ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ– ಸಂಕುಚಿತ ಭಾವ ಹೊರತಾಗಲಾರನೇ ಗುರು?

ಶಿಕ್ಷಕರು ಏನನ್ನು ಮಾಡಬಾರದೆಂದು ತರಬೇತಿ ಕಾರ್ಯಾಗಾರಗಳಲ್ಲಿ ತಿಳಿಸಲಾಗುವುದೋ ಕೆಲವರು ಅದನ್ನೇ ಜಾರಿಗೆ ತರಲು ಹೊರಟಿದ್ದಾರೆ
Last Updated 8 ಫೆಬ್ರುವರಿ 2022, 21:15 IST
ಅಕ್ಷರ ಗಾತ್ರ

ಶಾಲಾ-ಕಾಲೇಜುಗಳಲ್ಲಿ ಕಲಿಕಾ ಗುಣಮಟ್ಟ ಹೆಚ್ಚಿಸಲು ಚಟುವಟಿಕೆ ಆಧಾರಿತ ಕಲಿಕೆಗೆ ಒತ್ತು ನೀಡುವ ಸಲುವಾಗಿ ಶಿಕ್ಷಕರನ್ನು ಸಜ್ಜುಗೊಳಿಸುವ ಪ್ರಕ್ರಿಯೆಗೆ ಕಳೆದ ಕೆಲ ವರ್ಷಗಳಿಂದ ವೇಗ ದಕ್ಕಿದೆ. ಎಂಜಿನಿಯರಿಂಗ್ ಕಾಲೇಜುಗಳ ಶಿಕ್ಷಕರಿಗೆ ಇತ್ತೀಚೆಗೆ ಆಯೋಜಿಸಿದ್ದ ಇಂತಹದ್ದೇ ಒಂದು ತರಬೇತಿ ಕಾರ್ಯಾ ಗಾರದಲ್ಲಿ ಮಾತನಾಡಿದ ಕೋಲ್ಕತ್ತದ ರಾಷ್ಟ್ರೀಯ ತಾಂತ್ರಿಕ ಶಿಕ್ಷಕರ ತರಬೇತಿ ಮತ್ತು ಸಂಶೋಧನಾ ಸಂಸ್ಥೆಯ (ಎನ್‍ಐಟಿಟಿಟಿಆರ್) ಪ್ರಾಧ್ಯಾಪಕಡಾ. ಅರ್ಪಣ್ ಕುಮಾರ್ ಮೊಂಡಲ್, ಚಟುವಟಿಕೆ ಹಾಗೂ ಯೋಜನೆ (ಪ್ರಾಜೆಕ್ಟ್) ಆಧಾರಿತ ಕಲಿಕೆಗೆ ವಿದ್ಯಾರ್ಥಿಗಳ ಗುಂಪು ರಚಿಸಲು ಅನುಸರಿಸಬೇಕಾದ ಮಾನದಂಡಗಳ ಕುರಿತು ನೀಡಿದ ಮಾರ್ಗದರ್ಶನ ಗಮನಾರ್ಹವಾಗಿತ್ತು.

‘ಯೋಜನೆ ಆಧಾರಿತ ಕಲಿಕೆಯಿಂದ (ಪಿಬಿಎಲ್) ಉತ್ತಮ ಫಲಿತಾಂಶ ಪಡೆಯಲು ಭಿನ್ನ ಹಿನ್ನೆಲೆಯ ವಿದ್ಯಾರ್ಥಿಗಳು ಒಂದುಗೂಡಿ ಕಲಿಯುವಂತೆ ಮಾಡು ವುದು ಅತ್ಯಗತ್ಯ. ಸಾಧ್ಯವಾದಷ್ಟೂ ಭಿನ್ನ ಲಿಂಗ, ಜಾತಿ, ಧರ್ಮ, ಪ್ರದೇಶದ ವಿದ್ಯಾರ್ಥಿಗಳು ಗುಂಪಿನಲ್ಲಿರು
ವಂತೆ ನೋಡಿಕೊಳ್ಳಿ’ ಎಂದು ಅವರು ಎಂಜಿನಿಯರಿಂಗ್ ಕಾಲೇಜುಗಳ ಶಿಕ್ಷಕರಿಗೆ ತಿಳಿ ಹೇಳಿದರು. ಹೀಗೆ ಮಾಡುವ ಅಗತ್ಯ ಏಕಿದೆ ಎಂಬುದನ್ನೂ ವಿವರಿಸಿದ ಅವರು, ‘ವಿದ್ಯಾರ್ಥಿಗಳು ಓದು ಮುಗಿಸಿದ ನಂತರ ಕೆಲಸಕ್ಕೆ ಸೇರಿದರೆ ಅಲ್ಲಿ ವಿವಿಧ ಹಿನ್ನೆಲೆಯ ಜನರೊಂದಿಗೆ ಸೌಹಾರ್ದಯುತವಾಗಿ ಬೆರೆತು ಕೆಲಸ ಮಾಡುವ ಸನ್ನಿವೇಶ ಎದುರಾಗುತ್ತದೆ. ಅದಕ್ಕೆ ಈಗಲೇ ಅವರನ್ನು ಅಣಿಗೊಳಿಸುವುದು ನಮ್ಮ ಆದ್ಯತೆಯಾಗಬೇಕು’ ಎಂದರು.

ಕೆಲ ದಿನಗಳಿಂದ ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದ ಮತ್ತು ಅದರ ಸುತ್ತಲಿನ ವಿದ್ಯಮಾನಗಳನ್ನು ಗಮನಿಸಿದರೆ, ಶಿಕ್ಷಕರಾದವರು ಏನನ್ನು ಮಾಡಬಾರದೆಂದು ತರಬೇತಿ ಕಾರ್ಯಾಗಾರ ಗಳಲ್ಲಿ ತಿಳಿಸಿಕೊಡಲಾಗುವುದೋ ಅದನ್ನೇ ಜಾರಿಗೆ ತರಲು ಕೆಲವರು ಇನ್ನಿಲ್ಲದ ಮುತುವರ್ಜಿ ತೋರು ತ್ತಿರುವಂತೆ ಭಾಸವಾಗುತ್ತಿದೆ. ಭಿನ್ನ ಹಿನ್ನೆಲೆ, ಸಂಸ್ಕೃತಿಯ ವಿದ್ಯಾರ್ಥಿಗಳು ಒಂದುಗೂಡಿ ಕಲಿಯಲು ಅಗತ್ಯವಿರುವ ಸೌಹಾರ್ದ ವಾತಾವರಣ ನಿರ್ಮಿಸಲು ಶ್ರಮಿಸಬೇಕಿದ್ದವರೇ, ವಿದ್ಯಾರ್ಥಿಗಳು ಧಾರ್ಮಿಕ ವಿಷಯಗಳಿಗೆ ಕಾದಾಡಿಕೊಂಡು ತಮ್ಮ ಸಹಪಾಠಿಗಳ ವಿರುದ್ಧವೇ ಹಗೆ ಸಾಧಿಸುವಂತೆ ಪ್ರಚೋದಿಸುತ್ತಿರು
ವುದು ವಿಪರ್ಯಾಸ.

ಎರಡು ವರ್ಷಗಳಿಂದ ಕೊರೊನಾ ಕಾರಣಕ್ಕೆ ವಿದ್ಯಾರ್ಥಿಗಳ ಸಹಜ ಕಲಿಕೆಗೆ ತಡೆ ಬಿದ್ದಿದೆ. ಈಗಷ್ಟೇ ಶಾಲಾ-ಕಾಲೇಜುಗಳತ್ತ ಮತ್ತೆ ಮುಖಮಾಡುತ್ತಿರುವ ವಿದ್ಯಾರ್ಥಿಗಳನ್ನು ಕಲಿಕೆಗೆ ಅಣಿಗೊಳಿಸುವ ಸವಾಲು ಎದುರಿಸುವುದು ಹೇಗೆಂದು ಚಿಂತಿಸಬೇಕಿದ್ದ ಶಿಕ್ಷಕರು ಹಾಗೂ ನೀತಿ ನಿರೂಪಕರು, ಹಿಜಾಬ್ ಧರಿಸಿಕೊಂಡು ಬರುವ ಮಕ್ಕಳನ್ನು ಸೇರಿಸಬೇಕೋ ಬೇಡವೋ ಎನ್ನುವ ಕ್ಷುಲ್ಲಕ ವಿಷಯದ ಕುರಿತು ಚರ್ಚಿಸುವಂತಾದುದು ನಾಚಿಕೆಗೇಡು.

ಮನೆಯಲ್ಲಿನ ಆರ್ಥಿಕ ಬಿಕ್ಕಟ್ಟಿನಿಂದಾಗಿ ಬಹಳಷ್ಟು ವಿದ್ಯಾರ್ಥಿಗಳಿಗೆ ಓದು ಮುಂದುವರಿಸುವುದೇ ಸವಾ ಲಾಗಿದೆ. ಈಗಷ್ಟೇ ಓದು ಮುಗಿಸಿರುವ ಯುವಸಮೂಹ ಅರ್ಹತೆಗೆ ತಕ್ಕ ಕೆಲಸ ಸಿಗದೆ ಪರಿತಪಿಸುತ್ತಿದೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಮಯ ಹಾಗೂ ಸಂಪನ್ಮೂಲಗಳನ್ನು ವಿನಿಯೋಗಿಸಬೇಕಿದ್ದ ನಮ್ಮನ್ನಾಳುವವರು, ಯುವ ಸಮುದಾಯದ ನಡುವೆ ಧರ್ಮದ ಕಂದಕ ಸೃಷ್ಟಿಸಿ, ಅವರ ಗಮನ ಸರ್ಕಾರದ ವೈಫಲ್ಯಗಳ ಕಡೆಗೆ ತಿರುಗದಿರುವಂತೆ ನೋಡಿಕೊಳ್ಳುವುದರಲ್ಲಿ ತಲ್ಲೀನರಾಗಿದ್ದಾರೆ.

ಎಂಜಿನಿಯರಿಂಗ್ ಮೊದಲ ಸೆಮಿಸ್ಟರ್ ವಿದ್ಯಾರ್ಥಿ ಗಳಿಗೆ ಕಾಲೇಜು ಕ್ಯಾಂಪಸ್‍ನಲ್ಲಿ ಹೇಗಿರಬೇಕು, ಏನೆಲ್ಲ ಮಾಡಬಾರದು ಎಂಬ ಕುರಿತು ಮಾರ್ಗದರ್ಶನ ನೀಡುತ್ತಿದ್ದ ಹಿರಿಯ ಪ್ರಾಧ್ಯಾಪಕರೊಬ್ಬರು ಆಡಿದ ಮಾತುಗಳು ಕೆಲವು ಶಿಕ್ಷಕರ ಮನಃಸ್ಥಿತಿಗೆ ಕನ್ನಡಿ ಹಿಡಿಯುತ್ತಿದ್ದವು. ‘ನೀವೆಲ್ಲ ಏನಾದ್ರೂ ಕಾಲೇಜು ಕ್ಯಾಂಟೀನ್ ಕಟ್ಟೆ ಮೇಲೆ ಕುಳಿತು ಹರಟೆ ಹೊಡೆಯೋದು ಕಣ್ಣಿಗೆ ಬಿದ್ರೆ ನಾನು ಸುಮ್ಮನಿರಲ್ಲ. ನಿಮ್ಮ ಗಮನ ಓದುವುದರ ಕಡೆಗೆ ಮಾತ್ರ ಇರ್ಬೇಕು. ಓದಲು ಕ್ಯಾಂಟೀನ್‌ ಸೂಕ್ತವಾದ ಸ್ಥಳವಲ್ಲ’ ಅಂತ ಎಚ್ಚರಿಕೆ ನೀಡುತ್ತಿದ್ದರು. ಹುಡುಗ-ಹುಡುಗಿ ಒಟ್ಟಿಗೆ ಕುಳಿತು ಮಾತನಾಡುವುದನ್ನು ಎಂದಿಗೂ ಸಹಿಸದ ಅವರು, ಅದನ್ನು ನೇರವಾಗಿ ಹೇಳಲು ಸಾಧ್ಯವಾಗದೆ ಸುತ್ತಿಬಳಸಿ ಹೇಳಲು ಮುಂದಾಗಿದ್ದರು.

ಜಾತಿ, ಧರ್ಮ, ಉಡುಗೆ, ಕೇಶವಿನ್ಯಾಸ, ಬಾಹ್ಯ ರೂಪ, ಹುಡುಗ-ಹುಡುಗಿ ನಡುವಿನ ಬಾಂಧವ್ಯ ಇವುಗಳ ಕುರಿತು ಎಷ್ಟೋ ಶಿಕ್ಷಕರು ತೀರಾ ಸಂಕುಚಿತ ಪ್ರಜ್ಞೆ ಹೊಂದಿರುತ್ತಾರೆ. ಅವುಗಳನ್ನೆಲ್ಲ ತೀರಾ ಬಹಿರಂಗವಾಗಿ ವ್ಯಕ್ತಪಡಿಸಲು ಹಿಂಜರಿಯುವ ವಾತಾ ವರಣ ತಾವು ಕಾರ್ಯನಿರ್ವಹಿಸುವ ಶಿಕ್ಷಣ ಸಂಸ್ಥೆಗಳಲ್ಲಿ ಇದ್ದ ಕಾರಣದಿಂದ ಅವರೆಲ್ಲ ಇಷ್ಟು ದಿನ ಹೇಗೋ ಸುಮ್ಮನಿದ್ದರು. ಬದಲಾದ ಸಾಮಾಜಿಕ ಸನ್ನಿವೇಶದಿಂದಾಗಿ ಇಂತಹ ಶಿಕ್ಷಕರ ಸಂಕುಚಿತ ಮನೋಭಾವವೇ ಮೌಲ್ಯವಾಗಿ ತೋರತೊಡಗಿದರೆ ಅಚ್ಚರಿ ಪಡುವಂತಿಲ್ಲ.

ಧಾರ್ಮಿಕ ದ್ವೇಷದ ನಂಜು ತುಂಬಿಕೊಂಡಿರುವ ಕೆಲವು ಶಿಕ್ಷಕರಿಗೆ ಇತ್ತೀಚೆಗಿನ ಹಿಜಾಬ್ ವಿವಾದ ಮತ್ತು ಅದನ್ನು ಸರ್ಕಾರ ನಿರ್ವಹಿಸಿದ ರೀತಿಯಿಂದ ರವಾನೆಯಾಗುತ್ತಿರುವ ಸಂದೇಶ ಯಾವುದೆಂದು ಅರಿಯಲು ಹೆಚ್ಚೇನೂ ತಿಣುಕಾಡಬೇಕಿಲ್ಲ. ತಮ್ಮೊಳಗಿನ ಸಂಕುಚಿತ ಪ್ರಜ್ಞೆಗೆ ಆಳುವವರೇ ನೀರೆರೆಯುತ್ತಾರೆಂಬ ಸೂಚನೆ ಸಿಕ್ಕರೆ ಇವರಿಗಿಂತಲೂ ಒಂದು ಹೆಜ್ಜೆ ಮುಂದಿಡಲು ಅಣಿಯಾಗಿರುವ ಕೆಲವು ಶಿಕ್ಷಕರು, ಮಕ್ಕಳ ಭವಿಷ್ಯ ವನ್ನು ಹೇಗೆ ರೂಪಿಸಬಹುದೆಂದು ನಾವು ಚಿಂತಿಸಬೇಕಲ್ಲವೇ? ದ್ವೇಷ ತುಂಬಿದ ಸಮಾಜ ರೂಪಿಸುವುದೇ ಇಂದಿನ ಆದ್ಯತೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT