ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಭುತ್ವ’ವಿಲ್ಲದ ಪ್ರಜೆ ಮತ್ತು ಅಂತಃಸತ್ವ

ಪ್ರಜಾಪ್ರಭುತ್ವ ನಿಜಾರ್ಥದಲ್ಲಿ ‘ಪ್ರಜಾ’ಪ್ರಭುತ್ವವಾಗಿದೆಯೇ?
Last Updated 29 ನವೆಂಬರ್ 2020, 20:15 IST
ಅಕ್ಷರ ಗಾತ್ರ

ಪ್ರಪಂಚದಲ್ಲಿ ಶಾಶ್ವತವಾಗಿರುವುದು ಬದಲಾವಣೆ ಯೊಂದೇ ಎನ್ನುವ ಮಾತಿದೆ. ಅದರಂತೆಯೇ, ಮನುಷ್ಯನ ಭಾಷೆ, ಉಡುಗೆ, ಆಹಾರ ಪದ್ಧತಿ, ಸಂಸ್ಕೃತಿ, ಆಚಾರ-ವಿಚಾರದಲ್ಲಿ ಬದಲಾವಣೆಗಳನ್ನು ಕಾಣುತ್ತಾ ಬಂದಿದ್ದೇವೆ. ಹಾಗೆಯೇ, ಆಳುವ ವ್ಯವಸ್ಥೆ ಯಲ್ಲಿಯೂ ಬದಲಾವಣೆಗಳಾಗಿವೆ. ರಾಜಾಧಿಪತ್ಯ, ನಿರಂಕುಶ ಪ್ರಭುತ್ವ, ಸಮಾಜವಾದ, ಪ್ರಜಾಪ್ರಭುತ್ವದಂತಹವುಗಳ ನಡುವೆ ಪ್ರಜಾಪ್ರಭುತ್ವವೇ ಅತ್ಯುತ್ತಮ ವಾದುದು, ಪ್ರಪಂಚದಾದ್ಯಂತ ಅನುಸರಿಸಬೇಕಾದ ಮಾದರಿಯೆಂದು ಪ್ರಜಾಪ್ರಭುತ್ವ ವ್ಯವಸ್ಥೆಯ ಪರ ಇರುವವರು ಹೇಳುತ್ತಾರೆ. ಯಾಕೆಂದರೆ, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಮಾನವ ಹಕ್ಕು, ಅನ್ಯಾಯವನ್ನು ಪ್ರತಿಭಟಿಸುವ ಹಕ್ಕು... ಇಂತಹ ಹಲವಾರು ಶ್ರೇಷ್ಠ ಅಂಶಗಳು ಇದರಲ್ಲಿ ಅಡಕವಾಗಿವೆ.

ಆದರೆ, ವಾಸ್ತವದಲ್ಲಿ ಪ್ರಜಾಪ್ರಭುತ್ವ ನಿಜಾರ್ಥದ ‘ಪ್ರಜಾ’ಪ್ರಭುತ್ವವಾಗಿದೆಯೇ? ಇಲ್ಲವೆಂದಾದಲ್ಲಿ, ಇದನ್ನು ಪುನರ್ವಿಮರ್ಶೆಗೆ ಹಚ್ಚುವ, ಪಾರದರ್ಶಕತೆ ಯನ್ನು ಮರು ಸ್ಥಾಪಿಸುವ ಅಥವಾ ಪರ್ಯಾಯ ಜನಹಿತ ವ್ಯವಸ್ಥೆಯನ್ನು ರೂಪಿಸುವ ಪ್ರಯತ್ನಗಳು, ಚರ್ಚೆಗಳು ನಡೆಯುತ್ತಿವೆಯೇ? ಈ ದಿಸೆಯಲ್ಲಿ ಪರಿಶೀಲನೆಯಾಗಬೇಕಾದುದು ಅವಶ್ಯ. ಆದರ್ಶ ಪ್ರಜಾಪ್ರಭುತ್ವದಲ್ಲಿ ಇರಬೇಕಾದ, ಆದರೆ ವಾಸ್ತವದಲ್ಲಿ ಕಣ್ಮರೆಯಾಗಿರುವ ಮುಖ್ಯಾಂಶಗಳು ಯಾವುವು ಎಂಬುದನ್ನು ಗುರುತಿಸುವ ಕೆಲಸ ಆಗಬೇಕು.

ಚುನಾವಣೆಯಲ್ಲಿ ಸ್ಪರ್ಧಿಸಲು ಹಣಬಲದ ಅಗತ್ಯವಿದೆ. ಸಮಾನತೆ ಸಾರುವ ಸಂವಿಧಾನದ ನೆರಳಲ್ಲಿಯೇ ಜಾತಿ, ಧರ್ಮದ ನಾಮಬಲವೇ ಹಲವರಿಗೆ ಶ್ರೀರಕ್ಷೆಯಾಗಿದೆ. ಸರ್ಕಾರಿ ಕೆಲಸ ಸೇರಲು ಅಥವಾ ಸರ್ಕಾರದಿಂದ ಸಿಗಬೇಕಾದ ಸವಲತ್ತು ಪಡೆಯಲೂ ಹಣ ಬಿಚ್ಚಬೇಕಾದ ಸ್ಥಿತಿ ಇದೆ. ಸರ್ಕಾರದ ಯೋಜನೆಗಳೆಂದರೆ ಕೆಲವರಿಗೆ ಹಣ ಮಾಡುವ ಮಾರ್ಗ ಎಂಬಂತಾಗಿದೆ. ಬಡವ-ಶ್ರೀಮಂತರ ನಡುವೆ ಅಂತರ ದಿನೇ ದಿನೇ ಹೆಚ್ಚುತ್ತಲೇ ಇದೆ. ನೈಸರ್ಗಿಕ ಸಂಪತ್ತು ಲೂಟಿಯಾಗುತ್ತಿದೆ. ಪ್ರಜ್ಞಾವಂತರು ಅನ್ನಿಸಿ ಕೊಂಡವರು ಸುತ್ತಲಿನ ಅನ್ಯಾಯಗಳನ್ನು ಕಂಡೂ ಕಣ್ಮುಚ್ಚಿ ಕುಳಿತಿದ್ದಾರೆ. ಮತವನ್ನು ಆಮಿಷಗಳಿಗೆ ಮಾರಿಕೊಳ್ಳುವ ಪರಿಪಾಟ ಹೆಚ್ಚುತ್ತಿದೆ... ಹೀಗೆ ಪ್ರಜಾಪ್ರಭುತ್ವ ತನ್ನ ಅಂತಃಸತ್ವವನ್ನು ಕಳೆದುಕೊಳ್ಳುತ್ತಿದೆ.

ಆಶ್ಚರ್ಯವೆಂದರೆ, ನಾವು ಈ ಶತಮಾನದಲ್ಲಿಯೂ ಮಾಡದ ಪ್ರಜಾಪ್ರಭುತ್ವದ ಪುನರ್‌ ವಿಮರ್ಶೆಯನ್ನು ಗ್ರೀಕ್ ತತ್ವಶಾಸ್ತ್ರಜ್ಞ ಸಾಕ್ರಟೀಸ್ ಬಹಳ ಹಿಂದೆಯೇ ಮಾಡಿದ್ದ. ಅವನ ಶಿಷ್ಯ ಪ್ಲೇಟೊವಿನ ಪುಸ್ತಕ ‘ರಿಪಬ್ಲಿಕ್’ನಲ್ಲಿ ಪ್ರಸ್ತಾಪಿಸಿದಂತೆ, ಸಾಕ್ರಟೀಸ್ ಮತ್ತು ಆಡಿಮ್ಯಾಂಟಸ್ ನಡುವಿನ ಚರ್ಚೆಯಲ್ಲಿ ಸಾಕ್ರಟೀಸ್ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ತನ್ನ ವಿಭಿನ್ನ ನಿಲುವನ್ನು ಹೀಗೆ ವಿವರಿಸುತ್ತಾನೆ, ‘ಸಮಾಜವೆನ್ನುವುದು ಒಂದು ಹಡಗಿನಂತೆ. ಇದರಲ್ಲಿ ಕುಳಿತಿರುವ ಎಲ್ಲ ಪಯಣಿಗರಿಗೆ ಹಡಗನ್ನು ಯಾರು ಮುನ್ನಡೆಸಬೇಕೆಂದು ನಿರ್ಧರಿಸುವ ಹಕ್ಕಿರಬೇಕೇ? ಅಥವಾ ಅವರಲ್ಲಿರುವ ಪ್ರಜ್ಞಾವಂತರು ಮಾತ್ರ ಸಮರ್ಥ ನಾವಿಕನನ್ನು ಆರಿಸಿದರೆ ಸಾಕೇ? ಅದರಂತೆಯೇ, ಸಮಸ್ತ ನಾಗರಿಕರಿಗೆ ದೇಶದ ನಾಯಕನನ್ನು ಆರಿಸುವ ಅಧಿಕಾರವಿರಬೇಕೇ ಅಥವಾ ಒಬ್ಬ ಮತದಾರನಿಗೂ ಅರ್ಹತೆ ಬೇಕೇ?’

ಸಾಕ್ರಟೀಸ್ ಪ್ರಕಾರ, ಮತದಾನ ಒಂದು ಕೌಶಲ. ಇದನ್ನು ಚಲಾಯಿಸುವವನಿಗೆ ತಕ್ಕ ತರಬೇತಿ ಮುಖ್ಯ. ಸಾಮಾನ್ಯ ಪ್ರಜ್ಞೆ, ಜವಾಬ್ದಾರಿ ಇಲ್ಲದೆ ಮತ ಚಲಾಯಿಸಿದರೆ, ಪ್ರಜಾಪ್ರಭುತ್ವದ ಘನತೆ ನಾಶವಾಗುತ್ತದೆ. ಇದಕ್ಕೆ ಸಾಕ್ಷಿಯೆಂಬಂತೆ, ಸ್ವತಃ ಸಾಕ್ರಟೀಸ್ ತನ್ನ ದೇಶದ ಪ್ರಜಾಪ್ರಭುತ್ವದ ‘ಬಹುಮತದ’, ಆದರೆ ಅಜ್ಞಾನದ ಮತದಾನಕ್ಕೆ ಬಲಿಯಾಗಿ ವಿಷ ಕುಡಿಯಬೇಕಾಯಿತು.

ಸಾಕ್ರಟೀಸ್ ಪ್ರಕಾರ, ಆರೋಗ್ಯಕರ ಸಮಾಜಕ್ಕೆ ಬೇಕಾಗಿರುವುದು ಬೌದ್ಧಿಕ ಪ್ರಜಾಪ್ರಭುತ್ವವೇ ಹೊರತು ಅದೊಂದು ಎಲ್ಲರ ಜನ್ಮಸಿದ್ಧ ಹಕ್ಕಲ್ಲ. ಇದಕ್ಕೆ ಪೂರಕವಾಗಿ ಸಾಕ್ರಟೀಸ್ ಕೊಡುವ ಉದಾಹರಣೆ ಬಹಳ ಸ್ವಾರಸ್ಯಕರವಾಗಿದೆ. ಒಬ್ಬ ಸಿಹಿತಿಂಡಿ ವರ್ತಕ ಮತ್ತು ವೈದ್ಯ ಚುನಾವಣೆಯಲ್ಲಿ ಸ್ಪರ್ಧೆಗಿಳಿದರೆ, ವರ್ತಕ ಹೇಳಬಹುದು, ‘ವೈದ್ಯ ನಿಮಗೆ ಇಂಜೆಕ್ಷನ್ ಚುಚ್ಚುತ್ತಾನೆ, ಕಹಿ ಔಷಧ ನೀಡುತ್ತಾನೆ, ಬದಲಾಗಿ ನಾನು ನಿಮಗೆ ಸಿಹಿ ಹಂಚುತ್ತೇನೆ’. ಅದರಂತೆಯೇ, ನಾವು ಸಮಾಜದ ರೋಗಕ್ಕೆ ಮದ್ದು ಕೊಡುವ ವೈದ್ಯರಂತಹವರನ್ನು ಆಯ್ಕೆ ಮಾಡದೆ, ಸಿಹಿಮಾತಿನ ವರ್ತಕರಂತಹವರನ್ನು ಆಯ್ಕೆ ಮಾಡುತ್ತಾ ಸಮಾಜದ ಆರೋಗ್ಯ ಹಾಳುಗೆಡವಿದ್ದೇವೆ.

ಪ್ರಜಾಪ್ರಭುತ್ವದಲ್ಲಿ ‘ಬಹುಮತ’ದ ಅಭಿಪ್ರಾಯಕ್ಕೆ ವಿಶೇಷ ಮನ್ನಣೆ ಇದೆ. ಆದರೆ, ಸಾಮಾನ್ಯವಾಗಿ ಬಹುಪಾಲು ಜನರು ಜೀವನವನ್ನು ಪರೀಕ್ಷಾತ್ಮಕವಾಗಿ ನೋಡುವುದಿಲ್ಲ. ಆದರೆ, ಪ್ರಶ್ನಿಸುವ ‘ಅಲ್ಪಮತ’ದ ಪ್ರಜ್ಞಾವಂತರನ್ನು ಆಳುವವರು ಸದಾ ದೂರವಿಟ್ಟಿರುವುದು ಪ್ರಜಾಪ್ರಭುತ್ವದ ವಿಪರ್ಯಾಸ.

‘ಹಸಿದವನಿಗೆ ಮೀನು ಕೊಡುವ ಬದಲಾಗಿ, ಮೀನು ಹಿಡಿಯುವುದನ್ನು ಹೇಳಿಕೊಟ್ಟರೆ ಸ್ವಾವಲಂಬಿ ಯಾಗಿ ಬದುಕಲು ಕಲಿಸಿದಂತೆ’ ಎನ್ನುವ ಮಾತಿದೆ. ಆದರೆ ಪ್ರಸಕ್ತ ಪ್ರಜಾಪ್ರಭುತ್ವ ಅನಗತ್ಯ ‘ಉಚಿತ’ಗಳ ಮೂಲಕ ಸಾಮಾನ್ಯರನ್ನು ಅವಲಂಬಿತರನ್ನಾಗಿಸಿ, ಅವರಲ್ಲಿರುವ ದುಡಿಯುವ ಛಲ, ಸ್ವಾಭಿಮಾನವನ್ನು ಹುದುಗಿಸಿ, ಯಾವಾಗಲೂ ಹೊರಗಿನ ಸಹಾಯದ ನಿರೀಕ್ಷೆಯಲ್ಲಿಯೇ ಕಾಯುವಂತೆ ಮಾಡುತ್ತದೆ.

‘ಪ್ರಭುತ್ವ’ದಿಂದ ಸಾಮಾನ್ಯ ‘ಪ್ರಜೆ’ಗಳ ಕೊಂಡಿ ಕಳಚಿಹೋಗಿ ಕೈಗೆಟುಕದಂತಿರುವಾಗ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಾಕ್ರಟೀಸ್ ಚಿಂತನೆಯ ಹಾದಿಯಲ್ಲಿ ಬೇರೆ ಬೇರೆ ಆಯಾಮಗಳಡಿ ವಿಮರ್ಶೆಗೆ ಒಳಪಡಿಸಬೇಕಾದ ಅಗತ್ಯವಿದೆ. ಇಲ್ಲವಾದಲ್ಲಿ ಜಡ್ಡುಹಿಡಿದು, ನಿರಂಕುಶಾಧಿಪತ್ಯಕ್ಕೆ ಪುನಃ ದಾರಿ ಮಾಡಿಕೊಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT