ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನಿ, ಸಂವಿಧಾನ ಪಂಥೀಯರಾಗೋಣ...

ಸಂವಿಧಾನದ ಆಶಯ ಪ್ರತಿಪಾದಿಸುವ ಸಂವಿಧಾನ ಪಂಥ ನಮಗಿಂದು ಬೇಕು
Last Updated 21 ಫೆಬ್ರುವರಿ 2019, 20:25 IST
ಅಕ್ಷರ ಗಾತ್ರ

ಈಚಿನ ದಿನಗಳಲ್ಲಿ ಎಡ, ಬಲ, ಮಧ್ಯಮ ಮೊದಲಾದ ಪಂಥಗಳ ತಿಕ್ಕಾಟಗಳು ಸಾಹಿತ್ಯ ವಲಯವನ್ನು ಮೀರಿ ಸಾರ್ವಜನಿಕ ವಲಯಕ್ಕೆ ಚಲಿಸಿವೆ. ಇಲ್ಲಿ ಬಗೆಬಗೆಯ ಚರ್ಚೆಗಳು ಚಾಲ್ತಿಯಲ್ಲಿದ್ದು, ಜನರನ್ನು ಪರಸ್ಪರ ವಿರುದ್ಧ ಗುಂಪುಗಳನ್ನಾಗಿಸಿವೆ. ಈ ಪಂಥಗಳನ್ನು ಸರಳ ರೇಖಾತ್ಮಕವಾಗಿ ಒಂದು ವ್ಯಾಖ್ಯಾನಕ್ಕೆ ಕಟ್ಟಿಹಾಕುವುದು ತಪ್ಪು.

ಇವುಗಳ ಬಗ್ಗೆ ದೀರ್ಘ ಚರ್ಚೆ, ಸಂವಾದ, ಪರಸ್ಪರ ಮಾತುಕತೆ ಮೂಲಕವಷ್ಟೇ ಒಂದು ಸ್ಪಷ್ಟತೆ ಪಡೆಯಲು ಸಾಧ್ಯ. ಇಂತಹ ವಾತಾವರಣ ತತ್‌ಕ್ಷಣಕ್ಕೆ ಸಾಧ್ಯವಾಗದ ಕಾರಣ, ಈ ದೇಶದ ಜನರಿಗೆ ಸರಳವಾಗಿ ದಕ್ಕುವ, ಆಚರಣೆಯಲ್ಲಿಯೂ ತರಬಹುದಾದ ಪಂಥವೊಂದನ್ನು ಶೋಧಿಸಬೇಕಿದೆ.

ಹೀಗೆ ಇಡೀ ಭಾರತೀಯರನ್ನು ಸಮಾನವಾಗಿ ಬೆಸೆಯುವ ಆಲೋಚನೆಯ ಮೊತ್ತವೇ ಭಾರತದ ಸಂವಿಧಾನ. ನಮ್ಮ ಸಂವಿಧಾನವನ್ನು ಗೌರವಿಸಿ, ಅದರ ಆಶಯಗಳಂತೆ ಬದುಕುವ ತಿಳಿವಿನ ನೆಲೆಯನ್ನು ಒಂದು ಪಂಥ ಎನ್ನುವುದಾದರೆ, ಅದುವೇ ಸಂವಿಧಾನ ಪಂಥ. ಹಾಗಾಗಿ ಕುವೆಂಪು ಅವರು ಎಲ್ಲ ಮತಗಳ ಹೊಟ್ಟು ತೂರಿ ಮನುಜಮತಕ್ಕೆ ಆಹ್ವಾನಿಸುವುದಕ್ಕೆ ಪೂರಕವಾಗಿ, ‘ಎಲ್ಲ ಪಂಥಗಳ ಹೊಟ್ಟು ತೂರಿ ಸಂವಿಧಾನ ಪಂಥಕ್ಕೆ ಬನ್ನಿ’ ಎಂದು ಕರೆ ಕೊಡಬೇಕಿದೆ.

ಸಂವಿಧಾನ ಪಂಥದ ಮೂಲ ಗ್ರಂಥ ‘ಭಾರತದ ಸಂವಿಧಾನ’ ಮತ್ತು ಈ ಪಂಥದ ಬೀಜಮಂತ್ರವೇ ಸಂವಿಧಾನದ ಪ್ರಸ್ತಾವನೆ. ಡಾ. ಬಿ.ಆರ್. ಅಂಬೇಡ್ಕರ್ ಅವರೇ ಈ ಪಂಥದ ಮಾರ್ಗದರ್ಶಕ. ಈ ಪಂಥದ ವಿಶ್ಲೇಷಣೆ ಮತ್ತು ಅರಿವಿಗಾಗಿ ಬಳಸಬಹುದಾದ ಪ್ರಾಥಮಿಕ ಪಠ್ಯಗಳೆಂದರೆ ಸಂವಿಧಾನದ ಪಠ್ಯ, ಸಂವಿಧಾನ ರಚನಾ ಪೂರ್ವದ ಚರ್ಚೆ, ಸಂವಾದದ ಪಠ್ಯಗಳು, ಅಂತೆಯೇ ಅಂಬೇಡ್ಕರ್ ಅವರ ಸಮಗ್ರ ಬರಹದ ಸಂಪುಟಗಳು. ಸಂವಿಧಾನದ ಆಶಯವನ್ನು ವಿಸ್ತರಿಸಿದ ಗಾಂಧಿ, ಲೋಹಿಯಾ, ಪೆರಿಯಾರ್ ಮುಂತಾದವರ ಬರಹಗಳನ್ನು ಪೂರಕ ಪಠ್ಯಗಳನ್ನಾಗಿ ಬಳಸಬಹುದಾಗಿದೆ.

ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನೂ, ಅಭಿವ್ಯಕ್ತಿ, ನಂಬಿಕೆ, ಧರ್ಮ, ಉಪಾಸನೆಯ ಸ್ವಾತಂತ್ರ್ಯವನ್ನೂ, ಅವಕಾಶಗಳ ಸಮತೆಯನ್ನೂ ದೊರೆಯುವಂತೆ ಮಾಡುವುದು ಸಂವಿಧಾನದ ಆಶಯ. ಈ ಮೂಲ ತತ್ವಗಳನ್ನು ಬದುಕನ್ನಾಗಿಸಿಕೊಂಡು ಸಂವಿಧಾನವನ್ನು ಮತ್ತಷ್ಟು ಬಲಪಡಿಸುವ ಹೊಣೆಗಾರಿಕೆಯನ್ನು ಪ್ರತಿ ಪ್ರಜೆಯೂ ಹೊರಬೇಕಾಗಿದೆ. ಇದುವೇ ಸಂವಿಧಾನ ಪಂಥದ ಮೂಲ ತತ್ವ. ಈ ತತ್ವಕ್ಕೆ ಅನುಗುಣವಾಗಿ ಸಾಮಾಜಿಕ ಪರಿಭಾಷೆ ಮತ್ತು ನುಡಿಗಟ್ಟುಗಳನ್ನು ಮರುರೂಪಿಸಬೇಕಿದೆ.

ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆಯುವವರನ್ನು ‘ದೇಶಭ್ರಷ್ಟ’ರೆಂದು ಗುರುತಿಸಬೇಕಿದೆ. ಈ ಪ್ರಕಾರ, ಜಾತಿ ಆಚರಣೆಯೂ ದೇಶದ್ರೋಹವಾಗುತ್ತದೆ. ಸಂವಿಧಾನದ ಆಶಯಕ್ಕೆ ಪೂರಕವಾಗಿ ನಡೆಯುವುದೇ ನಿಜವಾದ ದೇಶಭಕ್ತಿಯಾಗುತ್ತದೆ. ಉದಾಹರಣೆಗೆ, ಈಚೆಗೆ ಕರ್ನಾಟಕದಲ್ಲಿ ಜಸ್ಟಿಸ್ ಎಚ್.ಎನ್.ನಾಗಮೋಹನ ದಾಸ್‌ ಅವರ ಮುಂದಾಳತ್ವದಲ್ಲಿ ‘ಸಂವಿಧಾನ ಓದು’ ಅಭಿಯಾನ ನಡೆಯುತ್ತಿದೆ. ಇಂತಹ ದೇಶಭಕ್ತಿ ಕ್ರಿಯೆಯಲ್ಲಿ ನಾವೆಲ್ಲರೂ ಜಾತಿ, ಧರ್ಮ, ಲಿಂಗ, ವರ್ಗ ಭೇದ ಮರೆತು ಒಟ್ಟಾಗಬೇಕಿದೆ.

ಪಾರಂಪರಿಕ ಜನಪದ ಸಾಹಿತ್ಯ ಆಚರಣೆ, ನಂಬಿಕೆಗಳ ಲೋಕವನ್ನು ಮುಂದುವರಿಸುವಾಗ ಸಂವಿಧಾನದ ಜರಡಿಯಲ್ಲಿ ಸೋಸಬೇಕು. ಅಂತೆಯೇ ಸಾಹಿತ್ಯ ವಿಮರ್ಶೆಯ ಮಾನದಂಡವಾಗಿಯೂ ಸಂವಿಧಾನದ ಪರಿಭಾಷೆಯನ್ನು ಮರುರೂಪಿಸಿಕೊಳ್ಳಬೇಕಾಗಿದೆ. ಜನರ ಸಂವೇದನೆಯನ್ನು ರೂಪಿಸುವ ಯಾವುದೇ ಕವಿತೆ, ಕತೆ, ಕಾದಂಬರಿ, ವಿಮರ್ಶೆಯಂತಹ ಓದುಗಳನ್ನು ಪ್ರೇರೇಪಿಸಬೇಕಿದೆ.

ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನೆಗಳು ಕೂಡ ಸಂವಿಧಾನದ ಆಶಯಗಳನ್ನು ಸೂಕ್ಷ್ಮವಾಗಿ ವಿಸ್ತರಿಸುವ ಪಠ್ಯಗಳಾಗಬೇಕಿದೆ. ಯಾವುದೇ ಸಮುದಾಯದ ಅಧ್ಯಯನ ಆಯಾ ಸಮುದಾಯ ಅನುಭವಿಸಿದ ಅಸಮಾನತೆ, ಅನ್ಯಾಯಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿ ಆ ಸಮುದಾಯ ಸಂವಿಧಾನಬದ್ಧ ಅವಕಾಶಗಳಿಗೆ ತೆರೆದುಕೊಳ್ಳುವಂತೆ ಪ್ರಜ್ಞಾವಂತರನ್ನಾಗಿಸಬೇಕಿದೆ. ಅಂತೆಯೇ ಪ್ರಭುತ್ವಕ್ಕೂ ಈ ಸಂಶೋಧನೆಯ ಫಲಿತಗಳನ್ನು ಸಲ್ಲಿಸಿ ಆಯಾ ಸಮುದಾಯ ಅಭಿವೃದ್ಧಿಯಾಗಲು ಹಕ್ಕೊತ್ತಾಯ ಮಂಡನೆಯಾಗಬೇಕಿದೆ.

ಸಂವಿಧಾನದ ಆಶಯ ಈಡೇರಿಕೆಗೆ ನೆರವಾಗುವ ಯಾವುದೇ ಹೋರಾಟವನ್ನು ದೇಶಭಕ್ತಿಯ ಚಳವಳಿಯೆಂದು ಬೆಂಬಲಿಸುವ ಮತ್ತು ಪಾಲ್ಗೊಳ್ಳುವ ಹೊಣೆಗಾರಿಕೆಯೂ ನಮ್ಮ ಮೇಲಿದೆ. ಮಾಧ್ಯಮಗಳು ಕೂಡ ಸಂವಿಧಾನದ ಆಶಯಗಳನ್ನು ವ್ಯಾಪಕವಾಗಿ ವಿಸ್ತರಿಸುವ ಕೊಂಡಿಗಳಾಗಬೇಕು. ಆದರೆ ಇಂದು ಬಹುಪಾಲು ಮೀಡಿಯಾಗಳು ಜನರಲ್ಲಿ ಮೂಢನಂಬಿಕೆಗಳನ್ನು ಬಿತ್ತಿ ಜನಾಭಿಪ್ರಾಯವನ್ನು ಭ್ರಷ್ಟಗೊಳಿಸುವಲ್ಲಿ ನಿರತವಾಗಿವೆ. ಇದರ ಅಪಾಯಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕಿದೆ.

ಸಂವಿಧಾನವೂ ಪ್ರಶ್ನಾತೀತವಲ್ಲ. ಸಂವಿಧಾನದಲ್ಲಿ ಕಾಲಾತೀತ ಮತ್ತು ಕಾಲಬದ್ಧ ವಿಧಿಗಳಿವೆ. ಬದಲಿಸಲಾಗದ ಸಂವಿಧಾನದ ಮೂಲತತ್ವಗಳನ್ನು ಹೊರತುಪಡಿಸಿ, ಆಯಾ ಕಾಲದ ಅಗತ್ಯಗಳಿಗೆ ಪೂರಕವಾಗುವಂತೆ ಸಂವಿಧಾನದ ತಿದ್ದುಪಡಿಗಳಲ್ಲಿ ಜನ ಪಾಲ್ಗೊಳ್ಳುವಂತೆ ಸಂವಿಧಾನ ಪಂಥೀಯರು ಮಾಡಬೇಕಿದೆ. ಅಂತೆಯೇ ಭಾರತದ ಸಂವಿಧಾನವೇ ಇಂದು ಹಲವು ಗಂಭೀರ ಸವಾಲುಗಳಲ್ಲಿ ಉಸಿರುಕಟ್ಟಿದೆ. ಇಂತಹ ಸವಾಲುಗಳನ್ನು ಹಿಮ್ಮೆಟ್ಟಿಸಿ ಸಂವಿಧಾನವು ಉಸಿರಾಡುವಂತೆ ಮಾಡುವ ಹೊಣೆಗಾರಿಕೆ ನಮ್ಮ ಮೇಲಿದೆ.

ಈ ದೇಶವನ್ನು ‘ಸಂವಿಧಾನದ ಕಣ್ಣೋಟ’ದಿಂದ ನೋಡುವ ದೃಷ್ಟಿಕೋನವೇ ಸಂವಿಧಾನ ಪಂಥ. ಹಾಗಾಗಿ ಎಡ, ಬಲ, ಮಧ್ಯಮ ತರಹದ ಯಾವುದೇ ಆಲೋಚನಾ ಪಂಥಗಳನ್ನೂ ‘ಸಂವಿಧಾನ ಪಂಥಕ್ಕೆ’ ಒಗ್ಗಿಸಬೇಕಿದೆ. ಬನ್ನಿ, ಎಲ್ಲರೂ ಸಂವಿಧಾನ ಪಂಥೀಯರಾಗಿ ಮನುಜರಾಗೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT