ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ, ಸರಳ, ಸುಂದರ

ದಸರಾ ಪರಂಪರೆಯು ನಾಡು ಸಾಗಿಬಂದ ದಾರಿಯನ್ನು ಗುರುತಿಸುವ ಒಂದು ಸಂದರ್ಭ. ಈ ಅರಿವಿನ ಬೆಳಕಲ್ಲಿ ಅದನ್ನು ಅರ್ಥಪೂರ್ಣಗೊಳಿಸೋಣ
Last Updated 6 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಮೈಸೂರಿನಲ್ಲಿ ನಡೆಯುವ ‘ನಾಡಹಬ್ಬ ದಸರಾ’ ಬಗ್ಗೆ ಸ್ಪಷ್ಟವಾದ ಅರಿವಿಲ್ಲದಿರುವುದೇ ಇಂದು ಆ ಹೆಸರಿನಲ್ಲಿ ಕೆಲವು ಅಸಂಬದ್ಧ ಕ್ರಿಯಾಚಟುವಟಿಕೆಗಳು ನಡೆಯಲು ಕಾರಣವಾಗಿದೆ. 19ನೇ ಶತಮಾನದ ಉತ್ತರಾರ್ಧದಲ್ಲಿ ಚಾಲ್ತಿಗೆ ಬಂದ ಪದ ‘ದಸರಾ’. ಈ ಹಬ್ಬವು ಮೈಸೂರಿನಲ್ಲಿ 1805ರಲ್ಲಿ ಪ್ರಾರಂಭವಾಗಿ 1969ವರೆಗೂ ಒಂದೆರಡು ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಬಹುಪಾಲು ಒಂದೇ ಬಗೆಯ ಆಚರಣೆಯಿಂದ ಕೂಡಿತ್ತು ಎಂಬುದು ಇತಿಹಾಸ ಬಲ್ಲವರಿಗೆಲ್ಲ ತಿಳಿದಿರುವಂಥ ಸಂಗತಿ.

ಮಾಜಿ ರಾಜರಿಗೆ ನೀಡುತ್ತಿದ್ದ ರಾಜಧನವನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ನಿಲ್ಲಿಸಿದ್ದರಿಂದ, 1970ರಲ್ಲಿ ದಸರಾ ಮೆರವಣಿಗೆಯಲ್ಲಿ ಭಾಗವಹಿಸಲು ಜಯಚಾಮರಾಜೇಂದ್ರ ಒಡೆಯರ್ ಅವರು ಒಪ್ಪಲಿಲ್ಲ. ಆ ವರ್ಷ ದಸರಾ ನಡೆಯಲಿಲ್ಲ. ಆದರೂ ಆಗ, ಮೈಸೂರಿನ ಎಫ್.ಕೆ.ಇರಾನಿ, ಡಿ.ಜಯದೇವರಾಜ ಅರಸು, ನಾಗಭೂಷಣ ತಿವಾರಿ, ಸುಬ್ಬರಾವ್, ಆರ್.ಗುರು, ನಾ.ನಾಗಲಿಂಗಸ್ವಾಮಿ, ಕೃಷ್ಣವಟ್ಟಂ, ಅಜೀಜ್ ಸೇಟ್... ಇವರೆಲ್ಲ ಸೇರಿಕೊಂಡು ‘ಪ್ರೈವೇಟ್ ದಸರಾ ಮೆರವಣಿಗೆ’ಯನ್ನು ನಗರದ ಕ್ರಾಫರ್ಡ್ ಹಾಲ್ ಮುಂಭಾಗದ ಮೈದಾನದಿಂದ ನಡೆಸಿದರು. ಆನಂತರ, 1971ರಿಂದ ದಸರಾ ‘ನಾಡಹಬ್ಬ’ ಎಂದು ಸರ್ಕಾರದಿಂದ ನಾಮಾಂಕಿತಗೊಂಡು ಮತ್ತೆ ಚಾಲ್ತಿಗೆ ಬಂತು. ಅಂದಿನ ದಸರಾ ಸ್ವರೂಪವೇ ಇಂದು ಆಚರಣೆಯಲ್ಲಿರುವುದು.

‘ನಾಡಹಬ್ಬ’ ಎನ್ನುವ ಪದ ಹಳೇ ಮೈಸೂರಿನಲ್ಲಿ ಬಳಕೆಯಲ್ಲಿರಲಿಲ್ಲ. ಧಾರವಾಡ ಹಾಗೂ ಮುಂಬೈ ನಗರದ ಕನ್ನಡಿಗರು ಮೈಸೂರು ದಸರಾಕ್ಕೆ ಸಂವಾದಿಯಾಗಿ ನಾಡಹಬ್ಬ ಎಂಬುದನ್ನು ಆಚರಿಸುತ್ತಿದ್ದರು. ಸುಮಾರು 1925ರ ಹೊತ್ತಿನಲ್ಲಿ ಬೆಟಗೇರಿ ಕೃಷ್ಣಶರ್ಮ ಅವರು ಈ ಪದವನ್ನು ಬಳಕೆಗೆ ತಂದರು ಎಂದು ತಿಳಿದುಬರುತ್ತದೆ. ಅಂದು ಒಂಬತ್ತು ದಿನಗಳ ಕಾಲ ‘ನಾಡಹಬ್ಬ’ವನ್ನು ಆಚರಿಸುತ್ತಿದ್ದರು. 1971ರ ಅಂದಿನ ನಮ್ಮ ರಾಜ್ಯ ಸರ್ಕಾರ ಈ ಹೆಸರನ್ನು ಸೇರಿಸಿಕೊಂಡು ‘ನಾಡಹಬ್ಬ ದಸರಾ’ ಎಂದು ಪುನರ್‌ನಾಮಕರಣ ಮಾಡಿತು.

ಇಷ್ಟು ಸಂಗತಿ ಯಾಕೆ ಹೇಳಬೇಕಾಯಿತೆಂದರೆ-ಅಲ್ಲಿಂದೀಚೆಗೆ ದಸರಾದ ಆಚರಣೆಯಲ್ಲಿ ಅನೇಕ ಮಾರ್ಪಾಡುಗಳಾಗಿವೆ. ಜನಪದ ಕಲಾತಂಡಗಳು, ಸ್ತಬ್ಧ ಚಿತ್ರಗಳು ಸೇರ್ಪಡೆಯಾಗಿ ದಸರಾ ಮೆರವಣಿಗೆಗೆ ಬೇರೊಂದು ರೂಪ ಬಂದಿದೆಯಾದರೂ ‘ದಸರಾ’ ಎಂಬ ಪದವನ್ನು ಹಿಗ್ಗಲಿಸಿ ಹಲವಾರು ಕಾರ್ಯಕ್ರಮಗಳನ್ನು ಸೇರಿಸಲಾಗಿದೆ. ಯುವ ದಸರಾ, ಮಕ್ಕಳ ದಸರಾ, ರೈತ ದಸರಾ, ಮಹಿಳಾ ದಸರಾ ಎಂಬ ಹೆಸರಿನಲ್ಲಿ ನಡೆಯುವ ಆಚರಣೆಗೂ ದಸರಾ ಸಂಪ್ರದಾಯಕ್ಕೂ ಸಂಬಂಧ ಕಲ್ಪಿಸುವುದೇ ಕಷ್ಟವಾಗಿದೆ. ಕ್ರಮೇಣ, ದಸರಾವನ್ನು ಪ್ರವಾಸೋದ್ಯಮದ ಒಂದು ಭಾಗವಾಗಿ ಮಾಡಿ, ಲಾಭಕೋರತನವನ್ನು ಅದರಲ್ಲಿ ಅಳವಡಿಸಲಾಗಿದೆ. ಆದರೆ, ದಸರಾ ಪರಂಪರೆ ಇರುವುದು ಲಾಭಬಡುಕತನಕ್ಕಲ್ಲ. ಅದು, ನಮ್ಮ ನಾಡು ಸಾಗಿಬಂದ ದಾರಿಯನ್ನು ಗುರುತಿಸಿಕೊಳ್ಳುವ ಒಂದು ಸಂದರ್ಭ ಮಾತ್ರ ಎಂಬ ಅರಿವು ನಮಗಿರಬೇಕಾದುದು ಅವಶ್ಯ. ಮೇಲಾಗಿ, 1610ರಿಂದ ನಡೆದುಕೊಂಡು ಬರುತ್ತಿರುವ ಮಹಾನವಮಿಹಬ್ಬ ಮತ್ತು ಹತ್ತನೆಯ ದಿನ ನಡೆಯುವ ವಿಜಯದಶಮಿ ಮೆರವಣಿಗೆ (ದಸರಾ) ರಾಜಪ್ರತೀಕವೇ ಹೊರತು ಅನ್ಯತ್ರ ಅಲ್ಲ. ಈ ವಿವೇಚನೆಯೂ ನಮಗಿರಬೇಕು.

‘ನಾಡಹಬ್ಬ ದಸರಾ’ವನ್ನು ಆಚರಿಸುತ್ತಿರುವುದುರಾಜ್ಯ ಸರ್ಕಾರ. ಸಚಿವರು, ಶಾಸಕರು, ಬೇರೆ ಬೇರೆ ಇಲಾಖೆಗಳ ಉನ್ನತ ಅಧಿಕಾರಿಗಳಾದಿಯಾಗಿ ಇಡೀ ಸರ್ಕಾರವು ಹಬ್ಬವನ್ನು ಆಚರಿಸುತ್ತ ಕುಳಿತುಕೊಳ್ಳುವುದು ಸರಿಯಾದ ಕ್ರಮ ಅಲ್ಲ. ಹಬ್ಬ ಆಚರಿಸುವವರಿಗೆ ಒಂದಿಷ್ಟು ನೆರವಿಗೆ ಬರಬಹುದಷ್ಟೆ. ಹಾಗಾಗಿ, ಸರ್ಕಾರವು ದಸರಾ ನಡೆಸಲು ಯಾವುದಾದರೊಂದು ಸಂಸ್ಥೆಯನ್ನು ಗೊತ್ತುಪಡಿಸಿಕೊಳ್ಳುವುದು ಸರಿಯಾದ ಕ್ರಮ. ಆ ದಿಸೆಯಲ್ಲಿ, ಹಾಲಿ ಅಸ್ತಿತ್ವದಲ್ಲಿರುವ ‘ಮೈಸೂರು ಅರಮನೆ ಮಂಡಳಿ’ಗೆ ದಸರಾ ನಡೆಸುವ ಜವಾಬ್ದಾರಿಯನ್ನು ನೀಡಬಹುದು. ಇದಕ್ಕೆ ಜಿಲ್ಲಾಧಿಕಾರಿಯವರೇ ಕಾರ್ಯನಿರ್ವಾಹಕ ಅಧಿಕಾರಿ. ಇದೊಂದು ತಾತ್ಕಾಲಿಕವಾದ ಜವಾಬ್ದಾರಿ ಆಗಿರುತ್ತದೆ ಅಷ್ಟೆ.

ಹಾಗೆಯೇ ನಮ್ಮ ರಾಜ್ಯದ ಕೃಷಿ, ಕೈಗಾರಿಕೆ, ವಾಣಿಜ್ಯದ ಪ್ರತೀಕವಾಗಿ ದಸರಾ ಸಂದರ್ಭದಲ್ಲಿ ನಡೆಯುತ್ತಿದ್ದ ವಸ್ತುಪ್ರದರ್ಶನ ಈಗ ಮನರಂಜನೆಯ ಪ್ರದರ್ಶನದ ಕೇಂದ್ರವಾಗಿ ಪರಿವರ್ತನೆಯಾಗಿದೆ. ಇದರಿಂದ ವಸ್ತುಪ್ರದರ್ಶನದ ಮೂಲ ಉದ್ದೇಶಕ್ಕೇ ಚ್ಯುತಿ ತಂದಂತಾಗಿದೆ. ವಸ್ತುಪ್ರದರ್ಶನದ ಬಗ್ಗೆ ಕಲ್ಪನೆಯಿಲ್ಲದವರು ಇದರ ನಿರ್ವಹಣೆಯ ಜವಾಬ್ದಾರಿಯನ್ನುಹೊತ್ತುಕೊಂಡಾಗ, ಅದು ಕೇವಲ ಗುತ್ತಿಗೆದಾರಿ ಕೆಲಸವಾಗುತ್ತದೆಯಲ್ಲದೆ ಬೇರೇನೂ ಅಲ್ಲ. ವಸ್ತುಪ್ರದರ್ಶನಕ್ಕೊಂದು ಮೌಲ್ಯ ಬರಬೇಕಾದರೆ, ಅದು ಮೌಲ್ಯವರ್ಧಿತ ಸಂಗತಿಗಳ, ವಸ್ತುಗಳ, ವಸ್ತುಪ್ರದರ್ಶನವಾಗಬೇಕು. ಈ ಕಾರಣ, ಅದರ ಜವಾಬ್ದಾರಿಯನ್ನೂ ‘ಮೈಸೂರು ಅರಮನೆ ಮಂಡಳಿ’ಗೆ ವಹಿಸುವುದು ಸೂಕ್ತ. ಆ ಮಂಡಳಿಯು ಜನದನಿಯಾಗಿ ಕಾರ್ಯನಿರ್ವಹಿಸಲಿ.

ಕೊರೊನಾ ತಂದೊಡ್ಡಿರುವ ಅನಾರೋಗ್ಯ ಮತ್ತು ಆರ್ಥಿಕ ಸಂಕಷ್ಟದಲ್ಲಿ ಹೆಚ್ಚಿನ ಜನ ಸಿಕ್ಕಿಹಾಕಿಕೊಂಡು ಪರಿತಪಿಸುತ್ತಿರುವಾಗ, ವೈಭವದ ದಸರಾ ಆಚರಣೆ ಅರ್ಥಹೀನ. ದಸರಾ ಆಚರಣೆಯಲ್ಲಿ ಭಾಗವಹಿಸಲು ಜನಸಾಮಾನ್ಯರೂ ಈಗ ಹಿಂಜರಿಯುವಂತಹ ಸ್ಥಿತಿ ಇರುವುದರಿಂದ ಅತಿ ಸರಳವಾಗಿ ಆಚರಿಸಿದರಷ್ಟೇ ಸಾಕು. ಹಿಂದೆ ಸಮಾಜದಲ್ಲಿ ಸಂಕಷ್ಟಗಳು ಬಂದಾಗಲೆಲ್ಲ ದಸರಾ ಆಚರಣೆಗೆ ಕತ್ತರಿ ಹಾಕಿರುವುದುಂಟು. ದಸರಾಕ್ಕಾಗಿ ಶಾಶ್ವತ ಪ್ರಾಧಿಕಾರ ರಚಿಸುವ ಮಾತು ಕೇಳಿ ಬರುತ್ತಲೇ ಇದೆ. ಅದೇನೂ ಬೇಕಾಗಿಲ್ಲ, ಬದಲಾಗಿ ಅರಮನೆಯ ಮಂಡಳಿಯನ್ನೇ ‘ಜೀರ್ಣೋದ್ಧಾರ’ ಮಾಡಿದರೆ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT