ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಬೇಕಾಗಿದೆ ಸಮತೋಲಿತ ಶಿಕ್ಷಣ

ಎಲ್ಲಾ ಸಾಮಾಜಿಕ ಹಿನ್ನೆಲೆಯ ಮಕ್ಕಳು ಇರುವ ಶಾಲೆಗಳಲ್ಲಿ ಕಲಿಯುವವರು ಉತ್ತಮ ವ್ಯಕ್ತಿತ್ವ ಕಟ್ಟಿಕೊಳ್ಳಲು ನೆರವಾಗುವ ಅನುಭವಗಳನ್ನು ಹೊಂದುತ್ತಾರೆ
Last Updated 30 ಏಪ್ರಿಲ್ 2021, 22:16 IST
ಅಕ್ಷರ ಗಾತ್ರ

ರಾಜ್ಯದ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯ ಚಿತ್ರಣದ ವಿಶ್ಲೇಷಣೆ ಕುತೂಹಲಕಾರಿ ಅಂಶಗಳನ್ನು ಹೊರಗೆಡಹುತ್ತದೆ. 2015- 16ರಲ್ಲಿ 1ರಿಂದ 10ನೇ ತರಗತಿಗಳಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆಯು 101.14 ಲಕ್ಷ ಇತ್ತು. 2019- 20ರಲ್ಲಿ ಈ ಸಂಖ್ಯೆಯು 104.35 ಲಕ್ಷದಷ್ಟಾಗಿದೆ. ನಾಲ್ಕು ವರ್ಷಗಳ ಅವಧಿಯಲ್ಲಿ 3.21 ಲಕ್ಷದಷ್ಟು ವಿದ್ಯಾರ್ಥಿಗಳು ಹೆಚ್ಚಾದಾಗ್ಯೂ ಸರ್ಕಾರಿ ಶಾಲೆ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯಲ್ಲಿ ಕುಸಿತ ಕಂಡಿದೆ.

ಇದೇ ಅವಧಿಯಲ್ಲಿ ರಾಜ್ಯ ಹಾಗೂ ಕೇಂದ್ರ ಪಠ್ಯಕ್ರಮ ಬೋಧಿಸುವ ಒಟ್ಟು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯು 49.86 ಲಕ್ಷದಿಂದ 45.83 ಲಕ್ಷಕ್ಕೆ, ಅಂದರೆ 4.03 ಲಕ್ಷದಷ್ಟು ಇಳಿಕೆಯಾಗಿದೆ. ಅನುದಾನಿತ ಶಾಲೆಗಳಲ್ಲಿ ಇಳಿಕೆಯ ಪ್ರಮಾಣ 1.97 ಲಕ್ಷದಷ್ಟಿದೆ. ಆದರೆ ಅನುದಾನರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯು 36.51 ಲಕ್ಷದಿಂದ 45.34 ಲಕ್ಷಕ್ಕೆ, ಅಂದರೆ 8.83 ಲಕ್ಷದಷ್ಟು ಏರಿಕೆಯಾಗಿದೆ.

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕುಸಿತದ ಟ್ರೆಂಡ್ ಹಲವಾರು ವರ್ಷಗಳಿಂದ ಇರುವುದನ್ನು ಗಮನಿಸಬಹುದಾಗಿದೆ. 2006- 07ರಿಂದ 2015- 16ರವರೆಗೆ, ಅಂದರೆ 9 ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯಲ್ಲಿ 15.59 ಲಕ್ಷದಷ್ಟು ಹಾಗೂ ಅನುದಾನಿತ ಶಾಲೆಗಳಲ್ಲಿ 0.77 ಲಕ್ಷದಷ್ಟು ಕಡಿಮೆಯಾಗಿದೆ. ಆದರೆ ಇದೇ ಅವಧಿಯಲ್ಲಿ ಅನುದಾನರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 13.97 ಲಕ್ಷದಷ್ಟು ಹೆಚ್ಚಾಗಿದೆ.

2006- 07ರಿಂದ 2019- 20ರವರೆಗಿನ 13 ವರ್ಷಗಳ ಅವಧಿಯಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಕ್ರಮವಾಗಿ 19.62 ಲಕ್ಷ ಹಾಗೂ 2.74 ಲಕ್ಷ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಇದೇ ಅವಧಿಯಲ್ಲಿ ಅನುದಾನರಹಿತ ಶಾಲೆಗಳಲ್ಲಿ 22.80 ಲಕ್ಷದಷ್ಟು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ. ಸರ್ಕಾರಿ ಶಾಲೆಗಳಲ್ಲಿ ವಾರ್ಷಿಕ 1.50 ಲಕ್ಷದಷ್ಟು ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾಗಿದ್ದರೆ, ಅನುದಾನರಹಿತ ಶಾಲೆಗಳಲ್ಲಿ 1.75 ಲಕ್ಷದಷ್ಟು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಯ ನಷ್ಟ ತಡೆಗಟ್ಟಲು ಗಂಭೀರ ಪ್ರಯತ್ನಗಳ ಅಗತ್ಯವನ್ನು ಈ ಅಂಕಿ ಅಂಶಗಳು ಸ್ಪಷ್ಟಪಡಿಸುತ್ತವೆ. ಸರ್ಕಾರದ ಪ್ರಯತ್ನಗಳ ಜೊತೆಗೆ ನಾಗರಿಕ ಸಮಾಜದ ಸಕ್ರಿಯ ಭಾಗವಹಿಸುವಿಕೆಯಿಂದ ಮಾತ್ರ ಸರ್ಕಾರಿ ಶಾಲೆಗಳನ್ನು ಆಕರ್ಷಣೀಯಗೊಳಿಸಲು ಸಾಧ್ಯ. ಜನರ ವಿಶ್ವಾಸವನ್ನು ಮರಳಿ ಪಡೆಯುವ ಮೂಲಕ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯನ್ನು ಹೆಚ್ಚಿಸಲು ಸಾಧ್ಯ.

ಸಾಮಾಜಿಕ ವರ್ಗವಾರು ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯ ವಿಶ್ಲೇಷಣೆಯಲ್ಲಿ ಕಂಡುಬಂದಂತೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಲಿಯುತ್ತಿದ್ದಾರೆ. ಕುತೂಹಲದ ವಿಷಯವೆಂದರೆ, ಇದಕ್ಕೆ ವ್ಯತಿರಿಕ್ತವಾಗಿ ಮುಸ್ಲಿಂ ಸಮುದಾಯದ ಹೆಚ್ಚು ಮಕ್ಕಳು ಅನುದಾನರಹಿತ ಶಾಲೆಗಳಲ್ಲಿ ಕಲಿಯುತ್ತಿರುವುದು.

2019-20ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ವಿಧದ ಶಾಲೆಗಳ 1ರಿಂದ 10ನೇ ತರಗತಿಗಳಲ್ಲಿ ಕಲಿಯುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಂ ವಿದ್ಯಾರ್ಥಿಗಳ ವಿವರಗಳನ್ನು ಗಮನಿಸೋಣ. ಪರಿಶಿಷ್ಟ ಜಾತಿಯ ಒಟ್ಟು 19.83 ಲಕ್ಷದಷ್ಟು ವಿದ್ಯಾರ್ಥಿಗಳು ಕಲಿಯುತ್ತಿದ್ದು, ಅವರಲ್ಲಿ ಸರ್ಕಾರಿ ಶಾಲೆಗಳಲ್ಲಿ 11.72 ಲಕ್ಷ (ಶೇ 59), ಅನುದಾನಿತ ಶಾಲೆಗಳಲ್ಲಿ 2.89 ಲಕ್ಷ (ಶೇ 14.57) ಹಾಗೂ ಅನುದಾನರಹಿತ ಶಾಲೆಗಳಲ್ಲಿ 5.21 ಲಕ್ಷ (ಶೇ 26.27) ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.

ಪರಿಶಿಷ್ಟ ಪಂಗಡದ ಒಟ್ಟು 7.96 ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದು, ಅವರಲ್ಲಿ ಸರ್ಕಾರಿ ಶಾಲೆಗಳಲ್ಲಿ 5.28 ಲಕ್ಷ (ಶೇ 66.3), ಅನುದಾನಿತ ಶಾಲೆಗಳಲ್ಲಿ 0.96 ಲಕ್ಷ (ಶೇ 12) ಹಾಗೂ ಅನುದಾನರಹಿತ ಶಾಲೆಗಳಲ್ಲಿ 1.71 ಲಕ್ಷ (ಶೇ 21.5) ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಮುಸ್ಲಿಂ ಸಮುದಾಯದ ಒಟ್ಟು 16.55 ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದು ಅವರಲ್ಲಿ ಸರ್ಕಾರಿ ಶಾಲೆಗಳಲ್ಲಿ 6.05 ಲಕ್ಷ (ಶೇ 36.58), ಅನುದಾನಿತ ಶಾಲೆಗಳಲ್ಲಿ 2.24 ಲಕ್ಷ (ಶೇ 13.58) ಹಾಗೂ ಅನುದಾನರಹಿತ ಶಾಲೆಗಳಲ್ಲಿ 8.24 ಲಕ್ಷ (ಶೇ 49.8) ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ಶಾಲೆ ಒಂದು ಚಿಕ್ಕ ಸಮಾಜ. ಯಾವ ಶಾಲೆಯಲ್ಲಿ ಎಲ್ಲಾ ಸಾಮಾಜಿಕ ಹಿನ್ನೆಲೆಯ ಮಕ್ಕಳು ಇರುತ್ತಾರೋ ಅಂತಹ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ಕಟ್ಟಿಕೊಳ್ಳಲು ನೆರವಾಗುವ ಅನುಭವಗಳನ್ನು ಹೊಂದುತ್ತಾರೆ. ಈ ಹಿನ್ನೆಲೆಯಲ್ಲಿ ಗಮನಿಸಿದಾಗ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಪರಿಶಿಷ್ಟ ಜಾತಿಯ ಶೇ 73.57, ಪರಿಶಿಷ್ಟ ಪಂಗಡದ ಶೇ 78.3ರಷ್ಟು ವಿದ್ಯಾರ್ಥಿಗಳು ಇರುವುದನ್ನು ಅಸಮತೋಲನದ ಸಂಕೇತವಾಗಿ ಗಮನಿಸಬಹುದು.

ವಿದ್ಯಾರ್ಥಿಗಳ ದಾಖಲಾತಿ ಚಿತ್ರಣದ ವಿಶ್ಲೇಷಣೆಯ ಆಧಾರದ ಮೇಲೆ ಮುಂದಿನ ಹತ್ತು ವರ್ಷಗಳ ಅವಧಿಗೆ ಶಿಕ್ಷಣ ಕ್ಷೇತ್ರದ ಸಮತೋಲಿತ ಬೆಳವಣಿಗೆಯ ಅಗತ್ಯವನ್ನು ಮನಗಾಣಬೇಕಾಗಿದೆ. ಅದಕ್ಕೆ ತಕ್ಕಂತೆ ವಿವಿಧ ರೀತಿಯ ಶಾಲೆಗಳ ಬೆಳವಣಿಗೆ ಹಾಗೂ ವಿವಿಧ ಸಾಮಾಜಿಕ ವರ್ಗದ ವಿದ್ಯಾರ್ಥಿಗಳು ಎಲ್ಲಾ ವಿಧದ ಶಾಲೆಗಳಲ್ಲಿ ದಾಖಲಾಗುವಂತೆ ಅಗತ್ಯ ಉಪಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT