ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಕಾಲೇಜು ಆರಂಭಕ್ಕೆ ಮುನ್ನ...

ಶಾಲೆ–ಕಾಲೇಜುಗಳಲ್ಲಿನ ಶೈಕ್ಷಣಿಕ ವಾತಾವರಣಕ್ಕೆ ಪೂರಕವಾಗಿ ವಿದ್ಯಾರ್ಥಿಗಳು– ಶಿಕ್ಷಕರ ಮನಸ್ಸನ್ನು ಮನೋವೈಜ್ಞಾನಿಕವಾಗಿ ಹದ ಮಾಡಬೇಕಾಗಿದೆ
Last Updated 31 ಅಕ್ಟೋಬರ್ 2020, 1:22 IST
ಅಕ್ಷರ ಗಾತ್ರ

ಪದವಿ ಕಾಲೇಜುಗಳು ನವೆಂಬರ್ 17ರಿಂದ ಪುನರಾರಂಭವಾಗಲಿವೆ. ಜೊತೆಗೆ, ಸ್ನಾತಕೋತ್ತರ, ಡಿಪ್ಲೊಮಾ, ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳನ್ನೂ ಶುರು ಮಾಡಲು ತೀರ್ಮಾನಿಸಲಾಗಿದೆ. ಶಾಲೆಗಳ ಪ್ರಾರಂಭದ ದಿನಾಂಕ ನಿಗದಿ ಇನ್ನೂ ಆಗಬೇಕಿದೆ. ಶಾಲೆ–ಕಾಲೇಜುಗಳು ದೀರ್ಘ ಅವಧಿಯವರೆಗೆ ಮುಚ್ಚಿರುವ ಕಾರಣ, ಅವುಗಳ ಪುನರಾರಂಭಕ್ಕೆ ಮೊದಲು ಅನೇಕ ಸಿದ್ಧತೆಗಳು ಬೇಕಾಗಬಹುದು. ಶಾಲೆ–ಕಾಲೇಜುಗಳ ಕಟ್ಟಡ, ಮೂಲ ಸೌಕರ್ಯಗಳನ್ನು ಸ್ವಚ್ಛಗೊಳಿಸಿ ಸಜ್ಜು ಮಾಡಬೇಕಾಗುತ್ತದೆ. ಇದರ ಜೊತೆಗೆ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮನಸ್ಸನ್ನು ಶೈಕ್ಷಣಿಕ ವಾತಾವರಣಕ್ಕೆ ಪೂರಕವಾಗಿ ಹದ ಮಾಡುವ ಅಗತ್ಯವಿದೆ.

ಕೋವಿಡ್ ಕಾರಣದಿಂದ ಬಹುಪಾಲು ಎಲ್ಲಾ ಕ್ಷೇತ್ರಗಳು ವಿಭಿನ್ನ ರೀತಿಯ ಸವಾಲುಗಳನ್ನು ಎದುರಿಸುತ್ತಿವೆ. ಅದೇ ರೀತಿ ಶಿಕ್ಷಣ ಕ್ಷೇತ್ರ
ದಲ್ಲಿಯೂ ಅನೇಕ ಸವಾಲುಗಳಿದ್ದು, ಅವುಗಳಿಗೆ ಸೂಕ್ತ ರೀತಿಯ ಕಾರ್ಯತಂತ್ರಗಳನ್ನು ರೂಪಿಸಬೇಕಾಗಿದೆ. ಮೊದಲನೆಯದಾಗಿ, ದೀರ್ಘ ಅವಧಿಯವರೆಗೆ ಶೈಕ್ಷಣಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ನೇರವಾಗಿ ಭಾಗಿಯಾಗದ ಕಾರಣ, ಅವರ ಕಲಿಕೆಯ ನಿರಂತರತೆಗೆ ಧಕ್ಕೆಯಾಗಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಯಾವ ಹಂತದ ತರಗತಿಯ ವಿದ್ಯಾರ್ಥಿಗಳ ಕಲಿಕಾ ಅಂತರ ಎಷ್ಟಿದೆ ಎಂಬುದನ್ನು ಶಿಕ್ಷಕರು ಗುರುತಿಸಬೇಕಾಗುತ್ತದೆ. ವಿದ್ಯಾರ್ಥಿಗಳ ಕಲಿಕಾ ಅಂತರದ ಪ್ರಮಾಣವನ್ನು ಅಂದಾಜು ಮಾಡುವ ವಿಧಾನದ ಕುರಿತು ಶಿಕ್ಷಕರಿಗೆ ತರಬೇತಿ ನೀಡಬೇಕಾಗಬಹುದು.

ಆರಂಭಿಕ ಹಂತದ ಶಾಲಾ ತರಗತಿಗಳ ವಿದ್ಯಾರ್ಥಿ ಗಳಲ್ಲಿ ಕಲಿಕಾ ಅಂತರ ಹೆಚ್ಚಾಗಿರುವ ಸಾಧ್ಯತೆ ಇರುತ್ತದೆ. ಅದರಲ್ಲೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಕೆಳಸ್ತರದ ಹಿನ್ನೆಲೆಯ ಕುಟುಂಬ ಗಳಿಂದ ಬಂದವರಲ್ಲಿ ಇಂತಹ ಸಂಭವ ಹೆಚ್ಚು. ಈ ಸಮುದಾಯಗಳ ವಿದ್ಯಾರ್ಥಿಗಳು ಮರಳಿ ಶಾಲೆ–ಕಾಲೇಜುಗಳಿಗೆ ನಿಯಮಿತವಾಗಿ ಹಾಜ ರಾಗುವಂತೆ ಮಾಡುವುದು ಹಾಗೂ ಅವರನ್ನು ಕಲಿಕೆಯಲ್ಲಿ ನಿರಂತರವಾಗಿ ತೊಡಗಿಕೊಳ್ಳುವಂತೆ ಮಾಡುವ ಕುರಿತ ಮಾರ್ಗೋಪಾಯಗಳನ್ನು ಚಿಂತಿಸಬೇಕಾಗಿದೆ.

ವಿದ್ಯಾರ್ಥಿಗಳು ಕಲಿಕಾ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುವಂತೆ ಮಾಡುವುದು ಶಿಕ್ಷಕರಿಗೆ ಒಂದು ಸವಾಲೇ ಆಗಬಹುದು. ತರಗತಿ ಗಳು ಪ್ರಾರಂಭವಾದ ಮೊದಲ ದಿನವೇ ಪಠ್ಯಕ್ಕೆ ಸಂಬಂಧಿಸಿದ ಬೋಧನಾ ವಿಷಯಗಳನ್ನು ಕಲಿಸುವ ಆತುರ ತೋರಬೇಕಾದ ಅಗತ್ಯ ಇಲ್ಲ. ವಿದ್ಯಾರ್ಥಿಗಳಿಗೆ ಶಾಲೆ–ಕಾಲೇಜಿನ ವಾತಾವರಣಕ್ಕೆ ಹೊಂದಿ ಕೊಳ್ಳಲು ಕೆಲವು ದಿನಗಳ ಸಮಯಾವಕಾಶ ಬೇಕಾಗ ಬಹುದು. ಶಾಲೆ–ಕಾಲೇಜಿನ ಶೈಕ್ಷಣಿಕ ವಾತಾವರಣ ದಿಂದ ದೀರ್ಘ ಅವಧಿಯವರೆಗೆ ವಿದ್ಯಾರ್ಥಿಗಳು ದೂರವುಳಿದ ಕಾರಣ, ಆರಂಭದಲ್ಲಿ ಅವರ ಉತ್ಸಾಹ, ಚೇಷ್ಟೆ ಎಲ್ಲೆ ಮೀರಬಹುದು. ಕೆಲವೊಮ್ಮೆ ಕೆಲವು ವಿದ್ಯಾರ್ಥಿಗಳು ಭಯ, ಆತಂಕದಿಂದ ಗಂಭೀರವಾಗಿ ವರ್ತಿಸಬಹುದು, ಇನ್ನು ಕೆಲವರು ಮೌನ ಹಾಗೂ ಖಿನ್ನತೆಗೆ ಜಾರಬಹುದು. ಇಂತಹ ಸನ್ನಿವೇಶದಲ್ಲಿ ತಮ್ಮ ತರಗತಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗುತ್ತದೆ.

ಆರಂಭದ ಕೆಲ ದಿನಗಳು ವಿದ್ಯಾರ್ಥಿಗಳಿಗೆ ಸುರಕ್ಷತೆಯ ಪಾಠದ ಜೊತೆಗೆ ತಿಳಿಹಾಸ್ಯದಿಂದ ಕೂಡಿದ ಲಘು ಧಾಟಿಯ ತರಗತಿಗಳು ಇರುವಂತೆ ಶಿಕ್ಷಕರು ನೋಡಿಕೊಳ್ಳಬಹುದು. ತರಗತಿಗಳ ವಾತಾವರಣವನ್ನು ಕಠಿಣ ಕಲಿಕೆಯ ಶಿಸ್ತಿಗೆ ಒಳಪಡಿಸದೇ ವಿದ್ಯಾರ್ಥಿಗಳೆಡೆ ಪ್ರೀತಿ, ಆತ್ಮೀಯತೆ ತೋರುವುದು ಆದ್ಯತೆಯಾಗಬೇಕು. ವಾತಾವರಣವು ಬಿಗಿಯಾಗಿ ಇರದೆ ನಮ್ಯತೆಯಿಂದ ಕೂಡಿರುವಂತೆ ಮಾಡಲು
ಪ್ರಯತ್ನಿಸಬೇಕು.

ದೀರ್ಘ ಬಿಡುವಿನ ಕಾರಣ ಕೆಲವು ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಅಥವಾ ತರಗತಿಯ ಶಿಸ್ತಿನ ನಿಯಮಗಳಿಗೆ ತಕ್ಷಣವೇ ಹೊಂದಿಕೊಳ್ಳಲು ಕಷ್ಟವಾಗಬಹುದು. ಇಂತಹ ಸನ್ನಿವೇಶದಲ್ಲಿ ಶಿಕ್ಷಕರು ತಾಳ್ಮೆ ಮತ್ತು ಸಹನೆಯಿಂದ ವರ್ತಿಸಿ, ವಿದ್ಯಾರ್ಥಿಗಳೆಡೆ ಅನುಭೂತಿ ಹೊಂದಿ, ಅವರನ್ನು ಸ್ಥಿರ, ನಿಧಾನ ಹಾಗೂ ಹಂತ ಹಂತವಾಗಿ ಕಲಿಕೆಯ ಹಳಿಗೆ ತರಲು ಪ್ರಯತ್ನಿಸಬೇಕು. ಈ ಕಾರ್ಯದಲ್ಲಿ ಪೋಷಕರನ್ನೂ ತೊಡಗಿಸಿಕೊಳ್ಳುವ ಯೋಜನೆಯನ್ನು ರೂಪಿಸಬೇಕಾಗುತ್ತದೆ.

ವಿದ್ಯಾರ್ಥಿಗಳ ಮನಃಸ್ಥಿತಿಗೆ ಸರಿಹೊಂದುವಂತೆ ತರಗತಿಗಳ ವಾತಾವರಣವನ್ನು ಸಜ್ಜುಗೊಳಿಸಲು ಯೋಜನೆಯೊಂದನ್ನು ಸಿದ್ಧಪಡಿಸಬೇಕಾಗುತ್ತದೆ. ಪ್ರಾದೇಶಿಕವಾರು ಭಿನ್ನತೆಗಳಿಗೆ ಅನುಗುಣವಾಗಿ ಈ ಯೋಜನೆಯಲ್ಲಿ ಮಾರ್ಪಾಡು ಅವಶ್ಯವಾಗಬಹುದು. ಈ ಕುರಿತಂತೆ ಶಿಕ್ಷಕರಿಗೆ ಅಗತ್ಯ ಮಾಹಿತಿ, ತರಬೇತಿ ನೀಡಬೇಕಾಗುತ್ತದೆ.

ಶಿಕ್ಷಕರಿಗೂ ಶಾಲೆ–ಕಾಲೇಜಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗಬಹುದು. ವಿದ್ಯಾರ್ಥಿಗಳೊಂದಿಗೆ ಯಾವ ರೀತಿ ಪ್ರತಿಕ್ರಿಯಿಸಬೇಕು ಹಾಗೂ ಸುರಕ್ಷತೆಯ ಹಿನ್ನೆಲೆಯಲ್ಲಿ ಯಾವ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟ ಜಾಗೃತಿ, ಅರಿವು ಅಗತ್ಯ. ಮುನ್ನೆಚ್ಚರಿಕೆಗಳನ್ನು ತಿಳಿಸುವ ನೆಪದಲ್ಲಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಗಾಬರಿ, ಭಯ ಉಂಟಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯೂ ಇರುತ್ತದೆ. ಒಟ್ಟಿನಲ್ಲಿ, ಸುದೀರ್ಘ ಬಿಡುವಿನ ನಂತರ ಆರಂಭವಾಗಲಿರುವ ತರಗತಿಗಳನ್ನು ಒಂದಷ್ಟು ಎಚ್ಚರಿಕೆ, ಚಿಂತನೆಗಳ ನೆಲೆಯಿಂದ ಕಟ್ಟಬೇಕಾದುದು ಅನಿವಾರ್ಯ.

ಲೇಖಕ: ಹಿರಿಯ ಸಹಾಯಕ ನಿರ್ದೇಶಕ, ಡಿ.ಎಸ್.ಇ.ಆರ್.ಟಿ., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT