ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಬೈಸಿಕಲ್: ಹಸಿರು ಹಾದಿಗೆ ಕೈಮರ

ನಗರ ಪರಿಸರದ ಮುಖ್ಯ ಭಾಗವಾಗಬೇಕಿದೆ ಬೈಸಿಕಲ್ ಬಳಕೆ
Published 2 ಜೂನ್ 2023, 19:17 IST
Last Updated 2 ಜೂನ್ 2023, 19:17 IST
ಅಕ್ಷರ ಗಾತ್ರ

‘ಸಾರ್, ನಾನು ಕಲಿತಿದ್ದು ಒಂದೇ ಬೈಸಿಕಲ್. ಆದರೂ ಯಾವುದೇ ಬೈಸಿಕಲ್ ಕೊಟ್ಟರೂ ಸವಾರಿ ಮಾಡಬಲ್ಲೆ ಹೇಗೆ?’ ಎಂದು ವಿಜ್ಞಾನ ತರಗತಿಯಲ್ಲಿ ಮಾಸ್ತರನ್ನು ಒಬ್ಬ ವಿದ್ಯಾರ್ಥಿ ಪ್ರಶ್ನಿಸುತ್ತಾನೆ. ‘ನೀನು ಕಲಿತಿದ್ದು ಬೈಸಿಕಲ್ ಅಲ್ಲ, ಸಮತೋಲನದ ಸಂಕೀರ್ಣ ಕೌಶಲ’ ಅಂತ ಮಾಸ್ತರು ವಿವರಿಸುತ್ತಾರೆ. ಚಲನಶಾಸ್ತ್ರದ ನಿಯಮಗಳನ್ನು ಕ್ಷಣಕ್ಷಣಕ್ಕೂ ಪ್ರಸ್ತುತಪಡಿಸುವ ಬೈಸಿಕಲ್, ಮನುಷ್ಯ ಜೀವನದ ಅಭಿವೃದ್ಧಿ ಮತ್ತು ಮುನ್ನಡೆಯ ಪ್ರತೀಕ. ಬೈಸಿಕಲ್ ಉತ್ಪಾದನೆ ಯಾವುದೇ ಪರಿಸರ ಮಾಲಿನ್ಯ ಸೃಷ್ಟಿಸದೇ ಆಗುವುದು ವಿಶೇಷ.

ಪ್ರಸಿದ್ಧ ಪ್ರಬಂಧಕಾರ ಮಾರ್ಕ್ ಟ್ವೈನ್ ‘ಬೈಸಿಕಲ್ ಕಲಿಯಿರಿ, ನೀವೆಂದೂ ಬದುಕಿದ್ದಕ್ಕೆ ಪರಿತಪಿಸುವುದಿಲ್ಲ’ ಎಂದರು. 225 ಕಿಲೊಗ್ರಾಂ ತನಕ ಭಾರ ಹೊರಬಲ್ಲ ಈ ಸುಸ್ಥಿರ ಸಾಗಾಣಿಕೆಯ ಬೆರಗಿನ ವಾಹನ ಅದೆಷ್ಟು ಸರಳ, ಹಗುರ! ಪಾರ್ಕಿಂಗ್‍ಗೆ ಕನಿಷ್ಠ ಸ್ಥಳ, ರಸ್ತೆ ಸಂರಕ್ಷಣೆ, ಇಂಧನ ಬೇಕಿಲ್ಲ, ಹೊಗೆಯಿಲ್ಲ, ಶಬ್ದವಿಲ್ಲ, ಮನಸ್ಸಿಗೆ ಪುಳಕ, ದೇಹಕ್ಕೆ ವ್ಯಾಯಾಮ, ರಂಜನೆಗೂ ಸೈ, ಕ್ರೀಡೆಗೂ ಸೈ... ಹೀಗೆ ಸಾಗುತ್ತದೆ ಬೈಸಿಕಲ್ ಎಂಬ ಪರಿಸರಸ್ನೇಹಿ ಅದ್ಭುತ ವಾಹನದ ವಿಶೇಷಣಗಳ ದಿಬ್ಬಣ.

ವಿಶ್ವಸಂಸ್ಥೆಯು 2008ರ ಏಪ್ರಿಲ್‍ನಲ್ಲಿ ಪ್ರತಿವರ್ಷ ಜೂನ್ 3ರಂದು ‘ವಿಶ್ವ ಬೈಸಿಕಲ್ ದಿನ’ ಎಂದು ನಿಶ್ಚಯಿಸಿದ್ದರ ಔಚಿತ್ಯಕ್ಕೆ ಸಾಟಿಯಿಲ್ಲ. ಮೊದಲ ಸಡಗರಕ್ಕೆ ಜಗತ್ತು ಸಾಕ್ಷಿಯಾಗಿದ್ದು 2018ರಲ್ಲಿ. ಜಗತ್ತಿನ 193 ದೇಶಗಳು ಈ ಬೈಸಿಕಲ್ ಸಂಸ್ಕೃತಿಯ ಹಬ್ಬದಲ್ಲಿ ಪಾಲ್ಗೊಳ್ಳುತ್ತವೆ. ಪಂದ್ಯ, ಪ್ರವಾಸ, ರ್‍ಯಾಲಿ ಏರ್ಪಾಟಿನ ಮೂಲಕ ಬೈಸಿಕಲ್ ಬಳಕೆಯ ಹಿರಿಮೆಯನ್ನು ಸಾರಲಾಗುತ್ತದೆ. ಈ ಬಾರಿಯ ಧ್ಯೇಯ ವಾಕ್ಯ: ‘ಸುಸ್ಥಿರ ಸಾಗಣೆಗೆ ಬೈಸಿಕಲ್’. ಬೈಸಿಕಲ್ ಅಪಾಯ ಉಂಟುಮಾಡದ ಅಗ್ಗದ, ವೇಗದ ವಾಹನ. ನಿರ್ವಹಣಾ ವೆಚ್ಚ ನಗಣ್ಯ. ಮನುಷ್ಯ ಎಲ್ಲಿಗೆ ಹೋಗಬಲ್ಲನೋ ಅಲ್ಲೆಲ್ಲಾ ಹೋಗಿ ಬರಬಹುದಾದ ದ್ವಿಚಕ್ರ ರಥ. ಸಂಚಾರ ದಟ್ಟಣೆಯ ರಗಳೆ ಒಡ್ಡದ ಬೈಸಿಕಲ್ ನಲ್ಮೆಯ ಸಂಗಾತಿ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾದಾಗ ತತ್ಕಾಲಕ್ಕೆ ಬೈಸಿಕಲ್ ಬಗೆಗೆ ಒಲವು ತೋರುವುದಲ್ಲ. ತಪ್ಪದೇ ಅದರ ನಿಜ ಶ್ರೇಷ್ಠತೆಯನ್ನು ಮನಗಾಣಬೇಕು.

ಶಾಲೆಯ ಪ್ರಯೋಗಾಲಯದಲ್ಲಿ ಬೈಸಿಕಲ್ ಅಧ್ಯಯನದ ಒಂದು ಭಾಗವಾಗಿರುವುದು ಅಪೇಕ್ಷಣೀಯ. ಈ ಸಾಧಾರಣ ವಾಹನದ ಅಸಾಧಾರಣತೆಯನ್ನು ಮಕ್ಕಳಿಗೆ ಮನದಟ್ಟಾಗಿಸಬೇಕು. ಬೈಸಿಕಲ್ಲೋಪಾಸನೆ ಕುರಿತ ಮಜಲೊಂದು ನೆನೆದಾಗಲೆಲ್ಲಾ ನಗೆಯುಕ್ಕುತ್ತದೆ. ಆ ಕಿಶೋರನಿಗೆ ಪೂರ್ಣವಾಗಿ ಬೈಸಿಕಲ್ ಇನ್ನೂ ಹಿಡಿತಕ್ಕೆ ಬಂದಿರಲಿಲ್ಲ. ಒಮ್ಮೆ ಇಳಿಜಾರಿನಲ್ಲಿ ಸವಾರಿ ಬಂದವನೇ ಒಂದು ಮಳಿಗೆಯ ಬಳಿ ಬಿದ್ದ. ದೂಳು ಕೊಡವಿದವರ ಸಾಂತ್ವನ ಅವನಿಗೆ ಇಷ್ಟವಾಗಲಿಲ್ಲ. ಸದ್ಯಕ್ಕೆ ನಾನು ಬೈಸಿಕಲ್ಲಿನಿಂದ ಇಳಿಯೋದೇ ಹೀಗೆ ಅಂತ ರೇಗಿದ್ದ! ಯಾರೊಬ್ಬರ ಬದುಕಿನಲ್ಲೂ ಬೈಸಿಕಲ್ ಕಲಿತ ದಿನಗಳು ಅಳಿಸಲಾಗದ ರೋಚಕ ನೆನಪನ್ನು ಸೃಷ್ಟಿಸುತ್ತವೆ. ಬೈಸಿಕಲ್ ಇರದ ಬಾಲ್ಯ ಅಪೂರ್ಣ.

ಪರಿಸರ ಮಾಲಿನ್ಯ ತೀವ್ರತರವಾಗುತ್ತಿರುವ ಈ ಹಂತದಲ್ಲಿ ಬೈಸಿಕಲ್ ‘ಹಸಿರು ಹಾದಿ’ಗೆ ಕೈಮರವಾಗಬಲ್ಲದು. ಜಾಗತಿಕ ಮಟ್ಟದಲ್ಲಿ ಬೈಸಿಕಲ್ ಬಳಕೆ ತುಸು ಹೆಚ್ಚಾದರೂ ಸರಿಯೆ ವರ್ಷಕ್ಕೆ ಸರಾಸರಿ 1000 ಕೋಟಿ ಟನ್ನುಗಳಷ್ಟು ಇಂಗಾಲದ ಡೈ ಆಕ್ಷೈಡ್ ವಾತಾವರಣ ಸೇರುವುದು ತಪ್ಪುವುದು. ಬೈಸಿಕಲ್ ನಗರ ಪರಿಸರದ ಒಂದು ಮುಖ್ಯ ಭಾಗವಾಗಬೇಕಿದೆ. ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್‌ ಅವರ ಆಪ್ತ ಒಡನಾಡಿಯಾಗಿತ್ತು ಬೈಸಿಕಲ್. ‘ಬದುಕೆನ್ನುವುದು ಬೈಸಿಕಲ್ ಸವಾರಿಯಂತೆ. ನಮ್ಮ ಸಮತೋಲನ ಸಾಧಿಸಲು ನಾವು ಚಲಿಸುತ್ತಲೇ ಇರಬೇಕು’ ಎಂದು ಅವರು ಹೇಳುತ್ತಿದ್ದರು.

ಡೆನ್ಮಾರ್ಕ್ ದೇಶದಲ್ಲಿ ಪ್ರತಿ ಹತ್ತು ಮಂದಿಗೆ ಒಂಬತ್ತು ಮಂದಿ ಬೈಸಿಕಲ್ ಹೊಂದಿದ್ದಾರೆ. ನೆದರ್‌ಲ್ಯಾಂಡ್ಸ್‌ನಲ್ಲಿ ಶೇಕಡ 27ರಷ್ಟು ಸ್ಥಳೀಯ ಸಾರಿಗೆ ಬೈಸಿಕಲ್ಲಿಂದಲೇ. ಸ್ಪೇನ್ ದೇಶದ ಬಾರ್ಸಿಲೋನಾ ನಗರದಲ್ಲಿ ಒಟ್ಟು 300 ಕಿ.ಮೀ. ಉದ್ದದ ಬೈಸಿಕಲ್ ಹಾದಿಯಿದೆ. ಬೈಸಿಕಲ್ ಮೇಲೆ ವಿಶ್ವ ಪರ್ಯಟನೆ ಆರಂಭವಾಗುವುದು ಪೆಡಲ್ ಮೇಲಿನ ಒಂದು ಸಣ್ಣ ತುಳಿತದಿಂದ ಎಂಬ ಮಾತಿದೆ. ಸಾಗಣೆಯ ವಿಧಾನವಾಗಿ ಬೈಸಿಕಲ್‍ನ ಉಪಯೋಗದ ಜನಪ್ರಿಯತೆ ಬಣ್ಣನೆಗೆ ಮೀರಿದ್ದು. ಬೆಳಕು ಹರಿಯುವ ಮುನ್ನವೇ ಸದ್ದಿಲ್ಲದೆ ಹಾಲು, ದಿನಪತ್ರಿಕೆ, ಹೂವು ಮನೆಯ ಬಾಗಿಲಿನಲ್ಲಿರುವ ಪವಾಡದ ಹಿಂದೆ ಬೈಸಿಕಲ್ಲಿದೆ. ಅದು ಅಸಂಖ್ಯ ಮಂದಿಗೆ ಜೀವನೋಪಾಯ ಕಲ್ಪಿಸಿದೆ. ಉತ್ತರ ಅಮೆರಿಕದಲ್ಲಿ ಬೈಸಿಕಲ್ಲಿಗೆ ಕಾರಿನ ಆಕಾರ ನೀಡಿ ಮಳೆ, ಬಿಸಿಲಿನಲ್ಲೂ ಬಳಸಬಹುದಾದಂತೆ ನಿರ್ಮಿಸಲಾಗುತ್ತದೆ. ಬೈಸಿಕಲ್ ಮೇಲೆಯೇ ಕಾಫಿಯೇನು, ದೋಸೆಯನ್ನೇ ಹುಯ್ದು ಕೊಡುತ್ತಾರೆ!

ಕಾರುಗಳ ಉತ್ಪಾದನೆ, ಸರ್ವೀಸು, ದುರಸ್ತಿ, ವಿಲೇವಾರಿಗೆ ಕಡಿವಾಣ ಹಾಕುತ್ತದೆ ಮಾಂತ್ರಿಕ ಬೈಸಿಕಲ್. ಅದರ ತಯಾರಿಗೆ ಅತಿ ಕಡಿಮೆ ರಬ್ಬರ್ ಸಾಕಾಗುವ ಕಾರಣ ಅರಣ್ಯ ನಾಶಕ್ಕೆ ಗಮನಾರ್ಹವಾಗಿ ತಡೆಯಾಗುವುದು. ನೀವು ನೌಕರಿ ಸ್ಥಳಕ್ಕೆ, ಶಾಲೆಗೆ, ಮಾರುಕಟ್ಟೆಗೆ ಅಥವಾ ವ್ಯಾಯಾಮದ ಸಲುವಾಗಿ ಬೈಸಿಕಲ್ ಏರಿದಿರಿ ಅನ್ನಿ. ಒಂದಂತೂ ಸ್ಪಷ್ಟ, ಪೆಡಲ್‍ನ ಒಂದೊಂದು ಸುತ್ತೂ ನಮ್ಮ ವಾಸನೆಲೆ ಭೂಗ್ರಹದ ಆರೋಗ್ಯವನ್ನು ಸಂರಕ್ಷಿಸುವುದು. ನಿಗದಿತ ಸ್ಥಳಕ್ಕೆ ಹೊರಡುವ ಮೊದಲೇ ಬೈಸಿಕಲ್ ಪ್ರಯಾಣದ ಅವಧಿಯನ್ನು ನಿಖರವಾಗಿ ಇಂತಿಷ್ಟೇ ಅಂತ ಮುಂಗಾಣಬಹುದು. ಏಕೆಂದರೆ ತಲುಪುವ ಸ್ಥಳದತ್ತ ಸಾಗುವಾಗ ಸವಾರರ ಪೈಪೋಟಿಯ ರಂಪವಿರದು.

ಸ್ವಾರಸ್ಯ ಗೊತ್ತೇ? 5 ಕಿ.ಮೀ. ಕ್ರಮಿಸಲು ಕಾರಿಗೆ ಹೋಲಿಸಿದರೆ ಬೈಸಿಕಲ್ ಸರಾಗ, ತ್ವರಿತ. ಈ ದೃಷ್ಟಿಯಿಂದಲಾದರೂ ಮಾರುಕಟ್ಟೆ ಹತ್ತಿರವಿದ್ದರೂ ಕಾರಿನ ಮೇಲಿನ ಅವಲಂಬನೆ ನಿಲ್ಲಬೇಕು ತಾನೆ? ವೃದ್ಧರು ಬೈಸಿಕಲ್ಲನ್ನು ಬಿಟ್ಟಿರಲಾಗದೆ ಅದನ್ನು ವಾಕರ್ ಆಗಿಸಿಕೊಳ್ಳುವುದೂ ಉಂಟು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT