ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕೆಗೆ ಬೇಡ ಸೀಮಿತ ಚೌಕಟ್ಟು

Last Updated 2 ಸೆಪ್ಟೆಂಬರ್ 2020, 19:45 IST
ಅಕ್ಷರ ಗಾತ್ರ

ವಿದ್ಯಾರ್ಥಿಗಳನ್ನು ಪಠ್ಯಪುಸ್ತಕದ ಮಾಹಿತಿಗೆ ಸೀಮಿತಗೊಳಿಸುವ ಹಾಗೂ ಫೇಲು ಮಾಡುವುದಕ್ಕಾಗಿಯೇ ಪರೀಕ್ಷೆ ನಡೆಸುವ ಶಿಕ್ಷಣ ಪದ್ಧತಿಯು ಬದಲಾಗಬೇಕಿದೆ.

ಕುಟುಂಬದ ಜೊತೆ ವಿದ್ಯಾರ್ಥಿಗಳು ಮನೆಯಲ್ಲಿಯೇ ಇರುವ ಮತ್ತು ಶೈಕ್ಷಣಿಕ ಚಟುವಟಿಕೆಗಳಿಲ್ಲದೆ ಶಾಲಾ–ಕಾಲೇಜುಗಳು ಕಳೆಗುಂದಿರುವ ಈ ಸನ್ನಿವೇಶದಲ್ಲಿ ಮತ್ತೊಂದು ಶಿಕ್ಷಕರ ದಿನಾಚರಣೆ ಬಂದಿದೆ. ಐದು ತಿಂಗಳಿನಿಂದ ಶಾಲಾ– ಕಾಲೇಜುಗಳು ಮುಚ್ಚಿದ್ದರೂ ಶೈಕ್ಷಣಿಕ ಚಟುವಟಿಕೆಗಳು ಬದಲಾದ ಸ್ವರೂಪದಲ್ಲಿ ನಡೆದಿವೆ. ಈ ಸನ್ನಿವೇಶವು ಶಿಕ್ಷಣದ ಒಟ್ಟಾರೆ ಸ್ವರೂಪ ಹಾಗೂ ಶಿಕ್ಷಕರ ಪಾತ್ರವು ನಮ್ಯತೆ ಹಾಗೂ ಚಲನಶೀಲತೆಯ ಕಡೆಗೆ ಬದಲಾಗಬೇಕಾದ ಅಗತ್ಯವನ್ನು ತಿಳಿಸುತ್ತದೆ.

ಕಲಿಕೆ, ಶಿಕ್ಷಣ, ವಿದ್ಯಾರ್ಥಿಗಳ ಕಲಿಕೆಯ ಮಾಪನಗಳಿಗೆ ಸಂಬಂಧಿಸಿದ ಚಟುವಟಿಕೆಗಳು ಶಾಲೆ, ಕಾಲೇಜುಗಳ ನಾಲ್ಕು ಗೋಡೆಗಳ ಮಧ್ಯೆ ಮಾತ್ರ ನಡೆಯುತ್ತವೆ ಹಾಗೂ ನಡೆಯಬೇಕು ಎಂಬ ಸಾಂಪ್ರದಾಯಿಕ ಚಿಂತನೆಗೆ ಸವಾಲೆನಿಸುವ ರೀತಿಯಲ್ಲಿ ಕಲಿಕೆಯ ಚಟುವಟಿಕೆಗಳು ವಿಭಿನ್ನ ರೀತಿಯಲ್ಲಿ ಸಾಗುತ್ತಿರುವುದನ್ನು ಗಮನಿಸಬಹುದಾಗಿದೆ. ಪ್ರಸಕ್ತ ಶೈಕ್ಷಣಿಕ ಸನ್ನಿವೇಶವು ತಂತ್ರಜ್ಞಾನಕ್ಕೆ ಹೆಚ್ಚು ಜೋತು ಬಿದ್ದಂತೆ ಭಾಸವಾದರೂ ಅದರಾಚೆಗೆ ಅದನ್ನು ಕೊಂಡೊಯ್ದು ಶಿಕ್ಷಣ ಕ್ಷೇತ್ರವನ್ನು ಪುನರ್‌ವಿನ್ಯಾಸಗೊಳಿಸಲು ಪ್ರಸಕ್ತ ಪರಿಸ್ಥಿತಿಯನ್ನು ಅನುಕೂಲಕರ ಸನ್ನಿವೇಶವಾಗಿ ಮಾರ್ಪಡಿಸಿಕೊಳ್ಳಲು ಸಾಧ್ಯವಿದೆ.

ವಿದ್ಯಾರ್ಥಿಗಳಲ್ಲಿ ಕಲಿಕೆ ಎಂಬುದು ನಿರಂತರವಾಗಿ ನಡೆದೇ ಇರುತ್ತದೆ. ಹೆಚ್ಚಿನ ವೇಳೆ ‘ಇದೇ ಕಲಿಕೆ’ ಎಂದು ಗೆರೆ ಹಾಕಿ ಪ್ರತ್ಯೇಕಿಸುವ ತಿಳಿವಳಿಕೆಯು ಮಕ್ಕಳು ಹಾಗೂ ಅನೇಕ ಪೋಷಕರಿಗೆ ಇರುವುದಿಲ್ಲ. ಪಠ್ಯಪುಸ್ತಕದ ಮಾಹಿತಿಯನ್ನು ನೆನಪಿನ ಕೋಶದಲ್ಲಿ ಇಟ್ಟುಕೊಳ್ಳುವುದು ಹಾಗೂ ಪರೀಕ್ಷೆಯ ಪ್ರಶ್ನೆಗಳಿಗೆ ನಿಗದಿತ, ಖಚಿತ ಉತ್ತರ ನೀಡುವಲ್ಲಿ ಯಶ ಗಳಿಸುವುದು ಮಾತ್ರವೇ ಕಲಿಕೆ ಎಂಬ ಭಾವನೆ ಹೆಚ್ಚಿನವರಲ್ಲಿ ಭದ್ರವಾಗಿ ನೆಲೆಯೂರಿದೆ. ಪಠ್ಯಪುಸ್ತಕಗಳ ಮಾಹಿತಿ, ವಿಷಯಗಳಾಚೆ ಮಕ್ಕಳು ಕಲಿಯುವ ಅನೇಕ ವಿಷಯಗಳು ಶಿಕ್ಷಣ, ಕಲಿಕೆಯ ವ್ಯಾಪ್ತಿಗೆ ಒಳಪಡದಿರುವುದು ಶಿಕ್ಷಣ ಕ್ಷೇತ್ರದ ವಿಶಾಲ ಚೌಕಟ್ಟನ್ನು ಸೀಮಿತಗೊಳಿಸಿದೆ. ಇನ್ನು ತಾವು ಹೇಳುವ ಪಾಠವನ್ನು ವಿದ್ಯಾರ್ಥಿಗಳು ಶ್ರದ್ಧೆಯಿಂದ ಯಥಾವತ್ ಕಲಿತು, ಕಲಿತ ಪಾಠವನ್ನು ಒಪ್ಪಿಸಬೇಕೆಂಬ ಶಿಕ್ಷಣದ ಮತ್ತು ಶಿಕ್ಷಕರ ನಿರೀಕ್ಷೆಗಳು ಶಿಕ್ಷಣದ ಸ್ವರೂಪವನ್ನು ಮಿತಿಗೊಳಿಸಿವೆ ಎನ್ನಬಹುದು.

ತಮ್ಮ ಬೋಧನೆಯಿಂದ ಮಾತ್ರ ವಿದ್ಯಾರ್ಥಿಗಳಲ್ಲಿ ಕಲಿಕೆ ಸಾಧ್ಯ ಎಂಬ ಶಿಕ್ಷಕರ ಮನೋಭಾವ ಬದಲಾಗಿ, ತಾವು ಕಲಿಕೆಗೆ ಅನುವು ಮಾಡಿಕೊಡುವವರು ಎಂಬ ಗ್ರಹಿಕೆ ಹೊಂದುವುದು ಅವಶ್ಯಕ. ಹೀಗೆ ಶಿಕ್ಷಕರ ಮನೋವೃತ್ತಿಯಲ್ಲಿನ ಪೂರಕ ಬದಲಾವಣೆಗಳು ಶಿಕ್ಷಣ ಕ್ಷೇತ್ರಕ್ಕೆ ಹೊಸದೊಂದು ಆಯಾಮವನ್ನು ನೀಡಬಲ್ಲವು. ಇದಕ್ಕೆ ಪೂರಕವಾಗಿ ವಿದ್ಯಾರ್ಥಿ ಕಲಿಯಬೇಕಾದ ವಿಷಯಗಳ ಪಟ್ಟಿ ಹಾಗೂ ಅವರು ಕಲಿತ ವಿಷಯಗಳನ್ನು ಮಾಪನ ಮಾಡುವ ಪ್ರಕ್ರಿಯೆಗಳು ಇನ್ನಷ್ಟು ಹೆಚ್ಚು ಚಲನಶೀಲ ಹಾಗೂ ನಮ್ಯತೆಯಿಂದ ರೂಪುಗೊಳ್ಳುವಂತೆ ಮಾಡಬೇಕಿದೆ. ವಿದ್ಯಾರ್ಥಿಗಳನ್ನು ಪಠ್ಯಪುಸ್ತಕದ ಮಾಹಿತಿಗೆ ಸೀಮಿತಗೊಳಿಸುವುದು ಹಾಗೂ ಅಂಕಗಳೇ ಸರ್ವಸ್ವವೆಂಬ ಪರೀಕ್ಷಾ ಕೇಂದ್ರಿತ ಶಿಕ್ಷಣ ಪದ್ಧತಿಯು ಬದಲಾಗಬೇಕಿದೆ.

ಕಲಿಕೆಯನ್ನು ಅನುಭವಪೂರ್ಣಗೊಳಿಸುವುದು, ಕಥಾ ನಿರೂಪಣಾ ಬೋಧನಾ ವಿಧಾನಗಳನ್ನು ಅಳವಡಿಸುವುದು, ಕ್ರೀಡೆ ಹಾಗೂ ಕಲೆಗಳನ್ನು ಪಠ್ಯಕ್ರಮದ ಇತರ ವಿಷಯಗಳೊಂದಿಗೆ ಅಂತರ್ಗತಗೊಳಿಸುವುದು, ಪಠ್ಯೇತರ ಹಾಗೂ ಸಹ ಪಠ್ಯ ಚಟುವಟಿಕೆಗಳ ನಡುವೆ ಪ್ರತ್ಯೇಕತೆ ಇಲ್ಲದೆ ಸಮನ್ವಯ ಸಾಧಿಸುವುದು, ಸ್ಥಳೀಯ ಕಸುಬುಗಳನ್ನು ಕಲಿಸುವುದು, 10ನೇ ತರಗತಿ ಹಾಗೂ 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಪ್ರಮುಖ ಸಾಮರ್ಥ್ಯಗಳನ್ನು ಮಾತ್ರ ಪರೀಕ್ಷಿಸುವ ಮೂಲಕ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವಂತೆ ಸುಲಭಗೊಳಿಸುವುದೂ ಸೇರಿದಂತೆ ಅನೇಕ ಅಂಶಗಳು ನೂತನ ಶಿಕ್ಷಣ ನೀತಿಯಲ್ಲಿ ಸೇರಿವೆ. ಈ ಅಂಶಗಳ ನೆಲೆಯಲ್ಲಿ ಶಿಕ್ಷಕರ ಪಾತ್ರದಲ್ಲಿ ಆಗಬೇಕಾದ ಗಣನೀಯ ಬದಲಾವಣೆಗಳಿಗೆ ಪೂರಕವಾಗಿ ಶಿಕ್ಷಕರ ಸಾಮರ್ಥ್ಯವನ್ನು ಬಲವರ್ಧನೆಗೊಳಿಸಬೇಕಿದೆ.

ವಿದ್ಯಾರ್ಥಿಗಳು ತಮ್ಮ ಓರಗೆಯವರ ಜೊತೆ ಸಂವಹನ, ಸಂಪರ್ಕ ಸಾಧಿಸುತ್ತಾ ಕಲಿಯುತ್ತಾರೆ. ಪೋಷಕರೊಂದಿಗೆ, ನೆರೆಯವರೊಂದಿಗೆ ಒಡನಾಡುತ್ತಾ ಕಲಿಯುತ್ತಾರೆ. ಪ್ರತೀ ವಿದ್ಯಾರ್ಥಿಯು ತನ್ನದೇ ವಿಶಿಷ್ಟ ಪರಿಸರ, ಪ್ರಾಣಿ, ಸಸ್ಯ, ಪಕ್ಷಿಗಳ ಜೊತೆ ನಿರಂತರ ಸಾಮೀಪ್ಯ ಸಾಧಿಸುತ್ತಾ ತನಗೆ ದೊರೆಯುವ ವಿಶಾಲ, ವಿಭಿನ್ನ, ವಿಶಿಷ್ಟ ಕೊಂಡಿಗಳ ಮೂಲಕ ಕೆಲವೊಮ್ಮೆ ಪಠ್ಯಪುಸ್ತಕದ ಮಾಹಿತಿಗೆ ಸಂಬಂಧಿಸಿದಂತೆ ಇನ್ನು ಕೆಲವೊಮ್ಮೆ ಪಠ್ಯಪುಸ್ತಕದ ಚೌಕಟ್ಟಿನಾಚೆ ಕಲಿಕಾ ಪ್ರಕ್ರಿಯೆಗಳಲ್ಲಿ ನಿರತರಾಗಿರುತ್ತಾರೆ. ಪಠ್ಯಪುಸ್ತಕ, ತರಗತಿಯ ಚೌಕಟ್ಟಿನಾಚೆ ವಿದ್ಯಾರ್ಥಿಗಳು ದಕ್ಕಿಸಿಕೊಳ್ಳುವ ಅನೇಕ ಅನುಭವಗಳನ್ನು ಕಲಿಕಾ ಸಾಮರ್ಥ್ಯಗಳಾಗಿ ಪರಿವರ್ತಿಸಿ, ಪರಿಗಣಿಸಿ, ಕಲಿಕೆಗೆ ವಿಶಾಲ ಚೌಕಟ್ಟನ್ನು ನೀಡಲು ಪ್ರಸ್ತುತ ಕೋವಿಡ್-19ನಿಂದ ನಿರ್ಮಾಣವಾಗಿರುವ ಸನ್ನಿವೇಶ ನೆಪವಾಗಬೇಕು.

ಆನ್‍ಲೈನ್ ತರಗತಿ ಎಂಬ ಮಿತಿಗಳಾಚೆ ಇರುವ ಅಗಣಿತ ಶ್ರೀಮಂತ ಅನುಭವಗಳ ಮೂಲಕ ಕಲಿಕೆಗೆ ಇರುವ ಅಪೂರ್ವ ಅವಕಾಶಗಳನ್ನು ಸೃಷ್ಟಿಸುವುದರತ್ತ ಶಿಕ್ಷಕರು ತಮ್ಮ ಪಾತ್ರವನ್ನು ಚಲನಶೀಲವಾಗಿ ಮಾರ್ಪಡಿಸಿಕೊಳ್ಳಬೇಕು. ಈ ಪ್ರಕ್ರಿಯೆಯಲ್ಲಿ ಪೋಷಕರು ಹಾಗೂ ಸ್ಥಳೀಯ ಸಮುದಾಯಗಳನ್ನೂ ತೊಡಗಿಸಿಕೊಳ್ಳಬೇಕು. ಈ ಕುರಿತ ಸ್ಪಷ್ಟ, ನಿರ್ದಿಷ್ಟ ಪ್ರಯತ್ನಗಳು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT