ್ಲಿ ಆರ್.ಡಿ.ಎಕ್ಸ್ ಎಂಬ ಸ್ಫೋಟಕಕ್ಕೆ ರಾಜೀವ್‌ ಗಾಂಧಿ ಬಲಿಯಾದರು.

ಅಮೋನಿಯಂ ನೈಟ್ರೇಟನ್ನು ರಸಗೊಬ್ಬರವಾಗಿ ಬಳಸುವಾಗಲೂ ಅಪಾಯವಿದ್ದೇ ಇದೆ. ಸಂಗ್ರಹಣೆ ಮತ್ತು ಬಳಕೆಯ ಯಾವ ಹಂತದಲ್ಲಿ ಎಚ್ಚರ ತಪ್ಪಿ ದರೂ ಅನಾಹುತ ಕಟ್ಟಿಟ್ಟ ಬುತ್ತಿ. ಟೆಕ್ಸಾಸ್ ನಗರದ ರಸಗೊಬ್ಬರ ಕಾರ್ಖಾನೆಯ ದುರಂತ ಸೇರಿದಂತೆ ಎಷ್ಟೋ ಸಾವು-ನೋವುಗಳಿಗೆ ಈ ರಸಗೊಬ್ಬರ ಕಾರಣವಾಗಿದೆ.

ಹಿಂಸೆಯು ಹೀಗೆ ನೆಲ, ನೀರು, ಅನ್ನಾಹಾರಗಳನ್ನೆಲ್ಲ ಮೆತ್ತಿಕೊಂಡಿದ್ದರಿಂದಲೇ ಇರಬಹುದು, ಕಟ್ಟಡ ನೆಲಕ್ಕುರುಳುವ ದೃಶ್ಯವೂ ಮನ ಮೋಹಕವಾಗಿ ಪರಿಣಮಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT